ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾತ್ಮ ಗಾಂಧಿ : ಯಾರವರು ?

By Staff
|
Google Oneindia Kannada News

ಪಕ್ಕದ ಮನೆಯ ಪೀ. ಯೂ. ಸಿ. ಓದುವ ‘ಪೀಯೂಷಿ’ ಒಬ್ಬಳನ್ನು (ಅಂದರೆ ಅಲ್‌ಟ್ರಾ ಫ್ಯಾಶನ್‌ ಮಾಡುವ ಕಾಲೇಜು ಕನ್ಯೆಯನ್ನು ) ಕೇಳಿದೆ. ‘ವಾವ್‌! ದಟ್‌ ಇಸ್‌ ಇಂದಿರಾ ಗಾಂಧಿ’ಸ್‌ ಫಾದರ್‌!’ ಎಂದು ತನ್ನ ಸ್ಕೂಟಿ ಹತ್ತಿದಳು.

ಒಬ್ಬ ್ಠಡಿಸ್ಕೂಲ್‌ ಹುಡುಗನನ್ನು ಕೇಳಿದರೆ - ‘ಇಂದು ಗಾಂಧಿ ತಾತನ ಹುಟ್ಟು ಹಬ್ಬವಂತೆ! ಆತ ಬಹಳ ಒಳ್ಳೆಯವರು, ಅಂಕಲ್‌! ಯಾಕೆಂದರೆ ಅವರು ಈ ದಿನ ಹುಟ್ಟಿ ಸ್ಕೂಲ್‌ಗೆ ರಜೆ ಕೊಡಿಸಿದಾರೆ! ಈ ದಿನ ನಮಗೆ ರಜೆಯ ಮಜಾ! ಮಧ್ಯಾಹ್ನದ ತನಕ ಕ್ರಿಕೆಟ್‌ ಆಡುತ್ತೇವೆ. ಆಮೇಲೆ ನಾವೆಲ್ಲಾ ಸಿನೆಮಾಕ್ಕೆ ಹೋಗುವ ಪ್ರೋಗ್ರಾಮ್‌ ಇದೆ, ಅಂಕಲ್‌!’ ಎಂದ.

ನರ್ಸರಿ ಕ್ಲಾಸಿಗೆ ಹೋಗುವ ಚಿಕ್ಕ ಹುಡುಗನೊಬ್ಬನಿಗೆ ಮಹಾತ್ಮಾ ಗಾಂಧಿಯವರ ಫೋಟೋ ತೋರಿಸುತ್ತಾ ‘ಇವರು ಯಾರು ಗೊತ್ತೇ?’ ಎಂದು ಕೇಳಿದೆ. ಆ ಮಗು ‘ಅಜ್ಜಾ ! ಅದು.... ಅದು... ಅಮ್ಮಾ ತಾಯೇ! ಎಂತ ಬೇಡುತ್ತಾನಲ್ಲಾ ...... ಅವನ ಫೋಟೋ!’ ಎಂದುಬಿಟ್ಟಿತು!

ಈ ಉತ್ತರಗಳನ್ನು ಕೇಳಿ ನನಗೆ ಭ್ರಮನಿರಸನವೇ ಆಯಿತು.

ಆದರೂ, ನನ್ನ ಛಲ ಬಿಡದೇ, ಎದುರು ಮನೆಯ ‘ಪೇಯಿಂಗ್‌ ಗೆಸ್ಟ್‌’ ಆಗಿರುವ ಕಂಪ್ಯೂಟರ್‌ ಆಪರೇಟರ್‌ ತರುಣನ ಬಳಿ ಸಾಗಿದೆ. ಆತ ‘ಟ್ರಿಮ್‌’ ಆಗಿ ಡ್ರೆಸ್‌ ಮಾಡಿಕೊಂಡು ಹೊರ ಹೊರಡುತ್ತಾ ಇದ್ದ. ನಾನೇ ಅವನಿಗೆ ಮಹಾತ್ಮರನ್ನು ನೆನಪಿಸುತ್ತಾ ‘ಏನಣ್ಣಾ ! ಚೆನ್ನಾಗಿದ್ದಿಯಾ? ಇಂದು ಗಾಂಧಿ ಜಯಂತಿ. ಇಂದು ಏನು ಪ್ರೋಗ್ರಾಮ್‌ ನಿನ್ನದು?’ ಎಂದು ಕೇಳಿದೆ.

