ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಣೆಯಾಗುತ್ತಿರುವ ಸಂಸ್ಕೃತಿ -ಪರಿಸರ

By Staff
|
Google Oneindia Kannada News

ಸುಮಾರು ಐವತ್ತು ವರುಷಗಳ ಹಿಂದೆ ನಮ್ಮಲ್ಲಿ ಒಂದು ನಿಚ್ಚಳವಾದ ಸಂಸ್ಕೃತಿ ಇತ್ತು. ಅದಕ್ಕೆ ಪೂರಕವಾದ ಒಂದು ಪರಿಸರವೂ ಇತ್ತು.

ಅಂದಿನ ಸಂಸ್ಕೃತಿ :

ಜನಸಾಮಾನ್ಯರಲ್ಲಿ ವಿನಯದ ಮಾತಿತ್ತು. ಗುರು ಹಿರಿಯರೆಂಬ ಗೌರವವಿತ್ತು. ವಿದ್ಯಾವಂತರ ಮಾತಿಗೆ ಬೆಲೆ ಇತ್ತು. ಭಾರತದ ಸ್ವಾತಂತ್ರ ್ಯ ಹೋರಾಟದಲ್ಲಿ ಭಾಗವಹಿಸಿದ ಹಲವಾರು ಧುರೀಣರು ಸಕ್ರಿಯವಾಗಿದ್ದರು. ನಾವು ಕಷ್ಟಪಟ್ಟು ಸಂಪಾದಿಸಿದ ಸ್ವಾತಂತ್ರ್ಯವನ್ನು ಉಳಿಸಿಕೊಂಡು ನಮ್ಮ ದೇಶವನ್ನು ಮುನ್ನಡೆಸಬೇಕು ಎನ್ನುವ ಅಭಿಲಾಷೆ ಇತ್ತು. ಜನಪದ ಲಲಿತ ಕಲೆಗಳಲ್ಲಿ ಜನರಿಗೆ ಆಸಕ್ತಿ ಇತ್ತು. ವಿದ್ಯಾವಂತರು, ಅಧ್ಯಾಪಕರು, ವೈದ್ಯರು, ಸರಕಾರೀ ಅಧಿಕಾರಿಗಳು ಮೊದಲಾದವರಿಗೆ ಗೌರವ ಇತ್ತು.

ಜೀವನ ರೀತಿ ಕೂಡ ಸರಳವಾಗಿತ್ತು. ನೆರೆಕರೆಯಲ್ಲಿ ಬೆರೆತು ಬಾಳುವ ಭಾವವಿತ್ತು. ಜಾತಿಭೇದ, ಕೋಮು ಭೇದಭಾವಗಳು ಇದ್ದರೂ ಅವು ಸಾಮಾಜಿಕ ಒಗ್ಗಟ್ಟಿಗೆ ಭಂಗತರುತ್ತಿರಲಿಲ್ಲ.

ಇಂದಿನ ಸಂಸ್ಕೃತಿ :

ಸರ್ವತ್ರವಾಗಿ ನಾವಾರಿಗೂ ಕಡಿಮೆಯಿಲ್ಲ ಎನ್ನುವ ಭಾವನೆ ಸಮಾಜದ ಎಲ್ಲ ಸ್ಥರಗಳಲ್ಲೂ ಇದೆ. ಗುರು ಹಿರಿಯರಿಗೆ ಸಲ್ಲುತ್ತಿರುವ ಗೌರವ ಕಡಿಮೆಯಾಗುತ್ತಿದೆ. ಉಳಿದಿರುವ ಸ್ವಾತಂತ್ರ್ಯ ಹೋರಾಟಗಾರರು ಈಗ ಹಳೇ ಮಾಡೆಲ್‌ ಗಾಡಿಗಳಂತೆ ಪರಿಗಣಿಸಲ್ಪಡುತ್ತಾರೆ. ನಮ್ಮ ಸ್ವಾತಂತ್ರ್ಯವು ನಮಗೆ ಕಟ್ಟಿಟ್ಟ ಹಕ್ಕು ಎನ್ನುವ ಭಾವ ಈಗಿನ ಜನತೆಯಲ್ಲಿದೆ. ಸ್ವಾತಂತ್ರ್ಯಕ್ಕೋಸ್ಕರ ನಮ್ಮ ಹಿರಿಯರು ಮಾಡಿದ ತ್ಯಾಗ ನಮ್ಮ ಮನಪಟಲದಿಂದ ಮರೆಯಾಗಿದೆ.

