90/10 ಎನ್ನುವ ಸಂತೋಷದ ಮಂತ್ರ!
- ರಘುನಾಥ್. ಪಿ.ಜಿ, ಬೆಂಗಳೂರು
[email protected]
ಏನಿದು 90/10 ತತ್ವ ?
ಈ ಹಿಂದೆ ಎಲ್ಲಾದರೂ ಓದಿದ್ದೀರಾ ? ಇಲ್ಲಾ ಕೇಳಿದ್ದೀರಾ ? ಓದದಿದ್ದರೆ ಇಗೋ ಇಲ್ಲಿದೆ ಓದಿ. ಓದಿದ್ದರೆ ಇನ್ನೊಮ್ಮೆ ಓದಿ ಇಲ್ಲವಾ ಓದಿ; ಸಾಧ್ಯವಾದರೆ ಅನುಸರಿಸಿ, ಅನುಭವಿಸಿ. ಆಗ ಖಂಡಿತ 90/10 ತತ್ವದ ಪರಿಣಾಮ ನಿಮಗೆ ಅರಿವಾಗುವುದು.
ದಿನನಿತ್ಯದ ಚಟುವಟಿಕೆಗಳಲ್ಲಿ ನಾವು ಸ್ವತಃ ನಿರ್ಧರಿಸಿ ಮಾಡದ ಕೆಲಸಗಳು ಕೇವಲ ನೂರರಲ್ಲಿ ಹತ್ತು ಭಾಗ ಮಾತ್ರ. ಇವು ನಮ್ಮ ಅಂಕೆಗೆ ಬರದೇ ನಡೆದುಹೋಗುವುವು. ಈ ಹತ್ತು ಭಾಗದ ಕಾರ್ಯಗಳ ಮೇಲೆ ನಮಗೆ ಯಾವುದೇ ತರವಾದ ಹತೋಟಿಯಾಗಲೀ ಹಿಡಿತವಾಗಲೀ ಇರುವುದಿಲ್ಲ. ಹೀಗಂದರೆ ಏನು ಅಂದಿರಾ? ಯೋಚಿಸಿ, ಕಾರ್ ಬ್ರೇಕ್‌ಫೇಲ್ ಆಗುವುದನ್ನಾಗಲೀ, ರಸ್ತೆಯಲ್ಲಿನ ಸಿಗ್ನಲ್ ದೀಪ ಕೆಂಪು ತೋರಿಸುವುದನ್ನಾಗಲೀ, ವಿಮಾನ ಸಮಯಕ್ಕೆ ಸರಿಯಾಗಿ ಬರದೇ ವಿಳಂಬವಾಗುವುದನ್ನಾಗಲೀ ನಮಗೆ ತಡೆಯಲು ಸಾಧ್ಯವೆ ? ಇಲ್ಲ. ಆದರೆ ಕಾರ್ ಬ್ರೇಕ್‌ಫೇಲ್ ಆದಾಗ, ಸಿಗ್ನಲ್ ದೀಪ ಕೆಂಪು ತೋರಿಸಿದ್ದರಿಂದ ನೀವು ಸೇರಬೇಕಾದ ಸ್ಥಳ ತಲುಪಲು ನಿಮಗೆ ತಡವಾದಾಗ ಅಥವಾ ವಿಮಾನ ತಡವಾಗಿ ಬಂದಿಳಿದ ಕಾರಣ- ನಿಮ್ಮ ಪೂರ್ವಯೋಜಿತ ಕೆಲಸಗಳೆಲ್ಲಾ ದಿಕ್ಕುತಪ್ಪಿದಾಗ ನಿಮ್ಮ ಕೋಪ ನೆತ್ತಿಗೇರಿ ಬುದ್ಧಿ ಸ್ಥಿಮಿತ ತಪ್ಪುವುದು. ಆ ಸಮಯದಲ್ಲಿ ನಾವು ಹೇಗೆ ಪ್ರತಿಕ್ರಿಯಿಸುವೆವು ಎಂಬುದೇ ನಮ್ಮ ಕೈಯಲ್ಲಿರುವ ಉಳಿದ 90 ರ ತತ್ವದ ಮಹತ್ವ. ನಾವು ತೋರುವ ಪ್ರತಿಕ್ರಿಯೆಯಿಂದ ಇತರರು ನಮ್ಮನ್ನು ಮೂರ್ಖರನ್ನಾಗಿಸಲು ಅವಕಾಶ ನೀಡದೇ ನಮ್ಮನ್ನು ನಾವು ಹತೋಟಿಯಲ್ಲಿಡಬಹುದು. ಒಂದು ಸಣ್ಣ ಘಟನೆಯ ಮೂಲಕ ಇದನ್ನು ವಿಮರ್ಶಿಸಬಹುದು.
