ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧನ್ಯತೆಯ ಧ್ಯಾಸ : ಡಾ.ಕಮಲಾ ಹಂಪನಾ ಭಾಷಣದ ಒಂದುಭಾಗ

By ಭರತ್‌ಕುಮಾರ್‌, ಮೂಡಬಿದಿರೆಯಿಂದ
|
Google Oneindia Kannada News

ಎಪ್ಪತ್ತೊಂದನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠದಿಂದ ಮಾತನಾಡಿದ ಖ್ಯಾತ ಲೇಖಕಿ ಡಾ.ಕಮಲಾ ಹಂಪನಾ, ರಾಜ್ಯದ ಇಂಗ್ಲಿಷ್‌ ಶಾಲೆಗಳನ್ನು ರಾಷ್ಟ್ರೀಕರಣಗೊಳಿಸುವ ಮೂಲಕ ಶಿಕ್ಷಣದಲ್ಲಿ ಸಮಾನತೆ ಸಾಧಿಸುವ ಕುರಿತು ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.

ಮಾಹಿತಿ ತಂತ್ರಜ್ಞಾನದ ಭರಾಟೆಯಲ್ಲಿ ಕನ್ನಡನುಡಿಯ ಹಿತಾಸಕ್ತಿಗೆ ಧಕ್ಕೆಯಾಗಬಾರದು. ತಂತ್ರಜ್ಞಾನ ಕನ್ನಡದ ಬೆಳವಣಿಗೆಗೆ ಪೂರಕವಾಗಬೇಕೇ ಹೊರತು, ಧೃತರಾಷ್ಟ್ರ ಅಪ್ಪುಗೆಯಾಗಬಾರದು ಎಂದು ಕಮಲಾ ಹಂಪನಾ ಅಭಿಪ್ರಾಯಪಟ್ಟರು.

ಕಮಲಾ ಹಂಪನಾ ಅವರ ಅಧ್ಯಕ್ಷ ಭಾಷಣದ ಕೆಲವು ಭಾಗವನ್ನು ಅವರ ಮಾತುಗಳಲ್ಲೇ ಕೇಳಿ :

'' ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ದೊಡ್ಡ ಗೌರವ ನೀಡಿ ನನ್ನ ಮೇಲೆ ಕೃಪಾವರ್ಷ ಕರೆದ ಎಲ್ಲ ಚಿನ್ಮಯ ಶಕ್ತಿಗಳಿಗೆ ಕೈಮುಗಿದು, ಹರಸಿದ ಎಲ್ಲ ವ್ಯಕ್ತಿಗಳಿಗೂ ಕನ್ನಡ ಸಾಹಿತ್ಯ ಪರಿಷತ್ತಿಗೂ ತಲೆಬಾಗಿ, ಕನ್ನಡದ ಮನ್ನಣೆಯ ಈ ಮಣೆ ಹತ್ತಿ ಪ್ಲಾವಿತಳಾಗಿ, ತುಸು ಭಾವುಕಳೂ ಆಗಿ ನಿಂತಿದ್ದೇನೆ. ಮೂಡಬಿದಿರೆಯ ಈ ಮಜುಳ ಹರ್ಷಾಭಿಷೇಕದ ಮಂಗಳಮಯ ಸಮ್ಮೇಳನ ನನಗೆ ಪುರಾಣಗಳು ಹೇಳುವ ದೇವಪುಷ್ಪವೃಷ್ಟಿಯ ಪುಳಕಾನುಭವವೂ ಆಗುತ್ತಿದೆಯೆಂದು ಪ್ರಾಂಜಲವಾಗಿ ನಿವೇದಿಸುತ್ತೇನೆ.

ನನ್ನ ನಿಡುಬಾಳಿನಲ್ಲಿ ಕಂಡುಂಡ ಋತಸತ್ಯಗಳನ್ನು , ನಂಬಿ ನಡೆದ ಸಿದ್ಧಾಂತಗಳನ್ನು, ಯೋಗ್ಯ ಹಾಗೂ ಮೌಲಿಕವೆಂದು ಹೊಳೆದ ಚಿಂತನೆಗಳನ್ನು ಮನಬಿಚ್ಚಿ ನುಡಿಯಲು ನೀವೆಲ್ಲ ಸ್ಫೂರ್ತಿಯಾಗಬೇಕೆಂದು ಪ್ರಾರ್ಥಿಸುತ್ತೇನೆ. ಎಲ್ಲ ವಿಷಯಗಳನ್ನು ಕುರಿತು ಹೇಳುವ ಪ್ರಜ್ಞಾಪ್ರಭುತ್ವವಾಗಲಿ ಸರ್ವಜ್ಞತ್ವವಾಗಲಿ ನನಗೆ ಇಲ್ಲ . ನಾನು ಬಲ್ಲ ಹಾಗೂ ಗ್ರಹಿಸಿದ ವಿಚಾರಗಳನ್ನು ನಿರೂಪಿಸುವಾಗ ಕೂಡ ಸರ್ವಜ್ಞತ್ವವನ್ನು ಆರೋಪಿಸಿಕೊಂಡು ಹೂಂಕರಿಸುವ ಅಹಂಕಾರ ನನ್ನನ್ನು ಆಕ್ರಮಿಸದಿರಲಿ.

