ಟೂ ಬಿಟ್ಟವರು ಒಂದಾದರು !
- ದಟ್ಸ್‌ಕನ್ನಡ ಬ್ಯೂರೊ
ಅವರಿಬ್ಬರೂ ಮತ್ತೆ ಒಂದಾಗಿದ್ದಾರೆ.
‘ಆತನೊಬ್ಬ ಮಹಾನ್ ಕಲಾವಿದ. ಅಂಥ ಕಲಾವಿದ ಮತ್ತೆ ಹುಟ್ಟುವುದಿಲ್ಲ . ಆತನಿಗೆ ಒಳ್ಳೆಯದಾಗಲಿ ! ’ - ಹೀಗೆಂದವರು ಸರೋದ್ ಮಾಂತ್ರಿಕ ಉಸ್ತಾದ್ ಅಮ್ಜದ್ ಆಲಿಖಾನ್. ಅವರು ಶುಭ ಹಾರೈಸಿದ್ದು ಮತ್ತೊಬ್ಬ ಉಸ್ತಾದ್‌ಗೆ. ಆತನ ಹೆಸರು ಬಿಸ್ಮಿಲ್ಲಾ ಖಾನ್; ಕನ್ನಡಿಗರ ಪಾಲಿನ ಸನಾದಿ ಅಪ್ಪಣ್ಣ .
ಕಳೆದ ವಾರವಷ್ಟೇ ಅಮ್ಜದ್ ಗುಡುಗಿದ್ದರು. ಬಿಸ್ಮಿಲ್ಲಾಗೆ ಕೊಟ್ಟಿರುವ ಭಾರತ ರತ್ನ ಪ್ರಶಸ್ತಿಯನ್ನು ವಶ ಪಡಿಸಿಕೊಳ್ಳಬೇಕು. ಆತನಿಗೆ ದುಡ್ಡಿನ ಭೂತ ಅಂಟಿಕೊಂಡಿದೆ. ಆತ ದುರಹಂಕಾರಿ ಎಂದೆಲ್ಲಾ ಬಿಸ್ಮಿಲ್ಲಾರನ್ನು ಅಮ್ಜದ್ ಟೀಕಿಸಿದ್ದರು. ಕೋಲ್ಕತ್ತಾದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ (ಡಿ.23,2003), ಬಿಸ್ಮಿಲ್ಲಾ ಖಾನ್ ಕಾರ್ಯಕ್ರಮದ ಅರ್ಧದಲ್ಲೇ ವೇದಿಕೆಯನ್ನು ಬಿಟ್ಟೆದ್ದುದೇ ಅಮ್ಜರ್‌ರ ಕೋಪಕ್ಕೆ ಕಾರಣವಾಗಿತ್ತು. ಈ ಸಿಟ್ಟಿನಲ್ಲಿ , ‘ಇನ್ನೆಂದೂ ಬಿಸ್ಮಿಲ್ಲಾ ಜೊತೆ ಕಾರ್ಯಕ್ರಮ ನೀಡಲಾರೆ’ ಎಂದೂ ಅಮ್ಜದ್ ಶಪಥ ಮಾಡಿದ್ದರು.
ಅಮ್ಜದ್‌ರ ಸಿಟ್ಟೀಗ ತಣ್ಣಗಾಗಿದೆ. ಅವರೇ ಹೇಳುವಂತೆ ಕಳೆದ ವಾರದ ಕಹಿ- ‘ಅದೊಂದು ಕೆಟ್ಟ ಕನಸು. ಅದು ಮುಗಿದ ಇತಿಹಾಸ’. ಹೊಸ ವರ್ಷದ ಸಂದರ್ಭದಲ್ಲಿ ಮನಸ್ಸು ತಿಳಿಯಾಗಿಸಿಕೊಂಡಿರುವ ಅಮ್ಜದ್, 2004ರ ವರ್ಷದಲ್ಲಿ ಬಿಸ್ಮಿಲ್ಲಾಗೆ ಸಕಲ ಶುಭಗಳನ್ನೂ ಪ್ರಾಂಜಲ ಮನಸ್ಸಿನಿಂದ ಹಾರೈಸುವುದಾಗಿ ತಿಳಿಸಿದರು. ಅದು ದೊಡ್ಡತನ ; ಅಮ್ಜದ್ ದೊಡ್ಡವರು.
ಅತ್ಯಂತ ದೀರ್ಘ, ಸಂತೋಷದ ಹಾಗೂ ಶಾಂತಿಯುತ ಜೀವನವನ್ನು ಬಿಸ್ಮಿಲ್ಲಾ ಅವರಿಗೆ ಹಾರೈಸುತ್ತೇನೆ. ವಿಶ್ವದಾದ್ಯಂತ ಸಂಗೀತಪ್ರಿಯರು, ಬಿಸ್ಮಿಲ್ಲಾರ ಕೊನೆಯುಸಿರು ಇರುವವರೆಗೂ ಆತನ ಸಂಗೀತ ಕೇಳುವಂತಾಗಲಿ, ಎಂದು ಆಶಿಸುವುದಾಗಿ ಅಮ್ಜದ್ ತಿಳಿಸಿದರು.