ದೂರದರ್ಶನ ಮಾಧ್ಯಮಗಳ ಜನಪ್ರಿಯತೆಯ ಕಾರಣ ಪುಸ್ತಕ ಓದು ಕಡಿಮೆಯಾಗುತ್ತಿದೆ. ಅಂತರರಾಷ್ಟ್ರೀಯ ಮನೋಭಾವಗಳನ್ನು ಹೆಚ್ಚಿಸಿಕೊಂಡ ಜನತೆಗೆ ಜನಪದ ಸಂಸ್ಕೃತಿ ಮತ್ತು ಲಲಿತ ಕಲೆಗಳ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ನಾವೇನು ಕೆಲಸಮಾಡಿದರೂ ಅದು ನಮಗೆ ಹಣ ತರಬೇಕೆನ್ನುವ ಭಾವ ಇದಕ್ಕೆ ಕಾರಣ ವಾಗಿರಬಹುದು. ಗುರು ಹಿರಿಯರಿಗೆ, ವಿದ್ಯಾವಂತರಿಗೆ ಸಿಗುತ್ತಿದ್ದ ಮನ್ನಣೆ ಈಗ ಮೊದಲಿನಷ್ಟು ಇಲ್ಲ. ವೈದ್ಯರು ಮತ್ತು ಅಧ್ಯಾಪಕ ವರ್ಗದವರು ‘ಹಣಪಡೆದು ಸೌಲಭ್ಯ ನೀಡುವ ವ್ಯಕ್ತಿಗಳು’ ಅನ್ನಿಸಿಬಿಟ್ಟಿದ್ದಾರೆ. ವಿದ್ಯೆ ಹೇಳಿಸಿಕೊಳ್ಳುವುದು, ಕಾಯಿಲೆಗಳು ಬಂದಾಗ ಚಿಕಿತ್ಸೆ ಪಡೆಯುವುದು ‘ ಸಿಟಿ ಬಸ್ಸಿನಲ್ಲಿ ಹಣಕೊಟ್ಟು ಟಿಕೆಟ್‌ ಪಡೆದು ಪ್ರಯಾಣಿಸಿದಷ್ಟು ’ ‘ಯಾಂತ್ರಿಕ ಕ್ರಿಯೆ’ ಆಗಿಬಿಟ್ಟಿದೆ.

ಸಮಾಜದಲ್ಲಿ ‘ಕೈಮುಗಿದು ನಮಸ್ಕಾರ’ ಎನ್ನುವ ಪದ್ಧತಿ ಮಾಯವಾಗುತ್ತಿದೆ. ಹಲೋ ಎಂದೋ ತಲೆ ಆಡಿಸಿ ವಂದಿಸುವ ಸಂಪ್ರದಾಯ ಹೆಚ್ಚಾಗುತ್ತಿದೆ. ಇದು ಪರದೇಶದವರ ಅನುಕರಣೆಯೇ? ಗೊತ್ತಿಲ್ಲ. ಈಗಲೂ ಕೆಲವರು ಅಪರೂಪಕ್ಕೆ ಒಂದು ಕೈ ಎತ್ತಿ ನಮಸ್ಕಾರ ಎನ್ನುವ ಪದ್ಧತಿ ಇಟ್ಟುಕೊಂಡಿರುವುದು ಸಂತೋಷದ ಸಂಗತಿ.

