ಇತ್ತೀಚಿನ ದಿನಗಳಲ್ಲಿ ಜನ ಅನ್ಯಾಯದ ಮಾರ್ಗ ಹಿಡಿಯುತ್ತಿರುವುದೇಕೆ?
ನಾವು ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಮತ್ತು ನಡೆಯುವ ಹಾದಿಯಲ್ಲಿ ನ್ಯಾಯವಿದ್ದರೆ ನಾವು ಯಾವತ್ತೂ ಯಾರ ಮುಂದೆಯೂ ತಲೆ ಬಾಗಬೇಕಾದ ಪ್ರಮೇಯ ಬಾರದು. ಆದರೆ ನಾವ್ಯಾರು ಹಾಗೆ ನಡೆದುಕೊಳ್ಳದ ಕಾರಣದಿಂದಾಗಿಯೇ ಇವತ್ತು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದೇವೆ. ಮತ್ತು ಆ ಸಂಕಷ್ಟವನ್ನು ಪರಿಹಾರ ಮಾಡಿಕೊಳ್ಳುವ ಸಲುವಾಗಿ ಇನ್ನಷ್ಟು ತೊಂದರೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದೇವೆ.
ಎಲ್ಲರೂ ಪ್ರಾಮಾಣಿಕ ಬದುಕಿಗೆ ಅಂಟಿಕೊಂಡಿದ್ದರೆ ಇವತ್ತು ಜಗತ್ತು ಹೀಗೆ ಇರುತ್ತಿರಲಿಲ್ಲ. ಬದಲಾಗಿರುತ್ತಿತ್ತು. ಇವತ್ತು ನಮಗೆ ಗೊತ್ತಿಲ್ಲದಂತೆ ಪ್ರಾಮಾಣಿಕತೆಯನ್ನು ದೂರವಿಟ್ಟು ಬದುಕಲು ಆರಂಭಿಸಿದ್ದೇವೆ. ಕೆಲವೊಮ್ಮೆ ಪ್ರಾಮಾಣಿಕತೆಯಿಂದ ಪ್ರಯೋಜನವಿಲ್ಲ ಎಂಬ ಅರಿವು ನಮಗಾಗಿರುತ್ತದೆ. ಹೀಗಾಗಿ ಪ್ರಾಮಾಣಿಕತೆಯ ಪರಿದಿ ದಾಟಿ ಬರಲಾರಂಭಿಸಿದ್ದೇವೆ. ಇದರಿಂದಾಗಿಯೇ ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನರಳಾಡುತ್ತಿದ್ದೇವೆ.

ಪ್ರಾಮಾಣಿಕ ಯಾವತ್ತೂ ನ್ಯಾಯದ ಹಾದಿಯಲ್ಲಿ ಸಾಗುತ್ತಾನೆ. ನ್ಯಾಯದ ಹಾದಿಯಲ್ಲಿ ಗುರಿ ತಲುಪಲು ತುಂಬಾ ಶ್ರಮಪಡಬೇಕಾಗುತ್ತದೆ. ಆದರೆ ಅನ್ಯಾಯದ ಹಾದಿ ನಮ್ಮನ್ನು ಬೇಗ ತಲುಪಬೇಕಾದಲ್ಲಿಗೆ ತಲುಪಿಸಿ ಬಿಡುತ್ತದೆ. ನ್ಯಾಯದ ಹಾದಿ ಮೆಟ್ಟಿಲಿನಂತೆ ಆದರೆ ಅನ್ಯಾಯದ ಹಾದಿ ಲಿಫ್ಟ್ ನಂತೆ. ಒಮ್ಮೆ ಲಿಫ್ಟ್ ಕೆಟ್ಟು ನಿಂತರೆ ಕಥೆ ಮುಗಿದಂತೆಯೇ..
ಅನ್ಯಾಯದ ಮಾರ್ಗ ಹಿಡಿಯುತ್ತಿರುವುದೇಕೆ?
