KSRTC Employees: ಸಾರಿಗೆ ನೌಕರರ ಮೇಲೆ 'ನಕಲಿ ಕಾಳಜಿ ಬೇಡ': ರಾಮಲಿಂಗಾ ರೆಡ್ಡಿ
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ 'ಶಕ್ತಿ ಯೋಜನೆ'ಯಿಂದ ನಾಲ್ಕು ಸಾರಿಗೆ ನಿಗಮಗಳು ಸಂಕಷ್ಟದಲ್ಲಿವೆ ಎಂಬ ಆರೋಪ ಕೇಳಿ ಬಂದಿವೆ. ಈ ಬಗ್ಗೆ ದೂರಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಖಡಕ್ ತಿರುಗೇಟು ಕೊಟ್ಟಿದ್ದಾರೆ. ಅಧಿಕಾರದ ಅಮಲಿನಲ್ಲಿ ನೌಕರರ ಹೊಟ್ಟೆಯ ಮೇಲೆ ಹೊಡೆದ ಬಿಜೆಪಿಯವರು, ಇಂದು ಯಾವ ಮುಖ ಇಟ್ಟುಕೊಂಡು ಉಪದೇಶ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
ಬುಧವಾರ ಎಕ್ಸ್ ಪೋಸ್ಟ್ ಮಾಡಿರುವ ಸಚಿವರು, ಸಾರಿಗೆ ನೌಕರರ ಮೇಲಿನ ನಿಮ್ಮ ಈ ನಕಲಿ ಕಾಳಜಿಯ ಮುಖವಾಡವನ್ನು ಕಳಚಿಡಿ. ನಿಮಗೆ ವಿಷಯದ ಅರಿವಿಲ್ಲ, ಕೇವಲ ಪ್ರಚಾರದ ಹಪಾಹಪಿ ಮಾತ್ರ ಇದೆ. ನಿಮ್ಮ ಅವಧಿಯಲ್ಲಿ ಒಂದು ತಿಂಗಳ ಕಾಲ ಸಾರಿಗೆ ನೌಕರರ ಮುಷ್ಕರ ನಡೆಯುವಂತೆ ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದು ಹೇಳಿದರು.

ಸಾರಿಗೆ ಸಂಸ್ಥೆ ಇವತ್ತು ಈ ಸ್ಥಿತಿಗೆ ತಲುಪಲು ನಿಮ್ಮ ಪೂಜ್ಯ ತಂದೆ ಬಿ.ಎಸ್.ಯಡಿಯರೂಪ್ಪ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರ ಕಾಲದ ಅದಕ್ಷ ಆಡಳಿತವೇ ನೇರ ಕಾರಣ. ನಿಮ್ಮ ಹಳೆಯ ಪಾಪದ ರಾಶಿಯನ್ನು ನಾವೇ ಪದೇ ಪದೇ ಅಗೆದು ತೆಗೆಯಬೇಕಾಗಿರುವುದು ಈ ರಾಜ್ಯದ ಅತಿದೊಡ್ಡ ದುರಂತ ಎಂದು ತರಾಟೆಗೆ ತೆಗೆದುಕೊಂಡರು.
ಇನ್ನು ಮುಂದೆಯಾದರೂ ಜನರನ್ನು ದಾರಿ ತಪ್ಪಿಸುವ ಈ ಪೊಳ್ಳು ಹಾರಾಟಗಳನ್ನು ನಿಲ್ಲಿಸಿ, ನಿಮ್ಮ ಕಾಲದ ಅಧಃಪತನಕ್ಕೆ ಮೊದಲು ಉತ್ತರ ಕೊಡಿ ಎಂದು ಸಚಿವರು ಒಂದಷ್ಟು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಬಿಜೆಪಿ ಕಾರ್ಯಗಳ ಪಟ್ಟಿ ಬಿಚ್ಚಿಟ್ಟಿದ್ದಾರೆ.
ಬಿಜೆಪಿ ಇದ್ದಾಗ 1 ತಿಂಗಳು ಸಾರಿಗೆ ಮುಷ್ಕರ
* ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ 15 ದಿವಸಗಳ ಕಾಲ ಮುಷ್ಕರ ಮಾಡಿಸಿ, ತಿಂಗಳು ಕಾಲ ಮುಷ್ಕರ ಮಾಡುವುದಕ್ಕೆ ಅಡಿಪಾಯ ಹಾಕಿ ಕೊಟ್ಟಿರುವ ಕೀರ್ತಿ ನಿಮಗೆ ಸಲ್ಲಬೇಕು.
* ನಿಮ್ಮ ಅವಧಿಯಲ್ಲಿ ಎರಡೆರಡು ಬಾರಿ ಮುಷ್ಕರ ನಡೆದಿರುವುದು ದಾಖಲೆ.
* ಮುಷ್ಕರದ ಹೆಸರಿನಲ್ಲಿ ಸಾವಿರಾರು ಸಂಖ್ಯೆ ನೌಕರರನ್ನು ಅಂದಾಜು 3500 ಕೆಲಸದಿಂದ ವಜಾ, ಅಮಾನತು ಮಾಡಿ FIR ಹಾಕಿಸಿದ್ದೀರಿ. ಇಂದಿಗೂ ಕೋರ್ಟ್ ಕಛೇರಿ ಅಲೆಯುತ್ತಿರುವ ಬಗ್ಗೆ ಮಾಹಿತಿ ಪಡೆಯಿರಿ.
