Financial Therapy: ಹಣದ ಸಮಸ್ಯೆಯಾ, ಮನಸ್ಸಿನ ಸಮಸ್ಯೆಯಾ? ಫೈನಾನ್ಷಿಯಲ್ ಥೆರಪಿ ಯಾಕೆ ಬೇಕಾಗುತ್ತೆ?

'ಈ ತಿಂಗಳು ಕೆಲವು ಉಳಿತಾಯ ಮಾಡಬೇಕಿದೆ, ಇಪಿಎಫ್‌ ಕಟ್ಟಬೇಕಿದೆ, ಹೀಗಾಗಿ ಸಂಬಳ ಎಲ್ಲಾ ಖರ್ಚು ಮಾಡಬಾರದು' ಎಂದು ನಮಗೆ ಗೊತ್ತಿರುತ್ತದೆ. ಆದರೂ ಕ್ರೆಡಿಟ್ ಕಾರ್ಡ್ ತೆಗೆದು ಮತ್ತೊಂದು ದುಬಾರಿ ವಸ್ತು ಖರೀದಿಸುತ್ತೇವೆ. 'ಉಳಿತಾಯ ಮಾಡಬೇಕು' ಎಂದು ನಿರ್ಧರಿಸುತ್ತೇವೆ. ಆದರೆ ತಿಂಗಳ ಕೊನೆಯಲ್ಲಿ ಕೈಯಲ್ಲಿ ಹಣ ಇರುವುದಿಲ್ಲ.

ಇನ್ನೊಂದು ರೀತಿಯ ಸಮಸ್ಯೆಯೂ ಇದೆ. ಸಾಕಷ್ಟು ಹಣ ಇದ್ದರೂ ಖರ್ಚು ಮಾಡುವಾಗ ಆತಂಕವಾಗುತ್ತದೆ. ಬ್ಯಾಂಕ್ ಖಾತೆ ನೋಡಲು ಭಯವಾಗುತ್ತದೆ. ಹಣದ ವಿಚಾರ ಬಂದಾಗಲೆಲ್ಲ ಗಂಡ-ಹೆಂಡತಿ ನಡುವೆ ಜಗಳ ಶುರುವಾಗುತ್ತದೆ. ಒಬ್ಬ ಸೇವಿಂಗ್ಸ್‌ ಮಾಡಬೇಕು ಅಂತ, ಇನ್ನೊಬ್ಬಳು ಖರ್ಚು ಮಾಡೋಣ ಅಂತ. ಯಾಕೆ ಹೀಗೆ?

What Is Financial Therapy You Know You Should Save So Why Can t You The Psychology Behind Money Habits

ಇಲ್ಲಿ ಸಮಸ್ಯೆ ಕೇವಲ ಬಜೆಟ್‌ನದ್ದೇ ಅಲ್ಲ. ನಾವು ಹಣದ ಬಗ್ಗೆ ಏನು ಮಾಡಬೇಕು ಎಂಬುದು ಗೊತ್ತಿದ್ದರೂ, ಅದನ್ನು ಯಾಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ಮುಖ್ಯವಾಗುತ್ತದೆ. ಈ ಪ್ರಶ್ನೆಗೆ ಉತ್ತರ ಕೊಡೋಕೆ ಬಂದಿದೆ ʼಫೈನಾನ್ಷಿಯಲ್ ಥೆರಪಿʼ. ಇದೇನು ತುಂಬಾ ಹೊಸದಲ್ಲ.

ಫೈನಾನ್ಷಿಯಲ್ ಥೆರಪಿ ಎಂದರೇನು?

ಸರಳವಾಗಿ ಹೇಳುವುದಾದರೆ, ಫೈನಾನ್ಷಿಯಲ್ ಥೆರಪಿ ಎನ್ನುವುದು ಹಣಕಾಸು ಮತ್ತು ಮನೋಚಿಕಿತ್ಸೆಯ ನಡುವಿನ ಒಂದು ಸೇತುವೆ. ಸಾಮಾನ್ಯ ಹಣಕಾಸು ಸಲಹೆಗಾರರು 'ಎಷ್ಟು ಉಳಿಸಬೇಕು?', 'ಎಲ್ಲಿ ಹೂಡಿಕೆ ಮಾಡಬೇಕು?', 'ಎಷ್ಟು ಖರ್ಚು ಮಾಡಬಹುದು?' ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾರೆ.

