Weight loss tips: ವಾಕಿಂಗ್ ಮಾಡಿದ್ರೂ ತೂಕ ಇಳಿಯುತ್ತಿಲ್ಲ: ನಿಮ್ಮ ಈ 7 ಅಭ್ಯಾಸಗಳನ್ನು ಇಂದೇ ಬದಲಿಸಿ!
ಪ್ರತಿದಿನ ಸಾಕಷ್ಟು ನಡೀತೀನಿ. ಆದ್ರೂ ನನ್ನ ಬಾಡಿ ವೇಯ್ಟ್ ಕಡಿಮೆ ಆಗ್ತಿಲ್ಲ. ಇದು ಸುಮಾರು ಜನರ ಕಂಪ್ಲೇಂಟು. ಯಾಕಿರಬಹುದು? ಕಾರಣಗಳಿವೆ. ನಿಧಾನವಾಗಿ ನಡೆಯುವುದು, ತುಂಬಾ ಕಡಿಮೆ ಸಮಯ ನಡೆಯುವುದು ಅಥವಾ ವ್ಯಾಯಾಮ ಮಾಡಿದ್ದೇನೆ ಎಂಬ ಕಾರಣಕ್ಕೆ ಹೆಚ್ಚು ತಿನ್ನುವುದು ಇವೆಲ್ಲ ನಿಮ್ಮ ತೂಕ ಇಳಿಸುವ ಗುರಿಗೆ ಅಡ್ಡಿಯಾಗಬಹುದು. ನಿಮ್ಮ ವಾಕಿಂಗ್ ರೂಟಿನ್‌ನಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದಲೂ ಹೆಚ್ಚು ಪರಿಣಾಮಕಾರಿ ಫಲಿತಾಂಶ ಪಡೆಯಬಹುದು.
ವಾಕಿಂಗ್ ಯಾಕೆ ಮುಖ್ಯ? ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಸರಳ ಮಾರ್ಗಗಳಲ್ಲಿ ವಾಕಿಂಗ್ ಒಂದು. ಇದಕ್ಕೆ ದುಬಾರಿ ಉಪಕರಣಗಳು, ಜಿಮ್ ಮೆಂಬರ್‌ಶಿಪ್ ಅಥವಾ ಸಂಕೀರ್ಣ ತರಬೇತಿ ಅಗತ್ಯವಿಲ್ಲ. ನಿಯಮಿತವಾಗಿ ನಡೆಯುವಾಗ ದೇಹ ಶಕ್ತಿಯನ್ನು ಬಳಸುತ್ತದೆ. ಇದರಿಂದ ಪ್ರತಿದಿನ ನೀವು ಖರ್ಚು ಮಾಡುವ ಕ್ಯಾಲೊರಿಗಳ ಪ್ರಮಾಣ ಹೆಚ್ಚಾಗಬಹುದು. ವಾಕಿಂಗ್ ಹೃದಯದ ಆರೋಗ್ಯ ಸುಧಾರಿಸಲು, ಸ್ನಾಯುಗಳನ್ನು ಬಲಪಡಿಸಲು ಮತ್ತು ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಹಾಯ ಮಾಡಬಹುದು. ವ್ಯಾಯಾಮ ಆರಂಭಿಸುತ್ತಿರುವವರಿಗೆ ವೇಗವಾಗಿ ನಡೆಯುವುದು ಕೀಲುಗಳ ಮೇಲೆ ಹೆಚ್ಚು ಒತ್ತಡ ಹಾಕದೆ ದೈಹಿಕ ಚಟುವಟಿಕೆಯನ್ನು ಹೆಚ್ಚಿಸಿಕೊಳ್ಳಲು ಸುಲಭ ಮಾರ್ಗ.

