• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಂಪಾ: ಉಭಯ ಕುಶಲೋಪರಿ ಸಾಂಪ್ರತ..

By Oneindia Staff Writer
|

ಪ್ರಿಯರೂ, ಹಿರಿಯರೂ, ಸನ್ಮಾನ್ಯರೂ ಆದ ಚಂದ್ರಶೇಖರ್‌ ಪಾಟೀಲರಿಗೆ -ಸಪ್ರೇಮ ವಂದನೆಗಳು.

ಸರ್‌, ಮೊನ್ನೆ ಮೊನ್ನೆಯವರೆಗೂ ಕವಿ, ವಿಮರ್ಶಕ, ನಾಟಕಕಾರ,'ಸಂಕ್ರಮಣ’ದ ಸಂಪಾದಕ ಎಂದೆಲ್ಲ ಕರೆಸಿಕೊಳ್ಳುತ್ತಿದ್ದ ನೀವು ಸಾಹಿತ್ಯ ಪರಿಷತ್‌ ಅಧ್ಯಕ್ಷರೂ ಆಗಿಬಿಟ್ಟಾಗ-ದೊಡ್ಡ ಖುಷಿಯಾಯಿತು. ಬರೀ ನೂರು ದಿನದಾಗ ಇಡೀ ವ್ಯವಸ್ಥೆಯನ್ನೇ ಛೇಂಜು ಮಾಡ್ತೀನಿ ಅಂತ ನೀವು ಗುಡುಗಿದಾಗ -ಆ ಖುಷಿ ಹೆಚ್ಚಾಯಿತು. ನಿನ್ನೆ ಮತ್ತೆ ನೀವೇ ದಿಢಿಲ್ಲನೆ ಎದ್ದು ನಿಂತು -'ರಾಜ್ಯದಲ್ಲಿ ಕನ್ನಡದ ಸರಕಾರವೇ ಇಲ್ಲ. ನಮ್ಮ ಸಚಿವರು, ಶಾಸಕರು, ಕನ್ನಡದ ಅಭಿವೃದ್ಧಿಗೆ ಮುಂದಾಗದೇ ಇದ್ರೆ ನಾನು ಸುಮ್ನೇ ಇರೋದಿಲ್ಲ’ ಅಂತ ಗುಟುರು ಹಾಕಿದಿರಲ್ಲ- ನಿಮ್ಮ ಜಗಳಗಂಟಿ ಮುಖ ಕಣ್ಮುಂದೆ ತೇಲಿ ಬಂತು. ಆನಂತರದಲ್ಲಿ ಅದೆಷ್ಟೇ ಪ್ರಯತ್ನಿಸಿದರೂ ಹಲವರೊಂದಿಗೆ 'ಶರಂಪರ’ ಜಗಳಾಡಿ ಗೆದ್ದ ನಿಮ್ಮ ಚಿತ್ರ ಮಸುಕಾಗಲೇ ಇಲ್ಲ. ಅಷ್ಟೇ ಅಲ್ಲ- ಪರಿಷತ್‌ನ ಅಂಗಳದಲ್ಲಿ ನಿಂತ ಮೊದಲ ದಿನವೇ 'ಕನ್ನಡ ಕನ್ನಡಾ, ಬರ್ರಿ ನಮ್ಮ ಸಂಗಡಾ’ ಎಂದು ಖುಷಿಯಿಂದ, ಅಭಿಮಾನದಿಂದ, ಹೆಮ್ಮೆಯಿಂದ, ಕೂಗಿದಿರಲ್ಲ- ಅಭಿನಂದಿಸದೇ ಇರಲಾಗಲಿಲ್ಲ. ಪತ್ರ ಬರೆದಿದೀನಿ. ಇಲ್ಲಿ ನಿಮ್ಮನ್ನು ಕೆಣಕುವ 'ಪುಟ್ಟ ’ ಪ್ರಯತ್ನವಿದೆ. ಕೆರಳಬೇಡಿ. ನಿಮ್ಮ ಕನ್ನಡಾಭಿಮಾನವನ್ನು ಕುತೂಹಲದಿಂದ ಕಂಡೇ ಪ್ರಶ್ನೆಗಳು ಎದ್ದು ನಿಂತಿವೆ. ಸರ್‌, ಉತ್ತರಿಸದೆ ಇರಬೇಡಿ....