ಅಧ್ಯಕ್ಷ ಭಾಷಣದ ಆರಂಭದಲ್ಲಿಯೇ ಹೇಳಬೇಕಾದ ಕೆಲವು ಸಂಗತಿಗಳನ್ನು ಮೊದಲು ಪ್ರಸ್ತಾಪಿಸುತ್ತೇನೆ. ನಾನು ನಿಂತಿರುವ ವೇದಿಕೆಗೆ ಹೆಸರಿಟ್ಟಿರುವ ಮಹಾಕವಿ ರತ್ನಾಕರ ವರ್ಣಿಗೂ ನನ್ನ ಅಧ್ಯಯನ-ಅಧ್ಯಾಪನ ಶಿಸ್ತಿಗೂ ಅರ್ಧ ಶತಮಾನದ ಬೆಸುಗೆಯಿದೆ. ಪ್ರೌಢಶಾಲೆಯಲ್ಲಿ ಭರತೇಶವೈಭವದ ಸಾಂಗತ್ಯ ಪದ್ಯಗಳ ವಾಚನ ಪರಿಚಯವಾಗಿ, ಕಾಲೇಜು ತರಗತಿಯಲ್ಲಿ ಶತಕಗಳ ಹಾಗೂ ಸಮಗ್ರ ಭರತೇಶ ವೈಭವದ ಅನುಸಂಧಾನವಾಯಿತು. ಆ ಮಹಾಕಾವ್ಯವನ್ನು 1967ರಲ್ಲಿ ಪ್ರೊ.ಜಿ.ಬ್ರಹ್ಮಪ್ಪ , ಪ್ರೊ.ಹಂಪನಾ ಮತ್ತು ನಾನು, ಹೊಸ ಓಲೆಗರಿಗಳ ನೆರವಿನಿಂದ ಸಂಪಾದಿಸಿದ್ದೆವು. ಇದೀಗ ಅದರ ಮರುಮುದ್ರಣ ಮಾಡಿ ಸಾಹಿತ್ಯ ಪರಿಷತ್ತು ಪ್ರಕಟಿಸಿದ್ದು ಈ ಸಮ್ಮೇಳನದಲ್ಲಿ ಬಿಡುಗಡೆ ಆಗುತ್ತಿದೆ. 1979ರಲ್ಲಿ ಡಾ.ಹಂಪನಾ 238 ರತ್ನಾಕರನ ಹಾಡುಗಳನ್ನು ಏಕೈಕ ಹಸ್ತಪ್ರತಿಯ ಸಹಾಯದಿಂದ ಸಂಪಾದಿಸಿದಾಗಲೂ ನಾನು ಸಹಕರಿಸಿದ್ದೆ. ರತ್ನಾಕರನ ಕಾವ್ಯಗಳನ್ನು ಕುರಿತು ಇದೇ ಮೂಡಬಿದಿರೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವಿಚಾರ ಸಂಕಿರಣ ನಡೆಸಿದಾಗಲೂ ನಾನು ಭಾಗವಹಿಸಿದ್ದೆ. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ವತಿಯಿಂದ ಏರ್ಪಾಡಾಗುತ್ತಿದ್ದ ಉಪನ್ಯಾಸಗಳಿಗೆ ಇಲ್ಲಿಗೆ ನಾನು ಆಗಮಿಸಿದ ನೆನಪು ಹಸಿರಾಗಿದೆ. ಈ 71ನೇಯ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಮಹಾಪೋಷಕರಾದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಯವರು ಪಟ್ಟಾಭಿಷಕ್ತರಾದ ಶುಭ ದಿವಸ ಕೂಡ, ಪದ್ಮಭೂಷಣ ರಾಜರ್ಷಿ ಡಾ.ಡಿ.ವೀರೇಂದ್ರಹೆಗ್ಗಡೆಯವರು ನನ್ನನ್ನೂ ಬರಮಾಡಿಕೊಂಡಿದ್ದರು.