ನಮಗೆ ಸ್ವಾತಂತ್ರ್ಯ ಬಂದನಂತರ ಇದುವರೆಗೆ ಆಡಳಿತ ನಡೆಸಿದ ಎಲ್ಲಾ ಸರಕಾರಗಳೂ‘ಜಾತೀಯತೆಯನ್ನು ತೊಡೆದು ಹಾಕುತ್ತೇವೆ’ ಎಂದು ಹೇಳುತ್ತಾ ಬಂದಿದ್ದರೂ, ಅವೇ ಸರಕಾರಗಳು ‘ಜಾತಿ / ಕೋಮು’ ಗಳನ್ನು ಗುರುತಿಸಿ ಸೌಲಭ್ಯ ಮತ್ತು ಅವಕಾಶಗಳನ್ನು ನೀಡುವ ಪದ್ಧತಿಗಳನ್ನು ಇಂದಿಗೂ ಮುಂದುವರಿಸುತ್ತಿವೆ. ನಮ್ಮ ಸಮಾಜದಲ್ಲಿ ಇಂದಿಗೂ ಜಾತ್ಯತೀತ ಮನೋಭಾವ ರೂಢಿಗೆ ಬಂದಿಲ್ಲ ಎನ್ನುವುದು ವಿಷಾದದ ಸಂಗತಿ.

ಇಂದಿನ ಜೀವನ ರೀತಿ ಎಂದರೆ ಸಮಯ ಮತ್ತು ಹಣದ ಹಿಂದೆ ನಾವು ಓಡುವ ಓಟ!

ನಮ್ಮ ವಿವಿಧ ಆಶೆ ಆಕಾಂಕ್ಷೆಗಳನ್ನು ಪೂರೈಸಲು, ಮತ್ತು ಅವನ್ನು ದೊರಕಿಸಿ ಕೊಡುವ ಪರಿಕರಗಳನ್ನು ಪಡೆದುಕೊಳ್ಳಲು ನಾವು ಹೆಣಗುತ್ತಿದ್ದೇವೆ. ಈಗ ನಾವು ಹೊಂದಿರುವ ಸಲಕರಣೆಗಳು ಸಾಲವು, ಇನ್ನೂ ಹೆಚ್ಚಿನವು ಬೇಕೆಂಬ ಆಶೆಯ ಮರೀಚಿಕೆಯ ಬೆನ್ನು ಹತ್ತಿ, ನಮ್ಮ ದಿನ ನಿತ್ಯದ ಜೀವನದಲ್ಲಿನ ಸುಖ ಸಂತೃಪ್ತಿಗಳಿಗೆ ನಾವೇ ಕಲ್ಲು ಹಾಕಿಕೊಳ್ಳುತ್ತಿದ್ದೇವೆ.

ನಮಗೆ ಈಗ ಸಹಬಾಳ್ವೆ ನಡೆಸಲು ನೆರೆಕರೆಯ ಹಂಗಿಲ್ಲ. ಆದ್ದರಿಂದ ನೆರೆಕರೆಯ ಪರಿಚಯ ಮಾಡಿಕೊಳ್ಳುವ ಅಭ್ಯಾಸ ಕಡಿಮೆಯಾಗುತ್ತಿದೆ. ‘ನಾನು ಮತ್ತು ನನ್ನ ಸಂಸಾರ’ ಎನ್ನುವ ಧೋರಣೆ ಬೇರೂರುತ್ತಿದೆ. ಕರ್ನಾಟಕದ ಹಳ್ಳಿಗಳಿಗೂ ಈ ಕಾಯಿಲೆ ಹಬ್ಬುತ್ತಿದೆ.

ಸಮನ್ವಯ :

ಕಾಲಬದಲಾದಂತೆ ಜನರ ಜೀವನ ರೀತಿಯಲ್ಲೂ ಬದಲಾವಣೆ ಆಗುತ್ತಿರುತ್ತದೆ. ‘ಹಳೆಯದೇ ಚೆನ್ನ ’ ಎನ್ನುತ್ತಾ ಕುಳಿತಿದ್ದರೆ, ನಾವು ಇನ್ನೂ ‘ಶಿಲಾಯುಗದಲ್ಲೇ’ ಇರುತ್ತಿದ್ದೆವು!