ಇವತ್ತು ಜನ ಹೊಟ್ಟೆ, ಬಟ್ಟೆಗಾಗಿಯಷ್ಟೆ ದುಡಿಯುತ್ತಿಲ್ಲ. ಲೌಕಿಕ ಪ್ರಪಂಚದ ಐಹಿಕ ಭೋಗಗಳತ್ತ ದೃಷ್ಟಿ ನೆಟ್ಟಿದ್ದಾರೆ. ದುಡಿಯಬೇಕು, ಸಂಪಾದಿಸಬೇಕು, ಕೂಡಿಡಬೇಕು... ಜೊತೆಗೆ ಕಾರು, ಬಂಗಲೆ ಖರೀದಿಸಬೇಕು ಮುಂತಾದ ಬಯಕೆಗಳಿಂದಾಗಿ ಸಂಪಾದಿಸಿದಷ್ಟು ಸಾಕಾಗುವುದೇ ಇಲ್ಲ. ಹೀಗಾಗಿ ಹಣ ಸಂಪಾದನೆಯ ವ್ಯಾಮೋಹಕ್ಕೋಳಗಾದ ಅನಿವಾರ್ಯವಾಗಿ ನ್ಯಾಯದ ಮಾರ್ಗ ಬಿಟ್ಟು ಅನ್ಯಾಯದ ಮಾರ್ಗ ಹಿಡಿಯುವಂತಾಗಿದೆ.
ನಾವು ಮಾಡುವ ಕೆಲಸಗಳು ನ್ಯಾಯ ಮಾರ್ಗದಲ್ಲಿದ್ದರೆ, ತಡವಾದರೂ ಒಳ್ಳೆಯ ಪ್ರತಿಫಲ ಸಿಗುತ್ತದೆ. ಆದರೆ ಅನ್ಯಾಯದ ಮಾರ್ಗದ ಕಾರ್ಯಗಳು ತಕ್ಷಣಕ್ಕೆ ಅದರಿಂದ ಯಶಸ್ಸು ಸಿಗಬಹುದು. ಪ್ರಾಯಶ್ಚತಿ ಅನುಭವಿಸಲೇ ಬೇಕಾಗುತ್ತದೆ. ಹಣ, ಶ್ರೀಮಂತಿಕೆ ಎಲ್ಲವನ್ನೂ ನಾವು ಅನ್ಯ ಮಾರ್ಗಗಳಿಂದ ಬಹುಬೇಗ ಪಡೆದುಕೊಳ್ಳಬಹುದು. ಆದರೆ ಅದರಿಂದ ಮನೋನೆಮ್ಮದಿ, ಶಾಂತಿಯನ್ನು ಪಡೆಯಲಾಗುವುದಿಲ್ಲ ಎಂಬುವುದನ್ನು ನಾವು ಮರೆಯಬಾರದು.
ಅಡ್ಡದಾರಿಯಲ್ಲಿ ಪಡೆಯುವುದು ಯಶಸ್ಸಲ್ಲ
ಆಧ್ಯಾತ್ಮದಲ್ಲಿ ವಿವರಿಸಿದಂತೆ ಹೇಳುವುದಾದರೆ ನಾವು ಮಾಡುವ ಕೆಲಸ ಮತ್ತು ನಡೆಯುವ ಹಾದಿಯಲ್ಲಿ ಭಗವಂತನ ಶ್ರದ್ಧೆ ಇರಬೇಕು. ಆತನೇ ಮಾಡಿಸುತ್ತಿದ್ದಾನೆ ನನ್ನದೇನಿಲ್ಲ ಎಂಬ ಭಾವನೆಗಳಿರಬೇಕು. ಒಂದು ವೇಳೆ ನಾನೇ ಮಾಡುತ್ತಿದ್ದೇನೆ ಎಂಬ ಭಾವನೆ ಬಂದರೆ ಅಂತಹ ಕಾರ್ಯಗಳು ಫಲಕೊಡುವುದಿಲ್ಲ ಜೊತೆಗೆ ಯಜ್ಞೋಪಾದಿಯಾಗಿರುವುದಿಲ್ಲ.
