ಕೆಂಡದಂಥ ಸಿಟ್ಟಿಗೆ ಸುಟ್ಟು ಬೂದಿಯಾದಳೇ

ಯುದ್ಧದಂಥ ಸಮೂಹ ಸನ್ನಿ ಮತ್ತೊಂದಿಲ್ಲ. ಪ್ರೀತಿಯಲ್ಲಿ ಒಂದಾಗದವರೂ ದ್ವೇಷದಲ್ಲಿ ಒಂದಾಗುತ್ತಾರೆ. ಅದಕ್ಕೆ ಒಳ್ಳೆಯ ಉದಾಹರಣೆ ಎಂದರೆ ಮಹಾಭಾರತ. ಮಹಾಭಾರತದಲ್ಲಿ ಬರುವ ರಾಜರುಗಳ ಪೈಕಿ ಕುರುಕ್ಷೇತ್ರ ಯುದ್ಧದಲ್ಲಿ ಭಾಗವಹಿಸದೇ ಉಳಿದವರು ಕೇವಲ ಇಬ್ಬರು. ಕೃಷ್ಣನ ಸೋದರ ಬಲರಾಮ ಮತ್ತು ಕೃಷ್ಣನ ಭಾವ ರುಕ್ಮ. ಇವರಿಬ್ಬರನ್ನು ಹೊರತುಪಡಿಸಿದರೆ ಉಳಿದವರೆಲ್ಲ ಒಂದಲ್ಲ ಒಂದು ಪಕ್ಷದಲ್ಲಿ ನಿಂತು ಬಡಿದಾಡಿದವರೇ.

ಆದರೆ ಯುದ್ಧವನ್ನೂ ಮಹಾಭಾರತ ಕೆಟ್ಟದ್ದು ಅನ್ನುವುದಿಲ್ಲ. ಹಾಗೆ ನೋಡಿದರೆ ಮಹಾಭಾರತದಲ್ಲಿ ಕೆಟ್ಟದ್ದು ಅನ್ನುವುದೇ ಇಲ್ಲ. ಪ್ರತಿಯಾಂದೂ ಅವನವನ ಮಟ್ಟಿಗೆ ಸರಿ. ಇನ್ನೊಬ್ಬನ ಲೆಕ್ಕದಲ್ಲಿ ತಪ್ಪು. ಅದಕ್ಕೊಂದು ದೃಷ್ಟಾಂತ ಬೇಕಿದ್ದರೆ ಮಾರ್ಕಂಡೇಯ ಹೇಳಿದೊಂದು ಕತೆಯನ್ನು ನೀವು ಕೇಳಬೇಕು.

Vyasa Maharshi telling Mahabharatha story and Ganapathy is writing itಅದು ಕೌಶಿಕ ಎಂಬ ಮುನಿಯ ಕತೆ. ಆತ ವೇದ ಸಂಪನ್ನ. ಕಾಡಿನಲ್ಲಿ ಒಂದು ಮರದಡಿಯಲ್ಲಿ ಕುಳಿತು ತಪಸ್ಸು ಮಾಡುತ್ತಿರುತ್ತಾನೆ. ಹೀಗೆ ಧ್ಯಾನಾಸಕ್ತನಾಗಿರುವ ಹೊತ್ತದಲ್ಲಿ ಮರದ ಮೇಲೆ ಕುಳಿತ ಕೊಕ್ಕರೆಯಾಂದು ಅವನ ಮೇಲೆ ಹಿಕ್ಕೆ ಹಾಕುತ್ತದೆ. ಸಿಟ್ಟಿನಿಂದ ಕೌಶಿಕ ಮೇಲೆ ನೋಡುತ್ತಾನೆ. ಅವನ ಸಿಟ್ಟಿನ ದೃಷ್ಟಿಗೆ ಬೀಳುತ್ತಿದ್ದಂತೆ ಕೊಕ್ಕರೆ ಸುಟ್ಟು ಬೂದಿಯಾಗುತ್ತದೆ.

ಕೌಶಿಕನಿಗೆ ಖುಷಿಯಾಗುತ್ತದೆ. ತನಗೆ ತಪಸ್ಸು ಸಿದ್ಧಿಸಿದೆ ಅನ್ನುವ ಅಹಂಕಾರದಲ್ಲಿ ಬೀಗುತ್ತಾನೆ. ಅದೇ ಹಮ್ಮಿನಲ್ಲಿ ಭಿಕ್ಷಾರ್ಥವಾಗಿ ಒಂದು ಗ್ರಾಮವನ್ನು ಹೊಕ್ಕು ಒಂದು ಮನೆಯ ಮುಂದೆ ನಿಂತು ಭಿಕ್ಷೆ ಬೇಡುತ್ತಾನೆ. ಮನೆಯಾಕೆ ತನ್ನ ಗಂಡನಿಗೆ ಊಟ ಬಡಿಸುತ್ತಿದ್ದುದರಿಂದ ಭಿಕ್ಷೆ ತರುವುದು ತಡವಾಗುತ್ತದೆ.