ನೀವು ನಿಮ್ಮ ಕುಟುಂಬದೊಡನೆ ಕುಳಿತು ಬೆಳಗಿನ ಉಪಹಾರವನ್ನು ಸೇವಿಸುತ್ತಿರುತ್ತೀರಿ. ಆಗ ಪಕ್ಕದಲ್ಲಿ ಕುಳಿತಿದ್ದ ನಿಮ್ಮ ಮಗಳ ಅಜಾಗರೂಕತೆಯಿಂದ ಟೇಬಲ್ ಮೇಲಿಟ್ಟಿದ್ದ ಕಾಫಿ ಲೋಟ ಅವಳ ಕೈತಗುಲಿ ನೀವು ಕಛೇರಿಯಲ್ಲಿನ ಮುಖ್ಯ ಕಾರ್ಯಕ್ಕಾಗಿ ಹೋಗಲು ತೊಟ್ಟಿದ್ದ ನಿಮ್ಮ ಹೊಚ್ಚ ಹೊಸ ಬಿಳಿ ಅಂಗಿಯ ಮೇಲೆ ಬಿದ್ದು ಅಂಗಿಯೆಲ್ಲಾ ಹಾಳಾಗುತ್ತದೆ. ಆಗ ಆದ ಅನಾಹುತವು ನಿಮ್ಮ ಕೈಯಲ್ಲಿರಲಿಲ್ಲ. ಆದರೆ ಆ ನಂತರ ನೀವು ಹೇಗೆ ಪ್ರತಿಕ್ರಿಯಿಸುವಿರಿ ಎಂಬುದೇ ಮುಂದಿನ ಮುಖ್ಯ ಹಂತ ! ಕಾಫಿ ಲೋಟ ನಿಮ್ಮ ಅಂಗಿಯ ಮೇಲೆ ಬಿದ್ದ ಕೂಡಲೇ ನಿಮ್ಮ ಪಿತ್ತ ನೆತ್ತಿಗೇರಿ, ಮಗಳನ್ನು ಯರ್ರಾಬಿರ್ರಿ ಬೈಯುತ್ತೀರಿ. ಮಗಳು ಅಳಲು ಪ್ರಾರಂಭಿಸುತ್ತಾಳೆ. ನಂತರ ಪತ್ನಿ ಕಡೆ ನಿಮ್ಮ ಕೋಪ ತಿರುಗಿ ಅವಳ ಮೇಲೂ ಕೂಗಾಡುತ್ತಾ ಕಾಫಿ ಲೋಟವನ್ನು ಅಷ್ಟು ಹತ್ತಿರದಲ್ಲಿ ಇಟ್ಟಿದ್ದೇಕೆಂದು ಕೂಗಾಡುತ್ತೀರಿ. ಆದರೆ ಆ ಕಾಫಿ ಲೋಟ ಪ್ರತಿ ದಿನವೂ ಇಡುವ ಸ್ಥಳದಲ್ಲಿಯೇ ಇತ್ತು ಎನ್ನುವುದನ್ನು ನೀವು ಗಮನಿಸಿದ್ದರೂ ಕೂಡ ಬೇಕಂತಲೇ ಕೋಪದಲ್ಲಿ ಮರೆಯುವಿರಿ. ಕೋಪದಿಂದ ಮೈಮರೆತ ನೀವು ಅರ್ಧದಲ್ಲೇ ತಿಂಡಿ ತಿನ್ನುವುದನ್ನು ಬಿಟ್ಟು ರೂಮಿಗೆ ಹೋಗಿ ನಿಮ್ಮ ಅಂಗಿ ಬದಲಿಸಿ ನಿಮಗೂ, ಮಗಳ ಶಾಲೆಗೂ ಸಮಯವಾಯಿತೆಂದು ಕೂಗಾಡುತ್ತಾ ಬರುವಷ್ಟರಲ್ಲಿ ನಿಮ್ಮ ಮಗಳು