ನಾವು ಮಾಡುವ ಕಾರ್ಯದಲ್ಲಿ ಫಲಾಪೇಕ್ಷೆ ಇರದೆ ಭಗವಂತನ ತೃಪ್ತಿಗಾಗಿ ಮಾಡಬೇಕು. ಅಂತಹ ಕರ್ಮ(ಕೆಲಸ)ಗಳು ಯಜ್ಞ ಸಮಾನವಾಗುತ್ತವೆ. ನಾವು ಮಾಡುವ ಕೆಲಸ ಯಾವುದೇ ಆಗಿರಲಿ ಅದನ್ನು ನಿಷ್ಠೆಯಿಂದ, ಪ್ರಾಮಾಣಿಕವಾಗಿ, ನ್ಯಾಯಮಾರ್ಗದಲ್ಲಿ ಮಾಡಿದರೆ ಅದು ಭಗವಂತನ ಸೇವೆಯಾಗುತ್ತದೆ. ಇದನ್ನು ಪ್ರತಿಯೊಬ್ಬರು ಅರಿತಿದ್ದೇ ಆದರೆ ಮಾಡಿದ ಕಾರ್ಯದಿಂದ ಯಶಸ್ಸು, ಪಡೆಯಬಹುದು.

ಅದು ಬಿಟ್ಟು ಅನ್ಯ ಮಾರ್ಗದಲ್ಲಿ ಯಶಸ್ಸು ಪಡೆಯುತ್ತೇನೆ ಎನ್ನುವುದು ಮೂರ್ಖತನವಾಗಿ ಬಿಡುತ್ತದೆ. ಆಧ್ಯಾತ್ಮ ಪ್ರಭೆಯೇ ದಾರಿ ತಪ್ಪಿ ಜೀವಿಸುವವರ ಬಾಳ ಬೆಳಕು. ದಾರಿ ತಪ್ಪಿದ ಹಡಗು ಲೈಟ್ ಹೌಸ್ ಮೂಲಕ ಹೇಗೆ ಸುರಕ್ಷಿತ ಸ್ಥಳ ತಲುಪುವುದೋ ಹಾಗೆಯೇ ಆಧ್ಯಾತ್ಮ ಜ್ಞಾನವು ಮಾನವ ಕುಲವನ್ನು ಸುರಕ್ಷಿತವಾದ, ಶಾಂತಿ ಹಾಗೂ ಸುಖಮಯ ಜೀವನದತ್ತ ಸೇರಿಸುತ್ತದೆ ಎನ್ನುವುದು ಆಧ್ಯಾತ್ಮಿಕ ಚಿಂತಕರ ಅಭಿಪ್ರಾಯವಾಗಿದೆ.
ಅಧರ್ಮದ ಮಾರ್ಗದತ್ತ ಎಲ್ಲರ ಚಿತ್ತ
ಇಂದು ಹೆಚ್ಚಿನವರು ದೇವರನ್ನು ಮರೆತಿದ್ದಾರೆ. ಹಾಗಾಗಿ ಅವರಿಗೆ ಧರ್ಮ-ಕರ್ಮದ ಬಗ್ಗೆ ಭಯವಿಲ್ಲ. ಸುಖಲೋಲುಪತೆಗೋಸ್ಕರ ಏನೂ ಮಾಡಲೂ ತಯಾರಿದ್ದಾರೆ. ಧರ್ಮ ಮಾರ್ಗದಿಂದ ಪಡೆಯಬೇಕಾದುದನ್ನು ಅಧರ್ಮ ಮಾರ್ಗದಿಂದ ತಕ್ಷಣಕ್ಕೆ ಪಡೆಯುವಲ್ಲಿ ಮುಂದಾಗಿದ್ದಾರೆ. ಹಾಗಾಗಿ ಸದಾ ನೋವು ನಷ್ಟದ ಜೀವನವನ್ನೇ ಮಾಡುತ್ತಿದ್ದಾರೆ.