ಕೌಶಿಕ ಆಕೆಯನ್ನೂ ಸಿಟ್ಟಿನಿಂದ ದುರದುರನೆ ನೋಡುತ್ತಾನೆ. ‘ನಿನ್ನ ಸಿಟ್ಟಿನ ದೃಷ್ಟಿಗೆ ಸುಟ್ಟು ಬೂದಿಯಾಗುವುದಕ್ಕೆ ನಾನೇನೂ ಕೊಕ್ಕರೆಯಲ್ಲ’ ಅನ್ನುತ್ತಾಳೆ ಆಕೆ. ಕೌಶಿಕನಿಗೆ ಈ ಸಂಗತಿ ಈಕೆಗೆ ಹೇಗೆ ತಿಳಿಯಿತು. ನಿಜಕ್ಕೂ ಈಕೆ ತನಗಿಂತಲೂ ಶಕ್ತಿಶಾಲಿ ಅಂತ ಗೊತ್ತಾಗಿ ಆಕೆಯ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಾನೆ. ಆಕೆಯ ಹತ್ತಿರ ತನಗೂ ಬ್ರಹ್ಮಜ್ಞಾನವನ್ನು ಬೋಧಿಸುವಂತೆ ಕೇಳಿಕೊಳ್ಳುತ್ತಾನೆ. ಆಕೆ ಹೇಳುವ ಮಾತುಗಳು ನೀತಿ ಬೋಧೆಯಂತೆ ಕಾಣಿಸಿದರೂ ಅರ್ಥಪೂರ್ಣವಾಗಿವೆ.

ನಿನಗೆ ಕರ್ತವ್ಯ ಪಾಲನೆಯ ಶಕ್ತಿ ಗೊತ್ತಿಲ್ಲ. ಹಾಗೇ ಸಿಟ್ಟು ಮನುಷ್ಯನ ಒಳಗಿರುವ ಶತ್ರು ಅನ್ನುವುದೂ ಗೊತ್ತಿಲ್ಲ. ಇವೆರಡು ನಿನಗೆ ಗೊತ್ತಾಗಬೇಕಿದ್ದರೆ ನೀನು ಮಿಥಿಲೆಯಲ್ಲಿರುವ ಧರ್ಮವ್ಯಾಧನನ್ನು ಭೇಟಿಯಾಗು.

ಅಲ್ಲಿಂದ ಕೌಶಿಕ ಮಿಥಿಲೆಗೆ ಹೋಗುತ್ತಾನೆ. ಅವನ ಊಹೆಯಲ್ಲಿ ಧರ್ಮವ್ಯಾಧ ಶಾಂತಿ ಸಮಾಧಾನಗಳು ತುಂಬಿ ತುಳುಕುವ ಆಶ್ರಮ ನಡೆಸಿಕೊಂಡಿರುವ ಗುರು. ಆತನ ಮನೆಯ ಹತ್ತಿರ ಹೋಗುತ್ತಿದ್ದಂತೆ ಕೌಶಿಕನಿಗೆ ನಾನಾ ಬಗೆಯ ಸದ್ದು ಕೇಳಿಸತೊಡಗುತ್ತದೆ. ಧರ್ಮವ್ಯಾಧ ಒಬ್ಬ ಕಟುಕ ಅನ್ನುವುದೂ ಆತ ಮಾಂಸದಂಗಡಿ ನಡೆಸುತ್ತಿದ್ದಾನೆ ಅನ್ನುವುದೂ ಕೌಶಿಕನಿಗೆ ಗೊತ್ತಾಗುತ್ತದೆ.

ಈತನನ್ನು ನೋಡಿದ ತಕ್ಷಣ ಧರ್ಮವ್ಯಾಧ ಕೇಳುತ್ತಾನೆ.

ನಿನ್ನನ್ನು ಆ ಮಹಿಳೆ ಕಳುಹಿಸಿಕೊಟ್ಟಳೇ ? ಬನ್ನಿ ಮನೆಗೆ ಹೋಗೋಣ ಎಂದು ಧರ್ಮವ್ಯಾಧ ಆತನನ್ನು ತನ್ನ ಮನೆಗೆ ಕರೆದೊಯ್ಯುತ್ತಾವೆ. ಆತ ತನ್ನ ಮನೆಯಲ್ಲಿ ಸಂತೋಷವಾಗಿರುವುದನ್ನೂ ತನ್ನ ಹೆತ್ತವರನ್ನೂ ಚೆನ್ನಾಗಿ ನೋಡಿಕೊಳ್ಳುವುದನ್ನೂ ನೋಡಿ ಕೌಶಿಕನಿಗೆ ಜೀವನದ ಅರ್ಥ ಹೊಳೆಯುತ್ತದೆ. ಆತ ಅಲ್ಲಿಂದ ನೇರವಾಗಿ ತನ್ನ ಮನೆಗೆ ಹೋಗಿ ಹೆತ್ತವರ ಸೇವೆ ಮಾಡಿಕೊಂಡು ಬದುಕುತ್ತಾನೆ.

