ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶರದೃತುವಿನಂಥ ನಿಸಾರ್‌ಗೆ 69ರ ಸಾರ್ಥಕ ಅಭಿನಂದನೆ

By Staff
|
Google Oneindia Kannada News
  • ಗಿರಿಶಾಸ್ತ್ರಿ , ಬೆಂಗಳೂರು
ಪ್ರೊ. ಎಂ.ಎಚ್‌. ಕೃಷ್ಣಯ್ಯನವರು ನಿಸಾರರ ವ್ಯಕ್ತಿತ್ವ ಹಾಗೂ ಕಾವ್ಯದ ಬಗ್ಗೆ ಮನನೀಯವಾದ ಅಭಿನಂದನ ಭಾಷಣ ಮಾಡಿದರು. ಕೃತಿನಿಷ್ಠ ವಿಮರ್ಶಕರೆಂದೇ ಖ್ಯಾತರಾದ ಕೃಷ್ಣಯ್ಯ, ನಲವತ್ತೈದು ವರ್ಷಗಳ ಹಿಂದೆ 50ರ ದಶಕದಲ್ಲಿ ಇಂಟರ್‌ ಮೀಡಿಯೆಟ್‌ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾಗಿಂದ ಇಂದಿನವರೆಗೆ ನಿಸಾರರ ಸಾಧನೆಯನ್ನು ಗಮನಿಸುತ್ತ ಬಂದಿರುವುದಾಗಿ ತಿಳಿಸಿ, 69ರ ಜನ್ಮದಿನದ ಆಚರಣೆಯ ಬಗ್ಗೆ ವಿವರ ನೀಡಿ, ‘ಇಂದು 70ರ ಹೊಸ್ತಿಲು. ಆದ್ದರಿಂದ ಈ ಅಭಿನಂದನೆ ಸಾರ್ಥಕ ಅಭಿನಂದನೆ’ ಎಂದರು. 69 ಶರದೃತುಗಳನ್ನು ಕಂಡ ನಿಸಾರರ ಜೀವನ-ಸಾಧನೆ ಸಾರ್ಥಕ್ಯ ಪಡೆದಿದೆ ಎಂದರು. ಮುಂದುವರೆದ ಕೃಷ್ಣಯ್ಯನವರು, ‘ನಮ್ಮ ಪ್ರಾಚೀನ ಋಷಿಗಳು ಜೀವೇನ ಶರದ ಶತಂ ಎಂದಿದ್ದಾರೆ. ಅಂದರೆ ನೂರು ಶರದೃತುಗಳ ಕಾಲ ಬಾಳು ಎಂದರ್ಥ. ಶರದೃತು ಪ್ರಶಾಂತತೆಯ, ಪರಿಪಕ್ವತೆಯ ಸಂಕೇತ. ಶರದೃತುವಿನ ಕಾಲದಲ್ಲಿ ಆಕ್ರೋಶರಹಿತವಾದ, ನಿರ್ಲಿಪ್ತವಾದ ಮನಸ್ಸು ಬರುತ್ತದೆ ಇಂಥ ನಿರ್ಮಲ ಚಿತ್ತವನ್ನು ನಿಸಾರರಲ್ಲಿ ಕಾಣಬಹುದು’ ಎಂದರು. ನಿಸಾರರ ಕಾವ್ಯಗಳಲ್ಲಿನ ವೈಶಿಷ್ಟ್ಯಗಳನ್ನು ಗುರುತಿಸಿದ ಕೃಷ್ಣಯ್ಯನವರು, ನಿಸಾರರು ಸಣ್ಣ ಪುಟ್ಟ ಘಟನೆಗಳನ್ನು ಪ್ರತಿಮೆಗಳನ್ನಾಗಿಸುವ ಬಗೆ ಅದ್ಭುತವಾದುದೆಂದು ಬಣ್ಣಿಸಿ ಬದುಕನ್ನು ಕ್ರಿಕೆಟ್‌ ಆಟಕ್ಕೆ ಹೋಲಿಸಿ ಬರೆದ ನಿಸಾರರ ‘ಬಾಳಿನ ಕ್ರೀಡಾಂಗಣ’ ಕವನವನ್ನು ಉದಾಹರಿಸಿದರು. ಇದಕ್ಕೆ ‘ಕುರಿಗಳು ಸಾರ್‌ ಕುರಿಗಳು’ ಒಂದು ಉದಾಹರಣೆ ಎಂದರು. ‘ಕುವೆಂಪು ಅವರ ಅಚ್ಚುಮೆಚ್ಚಿನ ಕವಿಯಾದ ನಿಸಾರರು ಕನ್ನಡ ಕಾವ್ಯ ಪರಂಪರೆಗೆ ವಿಶಿಷ್ಟ ಧ್ವನಿ ತಂದುಕೊಟ್ಟವರು’ ಎಂದು ಕೃಷ್ಣಯ್ಯನವರು ಹೇಳಿ, ನಿಸಾರರ ಸಮಗ್ರ ಕಾವ್ಯ ಗಮನಿಸಿದಾಗ ಅದರಲ್ಲಿ ಹರಿಯುವ ಒಳಸ್ರೋತ, ಸೌಂದರ್ಯ ಕಂಡು ಬರುತ್ತದೆ ಎಂದರು.

