ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರೆತೇನಂದಾರ ಮರೆಯಲಿ ಹ್ಯಾಂಗ.. ಕಾರಂತರನ್ನ- ಕಂಬಾರ

By Staff
|
Google Oneindia Kannada News
ಬಿ.ವಿ. ಕಾರಂತರು ರಂಗಭೂಮಿ ಮತ್ತು ತಮ್ಮ ಅಸಂಖ್ಯಾತ ಅಭಿಮಾನಿಗಳನ್ನಗಲಿ ಸುಮಾರು ಒಂದು ವರ್ಷವಾದರೂ ಅವರ ಕೆಲಸವನ್ನು ನೆನಪಿಸುವಂತಹ ಯಾವುದೇ ಕಾರ್ಯಕ್ರಮ ಜರುಗಲಿಲ್ಲ ಎಂಬ ಬೇಸರ ಅವರ ಅನೇಕ ಅಭಿಮಾನಿಗಳಲ್ಲಿತ್ತು. ಈ ಒಂದು ವರ್ಷದಲ್ಲಿ ಅವರ ಅನೇಕ ಶ್ರದ್ಧಾಂಜಲಿ ಸಭೆಗಳು, ರಂಗಭೂಮಿಗೆ ಅವರ ಕೊಡುಗೆ, ಅವರಿಲ್ಲದ ರಂಗಭೂಮಿಯ ಬಗ್ಗೆ ಅನೇಕ ಭಾಷಣಗಳು ನಡೆದರೂ ಅವರ ಸಂಗೀತದ, ನಿರ್ದೇಶನದ ನಾಟಕಗಳು ಹೆಚ್ಚಾಗಿ ಪ್ರದರ್ಶನ ಕಾಣಲಿಲ್ಲ. ಸೆಪ್ಟಂಬರ್‌ 11, ಗುರುವಾರದಂದು ಕಾರಂತರ 75ನೇ ಜನ್ಮದಿನದ ಅಂಗವಾಗಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯ, ತಂಜಾವೂರು ದಕ್ಷಿಣ ಭಾರತ ಸಾಂಸ್ಕೃತಿಕ ಕೇಂದ್ರ, ರಾಷ್ಟ್ರೀಯ ನಾಟಕ ಶಾಲೆ ಮತ್ತು ಕಾರಂತ ಪ್ರತಿಷ್ಠಾನ ಜಂಟಿಯಾಗಿ 4 ದಿನಗಳ ಬಿ.ವಿ. ಕಾರಂತ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮ ಆಯೋಜಿಸಿದೆ.

Chandrashekhara Kambaraನಾಟಕೋತ್ಸವ ಉದ್ಘಾಟಿಸಲು ಕಾರಂತರ ಹಳೆಯ ಮಿತ್ರ ಹಾಗೂ ನಾಟಕಕಾರ ಡಾ. ಚಂದ್ರಶೇಖರ ಕಂಬಾರ ಬಂದಿದ್ದರು. ಅವರ ಜತೆಗೆ ಖ್ಯಾತ ಕಲಾವಿದ ಎಸ್‌.ಜಿ. ವಾಸುದೇವ್‌, ಪ್ರೇಮ ಕಾರಂತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವೈ.ಕೆ. ಮುದ್ದುಕೃಷ್ಣ, ರಾಷ್ಟ್ರೀಯ ನಾಟಕ ಶಾಲೆಯ ಪ್ರಾದೇಶಿಕ ಸಂಪನ್ಮೂಲ ಕೇಂದ್ರದ ಸುರೇಶ್‌ ಆನಗಳ್ಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರಂತರ ಒಡನಾಡಿಗಳು, ಜತೆಗಾರರೂ, ರಂಗಕರ್ಮಿಗಳೂ ಆದ ಬಿ.ಜಯಶ್ರೀ, ಸಿ.ಆರ್‌. ಸಿಂಹ, ಟಿ.ಎಸ್‌. ನಾಗಾಭರಣ, ಅರುಂಧತಿ ನಾಗ್‌, ವೈಶಾಲಿ ಕಾಸರವಳ್ಳಿ ಮುಂತಾದವರು ಕಲಾಕ್ಷೇತ್ರದಲ್ಲಿ ಕೂತಿದ್ದರು.

