ನಿಷ್ಠೆಯಿಂದ ಕೆಲಸ ಮಾಡಿದ್ರೆ ಏನು ಸಿಗುತ್ತೆ..? ಈ ಪ್ರಶ್ನೆಗೆ ಇಲ್ಲಿದೆ ಉತ್ತರ!
ನಿನಗೆ ಕರ್ಮ ಮಾಡುವುದರಲ್ಲಿ ಮಾತ್ರವೇ ಅಧಿಕಾರವಿರಲಿ. ಕರ್ಮಫಲದಲ್ಲಿ ಎಂದಿಗೂ ಅಧಿಕಾರವಿಲ್ಲದಿರಲಿ ಮತ್ತು ಕರ್ಮಫಲಾಫೇಕ್ಷಿಯಾಗಿ ಫಲಕ್ಕೆ ಬಂಧಿತನಾಗಬೇಡ ಮಾತ್ರವಲ್ಲ ನಿನಗೆ ಕರ್ಮ ಮಾಡದೇ ಇರಲೂ ಆಸಕ್ತಿ ಉಂಟಾಗದಿರಲಿ. ಕರ್ಮದಿಂದ ಎಂದೂ ವಿಮುಖ ಬೇಡ... ಕೃಷ್ಣನ ಈ ಮಾತುಗಳು ಅರ್ಥ ಗರ್ಭಿತವಾಗಿವೆ. ಮತ್ತು ಏನೇ ಕೆಲಸ ಮಾಡಿದರೂ ಅದರಿಂದ ಫಲವನ್ನು ನಿರೀಕ್ಷಿಸುವವರಿಗೆ ಹೇಳಿ ಮಾಡಿದಂತಿದೆ.
ಇವತ್ತು ನಾವು ಬದಲಾಗಿದ್ದೇವೆ. ವಿಜ್ಞಾನ ಆವಿಷ್ಕಾರಗಳು ಮುಂದುವರೆಯುತ್ತಿರುವ ಇಂದಿನ ದಿನಗಳಲ್ಲಿ ನಮ್ಮ ದುಡಿಮೆಯೂ ಅಷ್ಟೆ ಫಲದ ನಿರೀಕ್ಷೆಯ ಮೇಲೆಯೇ ನಿಂತಿದೆ. ನಾವು ಯಾವುದೇ ಕೆಲಸ ಕಾರ್ಯ ಮಾಡುವ ಮುನ್ನ ಅದರಿಂದ ಬರಬಹುದಾದ ಫಲ(ಲಾಭ)ದ ನಿರೀಕ್ಷೆ ಮಾಡುತ್ತೇವೆ. ಕೆಲವೊಮ್ಮೆ ಕಾರ್ಯಕೈಗೊಳ್ಳುವ ಮುನ್ನವೇ ನಿರೀಕ್ಷಿತ ಕಾರ್ಯದ ಅಷ್ಟು ಫಲವನ್ನು ಪಡೆದುಕೊಂಡು ಬಿಡುತ್ತೇವೆ.

ಎಲ್ಲರೂ ದುಡಿದು ತಿನ್ನಬೇಕು ಇದು ಪ್ರಕೃತಿ ನಿಯಮ. ನಾವು ಮಾಡುವ ಕೆಲಸ ಯಾವುದೇ ಆಗಿರಲಿ ಅದರಲ್ಲಿ ದಕ್ಷತೆ, ಚಾತುರ್ಯತೆ, ಎಚ್ಚರಿಕೆ, ಪ್ರಯತ್ನ ಇರಲೇ ಬೇಕು. ಹಾಗಿದ್ದರೆ ಮಾತ್ರ ಅದು ಫಲ ನೀಡುತ್ತದೆ. ನಿಜ ಹೇಳಬೇಕೆಂದರೆ ಕೆಲಸ ಮಾಡುವುದು ಮಾತ್ರ ನಮ್ಮ ಕೈಯ್ಯಲ್ಲಿದೆ. ಅದರ ಫಲಿತಾಂಶ ನಮ್ಮಲ್ಲಿಲ್ಲ.
