ಪಂಪ ಪ್ರಶಸ್ತಿಗೆ ಪೂರ್ಣಚಂದ್ರ ತೇಜಸ್ವಿ ಅರ್ಧಚಂದ್ರ

Posted By:
Subscribe to Oneindia Kannada

Purnachandra Tejasvi:Gabriel Garsia Marquez of Kannada!ಬನವಾಸಿ : ಆದಿಕವಿ ಪಂಪನ ಹುಟ್ಟೂರಾದ ಬನವಾಸಿಯಲ್ಲಿ ಶುಕ್ರವಾರ ವೈಭವದಿಂದ ಕಂದಂಬೋತ್ಸವ ಜರುಗಿತು. ಈ ಸಮಾರಂಭದಲ್ಲಿ ನಾಡಿನ ಹಿರಿಯ ಸಾಹಿತಿ ಪೂರ್ಣಚಂದ್ರ ತೇಜಸ್ವೀ ಅವರಿಗೆ ಪಂಪ ಪ್ರಶಸ್ತಿ ವಿತರಿಸುವ ಕಾರ್ಯಕ್ರಮವೂ ಇತ್ತು.

ಆದರೆ, ತೇಜಸ್ವಿ ಅವರು, ಪಂಪ ಪ್ರಶಸ್ತಿ ಸ್ವೀಕರಿಸಲು ಸಮಾರಂಭಕ್ಕೆ ಬರಲೇ ಇಲ್ಲ. ‘ಅಡ್ಡ ಪಲ್ಲಕ್ಕಿಯ ಜಗದ್ಗುರುಗಳನ್ನು ನೋಡಿದರೆ ತಮಗೆ ಮೈ ನಡುಗುತ್ತದೆ. ಹಾರ-ತುರಾಯಿ ಹಾಕಿಸಿಕೊಂಡು ಮುಖಸ್ತುತಿ ಮಾಡಿಸಿಕೊಳ್ಳುವುದೆಂದರೆ ಪ್ರಾಣವೇ ಹೋಗುತ್ತದೆ. ಹೀಗಾಗಿ ತಾವು ಪಂಪ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ’ ಎಂದು ಹೇಳಿಕೆ ನೀಡಿದ್ದ ತೇಜಸ್ವೀ ಅವರು ಸಮಾರಂಭಕ್ಕೆ ಗೈರು ಹಾಜರಾದರು.

14ನೇ ಪಂಪ ಪ್ರಶಸ್ತಿಯನ್ನು ಸ್ವೀಕರಿಸಲು ತೇಜಸ್ವಿ ಅವರು ಬರುತ್ತಾರೆಂದು ನಿರೀಕ್ಷಿಸಿದ್ದ ಸಾಹಿತ್ಯಾಸಕ್ತರಿಗೆ ನಿರಾಶೆಯಾಯಿತು. ತೇಜಸ್ವೀ ಅವರ ಅನುಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವೂ ಜರುಗಿತು.

ತೇಜಸ್ವಿ ಅವರ ಪರವಾಗಿ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್‌ ಅವರು, ರಾಜ್ಯಪಾಲರಾದ ವಿ.ಎಸ್‌. ರಮಾದೇವಿ ಅವರಿಂದ ಪಂಪಪ್ರಶಸ್ತಿ ಸ್ವೀಕರಿಸಿದರು.

ಈ ಹಿಂದೆ ಕೂಡ ತೇಜಸ್ವೀ ಅವರು ಪ್ರಶಸ್ತಿ ಸ್ವೀಕರಿಸಲು ಹಲವು ಸಮಾರಂಭಗಳಿಗೆ ತಪ್ಪಿಸಿಕೊಂಡಿದ್ದಿದೆ. ಕೆಲವು ಪ್ರಶಸ್ತಿಗಳನ್ನು ಅವರ ಮನೆಗೇ ಹೋಗಿ ಪ್ರದಾನ ಮಾಡಿದ ಉದಾಹರಣೆಗಳೂ ಉಂಟು. ಪಂಪ ಪ್ರಶಸ್ತಿಯನ್ನು ಕೂಡ ಸರಕಾರ ತೇಜಸ್ವೀ ಅವರ ಮನೆಗೇ ಹೋಗಿ ಪ್ರದಾನ ಮಾಡುವ ಸಾಧ್ಯತೆಗಳಿವೆ.

ಎಲ್ಲಕ್ಕಿಂತ ಮಿಗಿಲಾಗಿ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ಜಿ.ಎಚ್‌. ನಾಯಕರ ಒತ್ತಾಯಕ್ಕೆ ಕಟ್ಟುಬಿದ್ದು ಪ್ರಶಸ್ತಿಗೆ ಒಪ್ಪಿಕೊಂಡೆ (ಆಫ್‌ದಿ ರೆಕಾರ್ಡ್‌) ಎಂದು ಹೇಳಿರುವ ತೇಜಸ್ವಿ ಅವರು ಪ್ರಶಸ್ತಿಯನ್ನು ಪುನರ್‌ ಪರಿಶೀಲಿಸಿ, ತಮಗೆ ನೀಡಲಾಗಿರುವ ಪ್ರಶಸ್ತಿಯನ್ನು ಮತ್ತಾರಿಗಾದರೂ ನೀಡುವಂತೆ ಸರಕಾರಕ್ಕೆ ಪತ್ರ ಬರೆಯುವುದಾಗಿಯೂ ಮೈಸೂರಿನ ‘ಆಂದೋಲನ’ ಪತ್ರಿಕೆಯ ‘ಹಾಡು-ಪಾಡು’ ಸಾಪ್ತಾಹಿಕ ಪುರವಣಿಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ಈ ಸಂದರ್ಶನ ಭಾನುವಾರ ಪ್ರಕಟವಾಗಲಿದೆ. ಶುಕ್ರವಾರ ಬನವಾಸಿಯಲ್ಲಿ ಸಮಾರಂಭ ನಡೆಯುವವರೆಗೂ ಸರಕಾರಕ್ಕೆ ಅಧಿಕೃತವಾಗಿ ತೇಜಸ್ವೀ ಅವರಿಂದ ಪ್ರಶಸ್ತಿ ನಿರಾಕರಣೆಯ ಯಾವುದೇ ಪತ್ರ ತಲುಪಿರಲಿಲ್ಲ ಎಂದು ಸರಕಾರಿ ಮೂಲಗಳು ಹೇಳಿವೆ.

(ಇನ್‌ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