ಇಂದಿನ ದಿನಗಳಲ್ಲಿ ನಾವು ಸ್ವಲ್ಪ ಸಾಮಾಜಿಕ ಪ್ರೀತಿ. ವೈಚಾರಿಕತೆ, ಸ್ವದೇಶ ಸಂಸ್ಕೃತಿ. ಸ್ವದೇಶ ಪ್ರೇಮ, ಒಗ್ಗಟ್ಟು ಮತ್ತು ಪ್ರಾಮಾಣಿಕತೆ ಬೆಳೆಸಿಕೊಂಡರೆ ನಾವು ಈ ಜಗತ್ತಿನ ಯಾವ ಮುಂದುವರೆದ ದೇಶಕ್ಕೂ ಸರಿಸಮವಾಗಿ ನಿಲ್ಲಬಲ್ಲೆವು ಅನ್ನಿಸುತ್ತೆ.

ಪರಿಸರ :

ನಾನೊಬ್ಬ ಮಲೆನಾಡಿನ ವೃತ್ತಿಪರ ಕಾಫಿ ಬೆಳೆಗಾರ. ನಮ್ಮಲ್ಲಿ ಮೂರ್ನಾಲ್ಕು ದಶಕಗಳ ಹಿಂದೆ ಹಲವು ತರಹದ ಪ್ರಾಣಿಪಕ್ಷಿಗಳು ಕಾಣಸಿಗುತ್ತಿದ್ದುವು. ಈಗ ಈ ಜೀವಿಗಳೆಲ್ಲಾ ಮಲೆನಾಡಿನಲ್ಲೇ ಅಪರೂಪವಾಗುತ್ತಿವೆ. ಈ ದಿನಗಳಲ್ಲಿ ನಾವು ನಮ್ಮ ಮಕ್ಕಳಿಗೆ ಹುಲಿ, ಚಿರತೆ, ಜಿಂಕೆ, ಕಡವೆ, ಬರ್ಕ, ಮುಳ್ಳು ಹಂದಿ, ಕಾಡು ಪಾಪ, ಹಾರುಬೆಕ್ಕು, ಕೆಂಬಣ್ಣದ ಅಳಿಲು, ಆಮೆಗಳು, ವಿವಿಧ ರೀತಿಯ ಹಾವುಗಳು, ಮುಂಗುಸಿ, ಹಸಿರು ಪಾರಿವಾಳ, ಡೇಗೆ, ಗೂಬೆ, ರಣಹದ್ದು ಮೊದಲಾದ ಪ್ರಾಣಿ ಪಕ್ಷಿಗಳನ್ನು ಯಾವುದಾದರೂ ಉತ್ತಮ ಪ್ರಾಣಿ ಮತ್ತು ಪಕ್ಷಿ ಸಂಗ್ರಹಾಲಯಕ್ಕೆ ಹೋಗಿ ತೋರಿಸ ಬೇಕಾಗಿದೆ.