ಸಾವಿರ ಕಂಬದ ಬಸದಿ ಹೆಸರಿನ ಇಲ್ಲಿಯ ಉತ್ಕೃಷ್ಟ ತ್ರಿಭುವನ ತಿಲಕ ಚೂಡಾಮಣಿ ಚೈತ್ಯಾಲಯ ಮತ್ತು ಇತರ ಬಸದಿಗಳ ವಾಸ್ತುಶಿಲ್ಪದ ದರ್ಶನದಿಂದ ರೋಮಾಂಚನಗೊಂಡಿದ್ದೇನೆ. ಆಳುಪರು, ಚೌಟರು, ಅಜಿಲರು ಮತ್ತು ಬಂಗರು ಹೊಂದಿದ್ದ ಧಾರ್ಮಿಕ ಶ್ರದ್ಧೆ , ಕಲಾಪ್ರೇಮವನ್ನು ಇಲ್ಲಿಯ 18 ಜಿನಾಲಯಗಳಲ್ಲದೆ ಇನ್ನಿತರ 18 ದೇವಾಲಯಗಳೂ ಕೆರೆಗಳೂ ಶಾಸನಗಳೂ ಸಾರುತ್ತಿವೆ. ಸಮಸ್ತ ಆಗಮ ಪರಂಪರೆಯ ಸಾರ ಸಮಸ್ತವನ್ನು ಗರ್ಭೀಕರಿಸಿದ ಧವಲ, ಜಯಧವಲ, ಮಹಾಧವಲದ ಏಕೈಕ ಸಂರಕ್ಷಿತ ಹಸ್ತಪ್ರತಿ ಇಲ್ಲಿನ ಶ್ರುತಭಂಡಾರದ ತವನಿಧಿಯಾಗಿ ಬೆಳಗಿದ್ದನ್ನೂ ಹಾಗೂ ವಿದ್ವನ್ಮಣಿಗಳಾದ ಶಾಸ್ತ್ರಿಗಳ ಪರಂಪರೆಯಿಂದ ಸುಶೋಭಿತವಾದುದನ್ನೂ, ಇನ್ನು ಎಂದೆಂದಿಗೂ ಸಿಗಲಾರದೆಂದು ತಿಳಿದಿದ್ದ ನಾಗವರ್ಮನ ವರ್ಧಮಾನಪುರಾಣ ಇಲ್ಲಿನ ಶ್ರುತ ಭಂಡಾರದಿಂದ ಬೆಳಕು ಕಂಡಿತೆಂಬುದನ್ನೂ, ಕನ್ನಡ ಸಾಹಿತ್ಯ ಪರಂಪರೆಯ ಉಜ್ವಲ ದೀಪಸ್ತಂಭವಾದ ವಡ್ಡಾರಾಧನೆಯ ಪರಿಷ್ಕಾರಕ್ಕೆ ಇಲ್ಲಿನ ತಾಳೆಗರಿ ಗ್ರಂಥಗಳು ಮುಖ್ಯ ಆಕರವೆಂಬುದನ್ನು ಕನ್ನಡ ವಿದ್ವತ್ತು ಬಲ್ಲುದು. ಕನ್ನಡ ಸಾಹಿತ್ಯ, ಸಂಸ್ಕೃತಿ, ವಾಸ್ತು , ಶಿಲ್ಪ ಮತ್ತು ಕಲೆಗಳಿಗೆ ತನ್ನ ವಿಶಿಷ್ಟ ಕೊಡುಗೆ ನೀಡಿ ಅಕ್ಷಯ ಭಂಡಾರವೆನಿಸಿದ ಮೂಡಬಿದಿರೆಯಲ್ಲಿ ನಡೆಯುತ್ತಿರುವ ಸಮ್ಮೇಳನದ ಅಧ್ಯಕ್ಷತೆಗೆ ನನ್ನನ್ನು ಸರ್ವಾನುಮತದಿಂದ ಆರಿಸಿದ್ದರ ಹಿಂದೆ ಅತೀತ ಶಕ್ತಿಯಾಂದು ಪ್ರವರ್ತನಶೀಲವಾಗಿರಬೇಕೆಂದು ಊಹಿಸುತ್ತೇನೆ. ರತ್ನಾಕರವರ್ಣಿಯ ಹೆಸರಿನ ವೇದಿಕೆ ಹತ್ತಿಸಿ, ಮಹಾಕವಿಯ ಹೆಗಲ ಮೇಲೆ ಕೂಡಿಸಿ, ಸಾಹಿತ್ಯ ಜಗತ್ತಿಗೆ ನಾನು ಕಾಣುವಂತೆ ಅಕ್ಕರೆ ತೋರಿದವರಿಗೆಲ್ಲ ಸಾರ್ದ್ರ ಹೃದಯಳಾಗಿ ನಮಸ್ಕರಿಸುತ್ತೇನೆ.

