Get Updates
Get notified of breaking news, exclusive insights, and must-see stories!

ಮೂಡಬಿದರೆ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಕಮಲಾ ಹಂಪನಾ ಆಯ್ಕೆ

*ದಟ್ಸ್‌ಕನ್ನಡ ಬ್ಯೂರೊ

71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಲೇಖಕಿ ಡಾ.ಕಮಲಾ ಹಂಪನಾ ನಿರೀಕ್ಷೆಯಂತೆ ಆಯ್ಕೆಯಾಗಿದ್ದಾರೆ.

ನ.12ರ ಬುಧವಾರ ಬೆಂಗಳೂರಿನಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಸಭೆ ಡಾ.ಕಮಲಾ ಹಂಪನಾ ಅವರನ್ನು ಮೂಡಬಿದರೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿತು ಎಂದು ಪರಿಷತ್ತಿನ ಮೂಲಗಳು ದಟ್ಸ್‌ಕನ್ನಡ.ಕಾಂಗೆ ತಿಳಿಸಿವೆ.

ಕಳೆದ ವಾರ ಚಿತ್ರದುರ್ಗದಲ್ಲಿ ನಡೆದ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರುಗಳ ಸಭೆಯಲ್ಲಿಯೇ ಮೂಡಬಿದರೆ ಸಮ್ಮೇಳನದ ಅಧ್ಯಕ್ಷರ ಆಯ್ಕೆ ನಡೆಯಬೇಕಿತ್ತು . ಆದರೆ ಅಧ್ಯಕ್ಷರ ಆಯ್ಕೆಯಲ್ಲಿ ಒಮ್ಮತಕ್ಕೆ ಬರುವಲ್ಲಿ ಸಭೆ ವಿಫಲವಾಗಿತ್ತು . ಪಂಪ ಪ್ರಶಸ್ತಿ ವಿಜೇತ ಲೇಖಕ ಡಾ.ಚಿದಾನಂದಮೂರ್ತಿ ಹಾಗೂ ಕಮಲಾ ಹಂಪನಾ ಅವರ ಕುರಿತು ಸಭೆ ಸಮಾನ ಒಲವು ವ್ಯಕ್ತಪಡಿಸಿದ್ದರಿಂದ ಅಧ್ಯಕ್ಷರ ಆಯ್ಕೆ ಕಗ್ಗಂಟಾಗಿ ಪರಿಣಮಿಸಿತ್ತು .

Kamala Hampana will preside over 71st All India Kannada Sahitya Sammelanaಚಿಮೂ ಕಣದಿಂದ ಹೊರಕ್ಕೆ : ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಯುತ್ತಿದೆ ಎನ್ನುವ ಕೂಗುಗಳು ದಟ್ಟವಾಗಿ ಎದ್ದ ಸಂದರ್ಭದಲ್ಲಿಯೇ, ಸಮ್ಮೇಳನದ ಅಧ್ಯಕ್ಷತೆಯಲ್ಲಿ ತಮಗೆ ಆಸಕ್ತಿಯಿಲ್ಲ ಎಂದು ಚಿದಾನಂದಮೂರ್ತಿ ಬಹಿರಂಗವಾಗಿ ಪ್ರಕಟಿಸಿದರು. ಇದರಿಂದಾಗಿ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಕಮಲಾ ಹಂಪನಾ ಅವರ ಆಯ್ಕೆ ಸಲೀಸಾಯಿತು.

ಹಿರಿಯ ವಿದ್ವಾಂಸ ಪ್ರೊ.ಜಿ. ವೆಂಕಟಸುಬ್ಬಯ್ಯ, ಕಾದಂಬರಿಕಾರ ವ್ಯಾಸರಾಯ ಬಲ್ಲಾಳ ಹಾಗೂ ಸಾ.ಕೃ.ರಾಮಚಂದ್ರರಾವ್‌ ಅವರ ಹೆಸರುಗಳು ಕೂಡ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಪ್ರಸ್ತಾಪವಾಗಿದ್ದವು. ಆದರೆ, ಪರಿಷತ್ತಿನ ಸಭೆಯಲ್ಲಿ ಈ ಹಿರಿಯರ ಹೆಸರುಗಳಿಗೆ ಹೆಚ್ಚು ಒತ್ತು ಸಿಗಲಿಲ್ಲ . ಪರಿಷತ್ತಿನ ಅಧ್ಯಕ್ಷ ಹರಿಕೃಷ್ಣ ಪುನರೂರು ಕೂಡ ಕಮಲಾ ಹಂಪನಾ ಅವರ ಆಯ್ಕೆಗೆ ಒಲವು ವ್ಯಕ್ತಪಡಿಸಿದ್ದರು.