ಫಲಾಫೇಕ್ಷೆಯಿಂದ ಕೆಲಸ ಮಾಡಬೇಡಿ
ಸಾಮಾನ್ಯವಾಗಿ ಇದು ರೈತರಿಗೆ ಅನ್ವಯಿಸುತ್ತದೆ. ವರ್ಷವಿಡೀ ಕಷ್ಟಪಟ್ಟು ದುಡಿದ ಫಸಲು ಕೈಗೆ ಸಿಗುತ್ತದೋ ಎಂಬುವುದು ಹೇಳಲಾಗದು. ಹೀಗಾಗಿ ಕೆಲವರು ಭಗವಂತನ ಮೇಲೆ ಭಾರ ಹಾಕಿ ತಮ್ಮ ಕಾರ್ಯಗಳನ್ನು ತಾವು ಮಾಡುತ್ತಾರೆ. ಬಹಳಷ್ಟು ಮಂದಿ ಕೆಲಸ ಮಾಡುವ ಮುನ್ನವೇ ಅದರ ಫಲಾಪೇಕ್ಷೆಗಳ ಬಗ್ಗೆ ಬೆಟ್ಟದಷ್ಟು ನಿರೀಕ್ಷೆಯನ್ನುಟ್ಟುಕೊಂಡಿರುತ್ತಾರೆ.
ಕೆಲವೊಮ್ಮೆ ಅದು ವ್ಯತಿರಿಕ್ತ ಫಲಿತಾಂಶ ನೀಡಿದರೆ ಏಕೆ ಹೀಗಾಯಿತು? ನಿರೀಕ್ಷೆ ಮಾಡಿದ್ದು ಬರಲಿಲ್ಲವಲ್ಲ ಎಂದು ಚಿಂತೆಗೀಡಾಗಿ ಬದುಕನ್ನೇ ಕಳೆದುಕೊಳ್ಳುತ್ತಾರೆ. ಇದಕ್ಕಾಗಿಯೇ ಜ್ಞಾನಿಗಳು ಹೇಳಿದ್ದು ಕರ್ತವ್ಯವನ್ನು ಮಾಡು, ಕರ್ಮವನ್ನು ಪೂರೈಸು. ಆದರೆ ಕರ್ಮಫಲದ ಬಗ್ಗೆ ಯೋಚಿಸಬೇಡ. ಅದು ಭಗವಂತನಿಗೆ ಸೇರಿದ್ದೆಂದು ಇದು ನಿಜವೂ ಹೌದು.
ತಾಳ್ಮೆಯಿಂದ ಸ್ವೀಕರಿಸುವ ಔದಾರ್ಯವಿರಲಿ
ಆಧ್ಯಾತ್ಮದಲ್ಲಿ ಚಿಂತಕರು ಕರ್ಮಫಲ ಸಿಗಬೇಕಾದರೆ ಬರೇ ಕೆಲಸದಿಂದಲೇ ಸಿಗುವುದಿಲ್ಲ. ದಕ್ಷತೆ, ಚಾತುರ್ಯ, ಶ್ರಮ ಅರ್ಪಣೆಯನ್ನು ಬಳಸಿ ಕೆಲಸ ಮಾಡಬೇಕು. ಅದು ಬಿಟ್ಟು ಫಲ ಹೀಗೆಯೇ ಬರುತ್ತದೆ ಎಂದು ಲೆಕ್ಕ ಹಾಕಿದರೆ ಅಂತಹ ಫಲಿತಾಂಶ ಬರಲಾರದು. ಏಕೆಂದರೆ ಕರ್ಮಫಲದ ಪಕ್ವತೆಯ ಹಿಂದೆ ಬೇರೆ ಬೇರೆ ಆಯಾಮಗಳು ಸೇರಿವೆ ಎಂದು ಹೇಳಿದ್ದಾರೆ.
ನಮ್ಮ ಶರೀರ ಪ್ರಕೃತಿ, ಮಾನಸಿಕ ಪ್ರಕೃತಿ, ನಮ್ಮ ವಾತಾವರಣ ಪರಿಸರ ಕಾಲ ಸಂಚಿತ ಕರ್ಮಗಳ ಪ್ರಭಾವ ಇವೆಲ್ಲವುಗಳ ಪ್ರಭಾವವು ಕರ್ಮಫಲದ ಮೇಲೆ ಅವಲಂಬಿತವಾಗಿರುತ್ತದೆ. ಪರಮಾತ್ಮನ ಅನುಗ್ರಹ ಅಥವಾ ಕೃಪೆಯಿದ್ದಾಗ ಮಾತ್ರ ಕರ್ಮಫಲ ದೊರೆಯುವುದು. ಪರಮಾತ್ಮ ಏನು ನೀಡಿದರೂ ಅದನ್ನು ತಾಳ್ಮೆಯಿಂದ ಸ್ವೀಕರಿಸುವ ಔದಾರ್ಯ ನಮ್ಮದಾಗಬೇಕು.