ಆದರೆ ವಾಕಿಂಗ್‌ನಿಂದ ಎಷ್ಟು ತೂಕ ಇಳಿಯುತ್ತದೆ ಎಂಬುದು ಹಲವು ಅಂಶಗಳನ್ನು ಅವಲಂಬಿಸಿರುತ್ತದೆ. ನೀವು ಎಷ್ಟು ಬಾರಿ ಮತ್ತು ಎಷ್ಟು ವೇಗವಾಗಿ ನಡೆಯುತ್ತೀರಿ, ನಿಮ್ಮ ಆಹಾರ ಪದ್ಧತಿ, ನಿದ್ರೆ ಮತ್ತು ದಿನವಿಡೀ ಮಾಡುವ ಒಟ್ಟು ದೈಹಿಕ ಚಟುವಟಿಕೆ ಇವೆಲ್ಲವೂ ಮುಖ್ಯ. ಪ್ರತಿದಿನ ವಾಕಿಂಗ್ ಮಾಡುತ್ತಿದ್ದೇನೆ ಎಂದ ಮಾತ್ರಕ್ಕೆ ತೂಕ ಖಚಿತವಾಗಿ ಇಳಿಯುತ್ತದೆ ಅಂತಲ್ಲ. ಕೆಲವು ಅಭ್ಯಾಸಗಳು ವಾಕಿಂಗ್‌ನ ಪ್ರಯೋಜನಗಳನ್ನು ಕಡಿಮೆ ಮಾಡಬಹುದು ಅಥವಾ ಸಾಕಷ್ಟು ಕ್ಯಾಲೊರಿ ಖರ್ಚು ಮಾಡಲು ಅಡ್ಡಿಯಾಗಬಹುದು. ತೂಕ ಇಳಿಸಿಕೊಳ್ಳಲು ಬಯಸುತ್ತಿದ್ದರೆ, ಈ ಸಾಮಾನ್ಯ ತಪ್ಪುಗಳನ್ನು ತಪ್ಪಿಸಿ.
1. ಪ್ರತಿದಿನ ಒಂದೇ ನಿಧಾನಗತಿಯ ವೇಗದಲ್ಲಿ ನಡೆಯುವುದು
ನಿಧಾನವಾಗಿ ನಡೆಯುವುದೂ ವ್ಯಾಯಾಮ ಮಾಡದೇ ಇರುವುದಕ್ಕಿಂತ ಉತ್ತಮ. ಆದರೆ ಯಾವಾಗಲೂ ತುಂಬಾ ನಿಧಾನಗತಿಯಲ್ಲಿ ನಡೆದರೆ ದೇಹ ಬಳಸುವ ಶಕ್ತಿಯ ಪ್ರಮಾಣ ಸೀಮಿತವಾಗಬಹುದು. ಹೀಗಾಗಿ ನಿಮ್ಮ ವಾಕಿಂಗ್‌ನಲ್ಲಿ ಕೆಲವು ಸಮಯ ವೇಗವಾಗಿ ನಡೆಯುವುದನ್ನು ಸೇರಿಸಿ. ವೇಗವಾಗಿ ನಡೆಯುವಾಗ ನಿಮಗೆ ಮಾತನಾಡಲು ಸಾಧ್ಯವಾಗಬೇಕು. ಆದರೆ ನಿಮ್ಮ ಉಸಿರಾಟ ಸಾಮಾನ್ಯಕ್ಕಿಂತ ಸ್ವಲ್ಪ ವೇಗವಾಗಿರಬೇಕು. ಸ್ವಲ್ಪ ಸಮಯ ಆರಾಮದಾಯಕ ವೇಗದಲ್ಲಿ ನಡೆದು, ಮತ್ತೊಂದಷ್ಟು ಹೊತ್ತು ವೇಗವಾಗಿ ನಡೆಯಬೇಕು.