ನಿಸಾರರು ಶಿವಮೊಗ್ಗದಲ್ಲಿದ್ದಾಗ ಬರೆದ ಗೀತೆ ‘ನಿತ್ಯೋತ್ಸವ’. ಈ ಗೀತೆ ಇಡೀ ನಾಡಿನಲ್ಲಿ ಕ್ರಾಂತಿಯನ್ನುಂಟುಮಾಡಿತು. ಕನ್ನಡದಲ್ಲಿ ಮೊಟ್ಟಮೊದಲ ಕ್ಯಾಸೆಟ್‌ ಆಗಿ ಹೊರಬಂದು, ಕ್ಯಾಸೆಟ್‌ ಯುಗಕ್ಕೆ ನಾಂದಿ ಹಾಡಿತು. ಮೂಲತಃ ನಿಸಾರರು ನಗರದ ಕವಿ, ತಮ್ಮ ಕಾವ್ಯದಲ್ಲಿ ನಗರದ ತಳಮಳವನ್ನು ಬಿಂಬಿಸಿದ ಕವಿ. ಬದುಕಿನ ಲಯ, ಸಾಂಗತ್ಯವನ್ನು ಬಲ್ಲ ಕವಿ. ಮಾಸ್ತಿಯವರ ಬಗ್ಗೆ, ಮಾಸ್ತಿಯವರೂ ಬಹುವಾಗಿ ಮೆಚ್ಚಿದ ಕವಿತೆಯಲ್ಲಿ, ಸಂಸ್ಕೃತಿಗೆ ಒಡ್ಡಿದ ಪ್ರತಿಮೆಗಳನ್ನು ತುಂಬಾ ಸೊಗಸಾಗಿ ನಿರೂಪಿಸಿದ್ದಾರೆ. ಮಾಸ್ತಿಯವರು ಸರಳ ಸದಭಿರುಚಿಯ ಸಂಸ್ಕೃತಿಯ ಪ್ರತೀಕವೆಂಬುದನ್ನು ಈ ಕವನದ ಕೊನೆಯ ಸಾಲುಗಳು ಬಿಂಬಿಸುತ್ತವೆ.