ಇಂಥದ್ದೊಂದು ಕತೆಯನ್ನು ಮಹಾಭಾರತದ ಒಳಗೆ ಹೆಣೆದ ವ್ಯಾಸರ ಪ್ರತಿಭೆಯನ್ನು ಮೆಚ್ಚಲೇ ಬೇಕು. ಯಾಕೆಂದರೆ ಇದಕ್ಕೂ ಮಹಾಭಾರತಕ್ಕೂ ಯಾವ ಸಂಬಂಧವೂ ಇಲ್ಲ. ಮಹಾಭಾರತ ಕೌರವ- ಪಾಂಡವರ, ರಾಜಮಹಾರಾಜರ ಕತೆ ಎನ್ನುವುದಾದರೆ ಇಲ್ಲಿ ಬರುವ ಧರ್ಮವ್ಯಾಧ ಈ ಯಾವ ಕೆಟಗರಿಗೂ ಸಲ್ಲುವುದಿಲ್ಲ. ಅಂಥವನೊಬ್ಬನಿಗೂ ವ್ಯಾಸರು ತಮ್ಮ ಕೃತಿಯಲ್ಲಿ ಒಂದು ಸ್ಥಾನ ದೊರಕಿಸಿಕೊಟ್ಟಿರುವುದು ಅಚ್ಚರಿ ಹುಟ್ಟಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಒಂದು ಕೃತಿ ಸಮಗ್ರವಾಗುತ್ತಾ ಹೋಗುವುದು ಇಂಥ ಸುತ್ತ ಮುತ್ತಲ ಪಾತ್ರಗಳಿಂದಲೇ ಅನ್ನುವುದೂ ಗೊತ್ತಾಗುತ್ತದೆ. ಭಗವದ್ಗೀತೆಯೂ ಧರ್ಮ ವ್ಯಾಧನ ಕತೆಯೂ ಹೇಳುವ ಸತ್ಯ ಒಂದೇ. ಕರ್ಮಣ್ಯೇವಾಧಿಕಾರಸ್ತೇ....

*

ಹಾಗಿದ್ದೂ ಈ ಧರ್ಮವ್ಯಾಧನಿಗೊಂದು ಹಿನ್ನೆಲೆಯಿದೆ. ಆತ ಹಿಂದಿನ ಜನ್ಮದಲ್ಲಿ ಶಸ್ತ್ರವಿದ್ಯೆ ಗೊತ್ತಿದ್ದ ಬ್ರಾಹ್ಮಣನಾಗಿದ್ದವನು. ರಾಜಕುಮಾರರ ಜತೆ ಬೇಟೆಗೆ ಹೋಗಿ ಜಿಂಕೆಯೆಂದು ತಪ್ಪು ತಿಳಿದು ‘ಒಬ್ಬ ಋಷಿಯನ್ನು ಕೊಂದ ತಪ್ಪಿಗೆ ಕಟುಕನಂತೆ ವರ್ತಿಸಿದ್ದಾಗಿ ಕಟುಕನಾಗಿ ಜನಿಸು’ ಅಂತ ಶಾಪ ಪಡೆದವನು. ಅವನ ಮಗನ ಹೆಸರು ಅರ್ಜುನ, ಮತ್ತು ಮಗಳ ಹೆಸರು ಅರ್ಜುನಿಕಿ. ಮತಂಗ ಮುನಿಯ ಮಗ ಪ್ರಸನ್ನ ಅರ್ಜುನಿಕಿಯನ್ನು ಮದುವೆಯಾಗುತ್ತಾನೆ. ಮತಂಗ ಮುನಿಯ ಪತ್ನಿ, ಸೊಸೆಯನ್ನು ‘ಎಷ್ಟಾದರೂ ನೀನು ಮಾಂಸ ಮಾರುವ ಕಟುಕನ ಮಗಳು’ ಎಂದು ಹಂಗಿಸುತ್ತಿರುತ್ತಾಳೆ. ( ಅತ್ತೆ ಸೊಸೆಯ ಇಂಥ ಭಿನ್ನಾಭಿಪ್ರಾಯಕ್ಕೆ ಎಂಥ ಹಿನ್ನೆಲೆ !) ಆಕೆ ಇದನ್ನು ತಂದೆಗೆ ಹೇಳಿದಾಗ ಧರ್ಮ ವ್ಯಾಧ ಅವರ ಮನೆಗೆ ಊಟಕ್ಕೆ ಬರುತ್ತಾನೆ. ಅಲ್ಲಿ ಊಟಕ್ಕೆ ಗೋಧಿ ಮತ್ತು ತೊಗರಿಯನ್ನು ಬಳಸುತ್ತಾರೆಂದು ತಿಳಿದು ‘ನಾನು ವಾರಕ್ಕೊಮ್ಮೆ ಒಂದು ಪ್ರಾಣಿಯನ್ನು ಕೊಲ್ಲುತ್ತೇನೆ. ನೀವು ದಿನವೂ ಎಷ್ಟೊಂದು ಪ್ರಾಣಿ ಹಿಂಸೆ ಮಾಡುತ್ತೀರಿ’ ಎಂದು ಹೀಯಾಳಿಸುತ್ತಾನೆ. ಆಗ ಮತಂಗ ಮುನಿಯ ಪತ್ನಿಗೆ ತನ್ನ ತಪ್ಪು ಅರಿವಾಗುತ್ತದೆ.

