• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಪೂರ್ವ ಅಮೇರಿಕನ್ನಡಿಗ ಕೃಷ್ಣಶಾಸ್ತ್ರಿ ಅವರಿಗೆ ಆತ್ಮೀಯ ಅಭಿನಂದನೆ

By Staff
|
  • ವೈ.ಜಿ. ಗಿರಿಶಾಸ್ತ್ರಿ , ಬೆಂಗಳೂರು.

ಡಿಸೆಂಬರ್‌ 1ರ ಬುಧವಾರ ಸಂಜೆ ಹೊರಗೆ ಚುಮಚುಮ ಚಳಿ. ಬಸವನಗುಡಿಯ ದಿ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ನ ಸಭಾಂಗಣದಲ್ಲಿ ಮನಸ್ಸನ್ನು ಪ್ರಫುಲ್ಲಗೊಳಿಸುವ ಸುಂದರ ಕಾರ್ಯಕ್ರಮ. ಸಹೃದಯ ಮನಸ್ಸಿನವರು, ಕನ್ನಡ ಸಾಹಿತ್ಯ-ಸಂಸ್ಕೃತಿಗಳ ಬಗ್ಗೆ ಒಲವಿರಿಸಿಕೊಂಡವರು ಅಲ್ಲಿ ಸೇರಿದ್ದರು.

ಸಮಾಜದ ವಿವಿಧ ವಲಯಕ್ಕೆ ಸೇರಿದವರಾಗಿದ್ದರೂ, ಸಮಾನ ಮನಸ್ಕರ ಸ್ನೇಹ ಬಳಗ ಅಲ್ಲಿತ್ತು. ಸಾಗರದಾಚೆ ನೆಲೆಸಿದ ಕನ್ನಡಿಗರನ್ನು ಹೃದಯಪೂರ್ವಕವಾಗಿ ಅಭಿನಂದಿಸಲು ಸಿದ್ಧತೆಗಳು ನಡೆದಿದ್ದವು.

Krishnashastryಸಾಹಿತಿ, ಸಹೃದಯಿ, ಸಮರ್ಥ ಸಂಘಟಕ, ಅಮೇರಿಕದ ಆಯೋವಾ ರಾಜ್ಯದ ಅಕ್ಕರೆಯ ಕನ್ನಡಿಗ, ವಿಖ್ಯಾತ ಜಾನ್‌ಡೀರ್‌ ಟ್ರ್ಯಾಕ್ಟರ್‌ ಕಂಪನಿಯ ಹಿರಿಯ ಇಂಜಿನಿಯರ್‌, ಎಲ್ಲಕ್ಕಿಂತ ಮಿಗಿಲಾಗಿ ಕನ್ನಡದ ಪ್ರತಿಷ್ಠಿತ ಲೇಖಕರಾದ ಪ್ರೊ.ಕೆ.ಎಸ್‌. ನಿಸಾರ್‌ ಅಹಮದ್‌ ಅವರ 102 ದಿನಗಳ ಅಮೇರಿಕಾದ ಪ್ರವಾಸ ಕಾಲದಲ್ಲಿ ಕನ್ನಡ ಕಾರ್ಯಕ್ರಮಗಳನ್ನು ವಿವಿಧೆಡೆ ಸಂಯೋಜಿಸಿದ ಸಾಹಸಿ. ಕವಿ ನಿಸಾರರಿಗೆ ‘ನಿತ್ಯೋತ್ಸವ’ ಮಾಡಿಸಿದ ಕೃಷ್ಣಶಾಸ್ತ್ರಿ (ಓದಿ- ಕೆ.ಎಸ್‌.ನಿಸಾರ್‌ಅಹಮದ್‌ : ಗಾಂಧಿ ಬಜಾರಿನಿಂದ ಡೆಟ್ರಾಯಿಟ್‌ಗೆ..) ಅವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಬೆಂಗಳೂರಿನ ಸ್ನೇಹ ಬಳಗ ಮತ್ತು ದಿ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ ಜಂಟಿಯಾಗಿ ಆಯೋಜಿಸಿದ್ದವು.