ಐವತ್ತು ವರುಷಗಳ ಹಿಂದೆ ಮಾನವ ಪರಿಸರಕ್ಕೆ ಹೊಂದಿಯೇ ಬದುಕುತ್ತಿದ್ದನು. ಎರಡು ಮಹಾಯುದ್ಧಗಳು ನಡೆದಿದ್ದರೂ, ನಮ್ಮ ಪರಿಸರಕ್ಕೆ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟಾಗಿರಲಿಲ್ಲ. ಗಾಳಿ, ನೀರು, ಮಣ್ಣು, ಪಶು, ಪಕ್ಷಿ, ಪ್ರಾಣಿ ಮತ್ತು ಪರಿಸರಗಳು ಒಂದಕ್ಕೊಂದು ಹೊಂದಿಕೊಂಡೇ ಇದ್ದುವು.ಇಂದಿನ ಮಾನವನ ಜೀವನ ರೀತಿ ಪರಿಸರಕ್ಕೆ ಹಾನಿಯಾಡ್ಡುತ್ತಿದೆ. ‘ಈ ಭೂಮಿಯು ಎಂದಿಗೂ ಬರಿದಾಗದ ಅಕ್ಷಯ ಪಾತ್ರೆ’ ಎನ್ನುವ ಭಾವನೆ ಈಗ ಕೊನೆಗೊಳ್ಳಬೇಕು. ಈ ಭುವಿಯಲ್ಲಿ ಪ್ರತಿಯಾಂದು ಪಶು, ಪಕ್ಷಿ, ಕ್ರಿಮಿ, ಕೀಟ, ಸ್ಥಾವರ ಮತ್ತು ಜಂಗಮ ವಸ್ತುಗಳು ಒಂದಕ್ಕೊಂದು ಹೊಂದಿಕೊಂಡು ಬಾಳಲು ಮುಂದಕ್ಕೆ ಕಷ್ಟವಾಗಬಹುದು. ಭುವಿಯಲ್ಲಿರುವ ಲೋಹ ಮತ್ತು ತೈಲ ನಿಕ್ಷೇಪಗಳು ಒಂದಲ್ಲ ಒಂದು ದಿನ ಖಾಲಿಯಾಗಿಯೇ ಬಿಡುತ್ತವೆ ಎಂಬ ಅರಿವು ನಮಗಿದ್ದಂತೆ ಕಾಣುತ್ತಿಲ್ಲ. ನಾವು ಈ ಭೂಮಿಯ ಎಲ್ಲ ಜೀವಿಗಳೊಂದಿಗೆ, ಸಸ್ಯಗಳೊಂದಿಗೆ ಮತ್ತು ಎಲ್ಲಾ ಸ್ಥಾವರ ವಸ್ತುಗಳೊಂದಿಗೆ ಇನ್ನಾದರೂ ಸಹಬಾಳ್ವೆ ನಡೆಸಬೇಕಾಗಿದೆ. ಈ ತನಕದ ವಿವೇಚನೆ ಇಲ್ಲದ ನಮ್ಮ ಜೀವನ ರೀತಿಯಿಂದ ನಮ್ಮ ವಾತಾವರಣ ಕಲುಷಿತಗೊಂಡಿದೆ. ಮನುಷ್ಯನೂ ಸೇರಿದಂತೆ ಎಲ್ಲಾ ಪ್ರಾಣಿ ಪಕ್ಷಿಗಳು, ಸಸ್ಯಗಳು ಮತ್ತು ಕ್ರಿಮಿ ಕೀಟಗಳ ಉಳಿಯುವಿಕೆಯೇ ಸ್ವಲ್ಪ ಸಮಯದ ನಂತರ ದುಸ್ತರವಾಗಬಹುದು.

ಐವತ್ತು ವರ್ಷಗಳ ಹಿಂದೆ ಪ್ರಕೃತಿಯಲ್ಲಿ ಕಾಣುತ್ತಿದ್ದ ‘ನಿಚ್ಚಳವಾದ ಸಮತೋಲನ’ ಇಂದು ಕಾಣುತ್ತಿಲ್ಲ.

ಅತಿಯಾದ ಕ್ರಿಮಿನಾಶಕ ಮತ್ತು ರಾಸಾಯನಿಕಗಳ ಬಳಕೆಯಿಂದ ಹಲವು ಪ್ರಾಣಿ, ಪಕ್ಷಿ ಮತ್ತು ಸಸ್ಯಗಳು ನಾಶದ ಅಂಚಿನಲ್ಲಿವೆ.

ಕಪ್ಪೆ, ಹಾವು ಹದ್ದು ನಮಗೇಕೆ ಬೇಕು? :