ಭಗವಂತ ಸರ್ವವ್ಯಾಪಿ ಎಂದರೂ ನಂಬುತ್ತಿಲ್ಲ. ದುರಂತವೆಂದರೆ ನಮ್ಮ ದೇಹವನ್ನು ನೀರಿನಿಂದ ತೊಳೆದು ಶುಭ್ರಮಾಡಿಕೊಳ್ಳುತ್ತೇವೆ ಆದರೆ ಆಧ್ಯಾತ್ಮ ಜ್ಞಾನದಿಂದಾಗಲೀ ಇತರೆ ಧರ್ಮೋಪಾಸನೆಯಿಂದ ನಮ್ಮ ಮನಸ್ಸನ್ನು ಶುಭ್ರಗೊಳಿಸಿಕೊಳ್ಳುತ್ತಿಲ್ಲ. ಹಾಗಾಗಿ ಸದಾ ನೋವುಗಳನ್ನೇ ಬದುಕಿನುದ್ದಕ್ಕೂ ಎಳೆದುಕೊಂಡು ಬದುಕುತ್ತಿದ್ದೇವೆ.
ನಾವು ಮಾಡುವ ನಿತ್ಯದ ಕಾರ್ಯಗಳಲ್ಲಿಯೇ ಭಗವಂತನನ್ನು ಕಾಣುವ ಕೆಲಸವಾಗಬೇಕು. ಹಾಗಾದರೆ ನಾವು ದುಡಿದಿದ್ದರಲ್ಲಿ ನೆಮ್ಮದಿ ಕಾಣಬಹುದಾಗಿದೆ. ಇಂದು ನಾವು ದೇಹಕ್ಕೆ ವಿಶ್ರಾಂತಿ ನೀಡಲು ವಿಶ್ರಾಂತಿಧಾಮಗಳನ್ನು ನಿರ್ಮಿಸುತ್ತಿದ್ದೇವೆ. ಆದರೆ ಮನೋನಿಗ್ರಹಕ್ಕೆ ಅಗತ್ಯವಾದ ಧ್ಯಾನಮಂದಿರಗಳನ್ನು ನಿರ್ಮಿಸುತ್ತಿಲ್ಲ.
ದೇವರ ಧ್ಯಾನದಲ್ಲಿ ಮನಸ್ಸನ್ನು ನೆಟ್ಟಾಗ ಅದಕ್ಕೆ ಶಾಂತಿ ಸಿಗುತ್ತದೆ. ನಿರಂತರ ಭಗವನ್ನಾಮವನ್ನು ಜಪಿಸುತ್ತಿರಬೇಕು. ಸಮಯವನ್ನು ವಿನಾ ಕಾರಣ ಹಾಳು ಮಾಡಬಾರದು. ಸಮಯವೇ ಭಗವಂತ ಕಾಲವನ್ನು ನಿಸ್ವಾರ್ಥ ಸೇವೆಗೆ ಮತ್ತು ಮಾನವ ಕಲ್ಯಾಣಕ್ಕೆ ವಿನಿಯೋಗಿಸಬೇಕು. ಸ್ವಾರ್ಥದ ಬದಲು ಪರೋಪಕಾರ, ಆಸೆ ಬದಲು ಆಶಯ, ದೇಹಾಭಿಮಾನದ ಬದಲು ದೇಶಾಭಿಮಾನ ರೂಢಿಸಿಕೊಳ್ಳಬೇಕು. ನಮ್ಮಿಂದ ನಮಗೆ ಮಾತ್ರವಲ್ಲ, ಇತರರಿಗೂ ಒಳ್ಳೆಯದಾಗುವಂತೆ ನೋಡಿಕೊಂಡರೆ ಬದುಕು ಸಾರ್ಥಕವಾಗುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications