ಕವಿ ಕಾವ್ಯ ಸಂಭ್ರಮ: ಅಡಿಗಡಿಗೆ ಅಡಿಗ !

  • ದಟ್ಸ್‌ಕನ್ನಡ ಡೆಸ್ಕ್‌
ಬುದ್ಧನ ಖಾಸಾ ಶಿಷ್ಯ ಯಾರೆಂಬಿರಿ, ನಾನೆ ನಾನು !
‘ಬುದ್ಧಂ ಶರಣಂ ಗಚ್ಛಾಮಿ, ಧರ್ಮಂ ಶರಣಂ ಗಚ್ಛಾಮಿ’
ಎಂದು ಒರಲಿ ನಡೆದರಲ್ಲ ಅವರ ಮುಂದಾಳೆ ನಾನು;
ಹುಟ್ಟಿಗಿಂತ ಮುನ್ನವೇ ರಾಜತ್ವವ ಬಿಟ್ಟವನು,
ಬೋಧಿವೃಕ್ಷದಡಿಯೆ ಒಮ್ಮೆ ಮೂಗು ಮುಚ್ಚಿ ನೆಟ್ಟವನು,
ನಾನೂ ಕೂಡ ಹೆಂಡತಿ ಮಕ್ಕಳನು ಬಿಟ್ಟುಕೊಟ್ಟವನು,
ಅವನ ಹಾಗೆ -
ಅವನೊ ಬುದ್ಧ ಸಿದ್ಧ ಜಗತ್ಪ್ರಸಿದ್ಧನಾಗಿ ಎದ್ದಿದ್ದ ;
ಅವನ ಮುಖದ ಕಾಂತಿಯೇನು, ಉಗುವ ಆ ಪ್ರಶಾಂತಿಯೇನು !
ಕೆಂಡದ ಬಳಿ ಇದ್ದು ಕೂಡ ಈ ಇದ್ದಲು ಇತ್ತು ಹಾಗೆ-
ಆಗ ಈಗಿನಂತೆಯೇ ಹೊತ್ತದೇ ಉರಿಯದೆ.

ಮೊಗೇರಿ ಗೋಪಾಲಕೃಷ್ಣ ಅಡಿಗರ ‘ನನ್ನ ಅವತಾರ’ ಕವಿತೆಯ ಸಾಲುಗಳಿವು. ಚರಿತ್ರೆಯನ್ನು ಪರಂಪರೆಯನ್ನು ಕವಿಯಾಬ್ಬ ಮುಖಾಮುಖಿಗೊಳ್ಳುವ ಪರಿಗೆ ಅತ್ಯುತ್ತಮ ಉದಾಹರಣೆ ‘ನನ್ನ ಅವತಾರ’ ಕವಿತೆ. ಅಡಿಗರ ಕಾವ್ಯವೇ ಹಾಗೆ; ಕತ್ತಿಯ ಮೇಲೆ ಸಾಮು ಮಾಡಿದಂತ ಸಾಲುಗಳು. ಹರಿತ ವ್ಯಂಗ್ಯ. ವೈರುಧ್ಯಗಳಿಗೆ ಮುಖಾಮುಖಿಯಾಗುತ್ತ , ವೈರುಧ್ಯಗಳೊಳಗಿನಿಂದಲೇ ವರ್ತಮಾನದ ಗೊಂದಲಗಳಿಗೆ ಉತ್ತರವನ್ನು ಹುಡುಕುವ ಪ್ರಯತ್ನ. ಈ ಕಾವ್ಯಸಿದ್ಧಿಯ ಕಾರಣದಿಂದಲೇ ಅಡಿಗರನ್ನು ಲಂಕೇಶರು ‘ಒಂದು ಜನಾಂಗದ ಕಣ್ಣು ತೆರೆಸಿದ ಕವಿ’ ಎಂದದ್ದು . ಆ ಮಾತನ್ನು ಕಾವ್ಯಪ್ರಿಯರೂ ಒಪ್ಪಿಕೊಂಡದ್ದು .

