• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತುಂಟ ಮಂಗನ ಕತೆಯೂ... ಡಾರ್ವಿನ್ನನ ವಿಕಾಸವಾದವೂ

By Staff
|

ಒಂದು ತುಂಟ ಮಂಗ ಇತ್ತು. ಅದು ಆಚೀಕ ಇಚೀಕ ಜಿಗಿದಾಡುವಾಗ ಅದರ ಬಾಲದಾಗ ಒಂದು ಮುಳ್ಳು ಮುರಿತು. ಹಜಾಮನ ಹತ್ತರ ಹೋಗಿ - ‘ನನ್ನ ಬಾಲ ದನ್ನ ಮುಳ್ಳ ತಗಿ’ ಅಂತು. ಅವ ತಗಿಯಾಕ ಹೋದ- ಪಕ್ಕನ ಅದರ ಬಾಲ ಎರಡು ತುಂಡಾಯ್ತು. ಆಗ ಮಂಗ ಹಜಾಮಗ ‘ನನ್ನ ಬಾಲ ಕೊಡತಿಯೋ ಏನ್‌ ನಿನ್ನ ಕತ್ತಿ ಕೊಡತಿಯೋ’ ಅಂತು.

ಹಜಾಮ ತನ್ನ ಕತ್ತಿ ಕೊಟ್ಟ. ಹೀಂಗ ಮುಂದ ಹೋಯ್ತು. ಅಲ್ಲಿ ಕುಂಬಾರ ಗಡಗಿ ಮಾಡಿ ಕೈಲೆ ಬಡದು ತೀಡಾಕ ಹತ್ತಿದ್ದ. ಅದನ ನೋಡಿ ‘ಕೈಲೆ ಯಾಕ ತೀಡತಿ ನನ್ನ ಕತ್ತಿ ತಗೋ’ ಅಂತು. ಪಾಪ ಕುಂಬಾರ ಕತ್ತಿ ತಗೊಂಡು ಬಡದು ತೀಡಾಕ ಹೋದ... ಪಟ್‌ನ ಕತ್ತಿ ಮುರದಹೋತು. ಮಂಗ ‘ನನ್ನ ಕತ್ತಿ ಕೊಡತಿಯೋ ಏನ್‌ ನಿನ್ನ ಗಡಿಗಿ ಕೊಡತಿಯೋ’ ಅಂತು. ಕುಂಬಾರ ಗಡಗಿ ಕೊಟ್ಟ.