‘ಬೆಳಗ್ಗೆ ಹನ್ನೆರಡರ ತನಕ ಕಾರ್ಡ್ಸ್‌, ಎಲ್ಲಾ ಸ್ನೇಹಿತರೂ ಒಟ್ಟಾದ ಮೇಲೆ ‘ಬೌಲಿಂಗ್‌ ಆ್ಯಲಿ’, ಆ ಮೇಲೆ ಕೆ. ಎಫ್‌. ಸಿ. ಯಲ್ಲಿ ಲಂಚ್‌, ಮಧ್ಯಾಹ್ನದ ನಂತರ ‘ಗೋ ಕಾರ್ಟಿಂಗ್‌!’. ಆ ಮೇಲೆ ಇದೆಯಲ್ಲಾ ಅಂಕಲ್‌! ಮನೆಯಲ್ಲೇ ಪಾರ್ಟಿ! ಇಂದು ನಮಗೆಲ್ಲ ರಜೆ ಆದರೂ ..... ನನ್ನ ದೋಸ್ತಿಗಳೊಂದಿಗೆ ‘ಪಬ್‌ ಹಾಪ್ಪಿಂಗ್‌’ ಮಾಡಲು ಇಂದು ಅವಕಾಶವೇ ಇಲ್ಲ ! ನನ್ನ ಬಿಡಾರಕ್ಕೇ ಎಲ್ಲರೂ ಜಮಾಯಿಸುತ್ತಾರೆ!’ ಎಂದ.

ನಾನು ನನ್ನ ಮಿತ್ರರೊಬ್ಬರನ್ನು ನೋಡಲು ಹೋದೆ. ಅವರು ‘ಜಸ್ಟ್‌ ರಿಟಾಯರ್ಡ್‌’ ಸರಕಾರೀ ಅಧಿಕಾರಿ. ಅವರ ಮನೆಯಲ್ಲಿ ಮಕ್ಕಳು, ಮೊಮ್ಮಕ್ಕಳು ಎಲ್ಲಾ ಜಮಾಯಿಸಿದ್ದರು.

ದಿನವಿಡೀ ನೋಡಲು, ಒಂದಷ್ಟು ಹಿಂದಿ ಮತ್ತು ಇಂಗ್ಲಿಷ್‌ ಸಿನೆಮಾಗಳ ಡಿ. ವಿ. ಡಿ. ರಾಶಿ ಹಾಕಿಕೊಂಡು ಕುಳಿತಿದ್ದರು. ಅವರ ಪತ್ನಿ ‘ಮಂಚೂರಿ’ ತಯಾರಿಸುತ್ತಾ ಇದ್ದರು.

‘ಬನ್ನಿ ಒಂದೆರಡು ಸಿನೆಮಾ ಜತೆಗೆ ಕುಳಿತು ನೋಡೋಣ!’ ಎಂದು ಅಕ್ಕರೆಯಿಂದ ಆಹ್ವಾನಿಸಿದರು.

‘ಇಲ್ಲಾ ! ನನಗೆ ಬೇರೇನೋ ಕೆಲಸ ಇದೆ!’ ಎಂದು ಅಲ್ಲಿಂದ ಹೊರಟೆ!

‘ಸ್ವಾತಂತ್ರ್ಯಯೋಧರ ಸ್ಮಾರಕ ಪಾರ್ಕ್‌’ ಎಂಬ ಹೊಸ ನಾಮಧೇಯ ಹೊತ್ತ ನಮ್ಮ ಏರಿಯಾದ ಹಳೆಯ ‘ಕೋಲ್ಸ್‌ ಪಾರ್ಕ್‌’ ಹತ್ತಿರ ನನ್ನ ಕಾರ್‌ ಪಾರ್ಕ್‌ ಮಾಡಿದೆ.

ಚಿಕ್ಕ ಪುಟ್ಟ ಮಕ್ಕಳು ಖುಶಿಯಾಗಿ ಆಟವಾಡುತ್ತಿದ್ದರು. ಅವರನ್ನು ನೋಡುತ್ತ ನಾನೂ ಮೈಮರೆತೆ!

ನೆನಪೊಂದು ನನ್ನೆದುರು ಸುಳಿಯಿತು.

‘ಗಾಂಧೀ ತಾತನಿಗೆ ಮಕ್ಕಳು ಅತ್ಯಂತ ಪ್ರಿಯರಂತೆ! ಒಮ್ಮೆ ನಂದಿಯ ಗಿರಿ ಧಾಮದಲ್ಲಿ ಗಾಂಧಿಯವರು ವಿಶ್ರಾಂತಿ ಪಡೆಯುತ್ತಿದ್ದಾಗ, ಒಂದು ಗುಂಪಾಗಿ ಅಲ್ಲಿಗೆ ಬಂದ ಚಿಕ್ಕ ಮಕ್ಕಳು, ಅಲ್ಲಿ ಗಲಾಟೆ ಮಾಡಲು ಶುರು ಮಾಡಿದರಂತೆ!

