• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪದಮೂಲ : ಲೆಟ್‌ ಹಿಮ್‌ ಡೈ !

By Staff
|

ಕೆಲವು ಭಾಷೆಗಳಲ್ಲಿ , ಕೆಲ ದೇಶಗಳಲ್ಲಿ , ಕೆಲವು ಶಬ್ದಗಳು ಚಿತ್ರವಿಚಿತ್ರವಾದ ಅರ್ಥಛಾಯೆಗಳನ್ನು ಸಂಪಾದಿಸಿಕೊಳ್ಳುತ್ತವೆ. ಕನ್ನಡದ ‘ಸಾಯ್‌’ ಧಾತುವನ್ನೇ ತೆಗೆದುಕೊಳ್ಳಿ. ಕೇಶಿರಾಜನು ಈ ಧಾತುವನ್ನು ಮರಣಾರ್ಥಕ ಎನ್ನುತ್ತಾನೆ. ದಕ್ಷಿಣ ದ್ರಾವಿಡ, ತಮಿಳು, ಮಲಯಾಳಿಗಳಲ್ಲಿಯೂ, ತೆಲುಗಿನಲ್ಲೂ, ತುಳುವಿನಲ್ಲೂ ಇದಕ್ಕೆ ಸಂವಾದಿಯಾದ ಧಾತುಗಳಿವೆ. ಅರ್ಥವೂ ಅದೇ. ‘ಆತ ಸತ್ತ’, ‘ಸಾಯಬೇಕು ಅನ್ನಿಸುತ್ತೆ’, ‘ನಾನು ಸತ್ತರೆ ಸ್ವರ್ಗ ಸಿಗುತ್ತೆ’- ಇವೆಲ್ಲ ನೇರವಾಗಿ ಮರಣವನ್ನೇ ಧ್ವನಿಸುವಂಥವು.

ಆದರೆ, ‘ಸಾಯಲಿ, ನನಗೇನು?’ ಎನ್ನುವಾಗ ಈ ಧಾತು ‘ಹಾಳಾಗಿ ಹೋಗಲಿ’ ಎನ್ನುವ ಅರ್ಥ ಪಡೆದುಕೊಳ್ಳುತ್ತದೆ. ಇಂಗ್ಲಿಷಿನಲ್ಲಿ Let him die ಅಂದಾಗಲೂ ಏನಾದರೂ ಮಾಡಿಕೊಂಡು ಹಾಳಾಗಿ ಹೋಗಲಿ ಎಂದೇ ಅರ್ಥ. ಹಿಂದಿಯಲ್ಲೂ ‘ಮರನೇದೋ, ಮುಝೇ ಕ್ಯಾ?’ ಎಂಬ ಪ್ರಯೋಗವಿದೆ. ‘ಇಂಥೋನನ್ನು ಕಟ್ಟಿಕೊಂಡು ಏನು ಸಾಯೋಣ ಹೇಳಿ?’ ಎನ್ನುವಾಗ ಸಾಯ್‌ ಎನ್ನುವ ಅಕರ್ಮಕ ಧಾತು, ಒಂಥರದ ಅರ್ಧ ಸಕರ್ಮಕತ್ವವನ್ನು ಸಂಪಾದಿಸುತ್ತದೆ. ಇಷ್ಟು ಹೊತ್ತು ಎಲ್ಲಿ ಸತ್ತಿದ್ದೆ ? ಎಂಬ ಮಾತೂ ಬಳಕೆಯಲ್ಲಿದೆ. ಸಿಟ್ಟು ಮತ್ತು ಅಸಹನೆಯಿಂದಾಗಿ ಒಂದು ಪದ ಅರ್ಥಾಂತರಗೊಳ್ಳುವುದು ಹೀಗೆ.

Word roots from the shop of PaVemಹಾಗೇ, ಜೀವನ್ಮುಖಿ ಧೋರಣೆಗೆ, ಜೀವನ ಪ್ರೀತಿಗೆ ವಿರುದ್ಧವಾದ ಪದ ಸಾವು. ಆದರೆ ನಾವು ಅದನ್ನು ಪ್ರೀತಿಗೆ ಸಮಾನಾರ್ಥಕವಾಗಿ ಬಳಸುವುದೂ ಉಂಟು. ‘ ಸಿನಿಮಾ ಅಂದ್ರೆ ಸಾಯ್ತಾನೆ, ಹುಡುಗೀರು ಅಂದ್ರೆ ಪ್ರಾಣ ಬಿಡ್ತಾನೆ, ಐಸ್‌ಕ್ರೀಮು ಅಂದ್ರೆ ಜೀವ ಬಿಡ್ತಾಳೆ’ ಎಂಬಿತ್ಯಾದಿ ಪ್ರಯೋಗಗಳಿವೆ.

ಇದಕ್ಕಿಂತ ಸೋಜಿಗದ ಸಾವು ಕರುಣೆಯಿಂದ ಹುಟ್ಟುವಂಥದ್ದು. ಬಲಶಾಲಿಯಾಬ್ಬ ದುರ್ಬಲ ಅಪರಾಧಿಯನ್ನು ಹಿಡಕೊಂಡು ಚಚ್ಚುತ್ತಿದ್ದರೆ ಮಧ್ಯಸ್ಥಿಕೆ ವಹಿಸಲು ಬಂದಾಗ ‘ಪಾಪ, ಸಾಯಲಿ, ಬಿಟ್ಟುಬಿಡ್ರೀ’ ಎನ್ನುತ್ತಾನೆ. ‘ಬಂದ ಸಿಟ್ಟಿಗೆ ಏನ್ಮಾಡ್ತಿದ್ದೆ ಗೊತ್ತಾ, ಸಾಯಲಿ ಅಂತ ಬಿಟ್ಟೆ’ ಎನ್ನುವಾಗ ತಿರಸ್ಕಾರ ಮತ್ತು ಕರುಣೆ ಒಟ್ಟೊಟ್ಟಿಗೆ ಕೆಲಸ ಮಾಡುತ್ತದೆ. ‘ಸಾಯಲಿ’ ಅಂತ ನಿಮಗೆ ಅನ್ನಿಸಿದ್ರೆ ಯಾಕೆ ಬಿಟ್ಟುಬಿಡ್ತೀರಿ, ನೀವೇ ಸಾಯಿಸಿಬಿಡಬಹುದಲ್ಲ?