ಗಡಗಿ ತಗೊಂಡು ಮುಂದ ಹೋಯ್ತು. ಅಲ್ಲಿ ಒಬ್ಬ ಮುದುಕ ತನ್ನಹೊಲದ ಸೌತೆ ಬಳ್ಳಿಗೆ ಬಗಸೀಲೆ ನೀರ ಹಾಕತಿದ್ದ. ‘ಯಜ್ಜ ಯಜ್ಜ, ಬಗಸೀಲೆ ಯಾಕ ನೀರ ಹಾಕತಿ ಈ ಗಡಗಿ ತಗೊಂಡು ಹಾಕು’ ಅಂತು. ಅಜ್ಜ ಗಡಗಿ ತಗೊಂಡು ಸೌತೆ ಬಳ್ಳಿಗೆ ನೀರ ಹಾಕಾಕ ಹತ್ತಿದ. ನಾಕ ಸಲ ಹಾಕೂದರಾಗ ಗಡಗಿ ಒಡದು ಹೋತು. ಮಂಗ ‘ನನ್ನ ಗಡಗಿ ಕೊಡತಿಯೋ ಏನ್‌ ನಿನ್ನ ಸೌತೆಕಾಯಿ ಕೊಡತಿಯೋ’ ಅಂತು. ಮುದುಕ ಸೌತೆಕಾಯಿ ಕೊಟ್ಟ. ಅಲ್ಲೆ ಮುಂದ ಹೋಗುದರಾಗ ದನ ಕಾಯೋ ಹುಡುಗರು ಸಿಂಬಳ, ಒಣಖಾರ ಹಚಗೊಂಡು ತಂಗಳ ರೊಟ್ಟಿ ತಿನ್ನಾಕ ಹತ್ತಿದ್ದರು. ‘ಒಣರೊಟ್ಟಿ ಯಾಕ ತಿಂತೀರಿ ಈ ಸೌತೆಕಾಯಿ ಕಡಕೊಂಡ ತಿನ್ನರಿ’ ಅಂತ ಮಂಗ ಸೌತೆಕಾಯಿ ಕೊಟ್ಟಿತು. ಹುಡುಗರು ರೊಟ್ಟಿಕೂಡ ಸೌತೆಕಾಯಿ ತಿಂದವು. ಎಲ್ಲ ಸೌತೆಕಾಯಿ ಆದವು . ಆಗ ಮಂಗ ‘ನನ್ನ ಸೌತೆಕಾಯಿ ಕೊಡತಿರೋ ಏನ್‌ ನಿಮ್ಮ ಎತ್ತ ಕೊಡತಿರೋ’ ಅಂತು. ಹುಡುಗರು ‘ಎಂಟ ಎತ್ತನ್ಯಾಗ ಒಂದು ಕುಂಟೆತ್ತ ಐತಿ ತಗೊ’ ಅಂತ ಕೊಟ್ಟರು.

ಕುಂಟೆತ್ತ ಮ್ಯಾಲ ಹತಗೊಂಡ ಮುಂದ ಹೊಂಟಿತ್ತು. ಅಲ್ಲಿ ಒಬ್ಬಾವ ಡೊಂಬರಾಟದಾವ ಅಚೀಕ ಇಚೀಕ ತನ್ನ ಗಂಟ ಹೊತಗೊಂಡ ಹೊಂಟಿದ್ದ. ಅವನ್ನ ನೋಡಿ ಮಂಗ ‘ಹೆಗಲ ಮ್ಯಾಲ ಯಾಕ ಹೂತಗೊಂಡ ಹೊಂಟಿ ನನ್ನ ಎತ್ತ ತಗೋ’ ಅಂತು. ಡೊಂಬರಾವ ಎತ್ತ ಮ್ಯಾಲ ಹತ್ತಿ ನಾಕ ಹೆಜಿ ್ಜ ಹೋಗಿದ್ದಿಲ್ಲ.. ಎತ್ತ ಬಿದ್ದ ಸತ್ತ ಹೋತು. ಆಗ ಮಂಗ ‘ನನ್ನ ಎತ್ತ ಕೊಡತಿಯೋ ಏನ್‌ ನಿನ್ನ ಡೋಲ ಕೊಡತಿಯೋ ’ಅಂತು. ಡೊಂಬರಾವ ಡೋಲ ಕೊಟ್ಟ.

ಡೋಲ ತಗೊಂಡ ಮಂಗ ಗಿಡದಾಗ ಹತ್ತಿ ಕುಂತು :

ಬಾಲ ಹೋಗಿ ಕತ್ತಿ ಬಂತು
ಡುಂ ಡುಮ..ಕ್ಕ

ಕತ್ತಿ ಹೋಗಿ ಗಡಗಿ ಬಂತು
ಡುಂ ಡುಮ..ಕ್ಕ

ಗಡಗಿ ಹೋಗಿ ಸೌತೆಕಾಯಿ ಬಂದ್ವು -
ಡುಂ ಡುಮ..ಕ್ಕ

ಸೌತೆಕಾಯಿ ಹೋಗಿ ಎತ್ತುಬಂತು
ಡುಂ ಡುಮ..ಕ್ಕ

ಎತ್ತು ಹೋಗಿ ಡೋಲ ಬಂತು
ಡುಂ ಡುಮ..ಕ್ಕ

ಅಂತ ಹಾಡಿ ನೀರಾಗ ಬಿದ್ದು ಸತ್ತು ಹೋತು.

