ರಾತ್ರಿ ಮಲಗುವ ಮುನ್ನ ಉಗುರು ಬೆಚ್ಚಗಿನ ನೀರಿಗೆ ಚಿಟಿಕೆ ಓಮಕಾಳು, ಇಂಗು ಬೆರೆಸಿ ಸೇವಿಸಿದರೆ ಈ 5 ಸಮಸ್ಯೆಗಳಿಂದ ಸಿಗುವುದು ಮುಕ್ತಿ
ನಮಗೆ ದೇಹಕ್ಕೆ ಎದುರಾಗುವ ಪ್ರತಿ ಸಮಸ್ಯೆಗೂ ವೈದ್ಯರ ಬಳಿ ಹೋಗಲೇಬೇಕು, ಮಾತ್ರೆ ಸಿರಪ್ ಕುಡಿಯಲೇ ಬೇಕು ಎಂದೇನಿಲ್ಲ. ನಮ್ಮ ಅನೇಕ ಆರೋಗ್ಯ ಸಮಸ್ಯೆಗಳಿಗೆ ಅಡುಗೆಮನೆಯಲ್ಲಯೇ ಪರಿಹಾರ ಇರುತ್ತದೆ. ನಾವು ನಿತ್ಯ ಅಡುಗೆಗೆ ಬಳಸುವ ಮಸಾಲೆ ಪದಾರ್ಥಗಳೇ ಔಷಧಿಯಾಗಿ ಕೆಲಸ ಮಾಡುತ್ತದೆ. ಇಂಥಹ ಗಿಡಮೂಲಿಕೆ ಅಥವಾ ಮನೆ ಮದ್ದಿನಲ್ಲಿ ಇಂಗು ಮತ್ತು ಓಮ ಕಾಳು ಸೇರಿವೆ. ಮಲಗುವ ಮುನ್ನ ಉಗುರು ಬೆಚ್ಚಗಿನ ನೀರಿಗೆ ಇಂಗು ಮತ್ತು ಓಮಕಾಳಿನ ಪುಡಿಯನ್ನು ಸೇವಿಸುವುದರಿಂದ ಉದರಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನಿವಾರಣೆಯಾಗುವುದು. ಅವುಗಳಲ್ಲಿ ಮುಖ್ಯವಾದವು ಹೊಟ್ಟೆ ನೋವು, ಅಜೀರ್ಣ ಮತ್ತು ಮಲಬದ್ಧತೆ.
ಓಮಕಾಳಿನಲ್ಲಿ ಕಂಡುಬರುವ ಥೈಮೋಲ್ ಎಂಬ ಸಂಯುಕ್ತವು ಜೀರ್ಣಕಾರಿ ಕಿಣ್ವಗಳನ್ನು ಸಕ್ರಿಯಗೊಳಿಸುತ್ತದೆ. ಈ ಮೂಲಕ ಜೀರ್ಣಕ್ರಿಯೆ ಹೆಚ್ಚಾಗುವುದು. ಇಂಗು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಹೊಟ್ಟೆಯ ಗ್ಯಾಸ್ ಮತ್ತು ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಿಸಿ ನೀರಿಗೆ ಇಂಗು ಮತ್ತು ಓಮಕಾಳು ಸೇರಿಸಿ ಕುಡಿಯುವುದರಿಂದ ಅನೇಕ ಪ್ರಯೋಜನವನ್ನು ಪಡೆಯಬಹುದು.

ಹೊಟ್ಟೆ ನೋವು ಮತ್ತು ಗ್ಯಾಸ್ ನಿಂದ ಪರಿಹಾರ:
ಮಲಗುವ ಮುನ್ನ ಬಿಸಿ ನೀರಿಗೆ ಓಮಕಾಳು ಮತ್ತು ಇಂಗು ಬೆರೆಸಿ. ಇದು ಹೊಟ್ಟೆ ನೋವು ಮತ್ತು ಗ್ಯಾಸ್ ಸಮಸ್ಯೆಯಿಂದ ಪರಿಹಾರ ನೀಡುತ್ತದೆ. ಓಮಕಾಳು ಮತ್ತು ಇಂಗು ಬೆರೆಸಿದ ನೀರನ್ನು ಸೇವಿಸುವುದರಿಂದ ಹೊಟ್ಟೆ ಉಬ್ಬರ ಸಮಸ್ಯೆ ನಿವಾರಣೆಯಾಗುತ್ತದೆ.
