‘ಬ್ರಾಹ್ಮಣ ಮಠಗಳಿಗೆ ಚಿನ್ನದ ರಥದಲ್ಲೇ ಆಸಕ್ತಿ .. ’
ಬೆಳಗಾವಿ : 'ಧರ್ಮ ಪ್ರಸಾರವನ್ನೇ ಮುಖ್ಯವಾಗಿರಿಸಿಕೊಂಡ ಬ್ರಾಹ್ಮಣ ಮಠಗಳು ಕನ್ನಡ ಸಾಹಿತ್ಯಕ್ಕೆ ಯಾವುದೇ ಕೊಡುಗೆಯನ್ನೂ ನೀಡಿಲ್ಲ ’ ಎಂದು ಡಾ.ಎಚ್.ಚಂದ್ರಶೇಖರ ಹೇಳಿದ್ದಾರೆ.
ಲಿಂಗಾಯತ ಹಾಗೂ ಜೈನ ಮಠಗಳು ಕನ್ನಡ ಸಾಹಿತ್ಯಕ್ಕೆ ಮೌಲಿಕ ಕೊಡುಗೆಯನ್ನು ನೀಡಿವೆ. ಆದರೆ, ಬ್ರಾಹ್ಮಣ ಮಠಗಳು ಕನ್ನಡ ಸಾರಸ್ವತ ಲೋಕಕ್ಕೆ ಯಾವ ಕೊಡುಗೆಯನ್ನೂ ನೀಡಿಲ್ಲ ಎಂದು ಡಾ.ಚಂದ್ರಶೇಖರ ಆಪಾದಿಸಿದರು. 'ಕನ್ನಡ ಸಂಸ್ಕೃತಿ ಹಾಗೂ ಸಾಹಿತ್ಯದ ಪೋಷಣೆಯಲ್ಲಿ ಮಠಮಾನ್ಯಗಳ ಪಾತ್ರ’ ಕುರಿತು ಶುಕ್ರವಾರ ನಡೆದ ಸಾಹಿತ್ಯ ಸಮ್ಮೇಳನದ ಸಂವಾದ ಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಯಾವ ಪುರುಷಾರ್ಥಕ್ಕೆ ಚಿನ್ನದ ರಥ ?
ಬ್ರಾಹ್ಮಣ ಮಠಗಳು ಸಂಸ್ಕೃತವನ್ನು ದೇವಭಾಷೆಯಾಗಿ ಪರಿಗಣಿಸಿ ಕನ್ನಡವನ್ನು ಶೂದ್ರ ಭಾಷೆಯಾಗಿ ಕಂಡವು. ಈ ಮಠಗಳು ಕನ್ನಡದ ಕೆಲಸವನ್ನೂ ಮಾಡಲಿಲ್ಲ , ದಾಸ ಸಾಹಿತ್ಯದ ಪ್ರಚಾರದಲ್ಲೂ ತೊಡಗಲಿಲ್ಲ . ಚಿನ್ನದ ರಥ ಹಾಗೂ ಪಲ್ಲಕ್ಕಿ ಮಾಡಿಸುವುದರಲ್ಲಿ ಉತ್ಸಾಹ ತೋರಿದ ಶೃಂಗೇರಿಯಂಥ ಮಠಗಳು ಮನಸ್ಸು ಮಾಡಿದರೆ ಕನ್ನಡ ಸಾಹಿತ್ಯಕ್ಕೆ ಮೌಲಿಕ ಕೊಡುಗೆ ನೀಡಬಹುದಿತ್ತು ಎಂದು ಚಂದ್ರಶೇಖರ್ ಹೇಳಿದರು.
ಮುಸ್ಲಿಂ ಮಠಗಳು ಎಂದು ಕರೆಯಬಹುದಾದ ಮಸೀದಿಗಳು ಕೂಡ ಕನ್ನಡ ಸಾರಸ್ವತ ಲೋಕಕ್ಕೆ ಯಾವುದೇ ಕೊಡುಗೆ ನೀಡಿಲ್ಲ . ಆದರೆ, ಕ್ರೆೃಸ್ತ ಮಿಷನರಿಗಳು ಕನ್ನಡಕ್ಕೆ ಅನನ್ಯವಾದ ಕೊಡುಗೆ ಸಲ್ಲಿಸಿದ್ದಾರೆ ಎಂದು ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಮಠಗಳಿಗೆ ಬೇಕು ಸಾಮಾಜಿಕ ಬದ್ಧತೆ :
ರಾಜಕೀಯ ಶಕ್ತಿಯನ್ನು ಮೆರೆಯುವುದರ ಬದಲು ನಮ್ಮ ಮಠಗಳು ಸಾಮಾಜಿಕ ಬದ್ಧತೆಯನ್ನು ಮೆರೆಯುವಂತಾಗಬೇಕು ಎಂದು ಡಾ.ಎಸ್.ವಿದ್ಯಾಶಂಕರ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಆಶಿಸಿದರು.
ನರಹಂತಕ ವೀರಪ್ಪನ್‌ನಿಂದ ಮಾಜಿ ಸಚಿವ ಎಚ್.ನಾಗಪ್ಪನವರ ಅಪಹರಣ-ಹತ್ಯೆಯ ಸಂದರ್ಭದಲ್ಲಿ ಮಠಗಳು ಒಗ್ಗೂಡಿ ಸರ್ಕಾರದ ಮೇಲೆ ಒತ್ತಡ ಹೇರಿದವು. ಕೆಲವು ವಿಷಯಗಳಲ್ಲಿ ಮಠಗಳು ಒತ್ತಾಯಕ್ಕೊಳಗಾಗಿ ನಿರ್ಧಾರ ತೆಗೆದುಕೊಳ್ಳುತ್ತಿವೆ ಎಂದು ವಿದ್ಯಾಶಂಕರ ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ 1300 ಮಠಗಳಿದ್ದು ಅವು ಸಮಾಜದ ಉದ್ಧಾರ ಹಾಗೂ ಶಿಕ್ಷಣ ಪ್ರಸಾರದಲ್ಲಿ ತೊಡಗಿವೆ ಎಂದು ಚಂದ್ರಶೇಖರ ನಾರಣಾಪುರ ಹೇಳಿದರು. ಡಾ.ಡಿ.ಎನ್.ಯೋಗೀಶ್, ಡಾ.ಆರ್.ಓಬಳೇಶ ಘಟ್ಟಿ ಸಂವಾದದಲ್ಲಿ ಮಾತನಾಡಿದರು.












Click it and Unblock the Notifications