ನಗಾರಿ ಬಾರಿಸುವುದರ ಮೂಲಕ ಕಂಬಾರರು 4 ದಿನದ ಕಾರ್ಯಕ್ರಮಗಳ ಉದ್ಘಾಟನೆ ಮಾಡಿದರು. ಕಾರಂತರು ದೇಶ ವಿದೇಶಗಳಿಂದ ಸಂಗ್ರಹಿಸಿದ ನಾಟಕ ಮತ್ತು ಸಂಗೀತದ ಕುರಿತಾದ ಅನೇಕ ಪುಸ್ತಕಗಳು, ವಾದ್ಯಗಳು ಮತ್ತು ಛಾಯಾಚಿತ್ರಗಳ ಕುರಿತಾದ ಸಾಕ್ಷ್ಯಚಿತ್ರವನ್ನು ಎಸ್‌.ಜಿ. ವಾಸುದೇವ್‌ ಬಿಡುಗಡೆ ಮಾಡಿದರು.

Benaka team performing Jokumara Swamyರೋಬೋಟ್‌ಗಳು ನಟಿಸುತ್ತಿವೆ : ನಂತರ ಮಾತನಾಡಿದ ಡಾ. ಚಂದ್ರಶೇಖರ ಕಂಬಾರ, ಎಲ್ಲಿಯ ತನಕ ನಟ ಜೀವಂತವಾಗಿರುತ್ತಾನೋ ಅಲ್ಲಿಯವರೆಗೂ ರಂಗಭೂಮಿ ಜೀವಂತವಾಗಿರುತ್ತದೆ ಎಂದು ಕಾರಂತರು ಹಿಂದೆ ಹೇಳಿದ್ದನ್ನು ನೆನಪಿಸಿಕೊಂಡರು. ಪಾಶ್ಚಿಮಾತ್ಯ ದೇಶಗಳಲ್ಲಿ ರೋಬೋಟ್‌ಗಳು ಹೆಚ್ಚಾಗಿ ನಟಿಸುತ್ತಿರುವುದರಿಂದ ಅಲ್ಲಿ ನಟನೆ ಕಲೆಯಾಗುವುದಿಲ್ಲ, ಬದಲಾಗಿ ವಿಜ್ಞಾನವಾಗುತ್ತಿದೆ ಎಂದು ಕಂಬಾರರು ವಿಷಾದಿಸಿದರು.

ರಂಗಚಿಂತೆಯ ಜಂಗಮ ಕಾರಂತ : ಕಾರಂತರು ದಿನದ 24 ಘಂಟೆಗಳೂ ನಾಟಕದ ಬಗ್ಗೆ ಯೋಚಿಸುತ್ತಿದ್ದರು. ನಾವಿಬ್ಬರು ಜತೆಗೆ ಸೇರಿದಾಗ ವೈಯಕ್ತಿಕ ವಿಷಯಗಳಿಗಿಂತ ನಾಟಕದ ಬಗ್ಗೆ ಮಾತನಾಡಿದ್ದೇ ಹೆಚ್ಚು. ರಂಗಭೂಮಿಯಲ್ಲಿ ತಾವು ಬೆಳೆಯುವುದಲ್ಲದೆ, ರಂಗಭೂಮಿಯ ಇತರೆ ಆಯಮಾಗಳಲ್ಲಿ ಜತೆಗಾರರನ್ನು ಅವರು ಬೆಳಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಅನೇಕ ಟೀವಿ ಚಾನೆಲ್‌ಗಳು ಕನ್ನಡಕ್ಕೆ ಲಗ್ಗೆಯಿಟ್ಟಾಗ, ರಂಗಭೂಮಿಯ ಸ್ಥಿತಿಯ ಬಗ್ಗೆ ನಮಗೆಲ್ಲ ಆತಂಕ ಹುಟ್ಟಿತು. ಈ ಬಗ್ಗೆ ನಾವೆಲ್ಲಾ ಯೋಚಿಸುತ್ತಿರಬೇಕಾದರೆ, ಕಾರಂತರು ಮಾತ್ರ ರಂಗಭೂಮಿಗೆ ಯಾವಾಗಲೂ ಸತ್ವ ಇದ್ದೇ ಇದೆ. ಆದರೆ ಅದನ್ನು ಉಳಿಸುವುದಕ್ಕೆ ನಿಮಗೆ ಶಕ್ತಿಯಿಲ್ಲ ಎನ್ನುತ್ತಿದ್ದರು ಎಂದು ಕಂಬಾರರು ನೆನಪಿಸಿಕೊಂಡರು.

