55ನೇ ವಯಸ್ಸಲ್ಲಿ ಕೀಲುಗಳು ನೋಯುತ್ತಿರುವಾಗ ಮಕ್ಕಳಿಗೆ ನಿಮ್ಮ ಕಾಲ್ ರಿಸೀವ್ ಮಾಡಲೂ ಪುರುಸೊತ್ತಿರುವುದಿಲ್ಲ: ಸ್ಮೃತಿ ಇರಾನಿ
Smriti Irani: ಬಿಜೆಪಿ ಹಿರಿಯ ನಾಯಕಿ, ಮಾಜಿ ಕೇಂದ್ರ ಸಚಿವೆ ಹಾಗೂ ನಟಿ ಸ್ಮೃತಿ ಇರಾನಿ ತಾಯ್ತನದ ಹಿಂದಿರುವ ಕಹಿ ಸತ್ಯಗಳನ್ನು ಹೊರಹಾಕಿದ್ದಾರೆ. ಮಗುವಿಗೆ ನಿಮ್ಮ ಅಗತ್ಯ ಇಲ್ಲ ಅಂತಾದಾಗ ತಾಯಿಯಾಗಿ ನಿಮ್ಮ ಕೆಲಸ ಮುಗಿಯುತ್ತದೆ ಎನ್ನುವ ಅವರ ಮಾತು ಉದ್ಯೋಗಸ್ಥ ತಾಯಿಯ ಅಸಹಾಯಕತೆಗೆ ಕನ್ನಡಿ ಹಿಡಿಯುವಂತಿದೆ.
ಸ್ಮೃತಿ ಇರಾನಿ ಹಿಂದೆ ನಟಿಯಾಗಿ ಬಹಳ ಹೆಸರು ಮಾಡಿದವರು. ಕೇಂದ್ರ ಸರ್ಕಾರದಲ್ಲಿ ಸಚಿವೆಯಾಗಿಯೂ ಪ್ರಸಿದ್ಧಿಗೆ ಬಂದವರು. ಈಗ ಮತ್ತೆ ನಟನೆ, ಸಾಮಾಜಿಕ ಚಟುವಟಿಕೆಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಮ್ಯಾಮ್ ಪವರ್ ಕಾನ್ಫರೆನ್ಸ್ 2026 ಕಾರ್ಯಕ್ರಮದಲ್ಲಿ ಸ್ಮೃತಿ ಅವರು ತಾಯ್ತನದ ಸಿಹಿ-ಕಹಿ ವಾಸ್ತವಗಳ ಕುರಿತು ಮಾತನಾಡಿದರು.

ಮೂರು ಮಕ್ಕಳ ತಾಯಿಯಾಗಿರುವ ಸ್ಮೃತಿ, ಮೊದಲು ಕಿರುತೆರೆಯ ಹೆಸರಾಂತ ನಟಿಯಾಗಿ ಹಾಗೂ ನಂತರ ರಾಜಕಾರಣಿಯಾಗಿ ಹೈ ಲೆವೆಲ್‌ನ ಕೆಲಸಗಳನ್ನು ನಿಭಾಯಿಸುತ್ತಾ ಮಕ್ಕಳನ್ನು ಬೆಳೆಸುವ ಜವಾಬ್ದಾರಿಯನ್ನು ಸರಿದೂಗಿಸಿದ ದಿನಗಳನ್ನು ನೆನಪಿಸಿಕೊಂಡರು. ಅವರ ಮಾತುಗಳಲ್ಲಿ ಇಂದಿನ ಉದ್ಯೋಗಸ್ಥ ತಾಯಂದಿರ ಕಷ್ಟಗಳು, ಅವರು ಎದುರಿಸುವ ಸವಾಲುಗಳ ಬಗೆಗಿನ ವಿಚಾರಗಳಿದ್ದವು. ಅದಕ್ಕಿಂತ ಹೆಚ್ಚಾಗಿ ತಾಯಿ ಅಂತ ಸಿಕ್ಕಾಪಟ್ಟೆ ವೈಭವೀಕರಣ ಮಾಡುವ ಸಮಾಜದಲ್ಲಿ ನಿಜವಾಗಿ ಅಮ್ಮನ ಕಥೆ ಏನಾಗಿದೆ ಅನ್ನುವ ಕಹಿ ಸತ್ಯಗಳು ಅಡಗಿದ್ದವು.