2. ತುಂಬಾ ಕಡಿಮೆ ಸಮಯ ನಡೆಯುವುದು
5 ಅಥವಾ 10 ನಿಮಿಷಗಳಷ್ಟು ವೇಗದ ನಡಿಗೆಯೂ ಉಪಯುಕ್ತ. ವಿಶೇಷವಾಗಿ ವ್ಯಾಯಾಮ ಆರಂಭಿಸುತ್ತಿರುವವರಿಗೆ ಇದು ಉತ್ತಮ ಆರಂಭ. ಆದರೆ ತೂಕ ಇಳಿಸುವುದು ನಿಮ್ಮ ಗುರಿಯಾಗಿದ್ದರೆ, ನಿಧಾನವಾಗಿ ವಾಕಿಂಗ್‌ನ ಅವಧಿಯನ್ನು ಹೆಚ್ಚಿಸಿಕೊಳ್ಳಬೇಕು. ಒಂದೇ ಬಾರಿಗೆ ಒಂದು ಗಂಟೆ ನಡೆಯಲು ಪ್ರಯತ್ನಿಸುವ ಬದಲು, ನಿಮ್ಮ ಸಾಮಾನ್ಯ ವಾಕಿಂಗ್ ಸಮಯಕ್ಕೆ 5ರಿಂದ 10 ನಿಮಿಷಗಳನ್ನು ನಿಧಾನವಾಗಿ ಸೇರಿಸಿ. ನಿಮ್ಮ ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲವು ದಿನಗಳು ಅಥವಾ ವಾರಗಳ ಅಂತರದಲ್ಲಿ ಸಮಯ ಹೆಚ್ಚಿಸಬಹುದು.
3. ನಿಯಮಿತವಾಗಿ ನಡೆಯದೇ ಇರುವುದು
ವಾರಕ್ಕೆ ಒಂದೆರಡು ಬಾರಿ ಮಾತ್ರ ವಾಕಿಂಗ್ ಮಾಡುವುದರಿಂದ ತೂಕ ಇಳಿಸುವ ಗುರಿಗೆ ಬೇಕಾದ ನಿಯಮಿತ ದೈಹಿಕ ಚಟುವಟಿಕೆ ಸಿಗದೇ ಇರಬಹುದು. ಅಪರೂಪಕ್ಕೆ ಹೆಚ್ಚು ಹೊತ್ತು ನಡೆಯುವುದಕ್ಕಿಂತ ನಿಯಮಿತವಾಗಿ ನಡೆಯುವುದು ಹೆಚ್ಚು ಮುಖ್ಯ. ನಿಮ್ಮ ದಿನಚರಿಗೆ ಹೊಂದುವ ವಾಕಿಂಗ್ ರೂಟಿನ್ ರೂಪಿಸಿಕೊಳ್ಳಿ. ಬೆಳಗಿನ ಉಪಾಹಾರದ ನಂತರ, ಮಧ್ಯಾಹ್ನದ ಊಟದ ವಿರಾಮದಲ್ಲಿ ಅಥವಾ ಸಂಜೆ ವಾಕಿಂಗ್ ಮಾಡಬಹುದು. ವಾರದಾದ್ಯಂತ ನಿಯಮಿತವಾಗಿ ದೇಹವನ್ನು ಚಲಿಸುವ ಅಭ್ಯಾಸ ಬೆಳೆಸಿಕೊಳ್ಳುವುದರಿಂದ ತೂಕ ಇಳಿಸುವ ಪ್ರಯತ್ನಕ್ಕೆ ಸಹಾಯವಾಗಬಹುದು.
4. ವಾಕಿಂಗ್ ಹೊರತಾಗಿ ನಡೆಯದಿರುವುದು
ಕೆಲವರು ದಿನದ ವಾಕಿಂಗ್ ಮುಗಿಸಿದ ನಂತರ ಉಳಿದ ಸಮಯವನ್ನೆಲ್ಲ ಕುಳಿತುಕೊಂಡೇ ಕಳೆಯುತ್ತಾರೆ. ಇದು ದಿನದ ಒಟ್ಟು ದೈಹಿಕ ಚಟುವಟಿಕೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಹೀಗಾಗಿ ದಿನವಿಡೀ ಹೆಚ್ಚು ಸಲ ನಡೆಯಲು ಸಿಗುವ ಅವಕಾಶಗಳನ್ನು ಹುಡುಕಿ. ಉದಾಹರಣೆಗೆ ಲಿಫ್ಟ್ ಬದಲು ಮೆಟ್ಟಿಲು ಬಳಸುವುದು, ಫೋನ್‌ನಲ್ಲಿ ಮಾತನಾಡುವಾಗ ನಡೆಯುವುದು, ಮನೆಯ ಕೆಲಸಗಳನ್ನು ಮಾಡುವುದು,ಕೆಲಸದ ನಡುವೆ ಸಣ್ಣ ವಾಕಿಂಗ್ ಅಥವಾ ಚಲನೆಯ ವಿರಾಮ ತೆಗೆದುಕೊಳ್ಳುವುದು ಹೀಗೆ. ಇಂತಹ ಸಣ್ಣ ಚಟುವಟಿಕೆಗಳೂ ದಿನದ ಒಟ್ಟು ಚಲನವಲನವನ್ನು ಹೆಚ್ಚಿಸಬಹುದು.
5. ವಾಕಿಂಗ್‌ನಲ್ಲಿ ಖರ್ಚಾದ ಕ್ಯಾಲೊರಿಗಳನ್ನು ಮತ್ತೆ ತಿನ್ನುವುದು
ವಾಕಿಂಗ್‌ನಿಂದ ಎಷ್ಟು ಕ್ಯಾಲೊರಿ ಖರ್ಚಾಗಿದೆ ಎಂಬುದನ್ನು ಅತಿಯಾಗಿ ಅಂದಾಜು ಮಾಡುವುದು ಸಾಮಾನ್ಯ ತಪ್ಪುಗಳಲ್ಲಿ ಒಂದು. ದೀರ್ಘವಾಗಿ ನಡೆದ ನಂತರ ಹಸಿವಾಗಬಹುದು. ಆದರೆ ನಂತರ ಹೆಚ್ಚು ಕ್ಯಾಲೊರಿ ಇರುವ ದೊಡ್ಡ ಊಟ ಅಥವಾ ತಿಂಡಿ ಸೇವಿಸಿದರೆ, ವಾಕಿಂಗ್‌ನಲ್ಲಿ ಖರ್ಚಾದ ಕ್ಯಾಲೊರಿಗಳನ್ನು ಸುಲಭವಾಗಿ ಮತ್ತೆ ತುಂಬಿಕೊಳ್ಳಬಹುದು. ಹೀಗಾಗಿ ಸಮತೋಲಿತ ಆಹಾರದತ್ತ ಗಮನಹರಿಸಿ. ನಿಮ್ಮ ಆಹಾರದಲ್ಲಿ ತರಕಾರಿಗಳು, ಸಂಪೂರ್ಣ ಧಾನ್ಯಗಳು, ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು ಇರುವಂತೆ ನೋಡಿಕೊಳ್ಳಿ.
6. ಯಾವಾಗಲೂ ಒಂದೇ ದಾರಿಯಲ್ಲಿ ನಡೆಯುವುದು
ಪ್ರತಿದಿನ ಒಂದೇ ಸಮತಟ್ಟಾದ ದಾರಿಯಲ್ಲಿ, ಒಂದೇ ವೇಗದಲ್ಲಿ ನಡೆದರೆ ಕ್ರಮೇಣ ದೇಹ ಅದಕ್ಕೆ ಹೊಂದಿಕೊಳ್ಳಬಹುದು. ಆಗ ಅದೇ ವಾಕಿಂಗ್ ಹಿಂದಿನಷ್ಟು ಸವಾಲಿನದ್ದಾಗಿರದೆ ಇರಬಹುದು. ನಿಮ್ಮ ಸಾಮಾನ್ಯ ರೂಟಿನ್ ಆರಾಮದಾಯಕವಾಗುತ್ತಿದೆ ಎಂದಾಗ ಸಣ್ಣ ಬದಲಾವಣೆಗಳನ್ನು ಮಾಡಿ. ಉದಾಹರಣೆಗೆ ಸ್ವಲ್ಪ ಏರು-ಇಳಿಜಾರು ಇರುವ ದಾರಿಯಲ್ಲಿ ನಡೆಯಿರಿ. ಕೆಲವು ನಿಮಿಷ ವೇಗವನ್ನು ಹೆಚ್ಚಿಸಿ. ವಾಕಿಂಗ್ ಸಮಯವನ್ನು ಸ್ವಲ್ಪ ಹೆಚ್ಚಿಸಿ. ಇಂತಹ ಬದಲಾವಣೆಗಳು ನಿಮ್ಮ ವಾಕಿಂಗ್ ಅನ್ನು ಹೆಚ್ಚು ಸವಾಲಿನದ್ದಾಗಿಸಬಹುದು.
