Dry Fruits Kheer Recipe: ಡ್ರೈ ಫ್ರೂಟ್ಸ್ ಖೀರ್ ಮಾಡುವುದು ಹೇಗೆ? ದುಬಾರಿಯಾದರೂ ರುಚಿಯಲ್ಲಿ ಮೋಸವಿಲ್ಲ...
ಕ್ರಿಸ್‌ಮಸ್ ಬಂತು. ನಮ್ಮ ನಡುವೆ ಕ್ರಿಸ್‌ಮಸ್ ಆಚರಣೆ ಮಾಡುವವರು ತುಂಬಾ ಜನ ಇದ್ದಾರೆ. ಕ್ರಿಸ್‌ಮಸ್ ಬಳಿಕ ಹೊಸ ವರ್ಷವನ್ನೂ ನಾವೆಲ್ಲಾ ಬರಮಾಡಿಕೊಳ್ಳಲಿದ್ದೇವೆ. ಕ್ರಿಸ್‌ಮಸ್ ಬಂತು ಅಂದರೆ ಹೊಸ ವರ್ಷ ಬಂತು ಅಂತಲೇ ಅರ್ಥ. ಹೀಗೆ ವರ್ಷದ ಕೊನೆಯಲ್ಲಿ ಈ ಎರಡು ದಿನ ತುಂಬಾ ವಿಶೇಷವಾಗಿದೆ. ಈ ದಿನ ಸಿಹಿ ಅಡುಗೆಯನ್ನು ಮನೆಗಳಲ್ಲಿ ಮಾಡಿ ಎಲ್ಲರೊಂದಿಗೆ ಹಂಚಿಕೊಂಡು ತಿನ್ನುವುದು ಕೂಡ ವಿಶೇಷವೇ.
ಹಾಗಾದರೆ ಈ ಬಾರಿ ನೀವೇನಾದ್ರೂ ಮನೆಯಲ್ಲಿ ಸಿಹಿ ತಿಂಡಿಯನ್ನು ಮಾಡಲು ಬಯಸಿದರೆ ನಾವು ನಿಮಗಾಗಿ ಹೊಸ ರೆಸಿಪಿಯೊಂದನ್ನು ತಂದಿದ್ದೇವೆ. ಇದನ್ನು ಟ್ರೈ ಮಾಡುವ ಮೂಲಕ ನೀವು ನಿಮ್ಮ ಮನೆ ಸದಸ್ಯರ ಮೆಚ್ಚುಗೆಗೆ ಪಾತ್ರರಾಗುವುದರಲ್ಲಿ ಅನುಮಾನವೇ ಇಲ್ಲ. ಜೊತೆಗೆ ಈ ಸಿಹಿಯೊಂದಿಗೆ ಹೊಸ ವರ್ಷವನ್ನು ಸಿಹಿಯಾಗಿ ನೀವು ನಿಮ್ಮ ಮನೆಯ ಸದಸ್ಯರೊಂದಿಗೆ ಬರ ಮಾಡಿಕೊಳ್ಳಬಹುದು. ಜೊತೆಗೆ ಕ್ರಿಸ್‌ಮಸ್ ದಿನ ಬಗೆ ಬಗೆಯ ಸಿಹಿ ತಿಂಡಿಯನ್ನು ತಯಾರಿಸುವವರೂ ಕೂಡ ಇದನ್ನೊಮ್ಮೆ ಟ್ರೈ ಮಾಡಬಹುದು.

ಹಾಗಾದರೆ ಡ್ರೈ ಫ್ರೂಟ್ಸ್ ಖೀರ್ ಮಾಡುವುದು ಹೇಗೆ?
ಹೆಸರಿಗೆ ತಕ್ಕಂತೆ ಇದನ್ನು ಡ್ರೈ ಫ್ರೂಟ್ಸ್ ನಿಂದ ಮಾಡಲಾಗುತ್ತದೆ. ಇದನ್ನು ತಯಾರಿಸಲು ನೀವು ಅಧಿಕ ಹಣವನ್ನು ಖರ್ಚು ಮಾಡಬೇಕಾದರೂ ರುಚಿಯಲ್ಲಿ ಮಾತ್ರ ನಿಮಗೆ 100% ಅಂಕ ಬೀಳುವುದರಲ್ಲಿ ಎರಡು ಮಾತಿಲ್ಲ. ಹಾಗಾದರೆ ಇದನ್ನು ತಯಾರಿಸಲು ಬೇಕಾಗುವ ಪದಾರ್ಥಗಳು ಯಾವವು? ಹಾಗೂ ತಯಾರಿಸುವ ವಿಧಾನವನ್ನು ತಿಳಿಯೋಣ.
ಡ್ರೈ ಫ್ರೂಟ್ಸ್ ಖೀರ್ ತಯಾರಿಸಲು ಬೇಕಾಗುವ ವಸ್ತುಗಳು:-
*ಬಾದಾಮಿ 125 ಗ್ರಾಂ
*ಗೋಡಂಬಿ 125 ಗ್ರಾಂ
*ಪಿಸ್ತಾ 60 ಗ್ರಾಂ
* ತುಳಸಿ ಬೀಜ ಅರ್ಧ ಟೇಬಲ್ ಸ್ಪೂನ್
* ಸೂರ್ಯಪಾನ್ ಬೀಜ ಒಂದು ಟೇಬಲ್ ಸ್ಪೂನ್
* ತುಪ್ಪ ಒಂದು ಟೇಬಲ್ ಸ್ಪೂನ್
* ಸಕ್ಕರೆ ಅರ್ಧ ಕೆಜಿ
* ಹಾಲು ಮೂರು ಲೀಟರ್
*ಅರಿಶಿಣ ಚಿಟಿಕೆ