ಆದರೆ ಫೈನಾನ್ಷಿಯಲ್ ಥೆರಪಿ, 'ನೀವು ಗೊತ್ತಿದ್ದರೂ ಏಕೆ ಮತ್ತೆ ಮತ್ತೆ ಅದೇ ರೀತಿ ಖರ್ಚು ಮಾಡುತ್ತೀರಿ?', 'ಹಣದ ವಿಚಾರದಲ್ಲಿ ನಿಮಗೆ ಏಕೆ ಇಷ್ಟು ಭಯ?', 'ಹಣದ ಕಾರಣಕ್ಕೆ ಸಂಗಾತಿಯೊಂದಿಗೆ ಏಕೆ ಪದೇಪದೆ ಜಗಳವಾಗುತ್ತದೆ?' ಎಂಬಂಥ ಪ್ರಶ್ನೆಗಳನ್ನು ಪರಿಶೀಲಿಸುತ್ತದೆ. ಅಂದರೆ ಇಲ್ಲಿ ಲೆಕ್ಕಕ್ಕಿಂತ ಮೊದಲು ಹಣದೊಂದಿಗೆ ನಮ್ಮ ಸಂಬಂಧವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತದೆ.

ನಾವು ಹಣ ಸಂಪಾದಿಸಲು ಆರಂಭಿಸುವ ಮೊದಲೇ ಹಣದ ಬಗ್ಗೆ ಕೆಲವು ನಂಬಿಕೆಗಳನ್ನು ಬೆಳೆಸಿಕೊಂಡಿರುತ್ತೇವೆ. ಬಾಲ್ಯದಲ್ಲಿ ಮನೆಯಲ್ಲಿ ಹಣದ ಕೊರತೆ ಇದ್ದಿರಬಹುದು. ತಿಂಗಳ ಕೊನೆಯಲ್ಲಿ ಬಿಲ್ ಕಟ್ಟುವ ವಿಚಾರಕ್ಕೆ ಪೋಷಕರು ಸದಾ ಚಿಂತಿಸುತ್ತಿದ್ದಿರಬಹುದು. ಹಣ ಖರ್ಚು ಮಾಡುವುದು ತಪ್ಪು ಎಂದು ಹೇಳುತ್ತಿದ್ದರು. ಅಥವಾ ಹಣ ಇದ್ದರೆ ಮಾತ್ರ ಜೀವನದಲ್ಲಿ ಆನಂದ, ಹಣ ಇಲ್ಲದೆಯೂ ಆನಂದವಾಗಿರಬಹುದು ಎಂದೆಲ್ಲ ಹೇಳುತ್ತಿದ್ದಿರಬಹುದು.

ಇಂತಹ ಅನುಭವಗಳು ಮುಂದೆ ನಮ್ಮ ಹಣಕಾಸಿನ ನಿರ್ಧಾರಗಳ ಮೇಲೆ ಪರಿಣಾಮ ಬೀರುತ್ತವೆ. ಬಾಲ್ಯದಲ್ಲಿ ಸದಾ 'ಹಣ ಮುಗಿದುಹೋಗಬಹುದು' ಎಂಬ ಭಯದಲ್ಲಿ ಬೆಳೆದ ವ್ಯಕ್ತಿ, ದೊಡ್ಡವನಾದ ಮೇಲೆ ಸಾಕಷ್ಟು ಹಣ ಇದ್ದರೂ ಉಳಿತಾಯದ ಬಗ್ಗೆ ಅತಿಯಾದ ಆತಂಕ ಹೊಂದಿರಬಹುದು. ಇನ್ನೊಬ್ಬ ವ್ಯಕ್ತಿ ಒತ್ತಡ ಅಥವಾ ಬೇಸರವಾದಾಗಲೆಲ್ಲ ಆನ್‌ಲೈನ್ ಶಾಪಿಂಗ್ ಮಾಡಬಹುದು. ಹೊಸ ವಸ್ತು ಖರೀದಿಸಿದ ತಕ್ಷಣ ಸ್ವಲ್ಪ ಸಂತೋಷ ಸಿಗಬಹುದು. ಆದರೆ ನಂತರ ಕ್ರೆಡಿಟ್ ಕಾರ್ಡ್ ಬಿಲ್ ಬಂದಾಗ ಪಶ್ಚಾತ್ತಾಪ ಶುರುವಾಗುತ್ತದೆ. ಹೀಗೆ ಹಣಕಾಸಿನ ಚಕ್ರ ಮುಂದುವರಿಯುತ್ತಲೇ ಇರುತ್ತದೆ.