ಇಂದಿನ ಸಮಾಜದ ಬದುಕಿನ ಎಳೆಗೆ ‘ಕುರಿಗಳು ಸಾರ್‌ ಕುರಿಗಳು’ ಕವನ ಸಾಕ್ಷಿಯಾಗಿದೆ. ಕವಿಗೂ ಇಷ್ಟವಾಗುವಂತಹ ‘ರಾಮನ್‌ ಸತ್ತ ಸುದ್ದಿ’ ಯಂತಹ ಕವನಗಳು ನಿಸಾರರ ಚಿಂತನಶೀಲತೆಗೆ ಸಾಕ್ಷಿಯಾಗಿದೆ. ‘ನಾನೆಂಬ ಪರಕೀಯ, ‘ನಿಮ್ಮೊಡನಿದ್ದೂ ನಿಮ್ಮಂತಾಗದೆ’ ಮುಂತಾದ ವೈಯಕ್ತಿಕ ನೆಲೆಗಟ್ಟಿನ ಕವನಗಳಲ್ಲಿ ನಿಸಾರರ ಒಳತೋಟಿಯನ್ನು ಗಮನಿಸಬಹುದು. ಬಳಗ ಪ್ರೇಮಿಯಾದ ನಿಸಾರರು ಈಚೆಗೆ ಏಕಾಂತ ಪ್ರೇಮಿಯಾಗುತ್ತಿದ್ದಾರೆ ಏಕೆ? ಎಂದು ಪ್ರಶ್ನಿಸಿ ನಿಸಾರರು ಹೊರಗೆ ಬರಬೇಕೆಂದು ಕೋರಿದರು. ನಿಸಾರರಿಗೆ ಪ್ರಶಸ್ತಿಗಳು ಬರಬೇಕಿತ್ತು. ಬರುತ್ತದೆ ಎಂದ ಅವರು ಪಂಪ ಜನಮನದಲ್ಲಿ ನೆಲೆಸಿ ಆದಿಕವಿ ಎನಿಸಿಕೊಂಡ ನಿಸಾರರು ‘ನೆನೆದವರ ಮನದಲ್ಲಿ’ ‘ನಿತ್ಯೋತ್ಸವ’ ದಂತೆ ಉಳಿದಿರುವ ಕವಿ, ಪಂಚಕೋಟಿ ಕನ್ನಡಿಗರ ಅಭಿಮಾನದ ಕವಿ ಎಂದು ಹೇಳಿದರು.

ಅನುರೂಪ ದಂಪತಿಗಳಿಗೆ ಅಭಿನಂದನೆ

ಲೋಕಸೇವಾ ಆಯೋಗದ ಸದಸ್ಯ ದಾಸಯ್ಯ- ನಿಸಾರ್‌ ದಂಪತಿಗಳನ್ನು ಸನ್ಮಾನಿಸಿದರು. ಮೈಸೂರಿನ ಸಾಂಪ್ರದಾಯಿಕ ಪೇಟಾ ತೊಡಿಸಿ, ಶಾಲು ಹೊದೆಸಿದರು. ದಂಪತಿಗಳಿಬ್ಬರಿಗೂ ಸೇರಿ ಬೃಹತ್‌ ಹಾರ ಅರ್ಪಿಸಿದರು. ಸರಸ್ವತಿ ವಿಗ್ರಹ, ಫಲ-ತಾಂಬೂಲ ನೀಡಿ ‘ನವೋದಯದ ಹರಿಕಾರ’ ಎನ್ನುವ ಬಿರುದು ದಯಪಾಲಿಸಿದರು. ನಿಸಾರ್‌ ದಂಪತಿಗಳು ವೇದಿಕೆಯ ಮೇಲೆ ಶೋಭಾಯಮಾನವಾಗಿ ಮಿಂಚಿದರು. ಇದೇ ಸಂದರ್ಭದಲ್ಲಿ ನಿಸಾರರ ಅಭಿಮಾನಿಗಳು, ಶಿಷ್ಯವರ್ಗ ಬಂಧು-ಬಳಗದವರು ತಮ್ಮ ನಲ್ಮೆಯ ಕವಿಗೆ ನೆನಪಿನ ಕಾಣಿಕೆ, ಹಾರ ಅರ್ಪಿಸಿ, ಜನ್ಮದಿನದ ಶುಭಾಷಯ ಹಾರೈಸಿದರು. ನಂತರ ಪುಟಾಣಿಗಳಾದ ಕುಮಾರಿ ಶ್ರುತಿ, ಮಾ. ಮನೋಜ್‌ ನಿಸಾರರ ‘ಬೆಣ್ಣೆ ಕದ್ದ ನಮ್ಮ ಕೃಷ್ಣ...’ ಗೀತೆಗೆ ನೃತ್ಯ ಮಾಡಿ ಪ್ರೇಕ್ಷಕರ ಚಪ್ಪಾಳೆ, ಮೆಚ್ಚುಗೆ ಪಡೆದುಕೊಂಡರು.