ಸನ್ಮಾನದ ಜೊತೆಗೆ ಶಾಸ್ತ್ರಿಗಳ ಅನುಭವದ ಕಥನ, ಸಭಿಕರೊಡನೆ ಸಂವಾದವೂ ನಡೆಯಿತು. ಖ್ಯಾತ ವಿದ್ವಾಂಸರಾದ ಪ್ರೊ.ಜಿ. ವೆಂಕಟ ಸುಬ್ಬಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಹಿರಿಯ ಸಾಹಿತಿ ವ್ಯಾಸರಾಯ ಬಲ್ಲಾಳರು ಆಗಮಿಸಿದ್ದರು. ಪ್ರಸಿದ್ಧ ಕವಿ ಡಾ.ದೊಡ್ಡರಂಗೇಗೌಡರು ಪ್ರಶಸ್ತಿ ವಾಚಿಸಲು ಬಂದಿದ್ದರು.

ಆಚಾರ್ಯ ಬಿ.ಎಂ.ಶ್ರೀ ಅವರ ‘ಕರುಣಾಳು ಬಾ ಬೆಳಕೆ’ ಪ್ರಾರ್ಥನ ಗೀತೆಯನ್ನು ಗಾಯಕಿ ಅರ್ಚನಾ ಉಡುಪ ಸುಶ್ರಾವ್ಯವಾಗಿ ಹಾಡಿದರು. ಅನಂತರ ಸುಗಮ ಸಂಗೀತ ಗಾಯಕರಾದ ಶ್ರೀನಿವಾಸ ಉಡುಪ, ಅರ್ಚನಾ ಉಡುಪ, ಡಾ.ಶಮಿತಾ ಮಲ್ನಾಡ್‌ ಅವರು ಕ್ರಮವಾಗಿ ದ.ರಾ.ಬೇಂದ್ರೆಯವರ ‘ನಾಕುತಂತಿ’, ಕುವೆಂಪು ಅವರ ‘ಆನಂದಮಯ ಈ ಜಗಹೃದಯ’, ಕೆ.ಎಸ್‌.ನವರ ‘ದೀಪವೂ ನಿನ್ನದೇ ಗಾಳಿಯು ನಿನ್ನದೆ’ ಹಾಗೂ ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌ ಅವರ ‘ ಓ! ಆಸೀಮ ಶಕ್ತಿಯೇ’ ಭಾವಗೀತೆಗಳನ್ನು ಹಾಡಿ ರಂಜಿಸಿದರು.

IIWC and Sneha Balaga honor Krishnashastryಕಾರ್ಯಕ್ರಮಕ್ಕೆ ಯಶಸ್ಸನ್ನು ಕೋರಿ ಅಮೇರಿಕ-ಕನ್ನಡಿಗರು ಕಳುಹಿಸಿದ್ದ ಈ-ಮೇಲ್‌ ಸಂದೇಶಗಳನ್ನು ಸಮಾರಂಭದಲ್ಲಿ ಓದಲಾಯಿತು.

‘ಸ್ನೇಹ ಬಳಗ’ದ ಪ್ರೊ.ಎಚ್‌.ಪಿ.ರಾಜಶೇಖರ ಶೆಟ್ಟಿ ತಮ್ಮ ಸ್ವಾಗತ ಭಾಷಣದಲ್ಲಿ, ಕೃಷ್ಣ ಶಾಸ್ತ್ರಿಗಳು ಮೂರು ದಶಕಗಳಿಂದ ಅಮೇರಿಕದಲ್ಲಿದ್ದರೂ ಕನ್ನಡ ಸಂಸ್ಕೃತಿಯ ಬಗ್ಗೆ ಅಪಾರ ಅಕ್ಕರೆಯನ್ನು ಹೊಂದಿದ್ದಾರೆ. ಪ್ರಸಿದ್ಧ ಇಂಜಿನಿಯರ್‌ ಆಗಿರುವ ಅವರು ಅಮೇರಿಕೆಯಲ್ಲಿ ಕನ್ನಡ ಸಂಘಟನೆಯಲ್ಲಿ ತೊಡಗಿಕೊಂಡು, ಅಲ್ಲಿ ನೆಲೆಸಿರುವ ಕನ್ನಡಿಗರನ್ನು ಭಾವನಾತ್ಮಕವಾಗಿ ಒಗ್ಗೂಡಿಸಿದ್ದಾರೆ ಎಂದರು.