'ನಾನು ಹೆಚ್ಚು ಖರ್ಚು ಮಾಡುತ್ತೇನೆ' ಎಂದು ವಿಷಾದಪಡುವುದಕ್ಕಿಂತ, 'ನಾನು ಏಕೆ ಹೆಚ್ಚು ಖರ್ಚು ಮಾಡುತ್ತಿದ್ದೇನೆ?' ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದು ಒಳ್ಳೆಯದು. ಬೋರ್ ಆದಾಗ ಶಾಪಿಂಗ್ ಮಾಡುವವರಿರಬಹುದು. ಒತ್ತಡ ಕಡಿಮೆ ಮಾಡಿಕೊಳ್ಳಲು ಖರೀದಿ ಮಾಡುವವರಿರಬಹುದು. ನಾನು ಜೀವನದಲ್ಲಿ ಯಶಸ್ವಿ ಎಂದು ಇತರರ ಮುಂದೆ ತೋರಿಸಿಕೊಳ್ಳಲು ದುಬಾರಿ ವಸ್ತುಗಳನ್ನು ಕೊಳ್ಳುವವರಿರಬಹುದು.

ಬಜೆಟ್ ಇನ್ನಷ್ಟು ಬಿಗಿ ಮಾಡಿದರೆ ಈ ಸಮಸ್ಯೆ ಬಗೆಹರೀತದಾ? ಇಲ್ಲ. ಹಣ ಖರ್ಚು ಮಾಡುವ ಮೊದಲು ಯಾವ ಭಾವನೆ ಬರುತ್ತದೆ? ಆ ಭಾವನೆಯ ನಂತರ ಏನು ಮಾಡುತ್ತೇವೆ? ಖರೀದಿಸಿದ ಬಳಿಕ ಹೇಗನಿಸುತ್ತದೆ? ಮತ್ತೆ ಅದೇ ಪರಿಸ್ಥಿತಿ ಬಂದಾಗ ಏಕೆ ಅದೇ ನಿರ್ಧಾರ ತೆಗೆದುಕೊಳ್ಳುತ್ತೇವೆ? ಇಂತಹ ಮಾದರಿಯನ್ನು ಗುರುತಿಸುವುದೇ ಬದಲಾವಣೆಯ ಮೊದಲ ಹೆಜ್ಜೆ.

ಹಣದ ವಿಚಾರದಲ್ಲಿ ಗಂಡ-ಹೆಂಡತಿ ಜಗಳ

ಗಂಡ- ಹೆಂಡತಿಗೆ ಜಗಳ ಆಗುವ ಒಂದು ಪ್ರಮುಖ ಕಾರಣ ಅಂದರೆ ಖರ್ಚು ಮತ್ತು ಉಳಿತಾಯದ ವಿಷಯ. ಒಂದೇ ಮನೆಯಲ್ಲಿ ಬದುಕುವ ಇಬ್ಬರಿಗೆ ಹಣದ ಬಗ್ಗೆ ಸಂಪೂರ್ಣ ಭಿನ್ನವಾದ ಅಭಿಪ್ರಾಯಗಳಿರಬಹುದು.