ಪ್ರೊ. ನಿಸಾರ್‌ ಅಹಮದ್‌ ಅವರನ್ನು ಸನ್ಮಾನಿಸಿದ ದಾಸಯ್ಯನವರು ಕವಿಯ ಕರ್ತವ್ಯದ ಬಗ್ಗೆ ಮಾತನಾಡಿದರು. ಜನಮನವನ್ನು ಅರಿಯುವುದು ಕವಿಯ ಮಹತ್ವವೆಂದು ತಿಳಿಸಿದ ಅವರು ನಿಸರ್ಗ, ಮನುಷ್ಯ-ಮನುಷ್ಯ ಸಂಬಂಧ, ರಾಜಕೀಯ ಈ ವಲಯಗಳಲ್ಲಿ ವಾಸ್ತವಿಕತೆಗೆ ಒತ್ತು ನೀಡುವ, ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸ ಕವಿ-ಸಾಹಿತಿಗಳಿಂದ ಆಗಬೇಕಾಗಿದೆ. ಜನತೆಯ ಅಗತ್ಯಗಳನ್ನು ಕಾವ್ಯದ ಮೂಲಕ ಅಭಿವ್ಯಕ್ತಿಸುವ ಲೇಖಕರು ಅನಧಿಕೃತ ಶಾಸನ ಮಾಡುವ ಸಮರ್ಥರು ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ನಿಸಾರರ ಮುಂದಿನ ಕವನಸಂಕಲನದಲ್ಲಿ ಕಲುಷಿತ ಸಮಾಜದಲ್ಲಿ ಬದಲಾವಣೆ ತರುವಂಥ ಪ್ರಯತ್ನವಾಗಲಿ ಎಂದು ಆಶಿಸಿದರು.

ಮುಸ್ಲಿಂ ಪಂಡಿತರೊಡನೆ ಕೂಡಿ ಗ್ರಂಥ ರಚಿಸಲಿ

ನಿಸಾರರಲ್ಲಿ ಸ್ನೇಹಪರತೆ ಕಂಡ ಹಿರಿಯ ಗಾಂಧಿವಿಚಾರವಾದಿಗಳಾದ ಎಚ್‌.ಎಸ್‌.ದೊರೆಸ್ವಾಮಿಅವರು ನಿಸಾರರ ಬಗ್ಗೆ ನನಗೆ ಅಭಿಮಾನವಿದೆ. ಅವರು ಹೆಸರಾಂತ ಕವಿ, ಭೂಗರ್ಭಶಾಸ್ತಜ್ಞರು. ಸರಳತೆಗೆ ಹೆಸರಾದವರು. ಮುಸ್ಲಿಂ ಜನಾಂಗದಲ್ಲಿ ಮೇಟಿಯಾಗಿದ್ದಾನೆ. ಈಗವರು ಮುಸ್ಲಿಂ ಪಂಡಿತರೊಡನೆ ಸೇರಿ ಸಾರವತ್ತಾದ ಗ್ರಂಥ ರಚಿಸಬೇಕು. ಇದರಿಂದ ಮತ ಮೌಢ್ಯ ಕಡಿಮೆಯಾಗುತ್ತದೆ ಎಂದು ಹೇಳಿ, ‘ನಿಸಾರರಿಗೆ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ದೊರಕಲಿ’ ಎಂದು ಹಾರೈಸಿದರು.

