ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಗ್ರಾಮ ಸಾಣೆ ಹಳ್ಳಿಯಲ್ಲಿ ಮಹಾನ್‌ ಕಲಾವಿದರ ಸಮ್ಮಿಲನ

By Staff
|
Google Oneindia Kannada News

ಬೆಂಗಳೂರು : ಇದೊಂದು ವಿಶಿಷ್ಟ ಕಾರ್ಯಕ್ರಮ. ಕರ್ನಾಟಕದಲ್ಲಿ ವೃತ್ತಿ ರಂಗಭೂಮಿ ಸಂಪೂರ್ಣ ನಶಿಸಿ ಹೋಗುತ್ತಿದೆ ಎಂಬ ಕೂಗಿನ ಬೆನ್ನಲ್ಲೇ ನಡೆಯುತ್ತಿರುವ ಒಂದು ವಿನೂತನ ಕಾರ್ಯಕ್ರಮ. ರಾಜ್ಯ ಸರಕಾರದಿಂದ ರಂಗಭೂಮಿಯ ಪಿತಾಮಹರೆನಿಸಿದ್ದ ಗುಬ್ಬಿ ವೀರಣ್ಣನವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಪ್ರಶಸ್ತಿ ಪುರಸ್ಕೃತರಾದ ಆರು ಮಹಾನ್‌ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಒಂದು ಗೂಡಿಸುವ ಸುಮಧುರ ಸಮ್ಮಿಲನದ ಕಾರ್ಯಕ್ರಮ.

ಈ ಅವಿಸ್ಮರಣೀಯ ಸಮಾರಂಭಕ್ಕಾಗಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಸಜ್ಜಾಗಿದೆ. ಈ ಪುಟ್ಟ ಗ್ರಾಮದ ಶ್ರೀ ಶಿವಕುಮಾರ ಹವ್ಯಾಸಿ ಕಲಾಸಂಘ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಈ ಮಹತ್ವದ ಸಮ್ಮಿಲನ ಕಾರ್ಯಕ್ರಮವನ್ನು ಸಂಯುಕ್ತವಾಗಿ ಆಯೋಜಿಸಿದೆ.

ಕರ್ನಾಟಕ ಘನ ಸರಕಾರ 1994ರಲ್ಲಿ ಸ್ಥಾಪಿಸಿದ ಗುಬ್ಬಿ ವೀರಣ್ಣ ಪ್ರಶಸ್ತಿ ಪಡೆದ ಏಳು ಮಹಾನ್‌ ರಂಗಕರ್ಮಿಗಳ ಪೈಕಿ ಗಿರೀಶ್‌ ಕಾರ್ನಾಡ್‌ ಒಬ್ಬರನ್ನು ಹೊರತು ಪಡಿಸಿ, ಏಣಗಿ ಬಾಳಪ್ಪ, ಬಿ.ವಿ. ಕಾರಂತ್‌, ಮಾಸ್ಟರ್‌ ಹಿರಣ್ಣಯ್ಯ, ಯೋಗಾನರಸಿಂಹ, ಪಿ.ಬಿ. ಧುತ್ತರಗಿ, ಹೆಚ್‌.ಎನ್‌. ಹೂಗಾರ್‌ ಗುರುವಾರ ಹಾಗೂ ಶುಕ್ರವಾರ (ಮಾ.1 ಹಾಗೂ 2) ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಈ ಮಹಾನ್‌ ಕಲಾವಿದರಿಗೆ ಬೆಳ್ಳಿ ಕೋಲು, ಮೈಸೂರು ಪೇಟ ತೊಡಿಸಿ ಸನ್ಮಾನಿಸುವ ಕಾರ್ಯಕ್ರಮ ಇದೆ. ಒಂದೇ ವೇದಿಕೆಯಲ್ಲಿ ಈ ಎಲ್ಲರನ್ನೂ ಕಾಣುವ ಹಾಗೂ ಅವರ ರಚನೆ, ನಿರ್ದೇಶನದ ಕೆಲವು ಪ್ರಸಂಗಗಳನ್ನು ಕಣ್ಣಾರೆ ಕಂಡು ಸವಿಯುವ ಅವಕಾಶವೂ ಲಭ್ಯವಾಗಲಿದೆ. ಕನ್ನಡ ಬೆಳವಣಿಗೆ ಮತ್ತು ವೃತ್ತಿ ರಂಗಭೂಮಿ, ವೃತ್ತಿ ರಂಗಭೂಮಿಯ ಭವಿಷ್ಯ ಎಂಬ ವಿಷಯಗಳ ಕುರಿತು ವಿಚಾರ ಸಂಕಿರಣವೂ ನಡೆಯಲಿದೆ.

ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರ ಪರಿಚಯ

ಏಣಗಿ ಬಾಳಪ್ಪ : ಗುಬ್ಬಿ ವೀರಣ್ಣ ಪ್ರಶಸ್ತಿ ಪಡೆದ ಮೊದಲಿಗರು ಏಣಗಿ ಬಾಳಪ್ಪ. ಸ್ತ್ರೀ ಪಾತ್ರದ ಮೂಲಕ ತಮ್ಮ 8ನೇ ವಯಸ್ಸಿನಲ್ಲೇ ರಂಗಭೂಮಿಗೆ ಕಾಲಿಟ್ಟ ಬಾಳಪ್ಪನವರು 1930ರಿಂದ 1980ರವರೆಗೆ ನೂರಾರು ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಬಾಳಪ್ಪನವರು ಅಪರೂಪದ ನಟ, ರಂಗ ಸಂಘಟಕರು. ಮಹಾರಾಷ್ಟ್ರ ಕರ್ನಾಟಕ ಸರಕಾರಗಳಿಂದ ಹತ್ತಾರು ಪ್ರಶಸ್ತಿಗಳು ಬಾಳಪ್ಪನವರಿಗೆ ಸಂದಿವೆ.

ತಮ್ಮ 25ನೇ ವಯಸ್ಸಿನಲ್ಲೇ ನಾಟಕ ಕಂಪನಿ ಮಾಲಿಕರಾದ ಅವರು, ಚಲೇಜಾವ್‌, ಕಿತ್ತೂರು ಚೆನ್ನಮ್ಮ, ಬಸವೇಶ್ವರ ಮುಂತಾದ ನಾಟಕಗಳಿಂದ ಕರ್ನಾಟಕದ ಜನರ ಮನಗೆದ್ದವರು.

ಮಾಸ್ಟರ್‌ ಹಿರಣ್ಣಯ್ಯ : ಮಾಸ್ಟರ್‌ ಹಿರಣ್ಣಯ್ಯನವರನ್ನು ವರ್ಣಿಸಲು ಮಾತುಗಳೇ ಇಲ್ಲ. ಅವರೇ ಅಂಥ ವಾಚಾಳಿ. ಮಾಸ್ಟರ್‌ ಹಿರಣ್ಣಯ್ಯ ಅವರ ನಾಟಕಗಳಲ್ಲಿ ಅಭಿನಯಕ್ಕಿಂತ ನಿರರ್ಗಳ ಹಾಗೂ ಹರಿತವಾದ ಮಾತುಗಾರಿಕೆಯೇ ಪ್ರಧಾನ. ತಮ್ಮ ತಂದೆಯಿಂದ ಪ್ರೇರಿತರಾಗಿ 6ನೇ ವಯಸ್ಸಿನಲ್ಲೇ ರಂಗಭೂಮಿ ಪ್ರವೇಶಿಸಿದ ಮಾಸ್ಟರ್‌ ಹಿರಣ್ಣಯ್ಯ ಕ್ಯಾಸೆಟ್‌ ಲೋಕ ಹಾಗೂ ಚಿತ್ರರಂಗಕ್ಕೂ ಅಳಿಲು ಸೇವೆ ಸಲ್ಲಿಸಿದ್ದಾರೆ.

ನಟರಾಗಿ, ನಿರ್ದೇಶಕರಾಗಿ, ನಾಟಕಕಾರರಾಗಿ ಕಂಪನಿಯ ಮಾಲಿಕರಾಗಿ ರಂಗಭೂಮಿಯ ಸೇವೆ ಮಾಡಿದ ಮಾಸ್ಟರ್‌ ಹಿರಣ್ಣಯ್ಯ ಅವರ ದೇವದಾಸಿ, ಲಂಚಾವತಾರ, ನಡುಬೀದಿ ನಾರಾಯಣ, ಫೋನಾಯಣ, ಮಕ್ಮಲ್‌ಟೋಪಿ ಮೊದಲಾದ ನಾಟಕಗಳು ಕನ್ನಡಿಗರ ಮನೆ ಮಾತಾಗಿವೆ.