ಒಬ್ಬರಿಗೆ ಬ್ಯಾಂಕ್ ಖಾತೆಯಲ್ಲಿ ದೊಡ್ಡ ಮೊತ್ತದ ಉಳಿತಾಯ ಇದ್ದರೆ ಮಾತ್ರ ನೆಮ್ಮದಿ. ಮತ್ತೊಬ್ಬರಿಗೆ 'ಹಣ ಸಂಪಾದಿಸುವುದೇ ಜೀವನವನ್ನು ಆನಂದಿಸಲು' ಎಂಬ ನಂಬಿಕೆ. ಒಬ್ಬರು ಪ್ರತಿಯೊಂದು ಖರ್ಚನ್ನೂ ಲೆಕ್ಕ ಹಾಕಬಹುದು. ಮತ್ತೊಬ್ಬರು ಇಂದಿನ ಜೀವನವನ್ನು ಹೆಚ್ಚು ಮುಖ್ಯವೆಂದು ಭಾವಿಸಬಹುದು. ಹೀಗಾಗಿ ರಜೆ, ಶಾಪಿಂಗ್, ಮಕ್ಕಳ ಶಿಕ್ಷಣ, ಹೂಡಿಕೆ ಅಥವಾ ತಿಂಗಳ ಉಳಿತಾಯದ ವಿಚಾರ ಬಂದಾಗಲೆಲ್ಲ ಒಂದೇ ರೀತಿಯ ಜಗಳ ಮರುಕಳಿಸಬಹುದು.

ಇಲ್ಲಿ ಜಗಳ ಕೇವಲ 'ಈ ತಿಂಗಳು ₹10,000 ಖರ್ಚು ಮಾಡಬಹುದೇ?' ಎಂಬ ಪ್ರಶ್ನೆಯ ಕುರಿತಲ್ಲ. ಅದರ ಹಿಂದೆ 'ಹಣ ಇದ್ದರೆ ಮಾತ್ರ ನಾನು ಸುರಕ್ಷಿತ' ಎಂಬ ಒಬ್ಬರ ಭಾವನೆ ಮತ್ತು 'ಹಣವನ್ನು ಬಳಸದೇ ಇಟ್ಟರೆ ಅದರ ಅರ್ಥವೇನು?' ಎಂಬ ಮತ್ತೊಬ್ಬರ ನಂಬಿಕೆ ನಡುವಿನ ತಾಕಲಾಟ. ಫೈನಾನ್ಷಿಯಲ್ ಥೆರಪಿ ಇಂತಹ ಮೂಲಭೂತ ನಂಬಿಕೆಗಳ ಬಗ್ಗೆ ಇಬ್ಬರೂ ಮುಕ್ತವಾಗಿ ಮಾತನಾಡಲು ನೆರವಾಗಬಹುದು.

Financial Therapy ಹಣಕಾಸು ಸಲಹೆಗೆ ಪರ್ಯಾಯವಲ್ಲ

ಹಣಕಾಸು ಸಲಹೆ ಬೇರೆ, ಥೆರಪಿ ಬೇರೆ. ನಿಮಗೆ ಯಾವ ಮ್ಯೂಚುವಲ್ ಫಂಡ್ ಆಯ್ಕೆ ಮಾಡಬೇಕು, ನಿವೃತ್ತಿಗೆ ಎಷ್ಟು ಹಣ ಬೇಕು, ಯಾವ ರೀತಿಯ ಆಸ್ತಿ ಹಂಚಿಕೆ ಮಾಡಬೇಕು ಅಥವಾ ಹೂಡಿಕೆಯನ್ನು ಹೇಗೆ ರೂಪಿಸಬೇಕು ಎಂಬ ಪ್ರಶ್ನೆಗಳಿದ್ದರೆ ಅರ್ಹ ಹಣಕಾಸು ಸಲಹೆಗಾರರ ನೆರವು ಬೇಕಾಗಬಹುದು.

ಆದರೆ 'ನಾನು ಏನು ಮಾಡಬೇಕು ಎಂಬುದು ಗೊತ್ತಿದೆ. ಆದರೂ ಮಾಡಲು ಸಾಧ್ಯವಾಗುತ್ತಿಲ್ಲ' ಎಂಬುದು ನಿಮ್ಮ ಸಮಸ್ಯೆಯಾಗಿದ್ದರೆ, ಕೇವಲ ಹಣಕಾಸು ಸಲಹೆ ಸಾಕಾಗದೇ ಇರಬಹುದು.