ದಕ್ಷಿಣ ಕನ್ನಡ ಜಿಲ್ಲೆಯಂತೂ ಕರ್ನಾಟಕಕ್ಕೇ ಅಲ್ಲದೆ ಭಾರತಕ್ಕೂ ಜಗತ್ತಿಗೂ ಹಲವು ವಿಷಯಗಳಲ್ಲಿ ಮಾದರಿ. ಬಹು ಭಾಷೆಗಳವರು ಒಟ್ಟೊಟ್ಟಿಗೆ ನಗುನಗುತ್ತ ಸಾಮರಸ್ಯದಿಂದ ಬಾಳುವುದು ಸಾಧ್ಯವಿದೆ ಎಂಬ ಲಕ್ಷಣಕ್ಕೆ ಈ ಜಿಲ್ಲೆ ಲಕ್ಷ್ಯವಾಗಿದೆ. ಅನನ್ಯ ಯಕ್ಷಗಾನ ಕಲೆಯ ತಾಯಿನೆಲ ಆಗಿರುವುದಲ್ಲದೆ ಬ್ಯಾಂಕಿಂಗ್‌ ಮತ್ತು ಹೋಟೆಲ್‌ ಉದ್ಯಮಗಳಿಗೆ ಮೇಲ್ಪಂಕ್ತಿಯಾಗಿದೆ. ಇಲ್ಲಿನ ಧರ್ಮ ಸಮನ್ವಯ, ಹೊಸದರತ್ತ ತುಡಿಯುವಿಕೆ, ಸಾಹಸಕ್ಕಾಗಿ ದೂರ ದೂರದ ಊರು-ನಾಡುಗಳಿಗೆ ದಾಂಗುಡಿಯಿಡುವ ವಿಜಗೀಷು ಪ್ರವೃತ್ತಿ ಅನುಕರಣಯೋಗ್ಯವಾದುದು. ಮುಂಬಯಿಯಲ್ಲಿರುವ ಲಕ್ಷಾಂತರ ಕನ್ನಡಿಗರಲ್ಲಿ ಬಹುಪಾಲಿನವರು ತುಳುನಾಡಿನವರು. ಪರಮದೇವಕವಿಯ ತುರಂಗಭಾರತ ಮೊದಲು ಬೆಳಕು ಕಂಡಿದ್ದು ಅಲ್ಲಿ , ತೊಳವರ ನೆರವಿನಿಂದ. ಮುಂಬಯಿ ನಗರಸಭೆ ಬ್ರಿಟೀಷರಿಗೆ ಒಪ್ಪಿಸಿದ ಮಾನಪತ್ರ ಕನ್ನಡದಲ್ಲಿದ್ದುದಕ್ಕೆ ಕಾರಣ ಇಲ್ಲಿಂದ ಅಲ್ಲಿಗೆ ಹೋಗಿ ಹೆಸರು ಮಾಡಿದ ವೀರಾಭಿಮಾನಿ ತೌಳವರು.

ಬಹುಭಾಷೆಯ ಈ ನೆಲದಲ್ಲಿ ತುಳು ಹೆಚ್ಚು ಜನರ ತಾಯಿನುಡಿ. ಕೊಂಕಣಿ ಮಾತೃಭಾಷೆಯಾಗಿರುವ ಸಹಸ್ರಾರು ಜನರಿದ್ದಾರೆ. ಬ್ಯಾರಿಗಳಿದ್ದಾರೆ. ಮೋಯ ಮಾತಾಡುವವರಿದ್ದಾರೆ. ಹೀಗೆ ಮನೆಯ ಮಾತು ತುಳವೊ ಕೊಂಕಣಿಯಾ ಮತ್ತೊಂದೊ ಇದ್ದರೂ ಈ ಜಿಲ್ಲೆಯ ಜನರು ಶಾಲೆಯಲ್ಲಿ ಓದುವುದು ಕಲಿಯುವುದು ಬರೆಯುವುದು ಕನ್ನಡ ಭಾಷೆ. ಇವರೆಲ್ಲ ತಮ್ಮ ತುಳು ಅಥವಾ ಕೊಂಕಣಿಯಲ್ಲಿ ಪತ್ರ ಬರೆಯುವಾಗ ಬಳಸುವುದು ಕನ್ನಡ ಲಿಪಿಯನ್ನು. ಹೀಗೆ ಇಲ್ಲಿನ ಜನಪದರು ಭಾವಿಸುವುದು, ಬಾಳಿಸುವುದು ಕನ್ನಡವನ್ನು. ಮಾತೃಭಾಷೆಯಾದ ತುಳು, ಕೊಂಕಣಿಯನ್ನು ಉಳಿಸಿಕೊಂಡು ಕನ್ನಡದ ಮೇಲಾಳಿಕೆಯನ್ನು ಮಾನ್ಯ ಮಾಡಿದ ಇಂಥ ಹೃದಯ ಸಂಪನ್ನರ ಸಿರಿಗಂಧದ ನೆಲದಲ್ಲಿ ಈ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು ಅದರ ಕೇಂದ್ರದಲ್ಲಿ ನಿಲ್ಲುವ ಗೌರವ ಪ್ರಾಪ್ತಿಗಾಗಿ ಹರ್ಷ ಪುಳಕಿತಳಾಗಿದ್ದೇನೆ.