ಅಳುವಿನಲ್ಲೇ ಅರ್ಧಂಬರ್ಧ ತಿಂಡಿ ತಿಂದು ಬಂದು ಕಾರಲ್ಲಿ ಕೂಡುತ್ತಾಳೆ. ನಿಮ್ಮ ಕೋಪ ಇನ್ನೂ ಶಮನವಾಗಿರುವುದಿಲ್ಲ. ನೀವು ಕೋಪದಿಂದಲೋ ಅಥವಾ ತಡವಾಯಿತೆಂದಲೋ ಕಾರನ್ನು 60 ಮೈಲಿ ವೇಗದಲ್ಲಿ ಓಡಿಸಿ ಸಂಚಾರಿ ಕೆಂಪು ದೀಪವನ್ನೂ ಲೆಕ್ಕಿಸದೇ ವಾಹನ ಓಡಿಸಿದ್ದಕ್ಕಾಗಿ ಪೋಲಿಸಿನವನು ನಿಮ್ಮ ವಾಹನ ತಡೆದು 500 ರೂ. ದಂಡ ಹಾಕುತ್ತಾನೆ. ದಂಡ ತೆತ್ತು ಮಗಳನ್ನು ಶಾಲೆಯ ಹತ್ತಿರ ಇಳಿಸಿದಾಗ ಅವಳು ಮಾಮೂಲಿನಂತೆ ಕೈ ಕೂಡ ಬೀಸದೆ ಶಾಲೆ ಒಳಗೆ ಓಡುತ್ತಾಳೆ. ಏನೋ ಯಾವುದೂ ಸರಿ ಇಲ್ಲ ಅನ್ಕೊಂಡು ಕಛೇರಿ ತಲುಪುವಷ್ಟರಲ್ಲಿ 15 ನಿಮಿಷ ತಡವಾಗಿ ಬಂದದ್ದಲ್ಲದೇ ಆ ದಿನದ ಮೀಟಿಂಗ್‌ಗಾಗಿ ಬೇಕಾಗಿದ್ದ ಕೆಲವು ಮುಖ್ಯ ಕಡತಗಳು ಮನೆಯಲ್ಲಿಯೇ ಮರೆತು ಬಂದಿರುವುದು ತಿಳಿದು ಬಾಸ್ ಬಾಯಿಗೆ ಬಂದ ಹಾಗೆ ಬಯ್ಯುತ್ತಾರೆ.... ಹೀಗೆ ಆ ದಿನ ಪೂರ್ತಿ ಕೆಲಸವೆಲ್ಲಾ ಹಾಳು, ಮನಸ್ಸಿಗೂ ಕಿರಿಕಿರಿ. ಸಂಜೆ ಆದ ಮೇಲೆ ಮನೆಗೆ ಬಂದರೆ ಹೆಂಡತಿ ಒಂದು ದಿಕ್ಕಿನ ಕಡೆ ಮಗಳು ಮತ್ತೊಂದು ದಿಕ್ಕಿನ ಕಡೆ ಮುಖ ಮಾಡಿಕೊಂಡು ಕುಳಿತಿರುತ್ತಾರೆ. ಬೆಳಗಿನ ಒಂದು ಸಣ್ಣ ಘಟನೆ ಹೇಗೆ ಹಲವಾರು ತಾಪತ್ರಯಗಳಿಗೆ ಕಾರಣವಾಯಿತು ಅಲ್ಲವಾ? ಈಗ ನೋಡುವ, ಇದಕ್ಕೆಲ್ಲಾ ಏನು ಕಾರಣ ಎಂದು ?
- ಕಾಫಿಯೇ
- ನಿಮ್ಮ ಮಗಳೇ
- ದಂಡ ಹಾಕಿದ ಪೋಲೀಸರೇ ಅಥವಾ,
- ನೀವೇ.