'ಪ್ರೀತಿಯಿಲ್ಲದೆ ನಾನು ಏನನ್ನೂ ಮಾಡಲಾರೆ, ದ್ವೇಷವನ್ನೂ ಕೂಡ’ ಹಾಗಂತ ಬರೆದವರು ನೀವು. ಆ ಹೊತ್ತಿಗಾಗಲೇ ನೀವು ಬೇಂದ್ರೆ ಜತೆಗೆ ಒಮ್ಮೆ , ಗಿರಡ್ಡಿ ಜತೆ ಇನ್ನೊಮ್ಮೆ , ಪಟ್ಟಣಶೆಟ್ಟಿ ಜತೆ ಮತ್ತೊಮ್ಮೆ ಜಗಳಾಡಿ ಆಗಿತ್ತು. ಈ ಬೆಂಗ್ಳೂರಲಿದ್ದ 'ಲಂಕೇಶಪ್ಪ ’ನ ಜತೆ ತಿಂಗಳಿಗೊಮ್ಮೆ ಜಗಳ ನಡೀತಾನೇ ಇತ್ತು . ಲಂಕೇಶರನ್ನ ದ್ವೇಷಿಸುತ್ತಲೇ ಇವರನ್ನು ಮೀರಿ ಬರೆಯಲು 'ಟ್ರೆೃ’ ಮಾಡಿದವರು ನೀವು. ಲಂಕೇಶ್‌ ಅಧಿಕಾರಿಶಾಹಿಯನ್ನು ವಿರೋಧಿಸುತ್ತ ಬರೆದರು. ಆದರೆ ನೀವು? ರಾಜಕಾರಣಿಗಳಿಗೆ ಹತ್ತಿರಾಗುತ್ತಲೇ ಹೋದಿರಿ - ಪ್ರಾಧಿಕಾರದ ಅಧ್ಯಕ್ಷತೆಯಿಂದ ಹಿಡಿದು ಕ್ರಿಯಾ ಸಮಿತಿಯಲ್ಲೊಂದು ಸ್ಥಾನದ ತನಕ....

ಸರ್‌, ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ ದಿನ ನಿಮ್ಮ ಮೊಗದಲ್ಲಿ ಜಗತ್ತು ಗೆದ್ದವರ ಸಂಭ್ರಮವಿತ್ತು. ಅಭಿನಂದಿಸಲು ಬಂದವರಿಗೆಲ್ಲ- ' ನನಿಗ ಕ್ಯಾಬಿನೆಟ್‌ ದರ್ಜೆ ಸ್ಥಾನಮಾನ ಕೊಟ್ಟಾರ. ಕಾಂಟೆಸ್ಸಾ ಕಾರನ್ನೂ ನೀಡ್ತಾರ’ ಅಂದಿದ್ದಿರಿ. ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಇಂಗ್ಲಿಷ್‌ ಬೋರ್ಡುಗಳಿಗೆ ಪೇಂಟು ಹೊಡೆಯುತ್ತಲೇ ಕಾಲ ಕಳೆದಿರಿ. ಅದೇ ವೇಳೆ ನಿಮ್ಮ ಮನೆ ಮುಂದಿನ ನೇಮ್‌ಪ್ಲೇಟ್‌ ಇಂಗ್ಲಿಷಿನಲ್ಲಿತ್ತು. ನಿಮ್ಮ ವಿಸಿಟಿಂಗ್‌ ಕಾರ್ಡ್‌ ಹಿಂಬದಿಯಲ್ಲೂ ನಿಮ್ಮ ವಿಳಾಸ ಇಂಗ್ಲಿಷಿನಲ್ಲೇ ಇತ್ತು !

'ಬೆಂಗಳೂರು ಗುಲಾಬಿ ನಗರವಲ್ಲ, ಇದು ಲಾಬಿ ನಗರ ’ ಎಂದು ಪದ್ಯ ಬರೆದವರು ನೀವು. 'ಸುಖ ಸಂಸಾರದ 12 ಸೂತ್ರಗಳ ಪೈಕಿ ಮಂಗಳ ಸೂತ್ರವೂ ಒಂದು’ ಘೋಷಿಸಿದವರೂ ನೀವು. ಅಷ್ಟಕ್ಕೇ ಸುಮ್ಮನಾಗದೆ 'ಕನ್ನಡದ ಆದಿಕವಿ ಪಂಪ, ಕನ್ನಡದ ಅಂತ್ಯಕವಿ ಚಂಪಾ’ ಎಂದು ದಬದಭಾ ಎದೆತಟ್ಟುತ್ತಾ ಹೇಳಿಕೊಂಡವರೂ ನೀವು ! ಅಂತ್ಯಕವಿಯೇ ನಾನು ಎಂದು ಘೋಷಿಸಿದ ನೀವೇ -ಮುಂದೆ ಕನ್ನಡ ಲೇಖಕರ ವಿಳಾಸಗಳು’ ಎಂಬ ಪುಸ್ತಕ ತಂದಿರಿ. (ಅದೂ ಹೇಗೆ -ಒಂದೊಂದು ವಿಳಾಸ ಪ್ರಕಟಣೆಗೆ 50ರೂ. ಬಾಡಿಗೆ ಪಡೆದು!). 'ಚಂಪಾನೇ’ ಕನ್ನಡದ ಅಂತ್ಯಕವಿ ಅಂತ ನೀವೇ ಘೋಷಿಸಿದ ಮೇಲೆ ಹೊಸ ಲೇಖಕರ ವಿಳಾಸದ ಪುಸ್ತಕ ಪ್ರಕಟಿಸಿದ್ದು ವಿಪರ್ಯಾಸ ಅಲ್ವಾ ಸಾರ್‌?