ಹಬ್ಬಲಿ ಹರುಷ ಜಗವೆಲ್ಲ !
ಅಮ್ಜದ್‌ಆಲಿಖಾನ್ ಹಾಗೂ ಬಿಸ್ಮಿಲ್ಲಾ ಖಾನ್ ಭಾರತೀಯ ಸಂಗೀತದ ಜೀವಂತ ದಂತಕಥೆಗಳು. ಇಬ್ಬರ ನಡುವಿನ ಕಹಿ, ಅಮ್ಜದ್‌ರ ಸಿಟ್ಟು , ಆನಂತರದ ಹಾರೈಕೆ ಇವೆಲ್ಲವೂ ಹೊಸ ವರ್ಷದ ಬೆಳಕಿನಲ್ಲಿ ವಿಶೇಷ ಅರ್ಥವನ್ನು ಸ್ಫುರಿಸುತ್ತಿವೆ.
ಯಾವ ಯಾವುದೋ ಕಾರಣಕ್ಕೆ, ಅಮ್ಜದ್‌ರಂತೆ ಸಿಟ್ಟಾದವರು, ಟೂ ಬಿಟ್ಟವರು, ಮುಖ ತಿರುಗಿಸಿದವರು- ಇವರೆಲ್ಲರೂ ರಾಜಿಯಾಗಲಿಕ್ಕೆ ಹೊಸ ವರ್ಷ ಒಂದು ನೆಪವಾಗಿ ನಮ್ಮ ಮುಂದಿದೆ. ಇನ್ನೇಕೆ ತಡ, ಕೆಂಪು ಕಾರಿದ ಕಂಗಳಲ್ಲಿ ಇದೀಗ ಅರಳಿ ನಗಲಿ ಪ್ರೀತಿಯ ಗುಲಾಬಿ. ಆ ಚೆಂಗುಲಾಬೆಯ ಪ್ರಭೆ ಎದುರಿನವರ ಕಣ್ಣುಗಳಲ್ಲೂ ಹೊಳೆಯಲಿ.
ರಾಜ್ಯದ ವಿವಿಧೆಡೆ ಹೊಸ ವರ್ಷದ ಶುಭಾಶಯ ವಿನಿಮಯಗಳು ಇನ್ನೂ ನಡೆಯುತ್ತಲೇ ಇವೆ. ಬೆಂಗಳೂರಿನಲ್ಲಂತೂ ಈ ಆಚರಣೆ ಇನ್ನಷ್ಟು ಜೋರು. 31ರ ರಾತ್ರಿಯಿಡೀ ಕುಣಿದು ಕುಪ್ಪಳಿಸಿದ ಅನೇಕರು ಜನವರಿ 1ರ ಬೆಳಗಿನಲ್ಲಿ ಮನೆಯಲ್ಲೇ ಉಳಿದು, ಹೊದಿಕೆಯಾಳಗೆ ಬೆಚ್ಚಗಿದ್ದಾರೆ!
ಬೆಂಗಳೂರಿನ ಲಾಲ್‌ಬಾಗ್, ಕಬ್ಬನ್ ಉದ್ಯಾನಗಳಲ್ಲಿ ಯಥಾಪ್ರಕಾರ ಜೋಡಿಗಳು ಕಂಗೊಳಿಸುತ್ತಿವೆ. ವೀರ ಕನ್ನಡಿಗ ಸಿನಿಮಾ ತೆರೆ ಕಂಡಿದೆ. ಹೊಸ ವರ್ಷದ ಹುಮ್ಮಸ್ಸೋ ಏನೋ, ಥಿಯೇಟರ್ ಮುಂದೆ ಉದ್ದುದ್ದದ ಸಾಲು ಕಾಣಿಸಿಕೊಂಡಿದೆ.
ಈ ನಡುವೆ, ಹೇಳಿದ ಶುಭಾಶಯಕ್ಕೆ ಪ್ರತಿಯಾಗಿ- ಇದು ಕ್ಯಾಲೆಂಡರ್ ಹೊಸ ವರ್ಷ ಮಾತ್ರ. ನಮಗೆಲ್ಲಾ ಸಂಕ್ರಾಂತಿಯಿಂದ ಹೊಸ ವರ್ಷ ಎಂದು ಗೆಳೆಯರೊಬ್ಬರು ಪ್ರತಿಕ್ರಿಯಿಸುತ್ತಾರೆ. ಏನೆಂದು ಹೇಳುವುದು- ‘ಇಡೀ ಪರಿಸರದಲ್ಲಿ ಹೊಸ ವರ್ಷದ ರಂಗುಗಳು ಕಾಣುತ್ತಿವೆ. ಆ ಸಂಭ್ರಮದಲ್ಲಿ ನಾವೂ ಒಂದಾಗೋಣ. ಬೇಕಿದ್ದರೆ ಸಂಕ್ರಾಂತಿಯಂದು ನಾವಿಬ್ಬರೂ ಹೊಸ ವರ್ಷವನ್ನು ಮತ್ತೆ ಆಚರಿಸೋಣ’. ಖುಷಿಗೊಂದು ಕಾರಣ ಬೇಕೆ ?
ಪೂರಕ ಓದಿಗೆ-