ರಂಗಾಯಣದ ರಾಮಾಯಣದಿಂದ ಬೇಸತ್ತ ಪ್ರಸನ್ನರಿಂದ ರಾಜೀನಾಮೆ ಪತ್ರ

*ಇನ್ಫೋ ಇನ್‌ಸೈಟ್‌

S. Prasannaಮೈಸೂರು : ರಂಗಾಯಣದ ಆಂತರಿಕ ಜಗಳ, ವಿವಾದಗಳಿಂದ ರೋಸಿ ಹೋಗಿರುವ ನಿರ್ದೇಶಕ ಎಸ್‌. ಪ್ರಸನ್ನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ಹೊಸ ಜಗಳ ಶುರುವಾಗಿರುವುದು ರಂಗಾಯಣದ ಜಾಗಕ್ಕೆ ಸಂಬಂಧಿಸಿ. ರಂಗಾಯಣದ ವ್ಯಾಪ್ತಿಗೆ ಬರುವ ಜಾಗದ ಸುತ್ತ ಗೋಡೆ ನಿರ್ಮಿಸಲು ಪ್ರಸನ್ನ ಅವರು ನಿರ್ಧರಿಸಿದ್ದರು. ಇದರಿಂದ ರಂಗಾಯಣ ಕಟ್ಟಡದ ಹಿಂಬದಿಯಲ್ಲಿರುವ ನಗರದ ಹವ್ಯಾಸಿ ಕಲಾವಿದರ ಪ್ರಮುಖ ರಂಗಮನೆ ‘ಕಲಾಮಂದಿರ’ದ ಹಿಂಬದಿಯ ವೇದಿಕೆ ದಾರಿಗೆ ತೊಂದರೆಯಾಗುತ್ತದೆ ಎನ್ನುವುದು ಮೈಸೂರಿನ ಹವ್ಯಾಸಿ ರಂಗ ಕಲಾವಿದರ ಆಪಾದನೆ.

ವೃತ್ತಿಪರ ನಾಟಕಕಾರರ ತಂಡ ರಂಗಾಯಣ, ಹವ್ಯಾಸಿ ರಂಗ ತಂಡದವರಿಗೆ ಸಹಾಯಮಾಡಬೇಕು. ಕಲಾ ಮಂದಿರದಲ್ಲಿ ರಂಗ ಚಟುವಟಿಕೆಗಳು ಹೆಚ್ಚಾಗುವಂತೆ ಮಾಡಿ ಅಭಿವೃದ್ಧಿಯ ಕಡೆಗೆ ರಂಗಾಯಣ ಗಮನ ಹರಿಸಬೇಕಿತ್ತು. ಆದರೆ, ಪ್ರಸನ್ನರು ಕಲಾಮಂದಿರದ ಕಲಾವಿದರನ್ನು ಒತ್ತಟ್ಟಿಗೆ ಇಡುವ ಪ್ರಯತ್ನ ಮಾಡುತ್ತಿದ್ದಾರೆ. ರಂಗಾಯಣ ಮತ್ತು ಕಲಾಮಂದಿರದ ನಡುವೆ ಗೋಡೆ ಕಟ್ಟುವ ಮೂಲಕ ರಂಗಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಎರಡು ತಂಡಗಳ ನಡುವೆ ಮಾನಸಿಕ ತಡೆಗೋಡೆಯನ್ನೂ ನಿರ್ಮಿಸುತ್ತಿದ್ದಾರೆ ಎಂದು ಸಮುದಾಯ ತಂಡದ ಕೆ.ಆರ್‌.ರಮೇಶ್‌ ತಮ್ಮ ವಿಷಾದ ತೋಡಿಕೊಂಡಿದ್ದಾರೆ.

ಮೈಸೂರಿನ ಕನ್ನಡ ಮತ್ತು ಸಂಸ್ಕೃತಿ ವಿಭಾಗದ ಉಪ ನಿರ್ದೇಶಕ ಮ.ಗು. ಸದಾನಂದಯ್ಯ ಸರಕಾರಿ ಆದೇಶವೊಂದರಲ್ಲಿ ಕಲಾಮಂದಿರ ಮತ್ತು ರಂಗಾಯಣದ ನಡುವೆ ಯಾವುದೇ ಗೋಡೆ ನಿರ್ಮಾಣ ಕಾನೂನು ಬದ್ಧವಲ್ಲ. ಹಾಗೆ ಮಾಡುವುದರಿಂದ ರಂಗ ತಂಡಗಳ ನಡುವೆ ಬಿಕ್ಕಟ್ಟು ಉಂಟಾಗುತ್ತದೆ ಎಂದಿದ್ದಾರೆ.

ಈ ಆದೇಶ ಪತ್ರದಿಂದ ಪ್ರಸನ್ನ ಅವರ ಸಿಟ್ಟು ನೆತ್ತಿಗೇರಿದೆ. ಕನ್ನಡ ಮತ್ತು ಸಂಸ್ಕೃತಿ ವಿಭಾಗ ನಿರ್ದೇಶಕರಿಗೆ ಪತ್ರ ಬರೆದು ತಮ್ಮ ವಿರುದ್ಧ ಸ್ಥಳೀಯರನ್ನು ಎತ್ತಿಕಟ್ಟುವ ಪ್ರಯತ್ನ ಮಾಡಲಾಗುತ್ತಿದೆ. ರಂಗಾಯಣಕ್ಕೆ ಆವರಣ ಗೋಡೆ ನಿರ್ಮಿಸುತ್ತಿದ್ದೇನೆಯೇ ಹೊರತು ಎರಡು ರಂಗ ತಂಡಗಳ ನಡುವೆ ಗೋಡೆ ನಿರ್ಮಿಸುತ್ತಿಲ್ಲ ಎಂದು ತಮ್ಮ ಸಿಟ್ಟು ವ್ಯಕ್ತಪಡಿಸಿದ್ದಾರೆ.