***

ಬಾಲ್ಯದಲ್ಲಿ ನಾವೆಲ್ಲ ಕೇಳಿದ, ಕೇಳಿದ ಅನಂತರ ಮತ್ತೊಬ್ಬರಿಗೆ ಹೇಳದೆ ಇರಲಾರದ ಕತೆ ಇದು. ತುಂಟತನದ ಮಂಗ ಮಕ್ಕಳನ್ನು ಅಷ್ಟೇ ಅಲ್ಲ ದೊಡ್ಡವರನ್ನೂ ಆಯಸ್ಕಾಂತದಂತೆ ಸೆಳೆಯುವ ಶಕ್ತಿಯುಳ್ಳದ್ದು. ಒಂದು ಸಂಗತಿಯಿಂದ ಮತ್ತೊಂದು ಸಂಗತಿಗೆ ಮಿಂಚಿನ ಸಂಚಲನ ಮಾಡುವ ಈ ಕತೆಗೆ ವಿಶಿಷ್ಟ ಶಕ್ತಿ ಇದೆ. ಪ್ರತೀ ಹಂತದಲ್ಲೂ ಮಂಗ ಏನು ಮಾಡೀತು, ಎಂತಹ ಸಮಸ್ಯೆ ಒಡ್ಡೀತು, ಯಾವ ಪೇಚಿನಲ್ಲಿ ಸಿಗಿಸೀತು ಎಂದು ತುದಿಗಾಲಲ್ಲಿ ನಿಂತು ನಿರೀಕ್ಷಿಸುವಂತೆ ಪ್ರೇರೇಪಿಸುತ್ತದೆ. ಒಂದು ಕ್ಷಣ ಮೈಮರೆತರೂ ಕತೆಯ ಕೊಂಡಿ ಕಳಚಿಕೊಂಡೀತು ಎಂದು ಜಾಗರವಿರುವಂತೆ ಮಾಡುತ್ತದೆ. ನಮ್ಮನ್ನು ಕತೆಯಾಳಗಿನ ಒಂದು ಪಾತ್ರವಾಗುವಷ್ಟರ ಮಟ್ಟಿಗೆ ತನ್ಮಯಗೊಳಿಸುತ್ತದೆ.

ಈ ಕತೆಯಾಳಗಿನ ಎಲ್ಲ ಘಟಕಗಳಿಗೆ ಮತ್ತೆ ಬೇರೆ ಏನಾದರೂ ಅರ್ಥ ಇದೆಯೆ ? ಇದ್ದರೆ ಅದು ಎಂತಹದು ? ಈ ಪ್ರಶ್ನೆಗಳು ನನ್ನನ್ನು ಕಾಡಿವೆ. ಕುತೂಹಲಿಯನ್ನಾಗಿ ಮಾಡಿವೆ. ಬೇರೆ ಬೇರೆ ಜನಪದ ಕತೆಗಳಿಗೆ, ಶಿಶುಪ್ರಾಸಗಳಿಗೆ, ಆಟಗಳಿಗೆ ಇರುವ ಜನಪದರ ಅರ್ಥವಂತಿಕೆಯನ್ನು ಇಲ್ಲಿಯೂ ಅನ್ವಯ ಮಾಡಿ ನೋಡಿದಾಗ ಆಶ್ಚರ್ಯ ಕಾದಿತ್ತು !

ಹಾಗೆ ಆದ ಆಶ್ಚರ್ಯವನ್ನೇ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ .

ಮಂಗನ ಬಾಲ ತುಂಡಾಗುವುದು ಎಂದರೆ, ಡಾರ್ವಿನ್ನನ ವಿಕಾಸವಾದದಂತೆ- ಮಾನವ ಮಂಗನಿಂದಲೇ ರೂಪತಾಳಿದ. ಮಾನವನಾಗಿ ರೂಪ ತಾಳುವ ಮೊದಲ ಹಂತವೇ ಬಾಲವನ್ನು ಕಳೆದುಕೊಳ್ಳುವುದು. ತನ್ನೊಳಗಿನ ವಿಕಸಿತ ಅರಿವೆ (ಹಜಾಮ) ಸಂಸ್ಕಾರ ನೀಡಿ (ಕತ್ತಿಯಿಂದ, ಸೂಕ್ಷ್ಮವಾದ ಆಯುಧದಿಂದ) ಮಂಗನನ್ನು ಮಾನವನಾಗಲು ಪ್ರೇರಣೆ ನೀಡುತ್ತದೆ. ಪ್ರೇರೇಪಿತವಾದ ಮಂಗ ಒಂದು ಮನೋಸ್ಥಿತಿಯಲ್ಲಿ ಮಾನವನಾಗಲು ಒಪ್ಪಿದರೂ ಇನ್ನೊಂದು ಮನೋಸ್ಥಿತಿಯಲ್ಲಿ ಒಪ್ಪಲು ಸಿದ್ಧವಿರುವುದಿಲ್ಲ. ಆದ್ದರಿಂದಲೇ ಮಂಗತನವನ್ನು ಮುಂದುವರೆಸುತ್ತದೆ. ಮಂಗನ ಈ ವೈರುಧ್ಯ ಸ್ವಭಾವವನ್ನು ಅದ್ಭುತ ರೀತಿಯಲ್ಲಿ ನಿಭಾಯಿಸಿದ ಬಗೆ ಇಲ್ಲಿ ಧ್ವನಿಪೂರ್ಣವಾಗಿದೆ.

ಮುಂದುವರೆದ ಮಂಗ ಸೃಷ್ಟಿಕರ್ತನಾದ ಕುಂಬಾರನ ಹತ್ತಿರ ಹೋಗುತ್ತದೆ. ಅವನಿಂದ ಸಂಸ್ಕಾರಗೊಂಡ ಗಡಿಗೆಯನ್ನು ಪಡೆಯುತ್ತದೆ. ಬಾಲವನ್ನು ಕಳೆದುಕೊಂಡ ಮಂಗ ಪರಿಪೂರ್ಣ ಮಾನವ ಸ್ವರೂಪವನ್ನು ಪಡೆಯುವುದು ಕುಂಬಾರನಲ್ಲಿ. ಗಡಿಗೆಯನ್ನೇನೋ ಪಡೆಯಿತು. ಆದರೆ ಅದರ ಸದುಪಯೋಗ ಪಡೆಯಿತೇ ? ಇಲ್ಲ . ಮುದುಕ ಗಡಿಗೆಯನ್ನು ಬಳಸುವ ವಿಧಾನದಲ್ಲಿಯೇ ಅವನ ಮಿತಿಯನ್ನು ಸೂಚಿಸಲಾಗಿದೆ. ತನ್ನ ಸಂಸಾರದ ಸವಿ ಬಳ್ಳಿಗೆ( ಸೌತೆಯ ಬಳ್ಳಿಗೆ) ನೀರು ಹಾಕಲು ಮಾತ್ರಬಳಸುತ್ತಾನೆ. ಹಾಗೆ ಬಳಸುವಾಗಲೇ ಗಡಿಗೆ ಒಡೆದು ಹೋಗುತ್ತದೆ. ದೇಹಕ್ಕೆ ಸಾವಿದೆ ಎಂಬುದು ಗೊತ್ತಿದ್ದರೂ ಬರೀ ಸಂಸಾರದ ಚಿಂತೆಯಲ್ಲಿ ಮುಳುಗಿ ಹೋಗುತ್ತಾನೆ, ಈ ಮುದುಕ.