ಅಡಿಗರ ನಂತರದಿಂದ ಇಂದಿನವರೆಗಿನ ಕನ್ನಡ ಕಾವ್ಯ ನೋಡಿ : ಕಾವ್ಯ ನಿಂತ ನೀರಾಗಿದೆ ಎನ್ನುತ್ತಾರೆ ವಿಮರ್ಶಕರು. ಹೊಸತೇನೂ ಕಾಣುತ್ತಿಲ್ಲ ಎನ್ನುತ್ತಾ ಪುಸ್ತಕ ಮಗುಚಿ ಟೀವಿಯಲ್ಲಿ ಕಣ್ಣು ಕೀಲಿಸಿದ್ದಾರೆ ಓದುಗರು. ಕಾವ್ಯ ಕಿಚ್ಚೆಬ್ಬಿಸುತ್ತಿಲ್ಲ ಎಂದು ಮಕ್ಕಳು ಮರಿಗಳ ಜೊತೆ ನೆಮ್ಮದಿಯಿಂದಿದ್ದಾರೆ ಹೋರಾಟಗಾರರು. ಕಾವ್ಯ ಅಡಿಗರ ಕಾಲಕ್ಕೇ ಆಗಿಹೋಯಿತು ಸ್ವಾಮಿ; ಉಳಿದಿರುವುದು ಕಾವ್ಯದ ಪಳೆಯುಳಿಕೆಗಳು; ಆಗಾಗ ಕೆಲವು ಮಿಂಚು ಕಾಣಬಹುದಾದರೂ ಅವೆಲ್ಲ ಅಡಿಗರ ಹಾದಿಯಲ್ಲಿ ಮುಂದುವರಿದ ಪಯಣ ಅಷ್ಟೇ ಎನ್ನುವ ಅಭಿಪ್ರಾಯವೂ ಉಂಟು.

ಅಭಿಪ್ರಾಯಗಳೇನೇ ಇರಲಿ; ಅಡಿಗರ ಶಿಷ್ಯರ ಮಾತುಗಳೇನೇ ಇರಲಿ; ಕನ್ನಡ ಕಾವ್ಯ ಹೊಸ ಸಂಕ್ರಮಣಕ್ಕೆ ಹಾತೊರೆಯುತ್ತಿರುವುದಂತೂ ನಿಜ. ಪ್ರಸ್ತುತದ ನಿರ್ವಾತ ಶಾಶ್ವತವೇನೂ ಅಲ್ಲ . ಬರಗಾಲ, ಆನಂತರದ ಸುಗ್ಗಿ ಸಂಭ್ರಮ ಕನ್ನಡದಂಥ ಜೀವಂತಭಾಷೆಗೆ ಹೊಸತೇನೂ ಅಲ್ಲ . ಒಬ್ಬ ಶಕ್ತಕವಿಯ ನಂತರ ಆತನ ಪ್ರಭಾವದಿಂದ ಪಾರಾಗಿ ಹೊಸ ಮೈಲುಗಲ್ಲುಗಳನ್ನು ನೆಡಲು ಒಂದಷ್ಟು ಕಾಲ ಬೇಕು; ಆ ಕಾಲಕ್ಕಾಗಿ ನಾವು ಕಾಯಬೇಕು!

ಅಡಿಗರ ಕಾವ್ಯದ ಬಗೆಗೆ ಎರಡು ಮಾತು ಇರಬಹುದಾದರೂ, ಅವರೊಬ್ಬ ಮಾರ್ಗದರ್ಶಕ ಕವಿ, ಶಕ್ತ ಕವಿ ಎನ್ನುವ ಬಗ್ಗೆ ಅಪಸ್ವರಗಳಿಲ್ಲ , ಇರಬಾರದು. ಅಂದಹಾಗೆ, ಅಡಿಗರ ಕವಿತೆಯ ಅಗ್ಗಳಿಕೆಗಳೇನು ? ಕವಿತೆಯ ಲಯ ಮರೆಯುತ್ತಿರುವ ಹೊತ್ತಿನಲ್ಲಿ ಇಂಥ ಪ್ರಶ್ನೆಗಳು ಮಹತ್ವವಾದವು. ಆ ಕಾರಣದಿಂದಲೇ ಕವಿತೆಯನ್ನು ನೆನೆಯುವ, ಅಡಿಗರಂಥ ಕವಿಗಳನ್ನು ನೆನೆಯುವ ಕಾರ್ಯಕ್ರಮಗಳು ಹೆಚ್ಚಬೇಕು. ಇಂಥದೊಂದು ಕಾರ್ಯಕ್ರಮ ಅ.1 ಹಾಗೂ 2ರಂದು ಬೆಂಗಳೂರಿನಲ್ಲಿ ನಡೆಯುತ್ತಿದೆ.

ಗೋಪಾಲಕೃಷ್ಣ ಅಡಿಗ ಟ್ರಸ್ಟ್‌, ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಸುರಾನಾ ಮಹಾ ವಿದ್ಯಾಲಯ ‘ಗೋಪಾಲಕೃಷ್ಣ ಅಡಿಗ-ಸಂಸ್ಕೃತಿ ಅನುಸಂಧಾನ ’ ಎನ್ನುವ ಕಾರ್ಯಕ್ರಮವನ್ನು ಅ.1 ಹಾಗೂ 2ರಂದು ಏರ್ಪಡಿಸಿವೆ. ಸುರಾನಾ ಕಾಲೇಜಿನಲ್ಲಿ ನಡೆಯುವ ಎರಡು ದಿನಗಳ ಈ ಕಾರ್ಯಕ್ರಮದಲ್ಲಿ - ಕನ್ನಡ ಸಾಹಿತ್ಯಕ್ಕೆ ಅಡಿಗರು ನೀಡಿದ ಕೊಡುಗೆಯ ಕುರಿತು ಮಾತುಕತೆ ನಡೆಯಲಿದೆ. ಅಡಿಗರ ಕವಿತೆಯ ಕುರಿತು ಅನೇಕ ಚಿಂತಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ. ಇದು ಅಡಿಗ ಹಬ್ಬ ! ಎರಡು ದಿನಗಳ ಕಾಲ ಅಡಿಗಡಿಗೆ ಅಡಿಗ !