ನಿರೀಕ್ಷೆಯನ್ನಿಟ್ಟು ಕೆಲಸ ಮಾಡಬೇಡಿ
ನಿಜ ಹೇಳಬೇಕೆಂದರೆ ಮಾಡುವ ಕೆಲಸದ ಬಗ್ಗೆ ನಿರೀಕ್ಷೆಯಿಡುವುದು ಮಾನವ ಧರ್ಮ. ಹಾಗೆಂದು ನಿರೀಕ್ಷೆಗೆ ಅಂಟಿಕೊಂಡೇ ಕಾರ್ಯಮಾಡುವುದು ಮೂರ್ಖತನವಾಗುತ್ತದೆ. ಹೀಗೆ ಮಾಡುವುದರಿಂದ ಹೆಚ್ಚಿನವರು ದುಃಖಿಗಳಾಗಿ ಒತ್ತಡ, ಮಾನಸಿಕ ತಳಮಳ, ಕಳವಳದಿಂದ ಕಾಲ ಕಳೆಯುತ್ತಿರುತ್ತಾರೆ.

ನಿರೀಕ್ಷೆಯನ್ನಿಟ್ಟು ಕೆಲಸ ಮಾಡುವುದರಿಂದ ಮಾನಸಿಕ ಶಕ್ತಿ, ಶ್ರಮ ಸಾಕಷ್ಟು ವ್ಯರ್ಥವಾಗುತ್ತದೆ. ಆದುದರಿಂದ ಈ ಬಗ್ಗೆ ಆಲೋಚನೆ ಮಾಡುವುದಕ್ಕಿಂತ ಮಾಡುವ ಕೆಲಸವನ್ನು ಇನ್ನೂ ಹೆಚ್ಚು ಚೆನ್ನಾಗಿ ಸಮರ್ಪಕವಾಗಿ ಶ್ರೇಷ್ಠವಾಗಿ ಮಾಡುವ ಬಗ್ಗೆ ಸದಾ ಯೋಚಿಸಬೇಕು.
ಪ್ರತಿ ಕೆಲಸದಲ್ಲಿಯೂ ನಿಷ್ಠೆ,ನಿಯತ್ತಿರಲಿ
ಕರ್ಮಫಲದ ಬಗ್ಗೆ ನಿರೀಕ್ಷೆ ಬಿಟ್ಟು ಕಾರ್ಯನಿರ್ವಹಿಸಿದರೆ ಪ್ರತಿಕ್ಷಣ ಆನಂದ ದೊರೆಯುತ್ತದೆ. ಜತೆಗೆ ಒತ್ತಡ ಇರುವುದಿಲ್ಲ. ನೆಮ್ಮದಿ ನಮ್ಮೊಂದಿಗಿರುತ್ತದೆ. ನಾವು ಮನುಷ್ಯರು ಹಾಗಾಗಿ ಕೆಲಸ ಮಾಡಲೆಂದೇ ಹುಟ್ಟಿದ್ದೇವೆ. ಇದರಿಂದ ಹೊರತಾಗಿ ಬದುಕಲು ಸಾಧ್ಯವಿಲ್ಲ. ಮನುಷ್ಯ ಕೆಲಸ ಮಾಡದೆ ಕೆಲ ನಿಮಿಷವೂ ಇರಲಾಗದು.
ನಾವು ಮಾಡುವ ಕೆಲಸ ನಮ್ಮ ವೈಯಕ್ತಿಕ ಆಗಿರಬಹುದು ಅಥವಾ ಸಮಾಜಮುಖಿ ಆಗಿರಬಹುದು. ಅದಲ್ಲದಿದ್ದರೆ, ಸಂಸ್ಥೆಗೋ, ಇನ್ಯಾವುದಕ್ಕೋ ಆಗಿರಬಹುದು ಅದು ಯಾವುದೇ ಆಗಿರಲಿ ಅದರಲ್ಲಿ ಪ್ರಾಮಾಣಿಕತೆ, ನಿಯತ್ತು ಇರಬೇಕು. ನಾವು ಏನೇ ಮಾಡಿದರೂ ಅದರಲ್ಲೊಂದಿಷ್ಟಾದರೂ ದೇವರು ಮೆಚ್ಚುವಂತಿರಬೇಕು.
