ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಘರ್ಷದ ಹಾದಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು : ಮಾ.18 ರಂದು ಧರಣಿ

By Staff
|
Google Oneindia Kannada News

ಬೆಂಗಳೂರು : ಸಾಹಿತಿಗಳು ಹಾಗೂ ಕನ್ನಡ ಚಳವಳಿಕಾರರ ವಿರುದ್ಧ ವಾಗ್ಯುದ್ಧ ಹೂಡಿರುವ ಶಿಕ್ಷಣ ಸಚಿವ ಎಚ್‌. ವಿಶ್ವನಾಥ್‌ ಅವರನ್ನು ಸಂಪುಟದಿಂದ ಕೈ ಬಿಡುವುದೂ ಸೇರಿದಂತೆ ನಾಲ್ಕು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿರುವ ಕನ್ನಡ ಸಾಹಿತ್ಯ ಪರಿಷತ್‌, ಮಾ.18 ರಂದು ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದೆ.

ಮಾರ್ಚ್‌ 18 ರ ಸೋಮವಾರ ಬೆಳಗ್ಗೆ 11 ಗಂಟೆಗೆ ನಗರದ ಪುರಭವನದ ಬಳಿಯಿರುವ ರಾಣಿ ಚೆನ್ನಮ್ಮ ಪ್ರತಿಮೆ ಬಳಿ ಧರಣಿ ನಡೆಸಲಾಗುವುದು ಎಂದು ಕಸಾಪ ಅಧ್ಯಕ್ಷ ಹರಿಕೃಷ್ಣ ಪುನರೂರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈಗಾಗಲೇ ತಮ್ಮ ಬೇಡಿಕೆಗಳನ್ನು ಕುರಿತಂತೆ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರಿಗೆ ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳು ಮಾ.17 ರೊಳಗೆ ಬೇಡಿಕೆಗಳು ಈಡೇರಿಸಿದರೆ ಉದ್ದೇಶಿತ ಧರಣಿಯನ್ನು ಕೈ ಬಿಡಲಾಗುವುದು ಎಂದು ಪುನರೂರು ಹೇಳಿದರು.

ಪರಿಷತ್ತು ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳು :

  1. ಪ್ರಾಥಮಿಕ ಹಂತದಲ್ಲಿ (1 ರಿಂದ 8 ನೇ ತರಗತಿ) ಮಾತೃಭಾಷೆ ಕನ್ನಡ ಮಾಧ್ಯಮವನ್ನು 2002-03 ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ತರುವುದು.
  2. ಕನ್ನಡ ಮಾಧ್ಯಮ ಜಾರಿಗೆ ಅಡ್ಡಿಯಾಗಿರುವ ಉಚ್ಚ ನ್ಯಾಯಾಲಯದಲ್ಲಿರುವ ತಡೆಯಾಜ್ಞೆ ತೆರವಿಗೆ ಸರ್ಕಾರ ಅಗತ್ಯ ಕ್ರಮಗಳನ್ನು ತಕ್ಷಣವೇ ಕೈಗೊಳ್ಳುವುದು.
  3. ಕೇಂದ್ರ ಪಠ್ಯಕ್ರಮ ಅನುಸರಿಸುವ ಐಸಿಎಸ್‌ಇ ಹಾಗೂ ಸಿಬಿಎಸ್‌ಇ ಶಾಲೆಗಳಿಗೆ ಅಂತರರಾಜ್ಯ ವರ್ಗಾವಣೆಯ ಸಾಧ್ಯತೆ ಇರುವ ಪೋಷಕರ ಮಕ್ಕಳಿಗೆ ಮಾತ್ರ ಪ್ರವೇಶ ಇರಬೇಕು. ಈ ಮಾನದಂಡವನ್ನು ಇಂಥ ಶಾಲೆಗಳಿಗೆ ಅನುಮತಿ ನೀಡುವ ಮುನ್ನ ರಾಜ್ಯ ಸರ್ಕಾರ ಕಡ್ಡಾಯವಾಗಿ ಅನುಸರಿಸಬೇಕು.
  4. ಸಚಿವ ವಿಶ್ವನಾಥ್‌ರನ್ನು ಸಂಪುಟದಿಂದ ಕೈ ಬಿಡಬೇಕು.
ಕೃಷ್ಣ ವಚನ ಜಾರಿಗೆ ಬಂದಿಲ್ಲ : ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮ ಜಾರಿಗೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಕೃಷ್ಣ ತುಮಕೂರು ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದ್ದರು. ಆದರೆ ಅವರ ವಚನ ಈವರೆಗೆ ಜಾರಿಗೆ ಬಂದಿಲ್ಲ ಎಂದು ಪುನರೂರು ವಿಷಾದಿಸಿದರು.

ಸಾಹಿತಿಗಳ ವಿರುದ್ಧ ಹರಿಹಾಯ್ದಿರುವ ಶಿಕ್ಷಣ ಸಚಿವರನ್ನು ಹಿಗ್ಗಾಮುಗ್ಗಾ ಟೀಕಿಸಿದ ಪುನರೂರು- ತಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲಿಯೇ ಓದುತ್ತಿವೆ ಎಂದು ಸ್ಪಷ್ಟಪಡಿಸಿದರು. ವಿಶ್ವನಾಥ್‌ ತಮ್ಮ ಮೇಲೆ ಹೊರಿಸಿರುವ ಆರೋಪವನ್ನು ಸಾಬೀತು ಪಡಿಸಿದರೆ, ಕಸಾಪ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪುನರೂರು ಸವಾಲು ಹಾಕಿದರು.

ಮಾಜಿ ಶಾಸಕ ಪ್ರಭಾಕರ ರೆಡ್ಡಿ , ಲೇಖಕರಾದ ಚಂದ್ರಶೇಖರ ಪಾಟೀಲ, ವೀರಣ್ಣ ಹಾಗೂ ಕೋ.ಚನ್ನಬಸಪ್ಪ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X