ತಮಗೆ ನೀಡಿದ ಅಭಿಮಾನದ, ಪ್ರೀತಿಯ ಸನ್ಮಾನಕ್ಕಾಗಿ ಕೃತಜ್ಞತೆಗಳನ್ನು ಅರ್ಪಿಸಿ, ಮಾತನಾಡಿದ ಸಮಾರಂಭದ ಕೇಂದ್ರ ಬಿಂದುವಾದ ಪ್ರೊ. ಕೆ.ಎಸ್‌. ನಿಸಾರ್‌ ಅಹಮದ್‌ ಅವರು ತಮ್ಮ ಬಗ್ಗೆ ವೈಚಾರಿಕವಾಗಿ, ಬೌದ್ಧಿಕವಾಗಿ ಮಾತನಾಡಿದ ವಿದ್ವನ್ಮಣಿಗಳಿಗೆ ವಂದಿಸಿದರು. ‘ಈ ಸನ್ಮಾನ ನನಗೆ ಬೇಡವೆನಿಸಿತ್ತು. ಕೆಲಕಾಲದಿಂದ ಒಳತೋಟಿಯಲ್ಲಿದ್ದ ನನಗೆ ಏಕಾಂತವಾಗಿರಬೇಕೆನಿಸಿತ್ತು. ಶಾಂತರಾಜು ಮತ್ತವರ ಮಿತ್ರರು ಒಪ್ಪಿಕೊಳ್ಳಲೇಬೇಕೆಂದು ಒತ್ತಾಯಿಸಿದಾಗ ನನ್ನ ಧರ್ಮಪತ್ನಿಯು ಒಪ್ಪುವಂತೆ ಸೂಚಿಸಿದಾಗ ನಾನು ಅವರ ಅಭಿಮಾನಕ್ಕೆ ಕಟ್ಟುಬಿದ್ದು ಒಪ್ಪಿದೆ. ಇಂದು ನನಗವರು ತೋರಿದ ವಾತ್ಸಲ್ಯ, ಸಾಂಪ್ರದಾಯಿಕ ಸ್ವಾಗತ, ಮಂಗಳವಾದ್ಯಗಳ ಮೊಳಗು ನಿಜಕ್ಕೂ ನನಗೆ ಬೆರಗುಂಟು ಮಾಡಿದೆ. ಇದರಿಂದ ನನಗನ್ನಿಸುತ್ತೆ ನನ್ನಲ್ಲಿ ಕಿಂಚಿತ್‌ ಶಕ್ತಿ ಇದೆ ಎಂದು. ನಾನೊಂದು ಬಿದಿರಿನ ತುಂಡು. ತಾಯಿ ಆ ಬಿದುರಿನಿಂದ ಸ್ವರ ನುಡಿಸುತ್ತಿದ್ದಾಳೆ. ಅದನ್ನು ಕೇಳುತ್ತಿರುವ ತಮಗೆ ಕೃತಜ್ಞತೆ’ ಎಂದು ನುಡಿದ ನಿಸಾರರು ತಮ್ಮ ಕಾವ್ಯ ಕೃಷಿಗೆ ನೀರೆರೆದು ಪೋಷಿಸಿದ ತಂದೆ, ತಾಯಿಗಳಿಗೆ, ಸಂಸಾರದ ಜವಾಬ್ದಾರಿಯನ್ನು ಹೇರಿಸದೇ ತಾವೇ ನಿಭಾಯಿಸಿಕೊಂಡು ಹೋಗುತ್ತಿರುವ ತಮ್ಮ ಧರ್ಮಪತ್ನಿ ಷಾನವಾಜ್‌ ಬೇಗಂ ಅವರ ಸಹಕಾರವನ್ನು ನೆನೆದರು. ತಮ್ಮ ಬಗ್ಗೆ ಕನ್ನಡ ತಾಯಂದಿರು ತೋರುತ್ತಿರುವ ಪ್ರೀತಿಗೆ ಧನ್ಯರೆಂದ ನಿಸಾರರು ತಮ್ಮೊಡನೆ ಮಧುರ ಕ್ಷಣಗಳನ್ನು ಕಳೆದ ಸ್ನೇಹಜೀವಿಗಳು ಈ ಕಾರ್ಯಕ್ರಮದಲ್ಲಿ ಾಲ್ಗೊಂಡಿರುವುದನ್ನು ಗಮನಿಸಿ ಪುಳಕಿತರಾದರು. ಕುವೆಂಪು, ಬೇಂದ್ರೆಯವರಂಥ ಹಿರಿಯ ಕವಿಗಳ ಹರಕೆ ತಮ್ಮ ಮೇಲಿದೆ ಎಂದ ಅವರು ತಾನು ಕನ್ನಡದಲ್ಲಿ ಅಲ್ಲ್ಲದೆ ಬೇರೆ ಭಾಷೆಯಲ್ಲಿ ಬರೆದಿದ್ದರೆ ಖಂಡಿತವಾಗಿಯೂ ತಮಗಿಷ್ಟು ಪ್ರೀತಿ, ಅಭಿಮಾನ ಸಿಗುತ್ತಿರಲಿಲ್ಲವೆಂದು ವಿನಮ್ರವಾಗಿ ನುಡಿದರು.