ಬಿ.ವಿ. ಕಾರಂತ್‌ : ಗುಬ್ಬಿ ಕಂಪನಿಯಿಂದಲೇ ರಂಗಭೂಮಿ ಪ್ರವೇಶಿಸಿದ ಬಿ.ವಿ. ಕಾರಂತರು ಗುಬ್ಬಿ ವೀರಣ್ಣ ಪ್ರಶಸ್ತಿಗೇ ಭಾಜನರಾದರು. ದೆಹಲಿಯ ನಾಟಕ ಶಾಲೆಯಲ್ಲಿ ಓದಿ ಅಲ್ಲೇ ಪ್ರಾಚಾರ್ಯರೂ ಆದರು. ಹಲವು ಭಾರತೀಯ ಭಾಷೆಗಳ ನಾಟಕಗಳನ್ನು ಹಿಂದಿಗೆ ಭಾಷಾಂತರಿಸಿ, ನಿರ್ದೇಶಿಸಿದ ಅಗ್ರಗಣ್ಯರು. 95ರಲ್ಲಿ ರಾಜ್ಯ ಸರಕಾರ ಇವರಿಗೆ ವೀರಣ್ಣ ಪ್ರಶಸ್ತಿ ನೀಡಿ ಗೌರವಿಸಿತು.

ಚಲನಚಿತ್ರ, ರಂಗಭೂಮಿಯಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಕಾರಂತರು ನಟ, ಕವಿ, ನಾಟಕಕಾರ ಮಿಗಿಲಾಗಿ ಪ್ರಯೋಗ ಶೀಲ ರಂಗಕರ್ಮಿ.

ಗಿರೀಶ್‌ ಕಾರ್ನಾಡ್‌ : ಕಾರ್ನಾಡರ ಹೆಸರು ಕೇಳದ ಸಾಹಿತ್ಯಾಸಕ್ತರೇ ಇಲ್ಲ. ತಮ್ಮ ನಟನೆ, ಬರಹದಿಂದ ಜನಮನಗೆದ್ದಿರುವ ಗಿರೀಶ್‌ ಕಾರ್ನಾಡರು. ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಜ್ಞಾನಪೀಠದ ಗರಿಯನ್ನೂ ತಮ್ಮ ಮಕುಟಕ್ಕೆ ಸೇರಿಸಿಕೊಂಡಿದ್ದಾರೆ.

ಕಾರ್ನಾಡರದು ಅಂತಾರಾಷ್ಟ್ರೀಯ ಖ್ಯಾತಿ. ತುಘಲಕ್‌, ಹಯವದನ, ಯಯಾತಿ, ತಲೆದಂಡವೇ ಮೊದಲಾದ ಅತ್ಯಮೂಲ್ಯ ಕೃತಿಗಳನ್ನು ನೀಡಿರುವ ಕಾರ್ನಾಡರು ಐತಿಹಾಸಿಕ ಕಥಾವಸ್ತುವನ್ನು ಮನೋಜ್ಞವಾಗಿ ಮನಮುಟ್ಟುವಂತೆ ನಾಟಕ ಮಾಡುವಲ್ಲಿ ಸಿದ್ಧಹಸ್ತರು. 1996ರಲ್ಲಿ ಗುಬ್ಬಿ ವೀರಣ್ಣ ಪ್ರಶಸ್ತಿ ಕಾರ್ನಾಡರ ಮುಡಿಯೇರಿತು.

ಎಚ್‌.ಕೆ. ಯೋಗಾನರಸಿಂಹ : ಕಲಾವಿದರ ಕುಟುಂಬದಿಂದ ಬಂದ ಯೋಗಾನರಸಿಂಹ ಅವರು ರಂಗಭೂಮಿಯಲ್ಲಿ ಯೋಗಣ್ಣ ಎಂದೇ ಖ್ಯಾತರು. ಶ್ರೀ ಮಂಜುನಾಥೇಶ್ವರ ನಾಟಕ ಮಂಡಳಿಯ ಮೂಲಕ ಕಲಾಸೇವೆಯಲ್ಲಿ ನಿರತರಾದ ಯೋಗಣ್ಣ, ನಟನೆ, ನಿರ್ದೇಶನ, ನಾಟಕ ರಚನೆಯಲ್ಲೂ ತಮ್ಮನ್ನು ತೊಡಗಿಸಿಕೊಂಡರು.

