ವಯಸ್ಸು ಮೀರಿ ವಿವಾಹವಾದ ದಂಪತಿ ಮಗುವಿಗೆ ಆದ್ಯತೆ ನೀಡಿ: ಯಾಕೆ ಗೊತ್ತಾ..?
ಈಗೀಗ ಯುವಕ ಮತ್ತು ಯುವತಿಯರು ತಡವಾಗಿ ಮದುವೆಯಾಗುತ್ತಿದ್ದಾರೆ. ಇದಕ್ಕೆ ಕಾರಣಗಳು ಅನೇಕ ಇರಬಹುದಾದರೂ ಲೈಫ್ ಸೆಟ್ಲ್ ಆಗಲಿ ಆಮೇಲೆ ಮದುವೆ ಆಗೋಣ ಎಂಬ ನಿರ್ಧಾರಕ್ಕೆ ಬರುತ್ತಿರುವುದು ಬಹುಮುಖ್ಯ ಕಾರಣ ಎನ್ನುವುದನ್ನು ತಳ್ಳಿಹಾಕಲಾಗದು. ಈಗೀಗ ಹೆಣ್ಣು ಮಕ್ಕಳಿಗೂ ಹೆತ್ತವರನ್ನು ನೋಡಿಕೊಳ್ಳುವ ಜವಬ್ದಾರಿ ಇರುವುದರಿಂದ ಹೆಚ್ಚಿನವರು ಕೆಲಸ, ಜವಬ್ದಾರಿಯ ಕಾರಣದಿಂದಾಗಿ ಮದುವೆಯನ್ನು ಮುಂದೂಡುತ್ತಿದ್ದಾರೆ. ಹೀಗಾಗಿ ಎಲ್ಲವೂ ಸರಿ ಹೊಂದಿ ಮದುವೆ ಆಗುವ ವೇಳೆಗೆ ವಯಸ್ಸು ಕೂಡ ಸರಿದು ಹೋಗಿರುತ್ತದೆ.
ಹಿಂದಿನ ಕಾಲದಲ್ಲಿ ಓದು ಮುಗಿಯುತ್ತಿದ್ದಂತೆಯೇ ಹೆಣ್ಣು ಮಕ್ಕಳ ಮದುವೆಯನ್ನು ಹೆತ್ತವರು ಮಾಡಿ ಮುಗಿಸಿ ಬಿಡುತ್ತಿದ್ದರು. ಈಗ ಹಾಗಿಲ್ಲ. ಹೆತ್ತವರು ಕೂಡ ಮಕ್ಕಳ ಲೈಫ್ ಸೆಟ್ಲ್ ಆದ ಬಳಿಕ ಅವರ ಮದುವೆ ಮಾಡೋಣ ಅಂಥ ಬಯಸುತ್ತಿದ್ದಾರೆ. ಹೀಗಾಗಿ ಮದುವೆಗಳು ತಡವಾಗುತ್ತಿವೆ. ಜತೆಗೆ ಸರಿ ಸಮನಾಗುವವರು ಸಿಗದೆಯೋ ಕೆಲವೊಮ್ಮೆ ವಿವಾಹ ಮುಂದಕ್ಕೆ ಹೋಗಲೂ ಬಹುದು. ಇದು ಹೆಣ್ಣು ಮಕ್ಕಳ ಸಮಸ್ಯೆಯಾದರೆ ಗಂಡು ಮಕ್ಕಳದ್ದು ಮತ್ತೊಂಥರ ಸಮಸ್ಯೆಯಾಗಿದೆ.