ಅಮೆರಿಕನ್ನರ ಅಕ್ಕರೆಯ ಸವಿಯುಂಡೆ

ಮೂರೂವರೆ ತಿಂಗಳ ಕಾಲ ಅಮೆರಿಕಾ ಪ್ರವಾಸದಲ್ಲಿದ್ದಾಗ ಅಲ್ಲಿನ ಕನ್ನಡಿಗರು ತಮ್ಮನ್ನು ಸೋದರನಂತೆ ಕಂಡು ವಾತ್ಸಲ್ಯ ಸವಿ ಉಣಿಸಿದರು ಎಂದು ತಿಳಿಸಿದರು. ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದ ನಿಸಾರರು, ವಸ್ತುನಿಷ್ಠ ವಿಮರ್ಶಕರಾದ ತಮ್ಮ ಗೆಳೆಯ ಕೃಷ್ಣಯ್ಯನವರು ತಮ್ಮ ಬಗ್ಗೆ ಅಭಿನಂದನ ಭಾಷಣವನ್ನು ಹೃದಯಸ್ಪರ್ಶಿಯಾಗಿ ಮಾಡಿದ್ದಾರೆ. ಅವರು ಸ್ಪಷ್ಟವಾಗಿ ಎಳೆಎಳೆಯಾಗಿ ನಿರೂಪಿಸುವ ರೀತಿ, ವೈಚಾರಿಕತೆಯಿಂದ ಮಾತನಾಡುವ ಪರಿ ಅನ್ಯಾದೃಶವಾದುದು, ಎಂದು ಕೃತಜ್ಞತಾಪೂರ್ವಕ ನುಡಿಗಳನ್ನಾಡಿದ ಎಚ್‌.ಎಸ್‌. ದೊರೆಸ್ವಾಮಿಯವರು ಸೂಚಿಸಿದ ಸಲಹೆಗೆ ಪ್ರಕ್ರಿಯಿಸಿತ್ತ, ‘ಇಂದು ನಮ್ಮ ದೇಶಕ್ಕೆ ಭಾವಸಾಮರಸ್ಯ ಬೇಕು. ಸೃಜನಶೀಲ ವ್ಯಕ್ತಿಯಾಗಿ ಭಾವ ಸಾಮರಸ್ಯ ಮೂಡಿಸಲು ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದ ಅವರು ‘ಒಂದು ಕಾಲದಲ್ಲಿ ಮುಸ್ಲಿಂ ಮೊಹಲ್ಲಗಳಲ್ಲಿ ಕನ್ನಡ ಕಲಿಯುತ್ತಿದ್ದವರ ಪ್ರಮಾಣ ಶೇಕಡಾ 3-4 ರಷ್ಟಿತ್ತು.ಆದರೆ ಈಗ ಅಂಥ ಮೊಹಲ್ಲಗಳಲ್ಲಿ ಕನ್ನಡ ಕಲಿಯುವವರು ಶೇ.70-80ರಷ್ಟಿದ್ದಾರೆ. ಜೊತೆಗೆ ಒಂದೊಮ್ಮೆ ಕನ್ನಡದಲ್ಲಿ ನನ್ನನ್ನು ಒಳಗೊಂಡಂತೆ ಬೆರಳೆಣಿಕೆಯಷ್ಟು ಮಾತ್ರ ಕನ್ನಡ ಬರಹಗಾರರಿದ್ದರು. ಇಂದು ಕನ್ನಡದಲ್ಲಿ ಸೃಜನಶೀಲ ಮುಸ್ಲಿಂ ಬರಹಗಾರರ ಸಂಖ್ಯೆ ಹೆಚ್ಚಾಗಿದೆ. ಇದು ಭಾವಸಾಮರಸ್ಯದ ಶುಭ ಸೂಚನೆ’ ಎಂದು ತಿಳಿಸಿದರು. ತಮ್ಮ ಮೇಲೆ ಕನ್ನಡಿಗರ ಸದಾಶಯ, ಹಾರೈಕೆ ಆಶೀರ್ವಾದಗಳಿರುವುದು ತಮ್ಮನ್ನು ಕೃತಾರ್ಥವನ್ನಾಗಿಸಿದೆ ಎಂದು ಹೇಳಿ ಅಭಿನಂದನ ಸಮಿತಿ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಪ್ರೊ ಜಿ. ವೆಂಕಟಸುಬ್ಬಯ್ಯ, ‘ನಿಸಾರ್‌ ಅಹಮದ್‌ ಅವರೇ, ನಿಮ್ಮನ್ನು ಕಂಡ್ರೆ ನಂಗೆ ಹೊಟ್ಟೆಕಿಚ್ಚು. ಇಷ್ಟೊಂದು ಜನರನ್ನು ಸಂಪಾದಿಸಲು ಏನು ಮಾಟ ಮಾಡಿದ್ದೀರಿ. ಎಂಥ ಪ್ರೀತಿ! ನೀವು ಪುಣ್ಯ ಮಾಡಿದ್ದೀರಿ’ ಎಂದೇ ತಮ್ಮಭಾಷಣವನ್ನಾರಂಭಿಸಿದರು. ‘ಈ ಸಮಾರಂಭವು ಆತ್ಮೀಯವಾಗಿ ನಡೆದಿದೆ’ ಎಂದ ಜೀ.ವಿ. ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಗಾಂಧಿಬಜಾರು ಸುಸಂಸ್ಕೃತರ ಜಾಗ. ಅಲ್ಲಿ ರುಚಿ, ಅಭಿರುಚಿ ಎಲ್ಲವೂ ಸುಸಂಸ್ಕೃತ. ನಿಸಾರರು ಇಂಥ ಜಾಗದಲ್ಲಿ ವಾಸ ಮಾಡಿ ‘ಮನಸು ಗಾಂಧಿ ಬಜಾರು’ ಎನ್ನುವ ಕವನವನ್ನು ಬರೆದರು, ಕವನದ ಶೀರ್ಷಿಕೆಯನ್ನೇ ಪುಸ್ತಕಕ್ಕಿಟ್ಟರು, ಎಂದು ತಿಳಿಸಿ, ವಯಸ್ಸಾದಂತೆಲ್ಲ ನಿಸಾರರ ಕಾವ್ಯದಲ್ಲಿ ಮಾಗುವಿಕೆಯನ್ನು ಗುರುತಿಸಬಹುದು. ಆಧ್ಯಾತ್ಮಿಕದ ಕಡೆಗ ಅವರು ವಾಲುತ್ತಿರುವುದನ್ನು ಗಮನಿಸಬಹುದು. ನಿಸಾರರು ಗದ್ಯ ಬರವಣಿಗೆಯಲ್ಲಿ ತೊಡಗಿಕೊಂಡ ಸಂದರ್ಭದಲ್ಲಿ, ಕಾವ್ಯರಚನೆಗೆ ವಿರಾಮ ಕೊಟ್ಟ ವೇಳೆಯಲ್ಲಿ ಅವರುಬರೆದ ‘ಎಲ್ಲಿದ್ದೀಯ ನನ್ನ ಕವಿತೆ’ ಎನ್ನುವ ಕವಿತೆಯಲ್ಲಿ ಕವಿತೆಯನ್ನು ನಾಯಿಮರಿಗೆ ಹೋಲಿಸಿ ಬರೆದ ರೀತಿ ಸುಂದರವಾಗಿದೆ’ ಎಂದು ನಿಸಾರರ ಕಾವ್ಯ ರಚನಾ ಶೈಲಿಯ್ನ ಮೆಚ್ಚಿದರು. ನೂರ್ಕಾಲ ಬಾಳಿರೆಂದು ಹಾರೈಸಿದರು.