ಕನ್ನಡ- ಕರ್ನಾಟಕ: ಒಳನಾಡು

ಕನ್ನಡ ನಿನ್ನೆ ಮೊನ್ನೆ ಹುಟ್ಟಿದ ಕೂಸು ಕಂದಯ್ಯನಲ್ಲ. ಅದು ಎರಡೂವರೆ ಸಾವಿರ ವರ್ಷಗಳ ಸಾತತ್ಯ, ಸತ್ವ ಮತ್ತು ಸತ್ಯ. ಅದರ ಬೆಳಕಿನಲ್ಲಿ ಕೋಟಿಕೋಟಿ ಕನ್ನಡಿಗರು ಬಾಳಿದ್ದಾರೆ. ಶತಮಾನಗಳ ಹಾಸಿನಲ್ಲಿ ರಾಜರು ಆಳಿದರು, ಸಾಹಿತ್ಯ ಕೃತಿಗಳು ಬೆಳಗಿದವು. ಸಂಸ್ಕೃತ, ಪ್ರಾಕೃತಗಳ ಶ್ರೇಷ್ಠ ಕಾವ್ಯಗಳ ಸಾರಸಮಸ್ತವನ್ನೂ ಹೀರಿ ಸೂರೆ ಮಾಡಿ ಅದನ್ನು ಕನ್ನಡದ ಕಾಲುವೆಯಲ್ಲಿ ಹರಿಸಿದರು. (ಇದೇ ತತ್ವ ಇಂಗ್ಲಿಷ್‌ ಹಾಗೂ ಇತರ ವಿದೇಶೀಯ ಭಾಷೆಗಳಿಗೂ, ತಮಿಳು ತೆಲುಗು ಬಂಗಾಳಿ ಮರಾಠಿ ಹಿಂದಿ ಮೊದಲಾದ ದೇಶೀ ಭಾಷೆಗಳಿಗೂ ಅನ್ವಯವಾಗಬೇಕು). ಸಂಸ್ಕೃತ ಪ್ರಾಕೃತಗಳಿಗೆ ಕನ್ನಡ ಎಲ್ಲ ರೀತಿಯಲ್ಲೂ ಸರಿಸಮವೆಂದು ತೋರಿಸಿದ ಆದ್ಯರು ಶ್ರಮಣರು, ಶರಣರು, ದಾಸರು. ಅವರೆಲ್ಲ ಕನ್ನಡದಲ್ಲಿ ಭಾವಿಸಿ ಅನುಭವಿಸಿದರಲ್ಲದೆ ಕನ್ನ ಡಕ್ಕಿರುವ ಆಗಾಧ ಹಸಿವು, ಜೀರ್ಣಶಕ್ತಿ ಮತ್ತು ಅಸ್ಮಿತೆಯನ್ನು ತೋರಿಸಿದರು. ಕನ್ನಡದ ಮೂಲಕ ದುಃಖ ದುಮ್ಮಾನ ತೋಡಿಕೊಂಡು, ಸುಖ ಸುಮ್ಮಾನ ಪಡೆದರು. ಮಾತೃಭಾಷೆಯನ್ನು ಸಂಪನ್ನಗೊಳಿಸಿದರು. ಕುತ್ತಿಗೆಯವರೆಗೆ ಬಂದ ಕುತ್ತಗಳಿಂದ ಕನ್ನಡವನ್ನು ಬದುಕಿಸಿದ ಮೃತ್ಯುಂಜಯರವರು. ಚಿರಂಜೀವ ಕೃತಿಗಳ ಅಮೃತ ಕಲಶ ತಂದ ವೈನತೇಯರವರು.