ಸರ್‌, ಹಿಂದೆ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲೇ ಬೇಂದ್ರೆಯ ಬಗ್ಗೆ ಒಂದು, ಲಂಕೇಶರ ಬಗ್ಗೆ ಇನ್ನೊಂದು ಪುಸ್ತಕ ಬರೆದು ಬೀಗಿದವರು ನೀವು. ಜಗಳಾಡಲಿಕ್ಕೆ ನಿಮಗೆ ಈಗಲೂ ಹರೆಯದ ಹುಮ್ಮಸ್ಸಿದೆ. ಹಾಗಿರುವಾಗಲೇ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪೀಠ ನಿಮಗೆ ಒಲಿದು ಬಂದಿದೆ. ಈಗ ಎಲ್ಲ ಸಾಹಿತಿಗಳನ್ನೂ ಇನ್ನಷ್ಟು ಹತ್ತಿರದಿಂದ ನೋಡಬಹುದಲ್ಲ -ಅದೇ ನೆಪದಲ್ಲಿ 'ಕನ್ನಡ ಲೇಖಕರ ವಿಲಾಸ’ಗಳು ಎಂಬ ಪುಸ್ತಕವನ್ನೂ ನೀವು ಬರೀತೀರಿ ಅಂತ ಪರಿಷತ್ತಿನ ಅಂಗಳದಲ್ಲೇ ಗುಸುಗುಸು ಎದ್ದಿದೆ. 'ಅದೆಲ್ಲ ಸುಳ್ಳೂರೀ. ಈಗ ಪರಿಷತ್‌ನಲ್ಲಿ 'ಚಂಪಾ ಕಾಲ’ ಶುರುವಾಗಿದೆ. ಹಾಗಾಗಿ ಇನ್ಮುಂದೆ 'ಚಂಪಾ ಕಾಲಂ’ಗೆ ರಜಾ ರಜಾ ಎಂಬ ಇನ್ನೊಂದು ಸುದ್ದಿ ಅಲ್ಲಿಯೇ ಹುಟ್ಟಿ ಸುತ್ತುತ್ತಿದೆ ! ಸರ್‌, ಈ ಪೈಕಿ ಯಾವುದು ನಿಜ?ಯಾವುದು ಸುಳ್ಳು?

ನಾನಿರೋದು ಗೇಲಿ ಮಾಡಲಿಕ್ಕೇ ವಿನಃ ಮಾಡಿಸಿಕೊಳ್ಳುವುದಕ್ಕೆ ಅಲ್ಲ ಅಂತ ಗಾಢವಾಗಿ ನಂಬಿರೋರು ನೀವು. ನಿಮ್ಮನ್ನು ಯಾರೇ ಟೀಕಿಸಿದರೂ ಅವರನ್ನು ನಿಮ್ಮ ಅಂಕಣದಲ್ಲಿ ಹಿಗ್ಗಾಮುಗ್ಗಾ ತಡವಿಕೊಳ್ಳುವವರೂ ನೀವು.... ಹೀಗೆಲ್ಲ ದೂರುವ ಸಂದರ್ಭದಲ್ಲೇ ಬೆಂಗಳೂರಿನ ಸಾಹಿತಿಗಳೇ ಬೆರಗಿನಿಂದ ಹೇಳುತ್ತಾರೆ : 'ಚಂಪಾ ಜಗಳಗಂಟರು ಅನ್ನೋದು ಹಳೇ ಮಾತು. ಈಗಂತೂ ಅವರು ಬೆಂದಿದ್ದಾರೆ. ಅಗ್ನಿದಿವ್ಯ ಪ್ರವೇಶಿಸಿ ಅಪರಂಜಿಯಾಗಿದ್ದಾರೆ. ಎಲ್ಲ ಕಟಕಿಗಳನ್ನೂ ಮೀರುವ ಔನ್ನತ್ಯ ಸಂಪಾದಿಸಿದ್ದಾರೆ.....’. ಸರ್‌, ಈ ಮಾತುಗಳೆಲ್ಲ ನಿಜವೇ ಆಗಿದ್ದರೆ - ನಿಮ್ಮ ಬಾಯಿಗೆ ಸಿಹಿಬೀಳಲಿ!