ಇವತ್ತು ಗಂಡು ಮಕ್ಕಳು ಪ್ರಾಪ್ತ ವಯಸ್ಸಿಗೆ ಬಂದಿದ್ದರೂ ಅವರಿಗೆ ಹಲವು ಕಾರಣಗಳಿಗೆ ಮದುವೆಯಾಗಲು ಹುಡುಗಿಯರು ಸಿಗುತ್ತಿಲ್ಲ. ಅದರಲ್ಲೂ ಉದ್ಯೋಗವಿಲ್ಲದ, ಸಣ್ಣಪುಟ್ಟ ಕೆಲಸವನ್ನು ಮಾಡುವವರು, ಕೃಷಿಯಲ್ಲಿ ತೊಡಗಿಸಿಕೊಂಡವರು. ಹೀಗೆ ಬಹಳಷ್ಟು ಯುವಕರಿಗೆ ವಯಸ್ಸು ಮೀರುತ್ತಿದ್ದರೂ ಮದುವೆಯಾಗಲು ಯುವತಿಯರು ಸಿಗುತ್ತಿಲ್ಲ. ಹೆಣ್ಮಕ್ಕಳ ಸಂಖ್ಯೆ ಕಡಿಮೆ ಇರುವುದು ಒಂದೆಡೆಯಾದರೆ, ಹೆಣ್ಣು ಹೆತ್ತವರು ಇತ್ತೀಚೆಗಿನ ದಿನಗಳಲ್ಲಿ ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಆಸ್ಥೆ ವಹಿಸುತ್ತಿದ್ದು, ಮಕ್ಕಳ ಭವಿಷ್ಯ ಚೆನ್ನಾಗಿರಬೇಕೆಂದು ಬಯಸುತ್ತಿದ್ದು, ಒಂದೊಳ್ಳೆಯ ಸಂಬಂಧದ ನಿರೀಕ್ಷೆಯಲ್ಲಿರುತ್ತಾರೆ.
ಲೈಫ್ ನಲ್ಲಿ ಸೆಟ್ಲ್ ಆಗಬೇಕೆನ್ನುವ ಬಯಕೆ
ಮೊದಲಿನಂತೆ ಮದುವೆ ಮಾಡಿ ಜವಬ್ದಾರಿ ಕಳೆದುಕೊಳ್ಳುವ ಮನಸ್ಥಿತಿಯಿಂದ ಹೊರ ಬಂದಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಪ್ರತಿ ಹೆಣ್ಣು ಮಗುವನ್ನು ಗಂಡುಮಗುವಿನಂತೆ ಬೆಳೆಸುತ್ತಿದ್ದಾರೆ. ಅಷ್ಟೇ ಅಲ್ಲದೆ ಅವರ ಬದುಕಿಗೆ ಭದ್ರತೆ ಒದಗಿಸಿ ಯಾವುದರಲ್ಲಿಯೂ ಕಡಿಮೆ ಇಲ್ಲದಂತೆ ನೋಡಿಕೊಂಡಿರುತ್ತಾರೆ. ಹೀಗಿರುವಾಗ ಆಸ್ತಿ ಅಂತಸ್ತಿಗೆ ಹೊಂದಿಕೆ ಆಗುವವರನ್ನೇ ಬಯಸುವುದು ಸಾಮಾನ್ಯವಾಗಿದ್ದು ತನ್ನ ಮಗಳಿಗೆ ಸರಿ ಹೊಂದುವವರು ಬೇಕೆಂದು ಬಯಸುವ ಕಾರಣದಿಂದ ಬಹಳಷ್ಟು ಸಂಬಂಧಗಳನ್ನು ಒಪ್ಪಿಕೊಳ್ಳುವುದೇ ಇಲ್ಲ.

ಇನ್ನು ಮದುವೆಯಾಗುವ ಯುವಕ ಯುವತಿಯರು ಕೂಡ ತಮ್ಮದೇ ಆದ ಕನಸುಗಳನ್ನಿಟ್ಟುಕೊಂಡಿರುತ್ತಾರೆ. ತಮ್ಮೊಂದಿಗೆ ಬದುಕು ಕಟ್ಟಿಕೊಳ್ಳುವವರು ಹೀಗೆಯೇ ಇರಬೇಕೆಂದು ಮೊದಲೇ ನಿರ್ಧಾರ ಮಾಡಿರುತ್ತಾರೆ. ಅಂತಹವರು ತಮ್ಮ ಕನಸಿನ ಸಂಗಾತಿ ಸಿಗುವ ತನಕ ಕಾಯುತ್ತಾರೆ. ಇದೆಲ್ಲದರ ನಡುವೆ ಪ್ರೀತಿ, ಪ್ರೇಮದಲ್ಲಿ ಸಿಲುಕಿ ತಮಗಿಷ್ಟವಾದವರನ್ನು ಮದುವೆ ಮಾಡಿಕೊಳ್ಳುವವರು ಇಲ್ಲದಿಲ್ಲ. ಇನ್ನೊಂದೆಡೆ ಪ್ರೇಮ ಪ್ರಕರಣಗಳಲ್ಲಿ ಮೋಸ ಹೋಗಿ ಮದುವೆಯೇ ಬೇಡವೆಂಬ ನಿರ್ಧಾರಕ್ಕೆ ಬರುವವರು ಇಲ್ಲದಿಲ್ಲ.