ಕಾರಂತರ ರಂಗಭೂಮಿಯ ಜೀವನ ಯಾವಾಗಲೂ ಯಶಸ್ವಿಯಾಗಿರಲಿಲ್ಲ. ಅವರು ನನ್ನ ‘ಆಲೀಬಾಬಾ’ ನಾಟಕವನ್ನು ಜೈಲಿನಲ್ಲಿದ್ದಾಗ ಅನುವಾದ ಮಾಡಿದರು. ಸೋತರೂ ಪರವಾಗಿಲ್ಲ ಮತ್ತೊಮ್ಮೆ ಪ್ರಯತ್ನಿಸೋಣ ಎಂದು ಮುನ್ನುಗ್ಗುವ ಪ್ರವೃತ್ತಿ ಅವರದ್ದು. ನಾಟಕದ ಪ್ರತಿ ಪ್ರಯೋಗದಲ್ಲೂ ಹೊಸ ಹೊಸ ಬದಲಾವಣೆ ಮಾಡುತ್ತಿದ್ದರು. ಬೆಂಗಳೂರಿನ ತುಂಬಾ ಅವರು ಬೆಳೆಸಿದ ಹುಡುಗರು ಇದ್ದಾರೆ. ಅವರ ನೆನಪು ಸದಾ ನಮ್ಮನ್ನು ಕಾಡುತ್ತಾ ಮುಂದುವರಿಯುತ್ತದೆ. ಪ್ರತಿವರ್ಷ ಅವರ ಹೆಸರಿನಲ್ಲಿ ರಂಗಭೂಮಿಯ ಚಿಂತನೆಯಾಗುವಂತಾಗಬೇಕು ಎಂದು ಹೇಳಿದರು.

ಕಾರಂತರ ವಸ್ತು ಸಂಗ್ರಹ ಕಾಪಾಡಿ : ಖ್ಯಾತ ಚಿತ್ರಕಾರ ಎಸ್‌.ಜಿ. ವಾಸುದೇವ್‌ ಮಾತನಾಡಿ, ನನ್ನ ಕಲೆಗೆ ಅವರ ಪ್ರೋತ್ಸಾಹವೇ ಕಾರಣ. ಅವರ ಜತೆ ‘ವಂಶವೃಕ್ಷ ’ ಮತ್ತು ‘ಹಯವದನ’ ನಾಟಕಗದಲ್ಲಿ ಕಲಾ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ನನ್ನ ಕೆಲಸಗಳಲ್ಲಿ ಅವರ ಚಿತ್ರಣ ಕಾಣಿಸುತ್ತದೆ. ಅವರು ಸಂಗ್ರಹಿಸಿರುವ ಅಪರೂಪದ ವಸ್ತುಗಳನ್ನು ಸರ್ಕಾರ ಕಾಪಾಡಬೇಕು ಎಂದು ಕರೆ ಕೊಟ್ಟರು.

ಬೆನಕ ತಂಡ ಕಾರಂತರಿಗೆ ಬಹಳ ಇಷ್ಟವಾದ ಗೀತೆ ‘ಗೋವಿಂದ ಮುರಹರ ಗೋವಿಂದ’ ಹಾಡನ್ನು ಹಾಡಿದರು. ಕೊನೆಗೆ ಬೆನಕ ತಂಡದವರೇ ಕಂಬಾರರ ರಚನೆಯ, ಕಾರಂತರ ನಿರ್ದೇಶನದ ‘ಜೋಕುಮಾರಸ್ವಾಮಿ’ ನಾಟಕವನ್ನು ಪ್ರದರ್ಶಿಸಿದರು.

ಸೆಪ್ಟೆಂಬರ್‌ 14ರವರೆಗೆ ನಾಟಕೋತ್ಸವ ನಡೆಯಲಿದ್ದು, ಕಾರಂತರು ನಿರ್ದೇಶಿಸಿದ ‘ಹಯವದನ’, ‘ಚಂಡಿಪ್ರಿಯ’, ‘ಬಾಬೂಜಿ’ ನಾಟಕಗಳು ಪ್ರದರ್ಶಿತವಾಗಲಿವೆ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X