*

ಶಲ್ಯನ ಕತೆಯಲ್ಲಿ ಆತ ದುರ್ಯೋಧನನ ಅನ್ನದ ಹಂಗಿಗೆ ಬಿದ್ದು ತನ್ನ ತಂಗಿಯ ಮಕ್ಕಳಿಗೆ ನೆರವಾಗಲಾರದೆ ಸಂಕಟಕ್ಕೆ ತುತ್ತಾದದ್ದರ ಬಗ್ಗೆ ಓದಿದ್ದೀರಿ. ಆದರೆ ರಕ್ತ ಸಂಬಂಧ ಅಷ್ಟು ಸುಲಭವಾಗಿ ಬಿಟ್ಟು ಹೋಗುವುದಿಲ್ಲ ಅನ್ನುವುದನ್ನೂ ವ್ಯಾಸರು ತುಂಬ ಚೆನ್ನಾಗಿ ಹೇಳಿದ್ದಾರೆ.

ದುರ್ಯೋಧನನ ಪರವಾಗಿ ಹೋರಾಡುವುದು ಎಂದು ನಿಶ್ಚಯಿಸಿದ ನಂತರವೂ ಶಲ್ಯ ಪಾಂಡವರ ಬಳಿಗೆ ಹೋಗುತ್ತಾನೆ. ಆಗ ಧರ್ಮ ರಾಯ ಆತನನ್ನು ಒಂದು ಪ್ರಶ್ನೆ ಕೇಳುತ್ತಾನೆ.

‘ನೀನೂ ಕೃಷ್ಣನಷ್ಟೇ ಒಳ್ಳೆಯ ಸಾರಥಿ. ಒಂದು ವೇಳೆ ನೀನು ಕರ್ಣನಿಗೆ ಸಾರಥಿಯಾಗಿ ಅರ್ಜುನನ್ನು ಕೊಲ್ಲುವುದಕ್ಕೆ ನೆರವಾಗಬೇಕಾಗಿ ಬಂದರೆ ಏನು ಮಾಡುತ್ತೀಯಾ ?’

‘ನಾನು ದುರ್ಯೋಧನನ ಪರವಾಗಿ ಹೋರಾಡಲೇಬೇಕು. ಕರ್ಣ ಅರ್ಜುನನ ಮೇಲೆ ದಂಡೆತ್ತಿ ಬಂದಾಗ ನಾನೇನಾದರೂ ಆತನ ಸಾರಥಿಯಾಗಿದ್ದರೆ ಅವನನ್ನು ಚುಚ್ಚು ಮಾತುಗಳಿಂದ ನೋಯಿಸುತ್ತೇನೆ. ನೊಂದ ಹೃದಯದಿಂದ ಆತ ಖಂಡಿತಾ ಯುದ್ಧವನ್ನು ಗೆಲ್ಲಲಾರ. ಅರ್ಜುನನೇ ಖಂಡಿತಾ ಗೆಲ್ಲುತ್ತಾನೆ.’

ಈಗ ಹೇಳಿ ದುರ್ಯೋಧನನ ಪರವಾಗಿ ನಿಂತ ಶಲ್ಯ ನಿಜಕ್ಕೂ ಯಾರ ಪರವಾಗಿ ಯುದ್ಧ ಮಾಡಿದ ಹಾಗಾಯಿತು ?

(ಸ್ನೇಹ ಸೇತು: ಓ ಮನಸೇ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+