ಅಲ್ಲಿದ್ದವರಾರೋ- ‘ಗಾಂಧಿ ತಾತ ವಿಶ್ರಮಿಸುತ್ತಿದ್ದಾರೆ ಜಾಗ ಖಾಲಿ ಮಾಡಿರಿ!’ ಎಂದು ಆ ಮಕ್ಕಳನ್ನು ಗದರಿದರಂತೆ.

ಮಕ್ಕಳ ಆಟದ ಶಬ್ದಗಳು ‘ಹಠಾತ್‌ ನಿಂತು ಮೌನ ಆವರಿಸಿದೊಡನೆ’ ಗಾಬರಿಯಾದ ಗಾಂಧಿತಾತ ತಮ್ಮ ವಿಶ್ರಾಂತಿಯ ಕೋಣೆಯಿಂದ ಹೊರಬಂದು ‘ಮಕ್ಕಳು ಯಾಕೆ ಆಟ ನಿಲ್ಲಿಸಿದರು?’ ಎಂದು ವಿಚಾರಿಸಿದರಂತೆ.

ಆಗ ಅಲ್ಲಿದ್ದವಲ್ಲಿ ಒಬ್ಬರು ‘ಮಹಾತ್ಮಾ! ಮಕ್ಕಳು ಇಲ್ಲಿ ತುಂಬಾ ಕಿರಿಚಾಡುತ್ತಿದ್ದರು! ತಾವು ವಿಶ್ರಾಂತಿಯಲ್ಲಿದ್ದಿರಿ. ಅದಕ್ಕೇ, ಅವರನ್ನು ಗದರಿ ಆಚೆಗೆ ಕಳುಹಿಸುತ್ತಿದ್ದೇನೆ!’ ಅಂದರಂತೆ.

ಆಗ ಮಹಾತ್ಮಾ ಗಾಂಧಿ ಹೀಗೆಂದರಂತೆ ‘ದಯವಿಟ್ಟು ಮಕ್ಕಳನ್ನು ಗದರಿಸಬೇಡಿ! ಅವರನ್ನು ಸ್ವತಂತ್ರರಾಗಿ ಆಟ ಆಡಲು ಬಿಡಿ. ಅವರು ಆಡುತ್ತಾ, ಕೇಕೆ ಹಾಕಿ, ಕಿಲಕಿಲನೆ ನಗುವ ಶಬ್ದಗಳು, ನನಗೆ ಈ ಜಗತ್ತಿನಲ್ಲಿ ಅತ್ಯಂತ ಪ್ರಿಯವಾದ ಮತ್ತು ಇಂಪಾದ ಶಬ್ದಗಳು!’ ಎಂದರಂತೆ.

ಅಷ್ಟರಲ್ಲಿ ಪುನಃ ಮಕ್ಕಳು ಅಲ್ಲಿ ಆಟವಾಡಲು ಶುರುಮಾಡಿದರಂತೆ. ಆಗ ಗಾಂಧಿ ತಾತ ತೃಪ್ತಿಯಿಂದ ತಮ್ಮ ವಿರಾಮಕ್ಕೆ ಹಿಂದಿರುಗಿ ಹೋದರಂತೆ.

ಗಾಂಧಿಹುಟ್ಟುಹಬ್ಬದ ಅ.2 ಮತ್ತೆ ಬಂದು ಹೋಯಿತು. ಅವರನ್ನು ಸ್ಮರಿಸಿದವರು ಯಾರು? ಅವರ ಕಾಲದಲ್ಲಿ ಚಿಕ್ಕ ಮಕ್ಕಳಾಗಿದ್ದ ನಾವಾದರೂ ಅವರನ್ನು ಇಂದು ನೆನಪಿಸಬೇಕು. ಮೊಮ್ಮಕ್ಕಳಿಗೆ ಗಾಂಧಿಯ ಕುರಿತು ಹೇಳಬೇಕು.

ನಾವು, ನಮ್ಮ ಮಕ್ಕಳು ಮತ್ತು ನಮ್ಮ ಮೊಮಕ್ಕಳು ಈ ದಿನ ಬೇಕಾದಂತೆ ವಿಹರಿಸುತ್ತಾ ‘ನಕ್ಕು ನಲಿದರೆ’ ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಅವರ ಮಹಾನ್‌ ಆತ್ಮಕ್ಕೆ ತೃಪ್ತಿ ಶಾಂತಿ ಸಿಕ್ಕೀತು!

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X