ನೀವೇ ತಾನೇ. ಕಾಫಿ ನಿಮ್ಮ ಮೇಲೆ ಬೀಳುವುದನ್ನು ತಪ್ಪಿಸುವಲ್ಲಿ ನಿಮ್ಮ ಯಾವುದೇ ಹತೋಟಿಯಾಗಲೀ, ಹಿಡಿತವಾಗಲೀ ಇರಲಿಲ್ಲ. ಆದರೆ ಕಾಫಿ ಚೆಲ್ಲಿದ ನಂತರ ನೀವು ನಡೆದುಕೊಂಡ ರೀತಿಯ ಮೇಲೆ ಖಂಡಿತ ನಿಮ್ಮ ಹತೋಟಿಯಿತ್ತು. ಕೇವಲ 5 ಕ್ಷಣ ನೀವು ನಿಮ್ಮ ಸ್ಥಿಮಿತ ಕಳೆದುಕೊಳ್ಳದೇ ನಿಮ್ಮ ಮಗಳು ಕಾಫಿ ಚೆಲ್ಲಿದ ಕೂಡಲೇ ನಿಮ್ಮ ಮಗಳು ಗಾಬರಿಯಾಗಿ ಅಳುವುದಕ್ಕೆ ಪ್ರಾರಂಭಿಸುವ ಮೊದಲೇ ನೀವೇ ಮುಂದಾಗಿ ಮಗಳಿಗೆ ಹಾಗೆಲ್ಲಾ ಅಜಾಗರೂಕತೆಯಿಂದ ನಡೆದುಕೊಳ್ಳಬಾರದು, ಇನ್ನು ಮೇಲೆ ಹುಷಾರಾಗಿ ಇರಬೇಕು ಎಂದು ಹೇಳಿ, ನಿಮ್ಮ ಅಂಗಿಯನ್ನು ಬದಲಿಸಿದ್ದರೆ ಸಾಕಿತ್ತು. ಎಲ್ಲವೂ ಮಾಮೂಲು. ಇದರಿಂದಾಗಿ, ನಿಮ್ಮ ಮಗಳು ಶಾಲೆಗೆ ಸರಿಯಾದ ಸಮಯಕ್ಕೆ ತಲುಪುವಳಲ್ಲದೆ ನಿಮಗೆ ಕೈಬೀಸಿ ನಗುನಗುತಾ ಹೋಗುವಳು. ನಿಮ್ಮ ಹೆಂಡತಿಯೂ ಅಷ್ಟೇ, ಯಾವುದೇ ಟೆನ್ಷನ್ ಇಲ್ಲದೆ ತನ್ನ ಕೆಲಸ ಮುಗಿಸಿ ತಾನೂ ತನ್ನ ಕೆಲಸಕ್ಕೆ ಹೋಗುವಳು. ನೀವೂ ಸಹ ಅಂದಿನ ಕೆಲಸಕ್ಕೆ ಬೇಕಾದ ಎಲ್ಲಾ ಮಾಹಿತಿಗಳೊಡನೆ ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗಿ ಯಶಸ್ವಿಯಾಗಿ ಕೆಲಸ ಮುಗಿಸುವಿರಿ. ಬಾಸ್ ಸಹ ನಿಮಗೆ ಶಹಭಾಸ್‌ಗಿರಿ ನೀಡುವರು. ಮನೆಗೆ ಮರಳಿದಾಗ ಹೆಂಡತಿಯು ಮತ್ತು ನಿಮ್ಮ ಮಗಳು ನಗುನಗುತಾ ಎದುರುಗೊಳ್ಳುವರು. ನಿಮ್ಮ ಮನಸ್ಸೂ ಹರ್ಷೋಲ್ಲಾಸವಾಗಿರುತ್ತೆ. ಈಗ ಹೇಳಿ ಆ 10 ಭಾಗದ ಕೆಲಸದ ಮೇಲೆ ನಿಮಗೆ ನಿಯಂತ್ರಣ ಇರಲಿಲ್ಲ. ಆದರೆ ಆ ನಂತರ ನಡೆದ 90 ಭಾಗದಷ್ಟು ನಡವಳಿಕೆಗಳ ಮೇಲೆ ಖಂಡಿತ ನಿಮಗೆ ನಿಯಂತ್ರಣವಿತ್ತು. ಅದು ನಿಮ್ಮ ಪ್ರತಿಕ್ರಿಯೆಯ ಮೇಲೆ ಅವಲಂಬಿತವಾಗಿತ್ತು. ಅಂದರೆ ನಮ್ಮ ಒಂದು ಕ್ರಿಯೆಯಲ್ಲಿ ತಪ್ಪಾದರೆ ಅದರ ಪರಿಣಾಮಗಳು ಅಸಂಖ್ಯ. ಅದನ್ನೇ ಹೇಳುವುದು 90/10 ತತ್ವ ಎಂದು. ಹೇಗಿದೆ 90/10 ರ ಮಂತ್ರ ಹಾಗೂ ಮಹತ್ವ.