ಎಳೆಯ ಸೌತೆಯ ಕಾಯಿಗಳು ಸಂಸಾರ ಜೀವನದ ಪ್ರತಿಫಲವಾಗಿ ದೊರೆತಂತಹವು. ದೈವ ಸಾಕ್ಷಾತ್ಕಾರಕ್ಕಾಗಿ ಬಳಕೆಯಾಗಬೇಕಾದ ದೇಹ ಆ ಸಾಧನವಾಗಿ ಬಳಕೆಯಾಗುವುದಿಲ್ಲ . ಮುಂದಿನ ಹಂತದಲ್ಲಿಯೂ ಕುಂಟುವ ಎತ್ತಾಗುತ್ತದೆಯೇ ವಿನಹ ಪೂರ್ಣ ರೂಪದ ಸಾಧನವಾಗುವುದಿಲ್ಲ. ಸಂಸಾರಕ್ಕಾಗಿ ದುಡಿಯುವದರಲ್ಲಿಯೇ ದಣಿದುಹೋಗುತ್ತದೆ ಈ ಜೀವ.

ಕುಂಟುವ ಎತ್ತು ದೊಂಬರಾಟದವನಂತೆ ಎರಡೂ ಭಾರಗಳನ್ನು ಸಮತೂಕ ಮಾಡಿಕೊಳ್ಳಬೇಕಿತ್ತು. (ಡೊಂಬರಾಟದವನಂತೆ ಹೆಗಲಿಗೆ ಹಾಕಿದ ಬಿದಿರಿನ ಕೋಲಿಗೆ ಎರಡೂ ಕಡೆಗೆ ತನ್ನ ಆಟದ ವಸ್ತುಗಳನ್ನು ಸಮ ಭಾರ ಮಾಡಿಕೊಂಡು ಸಾಗುವುದನ್ನು ನೆನಪಿಸಿಕೊಳ್ಳಿ.) ಮಾಡಿಕೊಳ್ಳುವದಿಲ್ಲ. ಡೊಂಬರವನ ಈ ವರ್ತನೆ ಸಂಸಾರ ಮತ್ತು ಪಾರಮಾರ್ಥದ ದರ್ಶನ ನೀಡುವಂತಹದ್ದು.

ಮಂಗ ಡೊಂಬರವನ ಡೋಲನ್ನು ತೆಗೆದುಕೊಂಡರೂ ಹದಮಾಡಿ ಬಾರಿಸುವಲ್ಲಿ ವಿಫಲವಾಗುತ್ತದೆ. ಶಿವನಾಮ ನುಡಿಯುವ ಸಾಧನವಾಗಿಸುವಲ್ಲಿಯೂ ಸೋತು ಹೋಗುತ್ತದೆ. ಕೊನೆಗೆ ನೀರಿನಲ್ಲಿ ಬಿದ್ದು ಸಾಯುವುದರೊಂದಿಗೆ ಅನಂತ ಪಯಣದ ಒಂದು ಹಂತ ತಲುಪುತ್ತದೆ.

ಒಟ್ಟಾರೆಯಾಗಿ ಮನುಷ್ಯನ ವಿಕಾಸದ ಹಂತಗಳನ್ನು, ವೈರುಧ್ಯಗಳನ್ನು ಮಂಗ ಮತ್ತು ವಿವಿಧ ಸನ್ನಿವೇಶಗಳ ಮುಖಾಮುಖಿಯಲ್ಲಿ ಅನನ್ಯವಾಗಿ ಅಭಿವ್ಯಕ್ತ ಗೊಳಿಸಲಾಗಿದೆ. ಒಮ್ಮೆ ಘರ್ಷಣೆ ಇನ್ನೊಮ್ಮೆ ಹೊಂದಾಣಿಕೆಗಳ ಮೂಲಕ ದ್ವಂದ್ವವನ್ನು ಕುತೂಹಲಕಾರಿಯಾಗಿ ನಿರೂಪಿಸುತ್ತದೆ. ವಿಕಾಸವಾದದ ಹಂತಕ್ಕಿಂತಲೂ ಮುಂದೆಹೋಗಿ ಜೀವನದ ಸಾರ್ಥಕತೆಯ ಕಡೆಗೆ ಬೆರಳುಮಾಡುತ್ತದೆ.