ಸಾವನ್ನು ನಾವು ಕಾಮಕ್ಕೆ, ಕ್ರೋಧಕ್ಕೆ, ಲೋಭಕ್ಕೆ, ಮೋಹಕ್ಕೆ ಮತ್ತು ಕರುಣೆಗೆ ತಳುಕು ಹಾಕಿದ್ದೇವೆ. ಪಾಶ್ಚಾತ್ಯ ಭಾಷೆಗಳಲ್ಲಿ ಇಂಥ ವಿಸ್ತಾರವಾದ ಅರ್ಥವೈಖರಿ ಸಿಗುವುದಿಲ್ಲ. ಭಾರತದ ತತ್ವಜ್ಞಾನಕ್ಕೆಲ್ಲ ಮರಣವೇ ಪ್ರೇರಣೆ ಎಂದು ಕೆಲವು ತತ್ವಜ್ಞಾನಿಗಳು ಹೇಳುವುದು ನಿಜವಿರಬಹುದೇ?

ಸಾಯುವುದಕ್ಕೆ ಇರುವಷ್ಟಲ್ಲದಿದ್ದರೂ ಕೊಲ್ಲುವುದಕ್ಕೂ ಅನೇಕ ಅರ್ಥಶಾಖೆಗಳಿವೆ. ಕೊಲ್ಲುವುದು ಎಂದರೆ ಪ್ರಾಣ ತೆಗೆಯುವುದು. ಈಗ ಅದು ಏಕಮಾತ್ರ ಅರ್ಥವಾಗಿ ಉಳಿದಿದೆ. ಆದರೆ ಕೇಶೀರಾಜನು ‘ಕೊಲ್‌ ಹಿಂಸಾಯಂ’- ಕೊಲ್ಲುವುದಕ್ಕೆ ಹಿಂಸೆಯೆಂದರ್ಥ ಎನ್ನುತ್ತಾನೆ. ಈ ಪ್ರಕಾರ ಹೊಡೆಯುವುದಕ್ಕೂ ಕೊಲ್‌ ಎಂಬರ್ಥ ಬರುತ್ತದೆ. ಹರಿದಾಸರ ಪದಗಳಲ್ಲಿ ‘ಕೋಲು ಕೊಂಡು ಕೊಲ್ಲಹೋದರೆ ಓಡಿಹೋದನಮ್ಮ’ ಎಂಬ ಪ್ರಯೋಗವಿದೆ. ಇಲ್ಲಿ ಕೊಲ್ಲುವುದು ಎಂದರೆ ಹೊಡೆಯುವುದು ಎಂದಷ್ಟೇ ಅರ್ಥ. ಬಡಿದಾಟಕ್ಕೆ ಕೊಂದಾಟ ಎಂಬ ಪದ ಸೋಮೇಶ್ವರ ಶತಕದಲ್ಲಿ ಸಿಗುತ್ತದೆ. ಕೊಲ್ಲುವುದಕ್ಕೆ ಬಳಸುವ ಆಯುಧವನ್ನು ಕೋಲು ಅನ್ನುತ್ತೇವಾ?

ಇಂಗ್ಲಿಷ್‌ನಲ್ಲಿ ಕೊಲ್ಲು ಪದಕ್ಕೆ ಸಮಾನಾರ್ಥಕ ಪದ kill & ಕಿಲ್‌. ಕಿಲ್ಲಿಂಗ್‌ ಟೈಮ್‌ ಎಂಬ ಇಂಗ್ಲಿಷ್‌ ನುಡಿಗಟ್ಟು, ಕುಮಾರವ್ಯಾಸ ಭಾರತದಲ್ಲಿ ಹಿಂದೆಯೇ ಬಂದಿದೆ- ಕಾಲವ ಕೊಲುವುದೇ?.

ಕರ್ನಾಟಕದಲ್ಲಿ ಎರಡು ಊರುಗಳಿವೆ- ಕೊಲ್ಲೂರು ಮತ್ತು ಕಿಲ್ಲೂರು. ಮೂಕಾಂಬಿಕೆ ಮೂಕಾಸುರನನ್ನು ಕೊಂದ ಊರು ಕೊಲ್ಲೂರು ಇರಬಹುದೇ? ಹಾಗಿದ್ದರೆ ಕಿಲ್ಲೂರು ಏನು?

ಬೆಳ್ತಂಗಡಿಯ ಸಮೀಪ ಇರುವ ಕಿಲ್ಲೂರಿನಲ್ಲಿ ಕೊಲೆಗಳು ನಡೆದ ಬಗ್ಗೆ ಅಂಥ ಮಾಹಿತಿಯಿಲ್ಲ. ಅದು ಅಹಿಂಸಾತ್ಮಕರಾದ ಜೈನರ ಆಡಳಿತ ಇದ್ದ ಪ್ರದೇಶ.

(ಪಾವೆಂ ಪದದಂಗಡಿಯಿಂದ ಕಡ ತಂದದ್ದು .
ಸ್ನೇಹಸೇತು : ಓ ಮನಸೇ!)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more