* ನಿಮ್ಮ ಆಡಳಿತದ ಅವಧಿಯಲ್ಲಿ ತಿಂಗಳಿಗೆ ಸರಿಯಾಗಿ ವೇತನ ಪಾವತಿ ಮಾಡದೆ ಈ ತಿಂಗಳ ಸಂಬಂಳ ಮುಂದಿನ ತಿಂಗಳು, ಇಲ್ಲವೇ ಅರ್ಧ ಸಂಬಳ ನೀಡುತ್ತಿದ್ದದ್ದು ದಾಖಲೆ ಬೇಕೆ?
* ವೇತನ ಪರಿಷ್ಕರಣೆ ಮಾಡಿ ಹಣ ಪಾವತಿ ಮಾಡದೆ ಬಾಕಿ ಇಟ್ಟು ಹೋಗಿದ್ದೀರಲ್ಲ, ಇದರ ಭಾಗವೇ ಈಗಿನ ಮುಷ್ಕರದ ಕೂಗು.
* 2020 ರಲ್ಲಿ ಆಗಬೇಕಾಗಿದ್ದ ವೇತನ ಪರಿಷ್ಕರಣೆಯನ್ನು 2023 ರ ಮಾರ್ಚ್ ನಲ್ಲಿ ಅಂದರೆ 38 ತಿಂಗಳುಗಳ ನಂತರ ಮಾಡಿದ್ದು, ತಡವಲ್ಲವೇ? ಈಗ ತಾವು ವೇತನ ಪರಿಷ್ಕರಣೆ ತಡವಾಗಿರುವ ಬಗ್ಗೆ ಮಾತನಾಡುವುದಕ್ಕೆ ಯಾವ ನೈತಿಕತೆಯಿದೆ.
* ವೇತನ ಪರಿಷ್ಕರಣೆ ಘೋಷಿಸಿ ಯಾವುದೇ ಅನುದಾನವನ್ನು ನೀಡದೆ, ನಿವೃತ್ತಿ ನೌಕರರ ಹಿಂಬಾಕಿಯನ್ನು ನಮ್ಮ ಆಡಳಿತದ ಅವಧಿಯಲ್ಲಿ ಪಾವತಿ ಮಾಡಿದ್ದೇವೆ.
* 2019-2023ರ ಅವಧಿಯಲ್ಲಿ ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಸಮರ್ಪಕವಾಗಿ ಹೊಸ ಬಸ್ಸುಗಳ ಸೇರ್ಪಡೆಯಾಗದೆ ಮತ್ತು ಹೊಸ ನೇಮಕಾತಿ ಕೂಡ ಸ್ಥಗಿತವಾಗಿತ್ತು.
ಕಾಂಗ್ರೆಸ್ ಸರ್ಕಾರ ಮಾಡಿರುವ ಕೆಲಸಗಳು
* ಶೂನ್ಯ ನೇಮಕಾತಿಯಿಂದ- 10471 ನೇಮಕಾತಿ ಆಗಿದೆ.
* ಶೂನ್ಯ ಬಸ್ಸುಗಳ ಸೇರ್ಪಡೆಯಿಂದ - 7800 ಹೊಸ ಬಸ್ಸುಗಳ ಸೇರ್ಪಡೆ
* ಹೊಸ ಘಟಕ/ ಬಸ್ ನಿಲ್ದಾಣಗಳ ನಿರ್ಮಾಣ
* 4183 ಹಳೆಯ ಬಸ್ಸುಗಳ ನಿಷ್ಕ್ರಿಯ
* 2109 ಬಸ್ಸುಗಳ ಪುನಶ್ಚೇತನ ಕಾರ್ಯ
* ನಿವೃತ್ತ ಸಿಬ್ಬಂದಿಗಳ ಬಾಕಿ ಹಣ ರೂ 223 ಕೋಟಿ ಪಾವತಿ
* 2019-2023ರ ಅವಧಿಯಲ್ಲಿನ ರೂ.4900 ಕೋಟಿ ಬಾಕಿ ಉಳಿಸಿರುವ ಹೊಣೆಗಾರಿಕೆ ಮೊತ್ತದಲ್ಲಿ, ನೌಕರರ ಭವಿಷ್ಯ ನಿಧಿ ಮತ್ತು ಡೀಸೆಲ್ ಬಾಕಿ ಪಾವತಿಗಾಗಿ ನಮ್ಮ ಸರ್ಕಾರವು ಬ್ಯಾಂಕ್‌ನಿಂದ ರೂ.2000 ಕೋಟಿ ಸಾಲವನ್ನು ಪಡೆಯಲು ಸಾರಿಗೆ ಸಂಸ್ಥೆಗಳಿಗೆ ಅನುಮತಿಸಿದೆ. ಈ ಸಾಲದ ಅಸಲು ಮತ್ತು ಬಡ್ಡಿಯನ್ನು ನಮ್ಮ ಸರ್ಕಾರವು ಪಾವತಿಸುತ್ತಿದೆ.
* ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳ ಕ್ಲಿಷ್ಟಕರ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಳೆದ 2 ವರ್ಷಗಳಲ್ಲಿ ಸಂಸ್ಥೆಗಳು ಪಾವತಿಸಬೇಕಾಗಿದ್ದ ಮೋಟಾರು ವಾಹನ ತೆರಿಗೆ ಮೊತ್ತ ರೂ.1219.23 ಕೋಟಿ ಗೆ ವಿನಾಯಿತಿ ನೀಡಲಾಗಿದೆ. ಬೇಕಿದ್ದರೆ ಇನ್ನಷ್ಟು ಮಾಹಿತಿ ನೀಡುವೆ ಎಂದು ಬಿಜೆಪಿ ಆಡಳಿತ ಬಗ್ಗೆ, ಇಂದು ಆರೋಪಿಸುತ್ತಿರುವ ಬಗ್ಗೆ ಅವರು ಲೇವಡಿ ಮಾಡಿದ್ದಾರೆ.














Click it and Unblock the Notifications