***

ಸರ್‌, ಬಂಡಾಯ ಸಾಹಿತ್ಯ ಸಂಘಟನೆಯ ಸಂದರ್ಭದಲ್ಲಿ 'ಸಾಹಿತ್ಯ ಪರಿಷತ್‌’ನ ಅಸ್ತಿತ್ವವನ್ನೇ ಪ್ರಶ್ನಿಸಿದ್ದವರು ನೀವು. ಅಂಥ ನೀವು ಈಗ ಅದೇ ಪರಿಷತ್‌ನ ಚುಕ್ಕಾಣಿ ಹಿಡಿದ್ದಿದ್ದೀರಿ. 'ಕನ್ನಡ, ಕನ್ನಡಾ,ಬರ್ರಿ ನಮ್ಮ ಸಂಗಡ’ ಎಂದು ಕೂಗಲು ಸಿದ್ಧರಾಗಿದ್ದೀರಿ. ಆದ್ರೆ ಈಗ ಏನಾಗಿದೆ ಗೊತ್ತಲ್ಲ -ಕನ್ನಡಮ್ಮನ ರಥದ ಟೈರು ಪಂಕ್ಚರ್‌ ಆಗಿದೆ? ಕನ್ನಡದ ಅಸ್ತಿತ್ವದ ಧಕ್ಕೆ ಬಂದಿದೆ. ನಾಡಿನ ಏಕತೆಗೇ ಭಂಗ ಬಂದಿದೆ. ಇದನ್ನೆಲ್ಲ ಕಂಡಾಗ ನಿಮಗೆ ಬೇಸರ ಆಗಲ್ವ ? ಥತ್‌, ಈ ಜನ್ಮದಲ್ಲಿ ಕನ್ನಡದ ಏಳಿಗೆ ಸಾಧ್ಯವಿಲ್ಲ ಅನ್ನೋ ಭಾವ ಬಿಡದೆ ಕಾಡಲ್ವ?

ಹೌದು ಸಾರ್‌, ಪರಿಷತ್‌ನಲ್ಲಿ ನೀವಿದೀರಿ ಅನ್ನೋ ನೆಪದಲ್ಲಾದರೂ ಕನ್ನಡಕ್ಕೆ ಗೆಲುವಾಗಬೇಕು. ನಮಗೆಲ್ಲ ಕನ್ನಡವೇ ಉಸಿರಾಗಬೇಕು. ಕನ್ನಡದ ಕೆಲಸ ಅರ್ಥಪೂರ್ಣವಾಗಿ ನಡೀಬೇಕು. ಉತ್ತರ ಕರ್ನಾಟಕ ಸೀಮೇಲಿ ಎದ್ದಿದೆಯಲ್ಲ ಪ್ರತ್ಯೇಕ ರಾಜ್ಯದ ಕೂಗು- ಅದು ತಣ್ಣಗಾಗಬೇಕು. ನಾಡಿನ ಏಕತೆ ಕಾಪಾಡುವ ದೃಷ್ಟಿಯಿಂದ ಗೋಕಾಕ್‌ ಮಾದರಿಯ ಚಳವಳಿ ಇನ್ನೊಮ್ಮೆ ನಡೆಯಬೇಕು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂಬ ಮಾತು ನಾಡಿನುದ್ದಕ್ಕೂ ಕೇಳಿಬರಬೇಕು.....

ಇಂಥವೇ ಕೆಲಸಗಳು ನಿಮ್ಮ ಆಡಳಿತದ ಅವಧಿಯಲ್ಲಾಗಲಿ. ಕನ್ನಡದ ತೇರನ್ನು ಎಲ್ಲರೂ ಅಭಿಮಾನ ಪೂರ್ವಕವಾಗಿ ಎಳೆಯುತ್ತ 'ಚಂಪಾ : ಹೊಸಗನ್ನಡ ಪಂಪ ’ ಎಂದು ಹಾಡಿ ನಲಿಯುವ ದಿನ ಬೇಗ ಬರಲಿ. ಜಗಳಗಂಟಿತನ ನೆಗೆದು ಬೀಳಲಿ. ಕನ್ನಡಕ್ಕೆ ಒಳ್ಳೆಯ ಸ್ಥಾನಮಾನ ತಂದುಕೊಟ್ಟ ಕವಿ ಎಂಬ ಅಗ್ಗಳಿಕೆ ನಿಮ್ಮದಾಗಲಿ. ಆಗ ನಿಮ್ಮ ಕುರಿತು ಅಭಿಮಾನದಿಂದ ಬರೆವ ಖುಷಿ ನನ್ನದಾಗಲಿ.

ಅಲ್ಲಿಯವರೆಗೆ ನೆನಪು ಮತ್ತು ಕದನವಿರಾಮ.

ನಮಸ್ಕಾರ.

- ಎ.ಆರ್‌. ಮಣಿಕಾಂತ್‌

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An open letter to Chandrashekhar Patil (Champa), President, Kannada Sahithya Precident by A.R. Manikanth
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more