ಅ.1ರಂದು ಆರಂಭಿಕ ಗೋಷ್ಠಿ ಪ್ರೊ.ಕಿ.ರಂ. ನಾಗರಾಜ ಅಧ್ಯಕ್ಷತೆಯಲ್ಲಿ ನಡೆಯುವುದು. ನವೋದಯ-ನವ್ಯ ಕಾವ್ಯದ ಸಖ್ಯ ಸಂಬಂಧಗಳ ಸ್ವರೂಪದ ಬಗ್ಗೆ ಡಾ.ಶಿವರಾಮ್‌ ಪಡಿಕಲ್ಲ ಮಾತಾಡುವರು. ಡಾ.ರಾಜೇಂದ್ರ ಚೆನ್ನಿ ಅಡಿಗರ ಸಂಸ್ಕೃತಿ ವಿಮರ್ಶೆ ಕುರಿತು ಅಭಿಪ್ರಾಯ ಮಂಡಿಸುವರು.

ಇನ್ನಿತರ ಗೋಷ್ಠಿಗಳೂ ಕುತೂಹಲಕರವಾಗಿವೆ. ಕೆಲವು ಉದಾಹರಣೆ ನೋಡಿ : ಅಡಿಗರ ಕವನ- ಒಂದು ಪಾಠ ಕುರಿತು ಡಾ.ಯು.ಆರ್‌.ಅನಂತಮೂರ್ತಿ, ಪಶ್ಚಿಮದ ನವ್ಯ ಪರಿಕಲ್ಪನೆ ಮತ್ತು ಅಡಿಗರ ನವ್ಯತೆ ಕುರಿತು ಪ್ರೊ.ರಾಘವೇಂದ್ರ ಪಾಟೀಲ, ಸಾಕ್ಷಿ ಸಂಪಾದಕರಾಗಿ ಅಡಿಗ ಕುರಿತು ಜಯಂತ ಕಾಯ್ಕಿಣಿ ಮಾತನಾಡುವರು.

ಗೋಪಾಲಕೃಷ್ಣ ಅಡಿಗ-ಸಂಸ್ಕೃತಿ ಅನುಸಂಧಾನ ಗೋಷ್ಠಿಯನ್ನು ಪ್ರಸಿದ್ಧ ಮರಾಠಿ ಸಾಹಿತಿ ವಿಶ್ವಾಸ್‌ ಪಾಟೀಲ್‌ ಉದ್ಘಾಟಿಸುವರು. ಅನಂತಮೂರ್ತಿ ಆಶಯ ಭಾಷಣ ಮಾಡುವರು. ಕನ್ನಡ ವಿವಿ ಕುಲಪತಿ ಡಾ.ಬಿ.ಎ.ವಿವೇಕ ರೈ ಹಾಗೂ ಕಸಾಪ ಅಧ್ಯಕ್ಷ ಹರಿಕೃಷ್ಣ ಪುನರೂರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು,

ಸಮಾರೋಪ ಭಾಷಣ ಹಿರಿಯ ವಿಮರ್ಶಕ ಪ್ರೊ.ಜಿ.ಎಚ್‌.ನಾಯಕ ಅವರದು. ಸಮಾರೋಪದ ಅಧ್ಯಕ್ಷತೆಯನ್ನು ಹಿರಿಯ ಕವಿ ಡಾ.ಬಿ.ಸಿ.ರಾಮಚಂದ್ರ ಶರ್ಮ ವಹಿಸುವರು.

ಅಡಿಗರ ಎದುರುಗೊಳ್ಳಲು ಅಡಿಗ ಟ್ರಸ್ಟ್‌ನ ಜಯರಾಮ ಅಡಿಗ ಸಹೃದಯರಿಗೆಲ್ಲ ಸ್ವಾಗತ ಕೋರಿದ್ದಾರೆ.


ಪೂರಕ ಓದು-
ಅಡಿಗರ ಸಂಕ್ರಾಂತಿ ಸೂರ್ಯ
ನನ್ನ ಅವತಾರ -ಎಂ.ಗೋಪಾಲಕೃಷ್ಣ ಅಡಿಗ
ಗೋಪಾಲಕೃಷ್ಣ ಅಡಿಗರ ‘‘ನನ್ನ ಅವತಾರ’’ ಕವನದ ಒಂದು ಅಧ್ಯಯನ


ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+