ಅತಿಥಿ ಸತ್ಕಾರದಲ್ಲಿ ಶಾಸ್ತ್ರಿಗಳದು ಬಹಳ ದೊಡ್ಡ ಹೆಸರು. ಅವರದು ಸರಳ ವ್ಯಕ್ತಿತ್ವ. ಭಾರತಕ್ಕೆ ಕೇವಲ ಎರಡು ವಾರಗಳ ಭೇಟಿಗಾಗಿ ಚೈನಾದ ರಾಜಧಾನಿ ಜೀಜಿಂಗ್‌ನಿಂದ ಬಂದ ಕೃಷ್ಣ ಶಾಸ್ತ್ರಿಗಳು ‘ಸ್ನೇಹ ಬಳಗ’ ದ ಆತಿಥ್ಯವನ್ನು ಸ್ವೀಕರಿಸಲು ಒಪ್ಪಿದ್ದು ನಮಗೆ ಸಂತೋಷವುಂಟುಮಾಡಿದೆ’ ಎಂದು ಆತ್ಮೀಯವಾಗಿ ಸ್ವಾಗತಿಸಿದರು.

ಪ್ರೊ.ಜಿ.ಅಶ್ವತ್ಥ ನಾರಾಯಣ ಮಾತನಾಡಿ, ಕೃಷ್ಣಶಾಸ್ತ್ರಿಗಳು ಬರೆದ ‘ನೆನಪಿನ ದೃಶ್ಯಗಳು’ ಪುಸ್ತಕ ಓದಿ ಪ್ರಭಾವಿತನಾದೆ. ಅವರ ಎಲೆಮರೆಯ ಸೇವೆ ನಿಜಕ್ಕೂ ಎಲ್ಲರಿಗೂ ಮಾದರಿ. ಅಮೇರಿಕ-ಕನ್ನಡಿಗರಿಗೆ ತಮ್ಮ ವಂಶಸ್ಥರ ಒಂಟಿಕೊಪ್ಪಲು ಪಂಚಾಂಗ ಸಿಗುವಂತೆ ಮಾಡಿದ್ದಾರೆ. ಕನ್ನಡ ಸಾಹಿತ್ಯವನ್ನು ಕಳಕಳಿಯಿಂದ ಅಭ್ಯಾಸ ಮಾಡಿರುವ ಶಾಸ್ತ್ರಿ ಅವರು ಸಾಹಿತ್ಯ ಪರಿಚಾರಿಕೆಯಲ್ಲಿ ವಿಶಿಷ್ಟ ವ್ಯಕ್ತಿ . ಟಿ.ಎಸ್‌.ವೆಂಕಣ್ಣಯ್ಯನವರ ಪರಂಪರೆಯನ್ನು ಅಮೇರಿಕದಲ್ಲಿ ಬೆಳೆಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

Krishnashastry speaking at the functionಸನ್ಮಾನ ಸ್ವೀಕರಿಸಿದ ಕೃಷ್ಣಶಾಸ್ತ್ರಿಗಳು ಮಾತನಾಡಿ, ನನಗೆ ಈ ಮಟ್ಟದಲ್ಲಿ ಗೌರವ ಸೂಚಿಸಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ನನ್ನನ್ನು ಪರಕೀಯನೆಂದು ಪರಿಗಣಿಸದೆ ನಾನು ಸಹ ನಿಮ್ಮವನೆಂದು ತಿಳಿದು ಆದರಿಸಿದ್ದು ಸಂತಸ ತಂದಿದೆ. ಈ ಸಮಾರಂಭದ ಬೆನ್ನೆಲುಬಾದ ನಿಸಾರ್‌ ಅಹಮದ್‌ ಅವರ ಅಕ್ಕರೆಯನ್ನು ಎಷ್ಟು ಕೊಂಡಾಡಿದರೂ ಸಾಲದು ಎಂದು ಶಾಸ್ತ್ರಿ ಹೇಳಿದರು.

ಪ್ರಸ್ತುತ ವೇಗವಾಗಿ ವೃದ್ಧಿಸುತ್ತಿರುವ ಅಂತರ್ಜಾಲದ ಉಪಯೋಗಗಳು ಹತ್ತಾರು. ಭಾರತದ ವಿದ್ಯಮಾನಗಳನ್ನು, ಕರ್ನಾಟಕದ ದೈನಂದಿನ ಆಗುಹೋಗುಗಳನ್ನು ಅಮೇರಿಕದಲ್ಲಿ ಮನೆಯಲ್ಲಿಯೇ ಕುಳಿತು ಅರಿಯಬಹುದಾಗಿದೆ ಎಂದರು.