ಈ 90/10 ರ ಮಂತ್ರ ಹೇಗೆ ಉಪಯೋಗಿಸುವುದು ಅಂಥ ಯೋಚಿಸ್ತಿದ್ದೀರಾ ? ಇಲ್ಲೋಡಿ ಇಲ್ಲಿದೆ ಕೆಲವು ದಾರಿಗಳು.
ನಿಮ್ಮನ್ನು ಯಾರಾದರೂ ತೆಗಳಿದಾಗಲೋ ಅಥವಾ ಹಿಯಾಳಿಸಿದಾಗಲೋ ನೀವು ನಿಮ್ಮ ಬುದ್ಧಿಯ ಮೇಲಿನ ಹತೋಟಿಯನ್ನು ಕಳೆದುಕೊಳ್ಳಬೇಡಿ. ಆ ತೆಗಳಿಕೆಗೋ, ಹೀಯಾಳಿಸುವಿಕೆೆಗೋ ನೀವು ನಿಮ್ಮ ಸ್ಥಿಮಿತವನ್ನು ಕಳೆದುಕೊಂಡು ಕೋಪ ಪಟ್ಟುಕೊಂಡರೆ ಖಂಡಿತ ನೀವು ಏನಾದರೂ ಒಂದು ಅಮೂಲ್ಯವಾದುದನ್ನು ಕಳೆದುಕೊಳ್ಳುವುದು ನಿಶ್ಚಿತ. ಇದರ ಪರಿಣಾಮ ಸ್ನೇಹಿತರನ್ನೋ, ಇಲ್ಲಾ ಮನೆಯಲ್ಲಿನ ಹರ್ಷದ ವಾತಾವರಣವನ್ನೋ, ಕಛೇರಿಯಲ್ಲಿ ನಿಮ್ಮ ಮೇಲಧಿಕಾರಿಗಳಿಂದ ನಿಮ್ಮ ಮೇಲಿದ್ದ ಒಳ್ಳೆಯ ಅಭಿಪ್ರಾಯವನ್ನೊ ಕಳೆದುಕೊಳ್ಳುವುದು ಶತಸಿದ್ಧ. ಇದೆಲ್ಲಾ ಯಾಕೆ ಬೇಕು. ಆ ಒಂದು ಕ್ಷಣ ನಾವು ನಮ್ಮ ಬುದ್ದಿಯನ್ನು ಕೋಪದ ಕೈಗೆ ಕೊಡದಿದ್ದರೆ ಮುಂದಿನದೆಲ್ಲಾ ಸುಗಮವಾಗಿ ನಡೆಯುವುವು.