ಈ ಕತೆಯ ಅರ್ಥಗ್ರಹಿಕೆಗೆ ಪೂರಕವಾದ ಸಂಕೇತಗಳು ಹೀಗಿವೆ :

***

ತುಂಟಮಂಗ = ಚಪಲತನದ ಮನುಷ್ಯ.
ಮಂಗನ ಬಾಲ ಮುರಿದುಹೋಗುವ ಕ್ರಿಯೆ = ಬಾಲ ಕಳೆದುಕೊಂಡು ಮಂಗ ಮನುಷ್ಯ ಆಗುವ ಪ್ರಕ್ರಿಯೆ. ವಿಕಾಸವಾದದ ವಿಷಯಕ್ಕೆ ಜನಪದದಲ್ಲಿರುವ ಅಪರೂಪದ ವಾಚಿಕ ಪರಂಪರೆಯ ಆಧಾರ.
ಹಜಾಮ = ಕಾಡುತನದ ಮನುಷ್ಯನನ್ನು ಸಂಸ್ಕರಿಸುವವ.
ಕತ್ತಿ = ಸಂಸ್ಕಾರ ನೀಡುವ ಸೂಕ್ಷ್ಮ ಸಾಧನ.
ಕುಂಬಾರ = ಗಡಿಗೆ ಮಾಡುವವ, ಸೃಷ್ಟಿಕರ್ತ.
ಗಡಿಗೆ = ಕಾಯ, ದೇಹ.
ಮುದುಕ = ಸಂಸಾರದ ಭಾರದಲ್ಲಿಯೇ ನಲುಗಿ ಹೋದವ, ವಂಶದ ಕುಡಿ ಸವಿಯಾದ ಬಳ್ಳಿಗೆ ನೀರು ಹಾಕುವವ.
ಸೌತೆಕಾಯಿ ಬಳ್ಳಿ = ವಂಶದ ಬಳ್ಳಿ, ಸಂಸಾರದ ಬಳ್ಳಿ.
ಸೌತೆಕಾಯಿ = ಮೊಮ್ಮಕ್ಕಳು, ಮರಿ ಮಕ್ಕಳು.
ಸಿಂಬಳ = ಸಂಸಾರದ ಜಂಜಾಟಕ್ಕೆ ಪ್ರತೀಕವಾದುದು.
ಕುಂಟ ಎತ್ತು = ದುಡಿದು ದುಡಿದು ದಣಿದು ಹೋದ ವ್ಯಕ್ತಿ.
ಡೊಂಬರಾಟದವ = ಸಂಸಾರ ಮತ್ತು ಪಾರಮಾರ್ಥವನ್ನು ಸಮನಾಗಿ ಸಾಗಿಸುವವ.
(ಬಿದಿರಿನ ಕೋಲಿಗೆ ಎರಡು ಕಡೆ ಸಮ ಭಾರ ಹಾಕಿ ಜವಾಬ್ದಾರಿ ಹೊತ್ತವ.)
ಡೋಲು= ತೊಗಲಿನ ದೇಹ ಸಂಸ್ಕಾರಗೊಂಡು ಶಿವನಾಮ ನುಡಿಯುವ ಸಾಧನವಾಗಬೇಕೆಂಬುದಕ್ಕೆ ಪ್ರತೀಕ.
ನೀರಲ್ಲಿ ಮುಳುಗುವುದು = ಅನಂತ ಪಯಣದಲ್ಲಿ ಸಾಗುತ್ತಲಿರುವಾಗ ಸಾವನ್ನು ಪಡೆಯುವುದು.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more