ಹವ್ಯಾಸಿ ಹಾಗೂ ವೃತ್ತಿ ರಂಗಭೂಮಿಗಳೆರಡಕ್ಕೂ ತಮ್ಮ ಕೈಲಾದ ಸೇವೆ ಸಲ್ಲಿಸಿರುವ ಯೋಗಣ್ಣ, ಬಹುಮುಖ ಪ್ರತಿಭೆ. 1998ರಲ್ಲಿ ವೀರಣ್ಣ ಪ್ರಶಸ್ತಿ ಯೋಗಣ್ಣರ ಅರಸಿ ಬಂತು.

ಪಿ.ಬಿ. ಧುತ್ತರಗಿ : ಸಂಪತ್ತಿಗೆ ಸವಾಲು, ಮಲಮಗಳು, ತಾಯಿ ಕರುಳು, ಚಿಕ್ಕಸೊಸೆ ಮೊದಲಾದ 50ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿರುವ ಧುತ್ತರಗಿ ವೃತ್ತಿ ರಂಗಭೂಮಿಯ ಹೆಸರಾಂತ ನಾಟಕಕಾರರು. ಹತ್ತನೇ ವಯಸ್ಸಿನಲ್ಲೇ ರಂಗಭೂಮಿ ಪ್ರವೇಶಿಸಿದ ಧುತ್ತರಗಿ ಅವರು, ನಾಟಕಗಳಲ್ಲಿ ನಟಿಸಿ, ನಿರ್ದೇಶಿಸಿದ್ದಷ್ಟೇ ಅಲ್ಲ, ತಮ್ಮದೇ ನಾಟಕ ಕಂಪನಿಯನ್ನೂ ನಡೆಸಿದರು.

ರಾಜ್ಯೋತ್ಸವ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿಗಳನ್ನೂ ಪಡೆದಿರುವ ಧುತ್ತರಗಿ ಅವರಿಗೆ 1999ರ ಸಾಲಿನ ಗುಬ್ಬಿವೀರಣ್ಣ ಪ್ರಶಸ್ತಿ ಲಭಿಸಿತು.

ಎಚ್‌.ಎನ್‌. ಹೂಗಾರ್‌: ತಮ್ಮ ಹಾಸ್ಯ ನಟನೆಯಿಂದ ಉತ್ತರ ಕರ್ನಾಟಕದ ಮನೆ ಮಾತಾಗಿರುವ ಹುಚ್ಚಪ್ಪ ಹೂಗಾರ್‌ ಅವರು, ಕವಿ, ನಾಟಕಕಾರ, ನಿರ್ದೇಶಕ ಹಾಗೂ ಸಂಭಾಷಣಕಾರರು. ಇವರ ಐದು ನಾಟಕಗಳು ಚಲನಚಿತ್ರಗಳಾಗಿಯೂ ಯಶಸ್ಸು ಕಂಡಿವೆ.

ಕುಲಪುತ್ರ, ಕೊಂಡು ತಂದ ಗಂಡ, ಕೊರವಂಜಿ, ದೀಪಾವಳಿ, ಸಾಕ್ಷಿಗೆ ಬಂದ ಸಾವಿತ್ರಿ, ದಸರಾ ಮೊದಲಾದ 55ಕ್ಕೂ ಹೆಚ್ಚು ನಾಟಕಗಳನ್ನು ಹೂಗಾರ್‌ ರಚಿಸಿದ್ದಾರೆ. ರಾಜ್ಯದ ಬಹುತೇಕ ನಾಟಕ ಕಂಪನಿಗಳು ಹೂಗಾರರ ನಾಟಕಗಳನ್ನು ಪ್ರದರ್ಶಿಸಿವೆ. ಕಳೆದ ಸಾಲಿನ ಗುಬ್ಬಿ ವೀರಣ್ಣ ಪ್ರಶಸ್ತಿ ಜ್ಯುಬಿಲಿ ಕವಿ ಎಂದೇ ಖ್ಯಾತರಾದ ಹೂಗಾರರಿಗೆ ದೊರಕಿತು.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X