ಆರ್ಥಿಕ ಸ್ಥಿತಿ ಸುಧಾರಿಸುವತ್ತ ಚಿತ್ತ
ಇದೆಲ್ಲದರ ಮಧ್ಯೆ ಮದುವೆಯಾದರೆ ಬದುಕಿನಲ್ಲಿ ಎಂಜಾಯ್ ಮಾಡೋಕೆ ಆಗಲ್ಲ ಹಾಗಾಗಿ ಮದುವೆಯನ್ನು ಮುಂದಕ್ಕೆ ಹಾಕುವವರು ಇಲ್ಲದಿಲ್ಲ. ಒಟ್ಟಾರೆ ಹುಡುಗ, ಹುಡುಗಿಯರಲ್ಲಿ ಮದುವೆ ತಡವಾಗಲು ಕಾರಣಗಳು ಅನೇಕ ಇವೆ. ಮದುವೆಯಾದ ಮೇಲೆ ಇಬ್ಬರೂ ಕೈತುಂಬಾ ದುಡಿಯಬೇಕು ಐಷಾರಾಮಿ ಜೀವನ ನಡೆಸಬೇಕು, ಬದುಕಿನಲ್ಲಿ ಯಾವುದೇ ರೀತಿಯ ಆರ್ಥಿಕ ತೊಂದರೆಗಳು ಬರಬಾರದು ಎಂದು ಯೋಚಿಸುವವರೇ ಜಾಸ್ತಿ. ಹೀಗಾಗಿ ಅದಕ್ಕೊಸ್ಕರ ಆರ್ಥಿಕ ಸ್ಥಿತಿಯನ್ನು ಸದೃಢ ಮಾಡಿಕೊಳ್ಳುವತ್ತ ಚಿಂತಿಸುವವರು ಇಲ್ಲದಿಲ್ಲ.
ಮನುಷ್ಯರ ಮನೋಸ್ಥಿತಿಗಳು ಒಂದೇ ರೀತಿ ಇಲ್ಲ. ಪ್ರತಿಯೊಬ್ಬರೂ ಒಂದೊಂದು ರೀತಿಯಾಗಿ ಯೋಚಿಸುತ್ತಾರೆ. ಹಿಂದಿನಂತೆ ಬದುಕು ಹೇಗೆ ಸಾಗುತ್ತೋ ಹಾಗೆಯೇ ಸಾಗುವ ಬದಲು ತಮ್ಮದೇ ಹಾದಿಯನ್ನು ಸೃಷ್ಟಿಸಿಕೊಂಡು ಅದರಲ್ಲಿಯೇ ಸಾಗಬೇಕೆಂದು ಬಯಸುವವರೇ ಜಾಸ್ತಿ. ಇಂತಹ ಸಂದರ್ಭಗಳಲ್ಲಿ ಸಂಗಾತಿಗಳ ಆಲೋಚನೆಗಳು, ನಿರ್ಧಾರಗಳು ಹೊಂದಿಕೆಯಾದರೆ ಅಥವಾ ಹೊಂದಿಕೊಳ್ಳುವ ಮನಸ್ಥಿತಿಗಳು ಇದ್ದರೆ ಮಾತ್ರ ಬದುಕು ಹಸನಾಗಿರುತ್ತದೆ.