ಸಮಾಜದ ಋಣ ತೀರಿಸಲೇಬೇಕು
ಸಮಾಜ ಜೀವಿಯಾದ ನಾವು ಸಮಾಜದ ಋಣ ತೀರಿಸಲೇಬೇಕು. ಜತೆಗೆ ಧರ್ಮ, ಸಂಸ್ಕೃತಿ ಪರಂಪರೆಯ ಹಾದಿಯಲ್ಲಿ ಹುಟ್ಟಿ ಬಂದ ಕಾರಣ ಅದರ ಜವಾಬ್ದಾರಿಯೂ ಇದ್ದೇ ಇದೆ. ಹೀಗಾಗಿ ಕರ್ಮಬಂಧನದಿಂದ ದೂರವಿದ್ದು ಬದುಕುವುದು ಅಸಾಧ್ಯವಾಗಿದೆ. ಹೀಗಾಗಿ ಯಾವುದೇ ಕಾರ್ಯ ಮಾಡುವ ಮುನ್ನ ಇದನ್ನು ಮರೆಯಬಾರದು.
ನಾವು ಮಾಡುವ ಒಳ್ಳೆಯ ಕಾರ್ಯಗಳಿಗೆ ಜಯ ಇದ್ದೇ ಇದೆ. ಅದು ತಕ್ಷಣಕ್ಕೆ ಸಿಗದಿದ್ದರೂ ಕ್ರಮೇಣ ಸಿಕ್ಕೇ ಸಿಗುತ್ತದೆ. ಅಷ್ಟೇ ಅಲ್ಲ ನಾವು ಏನೇನು ಮಾಡುತ್ತೇವೆಯೋ ಅದಕ್ಕೆ ತಕ್ಕಂತೆ ಫಲ ದೊರೆತೇ ದೊರೆಯುತ್ತದೆ.
ನಮ್ಮ ಪಾಲಿನ ಕರ್ತವ್ಯ ಹೇಗಿರಬೇಕು?
ಶ್ರೀ ಅನಂತಕುಮಾರ ಸ್ವಾಮೀಜಿ ಹೇಳಿರುವಂತೆ ತಮ್ಮ ಪಾಲಿನ ಕರ್ತವ್ಯವನ್ನು ಫಲಾಫೇಕ್ಷೆಯಿಲ್ಲದೆ ನಿಷ್ಕಾಮ ಭಾವದಿಂದ ಮಾಡಬೇಕು. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇದ್ದೇ ಇರುತ್ತದೆ. ಇದು ಭೌತಿಕ ಜಗತ್ತಿನಲ್ಲಿಯೂ ಇದೆ. ಮಾನಸಿಕ ಜಗತ್ತಿನಲ್ಲಿಯೂ ಇದೆ. ಆಧ್ಯಾತ್ಮಿಕ ಜಗತ್ತಿನಲ್ಲಿಯೂ ಇದೆ. ಇದೆಲ್ಲವನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ನಮ್ಮ ಕೆಲಸವನ್ನು ಮಾಡುತ್ತಾ ಹೋದರೆ ಅದಕ್ಕೆ ಒಂದಲ್ಲ ಒಂದು ದಿನ ಫಲ ಸಿಕ್ಕೇ ಸಿಗುತ್ತದೆ.
-
Pomegranate Juice Benefits: 6 ದಿನಗಳಲ್ಲಿ ಕಾಣುವ ಆರೋಗ್ಯ ಬದಲಾವಣೆಗಳು -
ಮನೆಯಲ್ಲಿ ಕಸದ ಬುಟ್ಟಿ ಎಲ್ಲಿ ಇಡಬೇಕು? ಈ ವಾಸ್ತು ನಿಯಮಗಳು ತಿಳಿದುಕೊಳ್ಳಿ -
Top 3 Job Sectors: 2026ರಲ್ಲಿ ಯಾವ ಕ್ಷೇತ್ರ ಆಯ್ಕೆ ಮಾಡಬೇಕು? ಟಾಪ್ 3 ಉದ್ಯೋಗ ವಲಯಗಳು -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ












Click it and Unblock the Notifications