ಕಲಾವಿದರು ಹೋಟೆಲ್‌ ಕೆಲಸ ಮಾಡುವುದೇ ?

ರಂಗಾಯಣದ ಸಾಲು ವಿವಾದಗಳಲ್ಲಿರುವ ಇನ್ನೊಂದು ಸಮಸ್ಯೆ ಕ್ಯಾಂಟೀನ್‌ನದು. ಕಲಾವಿದರು ಒಂದು ಸಹಕಾರಿ ಸಮಾಜವನ್ನು ಆರಂಭಿಸಿ ಕ್ಯಾಂಟೀನ್‌ ನಡೆಸುವುದರ ಮೂಲಕ ರಂಗಾಯಣದ ಆರ್ಥಿಕ ಸ್ಥಿತಿ ಸುಧಾರಿಸುವುದು ಉತ್ತಮ ಎಂದು ರಂಗಾಯಣದ ಆಡಳಿತ ನೋಡಿಕೊಳ್ಳುತ್ತಿರುವ ಅರೆ ಸ್ವಾಯತ್ತ ಸಂಸ್ಥೆ ರಂಗ ಸಮಾಜ ಟ್ರಸ್ಟ್‌ ನಿರ್ಧರಿಸಿತ್ತು. ಆದರೆ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್‌, ಕಲಾವಿದರು ಹೋಟೆಲ್‌ನಡೆಸುವುದು ಸರಿಯಲ್ಲ ಎಂದಿದ್ದರು. ಇದು ಪ್ರಸನ್ನರ ಸಿಟ್ಟಿಗೆ ಒಗ್ಗರಣೆ ಹಾಕಿದಂತಾಗಿದ್ದು, ಸಚಿವರು ರಂಗಾಯಣದ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ ಎಂದು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಗೌಡಿಕೆಗಾಗಿ ಕಸರತ್ತೇ ?

ಮೂಲ ಜಗಳ ಇರುವುದು ರಂಗಾಯಣ ನಿರ್ದೇಶಕರು ಮತು ಕನ್ನಡ ಮತ್ತು ಸಂಸ್ಕೃತಿ ವಿಭಾಗದ ಉಪನಿರ್ದೇಶಕರ ನಡುವೆ. ಅದು ಅಧಿಕಾರಕ್ಕಾಗಿರುವ ಜಗಳ ಎನ್ನುವುದು ವರ್ಷಗಳ ಹಿಂದಿನಿಂದ ಕೇಳಿ ಬರುತ್ತಿರುವ ಮಾತು. ಪ್ರಸನ್ನರು ಈ ಮಾತನ್ನೂ ಅಲ್ಲಗಳೆಯುತ್ತಾರೆ. ರಂಗಾಯಣ ನಿರ್ದೇಶಕರಿಗೆ ಹೆಚ್ಚಿನ ಸಂಬಳವೇನೂ ಬರುವುದಿಲ್ಲ ಎಂದ ಮೇಲೆ ಅಧಿಕಾರಕ್ಕಾಗಿ ಯಾಕೆ ಜಗಳವಾಡಬೇಕು ಎನ್ನುವುದು ಅವರ ಪ್ರಶ್ನೆ.

ಕೊನೆಯದಾಗಿ ಪ್ರಸನ್ನರು ಹೇಳುವುದು : ರಂಗಾಯಣದ ಜಾಗಕ್ಕೆ ಕಂಪೌಂಡ್‌ ನಿರ್ಮಿಸುವ ಮೂಲಕ ನಿರ್ದೇಶಕರ ಅಧಿಕಾರವನ್ನು ವ್ಯಕ್ತಪಡಿಸಿದ್ದೇನೆ. ಆದರೆ ಸರಕಾರ ಅದಕ್ಕೆ ತೃಪ್ತಿಕರವಾಗಿ ಪ್ರತಿಕ್ರಿಯಿಸಿಲ್ಲ. ನನ್ನ ವಿರುದ್ಧ ಮಾಧ್ಯಮ ಚಳವಳಿಯೇ ನಡೆಯುತ್ತಿದೆ. ರಾಜೀನಾಮೆ ನೀಡುವುದರ ಹೊರತಾಗಿ ನಂಗೆ ಬೇರೆ ದಾರಿಯೇ ಇಲ್ಲ.

ಎಲ್ಲ ಪ್ರಕ್ರಿಯೆಗಳ ಬಗ್ಗೆ ರಾಣಿ ಸತೀಶ್‌ ಪ್ರತಿಕ್ರಿಯೆ : ನಾನು ಪ್ರಸನ್ನರನ್ನು ಬೆಂಬಲಿಸಿದ್ದೇನೆ. ಈಗ, ಅವರು ಯಾವ ವಿಷಯವನ್ನು ಮುಂದಿಟ್ಟುಕೊಂಡು ರಾಜೀನಾಮೆ ನೀಡಿದರು ಅಂತ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕು.

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+