ಭಾಷೆಯ ಸಂರಚನೆಯಲ್ಲಿ ತರಬಹುದಾದ ಸುಧಾರಣೆಯ ದಿಕ್ಕಿನತ್ತ ಹೊರಟವರು ಸಹಜ ಪ್ರಕ್ರಿಯೆಯಿಂದ ಕೂಡಿದ ವ್ಯತ್ಯಾಸಗಳನ್ನು ಚಿಂತಿಸುವಾಗ ಮೂಲ ಬೇರು, ಬುಡ ಒಣಗದಂತೆ, ಅದರ ಪಸಿಮೆ ಇರುವಂತೆ ನೋಡಿಕೊಳ್ಳುವುದೂ ಮುಖ್ಯವೆ. ಕನ್ನಡ ಭಾಷೆ ಯಾವತ್ತೂ ನಿಂತ ನೀರಾಗದೆ ಹರಿಯುವ ತೀರ್ಥವಾಗಿದೆ. ಇನ್ನು ಮುಂದೆ ಕನ್ನಡ ಭಾಷೆಯಲ್ಲಿ ಇಂಗ್ಲಿಷ್‌ ಶಬ್ದಗಳು ವಿಲೀನಗೊಳ್ಳುವ ಪ್ರಕ್ರಿಯೆ ದಟ್ಟವಾಗುತ್ತದೆ. ಕನ್ನಡದ ಕುಂದಣದಲ್ಲಿ ಅನೇಕ ಇಂಗ್ಲಿಷ್‌ ಹಾರಗಳುಗಳನ್ನು ಈಗಾಗಲೆ ಜೋಡಿಸಲಾಗಿದೆ. ಕನ್ನಡದ ನಿಘಂಟಿನಲ್ಲಿ ಸಾವಿರಾರು ಇಂಗ್ಲಿಷ್‌ ಮಾತುಗಳು ಕೋದುಕೊಂಡಿವೆ. ಪ್ರಾಕೃತ ಮತ್ತು ಸಂಸ್ಕೃತ ಶಬ್ದಗಳು ಕನ್ನಡದಲ್ಲಿ ಹಾಸುಹೊಕ್ಕಾಗಿ ಬೆರೆಯುವ ಕಾರ್ಯ ಹತ್ತನೆಯ ಶತಮಾನದ ವೇಳೆಗೆ ಪೂರೈಸಿತ್ತು . ನಡುಗನ್ನಡದ ಕಾಲಘಟ್ಟದಲ್ಲಿ ಅರಬ್ಬಿ ಮತ್ತು ಪಾರಸಿ ಭಾಷೆಗಳ ಪ್ರಭಾವವನ್ನು ಕನ್ನಡ ಅರಗಿಸಿಕೊಂಡಿತು. ಕನ್ನಡ-ಇಂಗ್ಲಿಷ್‌ ಭಾಷಾ ಸಂಕರ ಇನ್ನೂರು ವರ್ಷಗಳ ಆಮೆವೇಗದಿಂದ ಆರಂಭವಾಗಿ ಇದೀಗ ಮೊಲದ ವೇಗ ಪಡೆಯುತ್ತಿದೆ. ಈ ಕನ್ನಡ ಇಂಗ್ಲಿಷ್‌ ಬೆರಸಿದ 'ಕಂಗ್ಲಿಷ್‌’ ಬಳಕೆ ಹಳ್ಳಿಗಳವರೆಗೆ ದಾಂಗುಡಿಯಿಟ್ಟಿದೆ. ಅರಬ್ಬಿ, ಪಾರಸಿ, ಇಂಗ್ಲಿಷ್‌, ಹಿಂದಿ ಬೆರೆಸಿದ 'ಹಿಂಗ್ಲಿಷ್‌’ ಬೇರೆ ಚಾಲ್ತಿಯಲ್ಲಿದೆ. ಇವೇನೂ ಗಾಬರಿಯ ವಿಷಯಗಳಲ್ಲ . ಭಾಷೆಯಲ್ಲಿ ಮಡಿವಂತಿಕೆಗೆ ಜಾಗವಿಲ್ಲ ಎಂಬುದು. ನಿತ್ಯದ ವ್ಯವಹಾರಕ್ಕೆ ಅನಿವಾರ್ಯವಾದ ಹೊಸ ಶಬ್ದಗಳು ಬರಲಿ. ಆದರೆ ಅನಗತ್ಯವಾಗಿ ಇದನ್ನು ಉತ್ತೇಜಿಸಬಾರದು, ನಮ್ಮಲ್ಲಿರುವ ಮಾತುಗಳನ್ನು ಮೂಲೆಗೊತ್ತಿ ಅನಗತ್ಯವಾಗಿ ಅನ್ಯಭಾಷೆಯ ಶಬ್ದಗಳನ್ನು ಬಳಸುವುದನ್ನು ಖಂಡಿಸಬೇಕು.