ಮಗು ಪಡೆಯುವತ್ತ ಆದ್ಯತೆ ನೀಡಬೇಕು
ಹತ್ತು ಹಲವು ನಿರೀಕ್ಷೆಗಳೆಲ್ಲವೂ ಹೊಂದಿಕೆಯಾಗಿ ತಾವು ಅಂದುಕೊಂಡಂತಹ ವರ ಅಥವಾ ವಧು ಸಿಕ್ಕಿ ಮದುವೆ ಆಗಿಬಿಡುತ್ತದೆ. ಈ ಸಂದರ್ಭದಲ್ಲಿ ನೂತನ ವಧು-ವರರು ಮಗುವಿನ ಬಗ್ಗೆ ಗಮನಹರಿಸಬೇಕಾಗುತ್ತದೆ. ಏಕೆಂದರೆ ತಾವು ಅಂದುಕೊಂಡಿದ್ದನ್ನು ಪಡೆಯುವುದರಲ್ಲಿ ವಯಸ್ಸು ಕಳೆದು ಹೋಗಿರುತ್ತದೆ. ಮಗುವನ್ನು ಹೊರತುಪಡಿಸಿ ಬೇರೆಲ್ಲವನ್ನು ಯಾವಾಗ ಬೇಕಾದರೂ ಪಡೆದುಕೊಳ್ಳಬಹುದು ಆದರೆ ಸಂತನೋತ್ಪತ್ತಿ ವಿಚಾರದಲ್ಲಿ ಹಾಗೆ ಆಗುವುದಿಲ್ಲ. ಹೀಗಾಗಿ ಮದುವೆಯಾದ ಕೂಡಲೇ ಮಗು ಪಡೆಯುವತ್ತ ಗಮನಹರಿಸಿ ಎನ್ನುತ್ತದೆ ವೈದ್ಯಲೋಕ.
ಮೊದಲೇ ವಿವಾಹ ತಡವಾಗಿರುತ್ತದೆ. ಅದರ ಜತೆ ಮಗುವನ್ನು ತಡವಾಗಿ ಪಡೆದರಾಯಿತು ಅಂದು ಕೊಳ್ಳುವುದು ಇವತ್ತಿನ ಪರಿಸ್ಥಿತಿಯಲ್ಲಿ ಒಳ್ಳೆಯ ತೀರ್ಮಾನವಲ್ಲ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ. ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರೀ ಹೆಣ್ಣಿನಲ್ಲಿ ಮಾತ್ರ ಇಲ್ಲ ಗಂಡಿನಲ್ಲೂ ಇದೆ. ಹೀಗಾಗಿ ವಯಸ್ಸು ಮೀರಿದ ಬಳಿಕ ಮಗುವನ್ನು ಪಡೆಯುತ್ತೇವೆ ಎಂಬ ನಿರ್ಧಾರಕ್ಕೆ ಬರುವುದು ಸೂಕ್ತವಲ್ಲ ಎಂದೇ ಹೇಳಲಾಗುತ್ತಿದೆ. ಪುರುಷರಲ್ಲಿ ವಯಸ್ಸಾಗುತ್ತಿದ್ದಂತೆ ವಂಶಾವಳಿಯ ಮೇಲೆ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ಅನೇಕ ಅಧ್ಯಯನಗಳಾಗಿದ್ದು ಅದರಂತೆ ಪುರುಷರಿಗೆ ವಯಸ್ಸಾದಂತೆ ಹುಟ್ಟುವ ಮಕ್ಕಳಲ್ಲಿ ಇಂತಹ ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆಯಂತೆ.
ಮಗುಪಡೆಯುವುದನ್ನು ಮುಂದಕ್ಕೆ ಹಾಕಬೇಡಿ
ಹಾಗೆಯೇ ಮಹಿಳೆಯರಲ್ಲಿ 25 ವರ್ಷ ವಯಸ್ಸಿನ ನಂತರ ಉತ್ಪತ್ತಿಯಾಗುವ ಅಂಡಾಣುವಿನ ಗುಣಮಟ್ಟ ಕಡಿಮೆಯಾಗುತ್ತ ಬರುತ್ತದೆ. ಗರ್ಭದಲ್ಲಿನ ಭ್ರೂಣದ ಮೊದಲ ಹಂತವು ಋತುಚಕ್ರದಲ್ಲಿ ನಷ್ಟವಾಗುವ ಪ್ರಮಾಣ ಹೆಚ್ಚುತ್ತದೆ ಎಂದು ಹೇಳಲಾಗಿದೆ. ಇದೆಲ್ಲವನ್ನು ಗಮನಿಸಿದ ಬಳಿಕ ತಡವಾಗಿ ವಿವಾಹವಾದವರೂ, ವಿವಾಹದ ಬಳಿಕ ಮಗುವನ್ನು ಪಡೆಯುವ ವಿಚಾರದಲ್ಲಿ ಮುಂದಕ್ಕೆ ಹಾಕುವುದು ಅಷ್ಟೊಂದು ಸೂಕ್ತವಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳುವುದು ಒಳ್ಳೆಯದು.












Click it and Unblock the Notifications