ಮಾನವನ ವಸತಿ ಇದ್ದ ತಾವುಗಳಲ್ಲಿ ಹಾಗೂ ಹೊಲಗದ್ದೆಗಳಲ್ಲಿ ಧಾರಾಳವಾಗಿ ಕಾಣಸಿಗುತ್ತಿದ್ದ ಗುಬ್ಬಿ ಹಕ್ಕಿಗಳ ಸಂತತಿ ಇಂದು ಮಾಯವಾಗುತ್ತಿದೆ. ಕಾಡು ಮೇಡುಗಳಲ್ಲಿ ಧಾರಾಳವಾಗಿ ಕಾಣಸಿಗುತ್ತಿದ್ದ ಹಸಿರು ಪಾರಿವಾಳ, ಡೇಗೆ ಹಕ್ಕಿ (ಫಾಲ್ಕನ್‌) ಇಂದು ಕಾಣುತ್ತಿಲ್ಲ. ಹೆಚ್ಚೇಕೆ, ಹಿಂದೆ ಪ್ರಾಣಿಗಳು ಸತ್ತು ಬಿದ್ದಲ್ಲಿ ಮುಗಿಬೀಳುತ್ತಿದ್ದ ರಣಹದ್ದುಗಳೂ ಇಂದು ಬಹಳ ಅಪರೂಪವಾಗಿವೆ. ಕೃಷಿಯಲ್ಲಿ ಬಳಸುವ ಕ್ರಿಮಿನಾಶಕಗಳ ಪರಿಣಾಮದಿಂದ ಹೊಲಗದ್ದೆಗಳ ಹತ್ತಿರ ಕಾಣಸಿಗುತ್ತಿದ್ದ ಹುಳು ಹುಪ್ಪಟೆ, ಜಲಚರಗಳು, ಹಾವು, ಆಮೆ ಮೊದಲಾದುವು ಮಾಯವಾಗುತ್ತಿವೆ. ಅಷ್ಟೇಕೆ, ಈ ವಿಷ ವಸ್ತುಗಳ ಸಿಂಪರಣೆಯ ಕಾರಣ ಸರ್ವ ವ್ಯಾಪಿಗಳಾಗಿದ್ದ ಜೇನುಹುಳಗಳೂ ಅಪರೂಪವಾಗುತ್ತಿವೆ. ಹಿಂದೆ ಹಳ್ಳಿಗಳಲ್ಲಿ ಹೆಮ್ಮರಗಳ ಮೇಲೆ, ಪಟ್ಟಣಗಳಲ್ಲಿನ ಬೃಹತ್‌ ಕಟ್ಟಡಗಳ ಮೇಲೆ ಹೆಜ್ಜೇನಿನ ದೊಡ್ಡ ದೊಡ್ಡ ತಟ್ಟಿಗಳು ಕಾಣಸಿಗುತ್ತಿದ್ದುವು, ‘ಈಗ ಅವೆಲ್ಲಾ ಎಲ್ಲಿ?’ ಎಂದು ಹುಡುಕಬೇಕಾಗಿದೆ,

ಕಾಡುಗಳೇ ನಾಶವಾಗಲು ಕಾಡಿನಲ್ಲಿದ್ದ ಹುಲಿ ಚಿರತೆಗಳು ನಾಡಿನ ಸಾಕುಪ್ರಾಣಿಗಳನ್ನು ಬೇಟೆಯಾಡತೊಡಗಿದುವು. ಈ ಹುಲಿ ಚಿರತೆಗಳು ಮಾನವನು ಪ್ರಯೋಗಿಸಿದ ‘ಎಂಡ್ರಿನ್‌’ ಎಂಬ ವಿಷದ ಪರಿಣಾಮ ನಿರ್ನಾಮವಾದುವು. ‘ ಎಂಡ್ರಿನ್‌’ ಎಂಬ ಕೀಟ ನಾಶಕವನ್ನು ಹುಲಿ ಚಿರತೆಗಳು ಹಿಡಿದು ತಿಂದು ಮಿಗಿಸಿದ ಸಾಕು ಪ್ರಾಣಿಗಳ ಹೆಣಗಳ ಮೇಲೆ ನಿಸ್ಸಹಾಯಕರಾದ ಗ್ರಾಮೀಣ ಜನರು ಸುರಿಯ ತೊಡಗಿದರು. ಈ ಭಯಾನಕ ವಿಷ ‘ಎಂಡ್ರಿನ್‌’ ಸುರಿದುದರ ಕಾರಣ, ಪುನಃ ಉಳಿದ ಮಾಂಸವನ್ನು ಭಕ್ಷಿಸಲು ಬಂದ ಹುಲಿ ಚಿರತೆಗಳು ವಿಷ ಪ್ರಾಶನವಾಗಿ ಸತ್ತವು. ಕ್ರಮೇಣ, ಅವುಗಳ ಸಂತತಿಯೇ ನಮ್ಮ ಹಳ್ಳಿಗಳ ಸುತ್ತಮುತ್ತ ನಾಶವಾಯಿತು.