ಸಾಹಿತಿಗಳಲ್ಲದೆ ವಿಶೇಷವಾಗಿ ಜನಸಾಮಾನ್ಯರು ಕನ್ನಡವನ್ನು ಸಾವಿರಾರು ವರ್ಷಗಳಿಂದ ಸಲಹಿದ್ದಾರೆ. ಅವರ ಅಸೀಮ ಅಕ್ಕರೆಯಿಂದಾಗಿ ಇಂದಿಗೂ ಕನ್ನಡ ಕೋಟಿಕೋಟಿ ಜನರ ತಾಯ್ನುಡಿಯಾಗಿದೆ. ಜನಮನ ತನ್ನ ನಾಡು ನುಡಿ ಪ್ರೇಮವನ್ನೂ ನುಡಿಜಾಣರಿಗೆ ಹೆಚ್ಚಿನ ಮನ್ನಣೆಯನ್ನೂ ಬಗೆಬಗೆಯಲ್ಲಿ ಪ್ರಕಟಿಸಿದ್ದಾರೆ. ಕುವೆಂಪು, ಬೇಂದ್ರೆ, ಮಾಸ್ತಿ , ವಿಸೀ ಮೊದಲಾದವರ ಹೆಸರುಗಳನ್ನು ಬಡಾವಣೆಗಳಿಗೆ, ರಸ್ತೆಗಳಿಗೆ ನಾಮಕರಣ ಮಾಡಿದ್ದಾರೆ. ಪಂಪ ಮಹಾಕವಿ ರಸ್ತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇದೆ. ಕನ್ನಡಿಗರ ಈ ಉತ್ಕಟ ನಾಡುನುಡಿ ಅಭಿಮಾನ, ನುಡಿಜಾಣರಿಗೆ ನಮನ ಅನನ್ಯವೆನ್ನಿಸುವಷ್ಟಿದೆ. ಕುರಿತೋದದ ಜನರೂ ಪರಂಪರೆಗೆ ಪ್ರಾಂಜಲವಾಗಿ, ಒಮ್ಮೊಮ್ಮೆ ಅತಿಭಾವುಕವೆನ್ನಿಸುವಷ್ಟು ಸ್ಪಂದಿಸುವ ರೀತಿಗೆ ಬೆರಗಾಗಿದ್ದೇನೆ.

ಕನ್ನಡಕ್ಕೆ ಸಾರ್ವಭೌಮ ಸ್ಥಾನ ಇರಬೇಕೆಂಬುದಕ್ಕೆ ಯಾವ ರಾಜಕೀಯ ಪಕ್ಷವೂ ವಿರೋಧವಾಗಿಲ್ಲ . ಕನ್ನಡವನ್ನು ಬಾಲವಾಡಿ ಮತ್ತು ಪ್ರಾಥಮಿಕ ಹಂತದಿಂದಲೇ ಗಟ್ಟಿಗೊಳಿಸಬೇಕೆಂಬುದನ್ನು ಉತ್ಪ್ರೇಕ್ಷಿಸಬೇಕಿಲ್ಲ . ಕನ್ನಡದ ಕಾಳುಗಳನ್ನು ಮಕ್ಕಳ ಮನಸ್ಸಿನ ಹೊಲದಲ್ಲಿ ಬಿತ್ತಬೇಕು. ಚಿಕ್ಕವರಿಗೆ ಪ್ರಾಮುಖ್ಯ ಕೊಡುವುದನ್ನು ರಾಷ್ಟ್ರಾಧ್ಯಕ್ಷರಾದ ಎ.ಪಿ.ಜೆ.ಅಬ್ದುಲ್‌ ಕಲಾಮರಿಂದ ಕಲಿಯಬೇಕು. ಬಾಲವಾಡಿಗಳ ಹಂತದಿಂದಲೇ ಕನ್ನಡದ ಕೂಸುಗಳನ್ನು ಕನ್ನಡದಿಂದ ಕಿತ್ತು ಬೇರೆ ಕಡೆ ನಾಟಿ ಮಾಡಲಾಗುತ್ತಿದೆ. ಕಿರಿಯ ಪ್ರಾಥಮಿಕ ತರಗತಿಯಿಂದ ಕನ್ನಡ ಪಠ್ಯ ಕಡ್ಡಾಯವಾಗುವುದು ಸಮಂಜಸವಾದ ನಿರ್ಧಾರ. ಇಂಗ್ಲಿಷ್‌ ಮಾಧ್ಯಮದ ಶಾಲೆಗಳಲ್ಲಂತೂ ಇದು ಅತ್ಯಗತ್ಯ. ಕನ್ನಡ ಕಲಿಕೆ ಕಡ್ಡಾಯವಾಗುವುದರೊಂದಿಗೆ ಅದನ್ನು ಕಾಟಾಚಾರವಾಗಿ ಕಲಿಸಿದಂತೆ ಕಣ್ಣೊರಸುವುದಾಗಬಾರದು.