ತಯಾರಿಸುವ ವಿಧಾನ:-
* ಎಲ್ಲಾ ಡ್ರೈ ಫ್ರೂಟ್ಸ ಅನ್ನು (ಬಾದಾಮಿ, ಗೋಡಂಬಿ, ಪಿಸ್ತಾ) ಸ್ವಲ್ಪ ಬಿಸಿಯಾಗುವವರೆಗೂ ಹುರಿದುಕೊಳ್ಳಿ. ಹುರಿಯುವಾಗ ಎಲ್ಲವೂ ಪ್ರತ್ಯೇಕವಾಗಿರಲಿ.
* ಬಳಿಕ ಹುರಿದ ಬಾದಾಮಿ, ಗೋಡಂಬಿ, ಪಿಸ್ತಾವನ್ನು ಪ್ರತ್ಯೇಕವಾಗಿ ಮಿಕ್ಸಿಗೆ ಹಾಕಿಕೊಳ್ಳಿ. ಗೋಡಂಬಿ ತುಂಬಾ ನುಣ್ಣಗೆ ರುಬ್ಬಿಕೊಳ್ಳಿ, ಆದರೆ ಬಾದಾಮಿ ಹಾಗೂ ಪಿಸ್ತಾ ಸ್ವಲ್ಪ ತರಿತರಿಯಾಗಿರಲಿದೆ.
* ನಂತರ ಒಂದು ಪಾತ್ರೆಯಲ್ಲಿ ಹಾಲನ್ನು ಬಿಸಿ ಮಾಡಲು ಇಡಿ. ಹಾಲು ಒಂದೆರೆಡು ಬಾರಿ ಕುದಿ ಬರಬೇಕು.
* ಹಾಲು ಕುದಿಯುವಾಗ ಉರಿ ಕಡಿಮೆ ಮಾಡಿ ನಿಮ್ಮ ರುಚಿಗೆ ತಕ್ಕಂತೆ ಸಕ್ಕರೆ ಹಾಕಿ.
* ಬಳಿಕ ಮಿಕ್ಸಿಗೆ ಹಾಕಿಕೊಂಡ ಬಾದಾಮಿ ಪೌಡರ್ ಹಾಕಿ. ಹಾಕುವಾಗ ಗಂಟಾಗದಂತೆ ಕದಡುವುದನ್ನು ಮರೆಯಬೇಡಿ.
* ಸ್ವಲ್ಪ ಸಮಯದ ಬಳಿ ಗೋಡಂಬಿ ಪೌಡರ್ ಹಾಗೂ ಪಿಸ್ತಾ ಪೌಡರ್ ಕೂಡ ಹಾಕಿ ಚೆನ್ನಾಗಿ ಕಲಕಿ.
* ಇದನ್ನು ಚೆನ್ನಾಗಿ ಕದಡಬೇಕು. ತಳ ಹಿಡಿಯದಂತೆ ಹಾಗೂ ಹಾಲು ಉಕ್ಕದಂತೆ ನೋಡಿಕೊಳ್ಳಬೇಕು.
* ಹೀಗೆ ಹಾಲು ಸ್ವಲ್ಪ ಗಟ್ಟಿಯಾಗುವವರೆಗೂ ಮಂದ ಉರಿಯಲ್ಲಿ ಹಾಲನ್ನು ಚೆನ್ನಾಗಿ ಕುದಿಸಿ. ಬಳಿಕ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ.
* ಬಳಿಕ ಆ ಹಾಲಿಗೆ ಚಿಟಿಕೆ ಅರಿಸಿಣ ಹಾಕಿ, ಸೂರ್ಯಪಾನ್ ಬೀಜವನ್ನು ಹಾಕಿ.
* ಬಳಿಕ 1 ರಿಂದ 10 ಬಾದಾಮಿ, ಗೋಡಂಬಿ, ಪಿಸ್ತಾವನ್ನು ಒಂದರಲ್ಲಿ ನಾಲ್ಕು ಭಾಗ ಮಾಡಿಕೊಳ್ಳಿ. ಇವೆಲ್ಲವೂ ಪ್ರತ್ಯೇಕವಾಗಿರಲಿ.
* ಒಂದು ಬಾಣಲೆಗೆ ತುಪ್ಪ ಹಾಕಿ ಒಡೆದ ಬಾದಾಮಿ, ಗೋಡಂಬಿ, ಪಿಸ್ತಾವನ್ನು ಪ್ರತ್ಯೇಕವಾಗಿ ಸ್ವಲ್ಪ ಕೆಂಪಗಾಗುವವರೆಗೂ ಹುರಿದುಕೊಳ್ಳಿ. ಇದನ್ನು ಖೀರ್ ತಣ್ಣದಾದ ಬಳಿಕ ಹಾಕಿ.
* ನಂತರ ತುಳಸಿ ಬೀಜ(ಅರ್ಧ ಟೇಬಲ್ ಸ್ಪೂನ್ ಬೀಜಕ್ಕೆ ಒಂದು ಟೀ ಲೋಟದಷ್ಟು ನೀರು ಹಾಕಿ ನೆನೆಸಿದ) ಹಾಕಿದರೆ ಡ್ರೈ ಫ್ರೂಟ್ಸ ಸವಿಯಲು ಸಿದ್ಧ.












Click it and Unblock the Notifications