ಕಸ್ತೂರಿ ಕನ್ನಡ ಸಂಘದ ಕಾರ್ಯದರ್ಶಿಗಳಾದ ಬಿ.ಎನ್‌.ಕುಮಾರ್‌ ಅವರು ವಂದಿಸಿ, ಅಭಿನಂದನ ಸಮಾರಂಭಕ್ಕೆ ನೆರವಾದವರನ್ನು ಕೃತಜ್ಞತೆಯಿಂದ ಸ್ಮರಿಸಿದರು.

ನಂತರ ನಡೆದ ನಿಸಾರರ ವಿರಚಿತ ‘ವಂದಿಸುವೆವು ಸುಜ್ಞಾನವತಿ’ ‘ನನ್ನ ನಲಿವಿನ ಬಳ್ಳಿ’ ಹಾಗೂ ‘ಸಗ್ಗದ ಸಿರಿ ಬಂತು’ ಗೀತೆಗಳನ್ನು ಗಾಯಕಿಯರಾದ ಹೇಮಾ ಪ್ರಸಾದ್‌, ಶಮಿತಾ ಮಲ್ನಾಡ್‌, ಬದರಿ ಪ್ರಸಾದ್‌ ಅವರು ಹಾಡಿ ರಂಜಿಸಿದರು.

ಇಡೀ ಕಾರ್ಯಕ್ರಮದ ಆಕರ್ಷಕವಾಗಿ ನಿರೂಪಿಸಿದವರು ಟಿ.ವಿ. ನಿರೂಪಕರಾದ ಸಂಜೀವ ಕುಲಕರ್ಣಿ.

ನಿವೃತ್ತ ನ್ಯಾಯಮೂರ್ತಿಗಳೂ, ಶತಾಯುಶಿಗಳೂ ಆದ ನಿಟ್ಟೂರು ಶ್ರೀನಿವಾಸರಾಯರು ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಪಾಲ್ಗೊಂಡು ಸಮಾರಂಭಕ್ಕೆ ಕಳೆ ಕಟ್ಟಿದ್ದು ವಿಶೇಷವಾಗಿತ್ತು.


ಪೂರಕ ಓದಿಗೆ-
ಕೆ.ಎಸ್‌.ನಿಸಾರ್‌ಅಹಮದ್‌ : ಗಾಂಧಿ ಬಜಾರಿನಿಂದ ಡೆಟ್ರಾಯಿಟ್‌ಗೆ..
ಜೋಡಿ ಸಂಭ್ರಮ : ನಿಸಾರ್‌-69, ಭಟ್ಟರಿಗೆ ಕಾವ್ಯಸಂಭ್ರಮ


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X