ಕನ್ನಡ ಕಲಿಸದಿದ್ದರೆ ಎಲ್ಲ ಕಾನ್ವೆಂಟುಗಳನ್ನೂ ಇಂಗ್ಲಿಷ್‌ ಮಾಧ್ಯಮಶಾಲೆಗಳನ್ನೂ ಸರ್ಕಾರ ತಕ್ಷಣ ರಾಷ್ಟ್ರೀಕರಣಗೊಳಿಸಿ ತನ್ನ ಆಡಳಿತ ಕಕ್ಷೆಗೆ ತೆಗೆದುಕೊಳ್ಳುವುದು ಸೂಕ್ತ. ಕನ್ನಡ ಶಾಲೆಗಳ ಸ್ಥಿತಿಗತಿ ಆಮೂಲಾಗ್ರವಾಗಿ ಸುಧಾರಣೆಯಾಗುವ ಜರೂರಿದೆ. ವಿದ್ಯೆ ಇಂದು ವಾಣಿಜ್ಯವಾಗಿದೆ. ಸಂಪಾದನೆಗೆಂದು ಹೋಟೆಲೊ ಅಂಗಡಿಯಾ ಕಲ್ಯಾಣಮಂಟಪವೊ ಪ್ರಾರಂಭ ಮಾಡುವುದಕ್ಕಿಂತ ಇಂಗ್ಲಿಷ್‌ ಮಾಧ್ಯಮಶಾಲೆ ತೆರೆಯುವುದು ಧಿಡೀರ್‌ ಧನಾಢ್ಯತೆಗೆ ರಾಜಮಾರ್ಗ. ಅದರಿಂದ ಅಲ್ಲಿ ಅಚ್ಚುಕಟ್ಟಾದ ವ್ಯವಸ್ಥೆಗೆ ಸುಲಭವಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಕನ್ನಡ ಶಾಲೆಗಳ ದುಸ್ಥಿತಿ ಕಣ್ಣಿಗೆ ಬಡಿಯುತ್ತದೆ. ಈ ದುರವಸ್ಥೆಯನ್ನು ತಪ್ಪಿಸಲು ಸರ್ಕಾರ ಕೈಗೊಂಡಿರುವ ಕ್ರಮ ಶ್ಲಾಘನೀಯ. ಇಂಗ್ಲಿಷ್‌ ಶಾಲೆಗಳಿಗಿಂತ ಕನ್ನಡಶಾಲೆಗು ಶುಭ್ರವಾಗಿದ್ದು ಸಮವಸ್ತ್ರವೂ ಜಾರಿಗೆ ಬರಲಿ ಎಂಬುದು ಕನ್ನಡಪರ ಚಿಂತಕರ ಅಪೇಕ್ಷೆ .

ಬಾಲವಾಡಿಯಿಂದ ಸ್ನಾತಕೋತ್ತರದವರೆಗೆ, ಅಡಿಯಿಂದ ಹಿಡಿದು ಮುಡಿಯತನಕ ಇಂಗ್ಲಿಷ್‌ ಮಾಧ್ಯಮದ್ದೇ ದರಬಾರು. 'ತುರ್ತು ನಿಗಾ ಕೊಡಬೇಕಾದ ಆಲಯ’ದೊಳಗೆ ದೂಡಿರುವ ಕನ್ನಡ ಮಾಧ್ಯಮಕ್ಕೆ ಆಮ್ಲಜನಕವಿತ್ತು ಉಳಿಸಬೇಕಾಗಿ ಬಂದಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ಆಳುತ್ತಿದ್ದಾಗ ಕನ್ನಡಕ್ಕೆ ಇದ್ದ ಸ್ಥಾನ ಮನ್ನಣೆ, ನಮ್ಮವರೇ ಆಳುವ ಸಂದರ್ಭದಲ್ಲಿ ತಪ್ಪಿಹೋಗಿರುವುದು ವಿಪರ್ಯಾಸ......

***

ಮೇಲಿನಂತೆ ಸಾಗುವ ಕಮಲಾ ಹಂಪನಾ ಅವರ ವಿದ್ವತ್‌ಪೂರ್ಣ ಭಾಷಣ ನಾಡು ಎದುರಿಸುತ್ತಿರುವ ಹಲವಾರು ಸವಾಲುಗಳನ್ನು ಚರ್ಚಿಸುತ್ತದೆ. ಭಾಷಣದ ಪೂರ್ಣರೂಪ- ನಾಳೆ, ಡಿಸೆಂಬರ್‌ 19, ಶುಕ್ರವಾರದಂದು.

English summary
All India Kannada Literary Conference 2003 , Moodubidri Presidents Address by Kamala Hampana
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X