ಏನು ಮಾಡುವುದು? ವಿಮಾನವೂ ಕೆಲವು ಅನಿವಾರ್ಯ ಕಾರಣಗಳಿಂದ ತಡವಾಗಿ ಬರುವುದು, ದಾರಿಯಲ್ಲಿ ಕೂಡ ವಾಹನಗಳ ದಟ್ಟಣೆಯಿಂದ ಸಂಚಾರ ಅಸ್ತವ್ಯಸ್ತ ಆಗುವುದು. ಆಗೆಲ್ಲಾ ನಾವು ಕೋಪ ಪಟ್ಟುಕೊಂಡರೆ ಏನು ಪ್ರಯೋಜನ. ಕೋಪದಿಂದ ಏನಾದರೂ ವಿಮಾನ ತಡವಾಗಿ ಬರುವುದು ತಪ್ಪಿಸಲು ಸಾಧ್ಯವೇ ? ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ ಆಗುವುದು ತಪ್ಪಿಸಲು ಸಾಧ್ಯವೇ ? ಇಲ್ಲವಾದಲ್ಲಿ ವಿನಾಕಾರಣ ಕೋಪ ಪಟ್ಟುಕೊಂಡು ನಿಮ್ಮಲ್ಲಿರುವ ಉಲ್ಲಾಸದ ಮನಸ್ಸನ್ನು ಏಕೆ ಕಳೆದುಕೊಳ್ಳುವಿರಿ !
ಲೆಕ್ಕಾಚಾರ ತಪ್ಪಿದ ಸಮಯದಲ್ಲಿ ಮಾಡಬೇಕಾದಿಷ್ಟೇ- ಅಕ್ಕ ಪಕ್ಕದಲ್ಲಿ ನಡೆಯುವ ಸಣ್ಣ ಪುಟ್ಟ ಘಟನೆಗಳ ಕಡೆ ಗಮನ ಹರಿಸುವುದು. ಆಗ ಕೋಪವೂ ಶಮನ, ಮನಸ್ಸೂ ಸ್ಥಿಮಿತ ತಪ್ಪುವುದಿಲ್ಲ . ಆರೋಗ್ಯವೂ ಕೆಡುವುದರತ್ತ ಹೆಜ್ಜೆ ಹಾಕುವುದಿಲ್ಲ. ಕೇವಲ ಕೋಪ ಪಟ್ಟುಕೊಳ್ಳುವುದರಿಂದ ಯಾವ ಕೆಲಸವೂ ಸುಗುಮವಾಗಿ ಸಾಗುವುದಿಲ್ಲ. ಹಾಗಿದ್ದಲ್ಲಿ ವೃಥಾ ಕೋಪವೇಕೆ ? ಈ ಕೋಪವೇ ತಾನೇ ಇಂದಿನ ಲಕ್ಷಾಂತರ ಜನರ ನಿದ್ದೆ ಕೆಡಿಸಿರುವುದು. ಅವರು ಅನುಭವಿಸುತ್ತಿರುವ ಒತ್ತಡಗಳು, ಮನೋ ವಿಕಾರಗಳು, ತಲೆನೋವು ಇನ್ನಿತರೆ ಮಾನಸಿಕ ಉದ್ವೇಗಗಳಿಗೆ ಮೂಲ ಕಾರಣ ನಾವು ವಿನಾಕಾರಣ ತೋರುವ ಉದ್ವೇಗ, ಕೋಪ.
ಯಾವಾಗಲೂ ಕೆಟ್ಟದಿನಗಳನ್ನು ಕೆಟ್ಟದಿನಗಳು ಹಿಂಬಾಲಿಸುತ್ತವೆಯೇ ಹೊರತೂ ಒಳ್ಳೆಯ ದಿನಗಳಲ್ಲ. ನಾವು ಯಾವ ರೀತಿ ನಮ್ಮ ಮನಸ್ಸನ್ನಾಗಲೀ, ದೇಹವನ್ನಾಗಲೀ ಹದ ಮಾಡಿ ಸಲಹಿ ಬೆಳೆಸುತ್ತೇವೆಯೋ ಅವೂ ಸಹ ನಮಗೆ ಸಹಕರಿಸುವುವು, ಉಲ್ಲಾಸದಿಂದ, ಸಮಯದಲ್ಲಿ ಕೈಕೊಡದೇ ! ಚಿಂತೆಗಳು ನಮ್ಮ ಸಮಯವನ್ನು ನುಂಗಿ ಆರೋಗ್ಯವನ್ನು ಹದಗೆಡಿಸಿದರೆ, ಕೋಪತಾಪಗಳು ನಮ್ಮ ಸಂಬಂಧಗಳನ್ನು ಹಾಳುಮಾಡುತ್ತದೆ. ನಮಗೆಲ್ಲಾ ಗೊತ್ತೇ ಇದೆಯಲ್ಲವೇ ಲೈಫ್ ಈಸ್ ಶಾರ್ಟ್ ಅನ್ನುವ ನಾಣ್ಣುಡಿ. ಇರುವ ಸ್ವಲ್ಪ ಸಮಯವನ್ನು ನಾವು ಕೋಪ ತಾಪಗಳಿಗೆ, ಮುನಿಸಿಗೆ, ದ್ವೇಷ ಹಗೆತನಗಳಿಗೆ ಮೀಸಲಿಟ್ಟರೆ ನಿಜವಾಗಲೂ ನಾವು ಜೀವನದ ಸವಿಯನ್ನು ಸವಿಯಲು ಸಾಧ್ಯವಾ, ಯೋಚಿಸಿ!