7. ವಾಕಿಂಗ್ ಮಾಡುವಾಗ ದೇಹದ ಭಂಗಿ ಸರಿಯಾಗಿರದಿರುವುದು
ನಡೆಯುವುದು ಸರಳವೆನಿಸಿದರೂ, ದೇಹದ ಭಂಗಿ ಮತ್ತು ಚಲನೆಯ ವಿಧಾನ ವಾಕಿಂಗ್ ಎಷ್ಟು ಆರಾಮದಾಯಕ ಹಾಗೂ ಪರಿಣಾಮಕಾರಿಯಾಗಿರುತ್ತದೆ ಎಂಬುದರ ಮೇಲೆ ಪರಿಣಾಮ ಬೀರಬಹುದು. ನಡೆಯುವಾಗ ತಲೆಯನ್ನು ನೇರವಾಗಿಡಿ. ಭುಜಗಳನ್ನು ಸಡಿಲವಾಗಿ ಹಾಗೂ ಬೆನ್ನನ್ನು ನೇರವಾಗಿಡಿ. ಕೈಗಳನ್ನು ದೇಹದ ಪಕ್ಕದಲ್ಲಿ ಗಟ್ಟಿಯಾಗಿ ಇಟ್ಟುಕೊಳ್ಳದೆ ಸಹಜವಾಗಿ ಚಲಿಸಿ. ಸರಿಯಾಗಿ ಹೊಂದುವ, ಆರಾಮದಾಯಕ ಮತ್ತು ಕಾಲಿಗೆ ಉತ್ತಮ ಬೆಂಬಲ ನೀಡುವ ಶೂ ಧರಿಸಿ. ಇವುಗಳನ್ನು ಗಮನಿಸುವುದರಿಂದ ವಾಕಿಂಗ್ ಹೆಚ್ಚು ಆರಾಮದಾಯಕವಾಗಬಹುದು.
ವಾಕಿಂಗ್ ಮಾತ್ರ ಸಾಕೇ?
ತೂಕ ಇಳಿಸಲು ವಾಕಿಂಗ್ ಸಾಲದು. ಆರೋಗ್ಯಕರ ಆಹಾರ, ಸಾಕಷ್ಟು ನಿದ್ರೆ ಮತ್ತು ನಿಯಮಿತ ದೈಹಿಕ ಚಟುವಟಿಕೆಯೂ ಸೇರಿದಾಗ ಅದು ಹೆಚ್ಚು ಪರಿಣಾಮಕಾರಿ. ನಿಮ್ಮ ಸಾಮರ್ಥ್ಯಕ್ಕೆ ತಕ್ಕ ವಾಕಿಂಗ್ ರೂಟಿನ್‌ನಿಂದ ಆರಂಭಿಸಿ. ನಿಧಾನವಾಗಿ ಚಟುವಟಿಕೆಯನ್ನು ಹೆಚ್ಚಿಸಿ. ನಿಮ್ಮ ಪ್ರಯತ್ನದ ಫಲವನ್ನು ಕಡಿಮೆ ಮಾಡುವ ಅಭ್ಯಾಸಗಳನ್ನು ತಪ್ಪಿಸಿ. ತೂಕ ಇಳಿಕೆಯಲ್ಲಿ ವೇಗಕ್ಕಿಂತ ನಿಯಮಿತತೆ ಮತ್ತು ದೀರ್ಘಕಾಲ ಮುಂದುವರಿಸುವಿಕೆ ಮುಖ್ಯ.


Click it and Unblock the Notifications