ಅಜೀರ್ಣ ಸಮಸ್ಯೆಗಳು:
ಓಮಕಾಳು ಮತ್ತು ಇಂಗನ್ನು ಬಿಸಿ ನೀರಿನಲ್ಲಿ ಬೆರೆಸಿ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ . ಈ ಮಿಶ್ರಣವನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿನ ಕಿಣ್ವಗಳ ಚಟುವಟಿಕೆ ಸುಧಾರಣೆಯಾಗುತ್ತದೆ.ಇದು ಆಹಾರವನ್ನು ಸುಲಭವಾಗಿ ಒಡೆಯಲು ಸಹಾಯ ಮಾಡುತ್ತದೆ. ಹೀಗಾದಾಗ ನಮ್ಮ ದೇಹಕ್ಕೆ ಉತ್ತಮ ಪೋಷಕಾಂಶ ಸಿಗುತ್ತದೆ. ಇದು ಅಜೀರ್ಣವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಹೊಟ್ಟೆ ಉಬ್ಬರ ಸಮಸ್ಯೆಗೂ ಪರಿಹಾರ:
ಓಮಕಾಳು ಮತ್ತು ಇಂಗಿನ ಮಿಶ್ರಣವನ್ನು ಸೇವಿಸುವುದರಿಂದ ಗ್ಯಾಸ್ ಮತ್ತು ಹೊಟ್ಟೆ ಉಬ್ಬರದ ಸಮಸ್ಯೆ ಕಡಿಮೆಯಾಗುತ್ತದೆ. ಹುರಿದ, ಕರಿದ ಅಥವಾ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಹೊಟ್ಟೆ ಉಬ್ಬರ ಸಮಸ್ಯೆ ಉಂಟಾಗುತ್ತದೆ. ಅಂಥಹ ಸಂದರ್ಭಗಳಲ್ಲಿ, ಇಂಗು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು. ಇಂಗಿನಲ್ಲಿರುವ ಅಂಶಗಳು ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ. ಹೊಟ್ಟೆಯ ಕೊಬ್ಬು ಕರಗುವುದಕ್ಕೂ ಇದು ಸಹಾಯ ಮಾಡುತ್ತದೆ.
ಮಲಬದ್ಧತೆಯಿಂದ ಪರಿಹಾರ:
ಬೆಳಿಗ್ಗೆ ಮಲವಿಸರ್ಜನೆ ಸರಿಯಾಗಿ ಆಗದೇ ಇದ್ದಾಗ ಮಲಬದ್ಧತೆ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆ ನಿವಾರಣೆಗೆ ಮಲಗುವ ಮುನ್ನ ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ಇಂಗು ಮತ್ತು ಓಮಕಾಳಿನ ಬೀಜಗಳನ್ನು ಸೇರಿಸಿ ಕುಡಿದರೆ ಪರಿಹಾರ ಸಿಗುವುದು. ಓಮಕಾಳು ಮತ್ತು ಇಂಗು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಈ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಮಲಬದ್ಧತೆಯನ್ನು ಗಮನಾರ್ಹವಾಗಿ ತಡೆಯಬಹುದು.
ಎದೆಯುರಿ ಮತ್ತು ಆಸಿಡಿಟಿ:
ಅನೇಕರಿಗೆ ರಾತ್ರಿಯ ಹೊತ್ತಿನಲ್ಲಿ ಆಸಿಡಿಟಿ ಸಮಸ್ಯೆ ಕಾಡುತ್ತದೆ. ಇದು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಅಂಥಹ ಸಂದರ್ಭಗಳಲ್ಲಿ ಓಮಕಾಳು ಮತ್ತು ಇಂಗಿನ ಮಿಶ್ರಣವು ಆಸಿಡಿಟಿ ನಿವಾರಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಈ ಮೂಲಕ ಎದೆಯುರಿ ಸಮಸ್ಯೆಗೂ ಪರಿಹಾರ ಸಿಗುತ್ತದೆ.
ಇಂಗು ಮತ್ತು ಓಮಕಾಳನ್ನು ಒಟ್ಟಿಗೆ ಸೇವಿಸುವುದು ಹೇಗೆ?:
ರಾತ್ರಿ ಮಲಗುವ ಮುನ್ನ ಇಂಗು ಮತ್ತು ಓಮಕಾಳನ್ನು ಸೇವಿಸುವುದು ತುಂಬಾ ಪ್ರಯೋಜನಕಾರಿ. ಇದನ್ನು ಸೇವಿಸುವುದು ಕೂಡ ತುಂಬಾ ಸುಲಭ. ಮೊದಲು, ಅರ್ಧ ಟೀ ಚಮಚ ಓಮಕಾಳಿನ ಪುಡಿಯನ್ನು ತೆಗೆದುಕೊಂಡು, ಒಂದು ಚಿಟಿಕೆ ಇಂಗು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಇದನ್ನು ತಣ್ಣಗಾಗಿಸಿ ಮಲಗುವ 15-20 ನಿಮಿಷಗಳ ಮೊದಲು ಒಂದು ಲೋಟ ಸೇವಿಸಿ. ಇದನ್ನು ದಿನಕ್ಕೆ ಒಂದು ಲೋಟ ಮಾತ್ರ ಸೇವಿಸಬೇಕು. ಅತಿಯಾದರೆ ಬೇರೆಯೇ ಸನಸ್ಯೆಗಳು ಕಾಡಬಹುದು.
(ಬರಹ : ರಂಜಿತಾ ಆರ್. ಕೆ )












Click it and Unblock the Notifications