ಅಮೇರಿಕದ ಕನ್ನಡಿಗರು ಪತ್ರಕರ್ತ ಎಸ್‌.ಕೆ. ಶಾಮಸುಂದರ್‌ ಸಂಪಾದಕತ್ವದ, ದಟ್ಸ್‌ ಕನ್ನಡ ಡಾಟ್‌ ಕಾಮ್‌ ಮೂಲಕ ಅಕ್ಷರ ಸಂಸ್ಕೃತಿಯನ್ನು ಉಳಿಸಿಕೊಳ್ಳುತ್ತಿದ್ದಾರೆ. ಬರೆಯುವ ಕೈಗಳಿಗೆ ದಟ್ಸ್‌ ಕನ್ನಡ ವೇದಿಕೆಯಾಗಿದೆ. 2002 ರಲ್ಲಿ ಪ್ರೊ.ನಿಸಾರ್‌ ಅಹಮದ್‌ ಅವರ 102 ದಿನಗಳ ಅಮೇರಿಕ ಪ್ರವಾಸ ಆಯೋಜಿಸಲಾಗಿತ್ತು. 28 ರಾಜ್ಯಗಳಲ್ಲಿನ 40 ಕ್ಕೂ ಅಧಿಕ ಪಟ್ಟಣಗಳಲ್ಲಿ ನಿಸಾರ್‌ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅವರ ಕಾರ್ಯಕ್ರಮದ ವಿವರಗಳನ್ನು ಅಂತರ್ಜಾಲದ ಮೂಲಕ ಪ್ರಚುರಪಡಿಸಲಾಯಿತು ಎಂದು ಶಾಸ್ತ್ರಿ ತಿಳಿಸಿದರು.

ನಿಸಾರ್‌ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡೆಟ್ರಾಯಿಟ್‌್‌ನ ಅಕ್ಕ ಬಳಗದ ವಿಶ್ವ ಕನ್ನಡ ಸಮ್ಮೇಳನದಲ್ಲಿ 4000 ಜನ ಭಾಗವಹಿಸಿದ್ದರು. ಅಲ್ಲಿ ನಿಸಾರ್‌ ಅವರ ಕಾರ್ಯಕ್ರಮಗಳಿಗೆ ಬಂದ ಬೇಡಿಕೆ ನಿಜಕ್ಕೂ ವಿಸ್ಮಯ ಮೂಡಿಸಿತು. ಅಮೇರಿಕದ ಬೇರೆ ಬೇರೆ ಊರುಗಳ ಸಂಘಟನೆಗಳು ನಿಸಾರರ ಕಾರ್ಯಕ್ರಮಕ್ಕೆ ಮನವಿ ಸಲ್ಲಿಸಿದವು. ಹೀಗೆ ಬೇಡಿಕೆ ಸಲ್ಲಿಸಿದರವರಲ್ಲಿ ಡಿ.ಟಿ. ಅವರೂ ಒಬ್ಬರು.

ಮೈಸೂರಿನಲ್ಲಿ ಆಟೋಡ್ರೆೃವರ್‌ ಆಗಿದ್ದ ಡಿ.ಟಿ ಅವರು, ರಾಯಭಾರಿಯಾಬ್ಬರ ಮಗಳನ್ನು ಮದುವೆಯಾಗಿ ಈಗ ಅಮೇರಿಕದಲ್ಲಿ ನೆಲೆಸಿದ್ದಾರೆ. ಅವರು ನಿಸಾರರ ನಿತ್ಯೋತ್ಸವ ಗೀತೆಗಳನ್ನು 25 ವರ್ಷಗಳ ಹಿಂದೆ ಊರೂರಿಗೂ ಹೋಗಿ ಹಾಡುತ್ತಿದ್ದರು. ಅಮೇರಿಕದಲ್ಲಿದ್ದಷ್ಟು ಕಾಲವೂ ನಿಸಾರ್‌ ಅಹಮದ್‌ ಅವರು ಸಮಾರಂಭಗಳಲ್ಲಿ ಭಾಗವಹಿಸಿ ಮಾಡಿದ ಭಾಷಣಗಳು ಮತ್ತು ವಾಚಿಸಿದ ಸ್ವಂತ ಕವಿತೆಗಳು ಅತ್ಯಂತ ಆಪ್ಯಾಯಮಾನದ ಅನುಭವ ನೀಡಿವೆ. ಅಲ್ಲದೇ ಮನನೀಯವಾಗಿವೆ ಎಂದು ಶಾಸ್ತ್ರಿ ಅಭಿಪ್ರಾಯಪಟ್ಟರು. (ಓದಿ- ನಾನು ನಿಸಾರರ ಜೊತೆ ಕೆಲದಿನ ಕಳೆದೆ).