ಈಡೇರಿದ ಕನಸು : ಕಳೆದ ನಾಲ್ಕೈದು ವರ್ಷಗಳಿಂದ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಕಮಲಾ ಹಂಪನಾ ಅವರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಪ್ರಸ್ತಾಪವಾಗುತ್ತಿದ್ದು , ಈ ಬಾರಿ ಕಮಲಾ ಹಂಪನಾ ಅವರ ಆಸೆ ಕೈಗೂಡಿದೆ. 52ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿರುವ ಕಮಲಾ ಹಂಪನಾ, ಜೈನ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಕೃಷಿ ಮಾಡಿದ್ದಾರೆ.

ಕಮಲಾ ಹಂಪನಾ ಜನಿಸಿದ್ದು ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ , 1935ರಲ್ಲಿ . ತಂದೆ ರಂಗಧಾಮ ನಾಯಕ್‌. ತಾಯಿ ರಂಗಲಕ್ಷ್ಮಮ್ಮ . ತಂದೆ ಬಾಲ್ಯದಲ್ಲಿಯೇ ಅಸುನೀಗಿದರು. ಆದರೆ ತಾಯಿಯ ಆಸರೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ ಕಮಲಾ- ಚಳ್ಳಕೆರೆ, ಯಳಂದೂರು, ರಿಪ್ಪನ್‌ಪೇಟೆ, ಭದ್ರಾವತಿ, ತುಮಕೂರು, ಮೈಸೂರು ಮುಂತಾದೆಡೆ ವಿದ್ಯಾಭ್ಯಾಸ ನಡೆಸಿದರು.

ವಿದ್ಯಾರ್ಥಿ ದೆಸೆಯಲ್ಲಿಯೇ ಸಹಪಾಠಿ ಹಂ.ಪ.ನಾಗರಾಜಯ್ಯ ಅವರೊಂದಿಗೆ ಕುದುರಿದ ಪ್ರೇಮ ವಿವಾಹಕ್ಕೆ ದಾರಿ ಮಾಡಿಕೊಟ್ಟಿತು. ಜಾತಿಯ ಕಾರಣದಿಂದ ಮದುವೆಗೆ ಪ್ರತಿರೋಧ ಎದುರಾದರೂ, ಹಂಪನಾ-ಕಮಲಾ ಜೋಡಿ ಸಮಾಜಕ್ಕೆ ಅಂಜದೆ 1961ರಲ್ಲಿ ಕಾನೂನುಬದ್ಧವಾಗಿ ಮದುವೆಯಾದರು.

ಸುಮಾರು ಮೂರೂವರೆ ದಶಕಗಳ ಕಾಲ ಅಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಹೇಳಿರುವ ಕಮಲಾ ಹಂಪನಾ ಅವರಿಗೆ ಸಂಪಾದನ ಕಾರ್ಯ ಅಚ್ಚುಮೆಚ್ಚು . ಶಾಂತಿನಾಥ ಕವಿಯ ಸುಕುಮಾರ ಚರಿತೆ, ಹಂಪನಾ ಜೊತೆಯಲ್ಲಿ ರತ್ನಾಕರವರ್ಣಿಯ ಭರತೇಶ ವೈಭವ ಹಾಗೂ ಶೇಷಗಿರಿ ಅವರ ಸಹಕಾರದೊಂದಿಗೆ ಚಾವುಂಡರಾಯಪುರಾಣ ಕೃತಿಗಳ ಸಂಪಾದನೆ ಕಮಲಾ ಅವರ ಪ್ರಮುಖ ಸಂಪಾದನ ಕಾರ್ಯಗಳು.

ರಾಜ್ಯೋತ್ಸವ ಪ್ರಶಸ್ತಿ , ಅನುಪಮಾ ನಿರಂಜನ ಪ್ರಶಸ್ತಿ , ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಬಾಬಾ ಆಮ್ಟೆ ರಾಷ್ಟ್ರೀಯ ಪ್ರಶಸ್ತಿಗಳು ಅವರಿಗೆ ಸಂದ ಪ್ರಮುಖ ಪ್ರಶಸ್ತಿಗಳು.

71 ನೇ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಮೂಡಬಿದರೆ ಜೈನಕೇಂದ್ರವಾಗಿ ಪ್ರಸಿದ್ಧವಾದುದು. ಈ ಹಿನ್ನೆಲೆಯಲ್ಲಿ , ಜೈನ ಸಾಹಿತ್ಯದ ವಿದ್ಯಾರ್ಥಿನಿ ಕಮಲಾ ಹಂಪನಾ ಅವರು ಮೂಡಬಿದರೆ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಔಚಿತ್ಯಪೂರ್ಣ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+