ಉಳಿತಾಯ (savings account) ಮಾಡಬೇಕು ಎಂದು ಗೊತ್ತಿದೆ. ಆದರೂ ಉಳಿಸಲು ಸಾಧ್ಯವಾಗುತ್ತಿಲ್ಲ. ಸಾಲ ಕಡಿಮೆ ಮಾಡಬೇಕು ಎಂದು ಗೊತ್ತಿದೆ. ಆದರೂ ಮತ್ತೆ ಸಾಲ ಮಾಡುತ್ತೀರಿ. ಖರ್ಚು ಕಡಿಮೆ ಮಾಡಬೇಕು ಎಂದು ಗೊತ್ತಿದೆ. ಆದರೂ ಒತ್ತಡ ಬಂದಾಗ ಖರ್ಚು ಮಾಡುತ್ತೀರಿ. ಹಣದ ವಿಚಾರದಲ್ಲಿ ಸಂಗಾತಿಯೊಂದಿಗೆ ಮಾತನಾಡಬೇಕು ಎಂದು ಗೊತ್ತಿದೆ. ಆದರೂ ಮಾತುಕತೆ ಆರಂಭಿಸಿದರೆ ಜಗಳವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಹಣದ ಲೆಕ್ಕದ ಜೊತೆಗೆ ಮನಸ್ಸಿನಲ್ಲಿರುವ ಕಾರಣಗಳನ್ನೂ ಅರ್ಥ ಮಾಡಿಕೊಳ್ಳಬೇಕಾಗಬಹುದು.

ಫೈನಾನ್ಷಿಯಲ್ ಥೆರಪಿ ಯಾರಿಗೆ ಬೇಕು?

ಅತಿಯಾಗಿ ಖರ್ಚು ಮಾಡುವವರಿಗೆ ಮಾತ್ರ ಇದು ಬೇಕೆಂದೇನಿಲ್ಲ. ಹಣದ ಬಗ್ಗೆ ಸದಾ ಆತಂಕದಲ್ಲಿರುವವರು, ಬ್ಯಾಂಕ್ ಖಾತೆ ಅಥವಾ ಬಿಲ್‌ಗಳನ್ನು ನೋಡದೇ ತಪ್ಪಿಸಿಕೊಳ್ಳುವವರು, ಸಾಲದ ಸಮಸ್ಯೆಯಿಂದ ಹೊರಬರಲಾಗದವರು, ಪದೇಪದೆ ನಿಯಂತ್ರಣ ತಪ್ಪಿ ಖರ್ಚು ಮಾಡುವವರು ಅಥವಾ ಹಣದ ವಿಚಾರದಲ್ಲಿ ಕುಟುಂಬದಲ್ಲಿ ನಿರಂತರ ಸಂಘರ್ಷ ಎದುರಿಸುವವರಿಗೆ ಇದು ಉಪಯುಕ್ತವಾಗಬಹುದು.

ಆದರೆ ಗಂಭೀರ ಆತಂಕ, ಖಿನ್ನತೆ (depression), ವ್ಯಸನ ಅಥವಾ ಇತರ ಮಾನಸಿಕ ಆರೋಗ್ಯ ಸಮಸ್ಯೆಗಳು ಇದ್ದರೆ, ಸೂಕ್ತ ಅರ್ಹತೆ ಹೊಂದಿರುವ ಮಾನಸಿಕ ಆರೋಗ್ಯ ತಜ್ಞರ ನೆರವು ಪಡೆಯುವುದು ಮುಖ್ಯ. ನೆರವು ಪಡೆಯುವಾಗ ತಜ್ಞರ ವಿದ್ಯಾರ್ಹತೆ ಮತ್ತು ಅನುಭವವನ್ನು ಪರಿಶೀಲಿಸುವುದೂ ಅಗತ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+