ಅಮೇರಿಕದಲ್ಲಿರುವ ಕನ್ನಡಿಗರ ಮನೆಯಲ್ಲಿ ಕನ್ನಡದ ಕಲರವ ಇದೆ. ಮಕ್ಕಳು ನಿತ್ಯೋತ್ಸವ ಧ್ವನಿಸುರುಳಿಯಲ್ಲಿನ ಜೋಗದ ಸಿರಿ ಬೆಳಕಿನಲ್ಲಿ, ಬೆಣ್ಣೆ ಕದ್ದ ನಮ್ಮ ಕೃಷ್ಣ , ಕುರಿಗಳು ಸಾರ್‌ ಕುರಿಗಳು ಗೀತೆಗಳನ್ನು ಹಾಡುತ್ತಾರೆ. ಕೈಗಾರಿಕೆಗಳ ಬೆಳವಣಿಗೆಯು ತ್ವರಿತಗತಿಯಲ್ಲಾಗುತ್ತಿರುವ ಹಿನ್ನೆಲೆಯಲ್ಲಿ ಅಮೇರಿಕದಲ್ಲಿ ಕನ್ನಡದ ಬಗ್ಗೆ ಕಳಕಳಿ ಕಡಿಮೆಯಾಗುತ್ತಿದೆ. ಕನ್ನಡ ಉಳಿಸಿಕೊಳ್ಳಲು ಪ್ರಸ್ತುತ ಚಾಲನೆಯಲ್ಲಿರುವ ಕನ್ನಡ ಸಂಘಟನೆಗಳು ವಾರ್ಷಿಕ ಸಂಚಿಕೆಗಳನ್ನು ಪ್ರಕಟಿಸುತ್ತಿವೆ ಎಂದರು.

ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಬಿ.ಎಸ್‌.ಕೇಶವರಾವ್‌ ಹಾಗೂ ಪ್ರೊ.ಜಿ.ಅಶ್ವತ್ಥನಾರಾಯಣ ಭಾಗವಹಿಸಿದ್ದರು. ಮುಂದಿನ ಪೀಳಿಗೆಯಲ್ಲಿ ಅಮೇರಿಕದಲ್ಲಿ ಕನ್ನಡದ ಬೆಳವಣಿಗೆ ಕಷ್ಟವೆಂಬ ಅಭಿಪ್ರಾಯ ಸಂವಾದದಲ್ಲಿ ವ್ಯಕ್ತವಾಯಿತು.

ಪ್ರೊ.ದೊಡ್ಡರಂಗೇಗೌಡ ಅವರು ಪ್ರಶಸ್ತಿಯ ಔಚಿತ್ಯವನ್ನು ವಾಚಿಸಿದರು. ಪ್ರೊ.ಜಿ.ವಿ. ಅವರು ಕೃಷ್ಣಶಾಸ್ತ್ರಿಯವರಿಗೆ ಸಾಂಪ್ರದಾಯಿಕ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಹಾರಹಾಕಿ, ಸನ್ಮಾನ ಪತ್ರ ನೀಡಿ, ನೆನಪಿನ ಕಾಣಿಕೆ, ಹಾಗೂ ಫಲತಾಂಬೂಲ ಸಮರ್ಪಿಸಿ ಗೌರವಿಸಿದರು. ವಸಂತ ಪ್ರಕಾಶನದ ಬಿ.ಎಸ್‌.ಎಸ್‌.ಕೌಶಿಕ್‌ ಮತ್ತಿತರರು ಶಾಸ್ತ್ರಿಗಳಿಗೆ ಮಾಲಾರ್ಪಣೆ ಮಾಡಿ ಅಭಿನಂದಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಾಹಿತಿ ವ್ಯಾಸರಾಯ ಬಲ್ಲಾಳ ಮಾತನಾಡಿ, ಅಮೇರಿಕಾದಲ್ಲಿ ಕನ್ನಡದ ಕಾಳಜಿ ಕಡಿಮೆಯಾಗಿದೆ ನಿಜ. ಆದರೆ ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿಯೇ ಕನ್ನಡಕ್ಕೆ ಹೀನಾಯ ಸ್ಥಿತಿ ಬಂದಿದೆ. ಕನ್ನಡಿಗರಲ್ಲಿ ಕೀಳರಿಮೆ ಹೆಚ್ಚುತ್ತಿದೆ. ಕನ್ನಡವನ್ನು ಕನ್ನಡಿಗರೇ ತಿರಸ್ಕರಿಸುತ್ತಿದ್ದಾರೆ ಎಂದರು.

1984ರಲ್ಲಿ ಅಮೇರಿಕದಲ್ಲಿ ಒಂದು ಕಡೆ ಭಾಷಣ ಮಾಡಿದಾಗ, ಸಭಿಕರೊಬ್ಬರು ತಮ್ಮ ವಾತ್ಸಲ್ಯ ಪಥ ಕಾದಂಬರಿಯ ಒಂದು ಪಾತ್ರದ ಬಗ್ಗೆ ಪ್ರಶ್ನೆ ಕೇಳಿ ಅಚ್ಚರಿ ಮೂಡಿಸಿದ್ದರು ಎಂದು ಬಲ್ಲಾಳರು ನೆನಪುಗಳ ಸುರುಳಿ ಬಿಚ್ಚಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರೊ.ಜಿ.ವೆಂಕಟಸುಬ್ಬಯ್ಯ ಮಾತನಾಡಿ, ನಿಸಾರ್‌ ಅಹಮದ್‌ ಅವರು ಕಾವ್ಯ ಬರೆಯಲು ಎಷ್ಟು ಶಿಸ್ತಾಗಿ ವ್ಯವಸ್ಥೆ ಮಾಡಿಕೊಳ್ಳುವರೋ ಅಷ್ಟೇ ವ್ಯವಸ್ಥಿತವಾಗಿ ಈ ಕಾರ್ಯಕ್ರಮ ರೂಪಿಸಿದ್ದಾರೆ. ಕೃಷ್ಣಶಾಸ್ತ್ರಿಗಳು ರಾಜ್ಯ ಸರಕಾರಕ್ಕೆ, ಮಂತ್ರಿಗಳಿಗೆ ಅರಿವಾಗಬೇಕಾದ ಅನೇಕ ವಿಷಯಗಳನ್ನು ಬಿಂಬಿಸಿದ್ದಾರೆ. ಶಾಸ್ತ್ರಿಗಳ ಕನ್ನಡ ಹಾಗೂ ಕನ್ನಡಿಗರ ಬಗೆಗಿನ ಅಭಿಮಾನ ಕಾಳಜಿ ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿ.ಎಸ್‌. ಸತ್ಯಮೂರ್ತಿ ವಂದಿಸಿದರು. ಕವಯಿತ್ರಿ ಮತ್ತು ಕನ್ನಡದ ರೀಡರ್‌ ಎಂ.ಆರ್‌.ಕಮಲ ಕಾರ್ಯಕ್ರಮವನ್ನು ಸೊಗಸಾಗಿ ನಿರೂಪಿಸಿದರು. ನಂತರದ ವಿಶೇಷ ಭೋಜನ ವ್ಯವಸ್ಥೆಯಲ್ಲೂ ಅಚ್ಚುಕಟ್ಟು, ಕಲಾತ್ಮಕತೆ ಎದ್ದು ಕಾಣುತ್ತಿತ್ತು.

ಈ ಸುಂದರ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಹಿರಿಯ ಗಾಂಧಿವಾದಿ ಹಾಗೂ ವಿಚಾರಪರ ಚಿಂತಕರಾದ ಎಚ್‌.ಎಸ್‌.ದೊರೆಸ್ವಾಮಿ ಭಾಗವಹಿಸಿದ್ದು ಒಂದು ವಿಶೇಷ.

ಡಿ.1 ರ ಆ ದಿನ ವ್ಯಾಸರಾಯ ಬಲ್ಲಾಳರ ಹುಟ್ಟುಹಬ್ಬ. ಸಮಾರಂಭದಲ್ಲಿಯೇ ಅವರನ್ನು ಪ್ರೀತಿಯಿಂದ ಹಾರೈಸಿ, ಅಭಿಮಾನದಿಂದ ಗೌರವಿಸಲಾಯಿತು.

ಪೂರಕ ಓದಿಗೆ-

ಜೋಳದ ಸಿರಿಬೆಳಕಿನಲ್ಲಿ ಮಿಸ್ಸಿಸಿಪ್ಪಿಯ ಬಳುಕಿನಲ್ಲಿ ...

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more