ಕಾಡುಗಳೇ ನಿರ್ಮೂಲವಾಗತೊಡಗಿದಾಗ ಕಾಡು ಪ್ರಾಣಿಗಳಿಗೆ ಆಹಾರದ ಅಭಾವ ಉಂಟಾಗಿ ಅವು ಹೊಲಗದ್ದೆ ಮೇಯಲು ಬಂದು ರೈತರ ಬೇಟೆಗೆ ಬಲಿಯಾದುವು. ಇತ್ತೀಚೆಗೆ ಕಾಡಿನಲ್ಲಿ ‘ನೆಲೆ ಮತ್ತು ಆಹಾರ’ ಕಾಣದ ಆನೆಗಳು ನಾಡಿಗೆ ಬಂದು ರೈತರ ಬೆಳೆ ಮೇಯುವುದು ಸಾಮಾನ್ಯ ವಿಚಾರವಾಗಿದೆ.

ಒಳಚರಂಡಿ ನೀರು ಹಾಗೂ ರಾಸಾಯನಿಕಗಳಿಂದ ಮಲಿನಗೊಂಡ ನದಿಗಳಲ್ಲಿ ಮೀನುಗಳು ಮತ್ತು ಇತರೇ ಜಲಚರಗಳು ಜೀವಿಸಲಾರದೆ ಹೋದುವು. ಕಾಡುಗಳ ನಾಶದಿಂದ ಪ್ರಕೃತಿಯಲ್ಲಿ ಏರುಪೇರಾಗಿ ಮಲೆನಾಡಿನ ಊರುಗಳಲ್ಲಿ ಸರಿಯಾದ ಕಾಲದಲ್ಲಿ ಸುರಿಯುತ್ತಿದ್ದ ಮಳೆಗೆ ಅಭಾವ ಉಂಟಾಯಿತು. ಬೆಳೆಗಳಿಗೆ ನೀರಾವರಿಯ ನೀರು ಮತ್ತು ಕುಡಿಯುವ ನೀರಿನ ಅಭಾವ ಮಲೆನಾಡಿನ ಊರುಗಳಲ್ಲಿ ಇಂದು ತಲೆದೋರಿದೆ. ಈ ತೊಂದರೆಗಳಿಗೆ ಕೊನೆ ಎಲ್ಲಿ?

ಈ ಹಾನಿಗಳನ್ನು ತಡೆಯಲು ‘ಪರಿಸರ ರಕ್ಷಣೆ’ ಒಂದೇ ದಾರಿ.

ನಾವು ಇನ್ನು ಮುಂದಕ್ಕಾದರೂ ವ್ಯವಸ್ಥಿತವಾಗಿ ನೈಸರ್ಗಿಕ ರೀತಿಯ ಕಾಡು ಬೆಳೆಯಲು ಆಸ್ಪದ ಮಾಡಿಕೊಡೋಣ. ಇದಕ್ಕೆ ಶತಮಾನಗಳೇ ಬೇಕಾಗಬಹುದು. ಈ ಕೆಲಸಮಾಡದಿದ್ದರೆ ನಮಗೆ ಉಳಿವಿಲ್ಲ. ಮಾನವ ಜನಾಂಗ ಒಂದೇ ಭೂಮಿಯಲ್ಲಿ ಬದುಕಿ ಉಳಿಯಲಾರದು. ಭೂಮಿಯಲ್ಲಿ ಹುಟ್ಟಿದ ಪ್ರತಿಯಾಂದು ಸಸ್ಯ ಹಾಗೂ ಜೀವಿಗೆ ಈ ಭೂಮಿಯಲ್ಲಿ ಬದುಕಲು ಅಧಿಕಾರವಿದೆ. ಇದನ್ನು ನಾವು ತಿಳಿದುಕೊಳ್ಳಬೇಕು.

ಪರಿಸರ ರಕ್ಷಣೆಯ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಯುವಜನರಿಗೆ ಕಡ್ಡಾಯವಾಗಿ ತಿಳುವಳಿಕೆ ಕೊಡೋಣ.

ಪ್ರಕೃತಿಯಲ್ಲಿ ಮಾನವನೂ ಒಂದು ಅಂಗ. ಪ್ರಕೃತಿಯಿಲ್ಲದೆ ಅವನು ಉಳಿಯಲಾರ ಎಂಬ ಸತ್ಯವನ್ನು ಅರಿತು ಬಾಳೋಣ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X