ವೃಥಾ ಕೋಪ ಪಟ್ಟು , ಸಹನೆ ಕಳೆದುಕೊಂಡು ಸಂಬಂಧಗಳನ್ನು ಕಡಿದುಕೊಂಡು, ಸ್ನೇಹವನ್ನು ಕೊಂದು ಸಾಧಿಸುವುದಾದರೂ ಏನು? ಒಳ್ಳೆಯ ಸಂಬಂಧಗಳಿಲ್ಲದೇ, ಸ್ನೇಹಮಯ ಜೀವನ ಇಲ್ಲದೇ, ನಕ್ಕು ನಗಿಸುವ ಸ್ನೇಹಿತರಿಲ್ಲದ ಜೀವನ ಬರಡೆನಿಸುವುದಿಲ್ಲವೇ? ಹೊಳೆಯ ತುಂಬಾ ನೀರಿದ್ದು ಅದು ದಾಹ ತೀರಿಸಲು ಲಭ್ಯವಿಲ್ಲದಿದ್ದಲ್ಲಿ ಏನು ಪ್ರಯೋಜನ ಅಲ್ಲವಾ. ಹಾಗೆಯೇ ಎಷ್ಟೇ ಉನ್ನತ ದರ್ಜೆಯ ಮನುಷ್ಯರಾಗಿದ್ದರೂ ಕೋಪತಾಪಗಳಿಗೆ ಲಂಗು ಲಗಾಮು ಹಾಕಲು ವಿಫಲರಾದಲ್ಲಿ ಬೇರೆಲ್ಲಾ ಸಂಪತ್ತುಗಳೂ ನಿಷ್ಪ್ರಯೋಜಕವಾಗುವುವು. ಕವಡೆಕಾಸಿಗೂ ಬಾಳದ ಆ ಸಂಪತ್ತು ಬೇಕಾ? ಯೋಚಿಸಿ.
ಈಗ ಹೇಳಿ, ನೀವೂ ಯಾಕೆ ಈ 90/10 ಮಂತ್ರ ಅಳವಡಿಸಿಕೊಳ್ಳಬಾರದು. ಇದಕ್ಕೇನೂ ದುಡ್ಡು ನೀಡಬೇಕಾಗಿಲ್ಲ. ಸಮಯವನ್ನೂ ಕಳೆದುಕೊಳ್ಳಬೇಕಾಗಿಲ್ಲ. ಇದರಿಂದ ನೀವು ಗಳಿಸುವುದೇ ಜಾಸ್ತಿ. ಖಂಡಿತಾ ಗಳಿಸುವಿರಿ. ಇದು ನಿಮಗೆ ಯಶಸ್ಸನ್ನು ನೀಡಿದಲ್ಲಿ , ಈ ಮಂತ್ರವನ್ನು ಗೆಳೆಯರಿಗೂ ಉಪದೇಶಿಸಿ. ಸಂಬಂಧಗಳು, ಸ್ನೇಹ, ಗೆಳೆತನ, ಒಡನಾಟಗಳು ಮತ್ತಷ್ಟು ಗಟ್ಟಿಯಾಗಲಿ.
(ಆಕರ: ಇ-ಮೇಲ್ ಸರಪಳಿಯ ಒಂದು ಪತ್ರ)












Click it and Unblock the Notifications