'ಕೆಲಸ ಮುಗಿಸಬೇಕು ಅನ್ನೋದು ಬಿಟ್ಟು ಮತ್ತೇನೂ ನೆನಪಿರಲ್ಲ'
'ನಾವು ಹೆಂಗಸರು ಸದಾ ನಮ್ಮ ತಲೆ ಮೇಲಿರುವ ಕೆಲಸವನ್ನು ಪೂರ್ಣಗೊಳಿಸುವ ಕಡೆಗೇ ಕಂಪ್ಲೀಟ್ ಗಮನ ಹರಿಸಿರುತ್ತೇವೆ. ಆ ಕೆಲಸವನ್ನು ಮಾಡಿ ಮುಗಿಸಬೇಕು ಅನ್ನುವುದನ್ನು ಹೊರತುಪಡಿಸಿ ಬೇರೇನೂ ನೆನಪಿರುವುದಿಲ್ಲ. ಮಗುವಿಗೆ ಊಟ ಕೊಡಬೇಕಿತ್ತು, ಹೋಂವರ್ಕ್ ಮುಗಿದಿದೆಯಾ ಅಂತಾ ಕನ್‌ಫರ್ಮ್ ಮಾಡಬೇಕಿತ್ತು. ಇನ್ನೊಂದು ಕಡೆ ಆಫೀಸಿನ ಪ್ರಸೆಂಟೇಷನ್ ಕೂಡ ತಯಾರಾಗಿದೆ ಅನ್ನೋದನ್ನು ಕನ್‌ಫರ್ಮ್ ಮಾಡಬೇಕು. ಹೀಗೆ ಕೆಲಸದ ಮೇಲೆ ಕೆಲಸ, ಜವಾಬ್ದಾರಿ ಮೇಲೆ ಜವಾಬ್ದಾರಿಗಳ ನಡುವೆ ನನ್ನನ್ನೂ ಸೇರಿಸಿ ನಮ್ಮ ಹೆಂಗಸರು ಎಷ್ಟೋ ರಾತ್ರಿಗಳು ನಿದ್ದೆ ಮಾಡುವುದಿಲ್ಲ,' ಎಂದು ಹೇಳಿದರು.
'ಮಕ್ಕಳ ಬಾಯಿಂದ ಬರುವ ಉತ್ತರ ಬೆಚ್ಚಿಬೀಳಿಸುವಂತಿರುತ್ತದೆ'
ಇಷ್ಟೆಲ್ಲ ಕಷ್ಟಪಟ್ಟು ಮಕ್ಕಳನ್ನು ಬೆಳೆಸಿದರೆ ಬೆಳೆದ ಮಕ್ಕಳ ಬಾಯಿಂದ ಬರುವ ಉತ್ತರ ಬೆಚ್ಚಿಬೀಳಿಸುವಂತಿರುತ್ತದೆ ಎಂಬ ಮಾತನ್ನೂ ಸ್ಮೃತಿ ಹೇಳಿದ್ದಾರೆ. 'ಅಪ್ಪಿ ತಪ್ಪಿ ಇದನ್ನೇನಾದ್ರೂ ಮಕ್ಕಳ ಮುಂದೆ ಹೇಳಿದ್ರೆ ಮುಗೀತು, ನಾನು ಹೇಳಿದ್ನಾ ನನ್ನ ಹುಟ್ಟಿಸಿ ಅಂತ, ನೀವೇ ಮಾಡ್ಕೊಂಡಿದ್ದು, ಈಗ ಅನುಭವಿಸಿ ಅಂತಾರೆ. ಅರೆ, ನಿನ್ನೆಯಷ್ಟೇ ನಾನು ಇವನ ಚಡ್ಡಿಗಳನ್ನು ತೊಳೆಯುತ್ತಿದ್ದೆ, ಈಗ ಈ ವ್ಯಕ್ತಿ ನನಗೆ ಎದುರು ಮಾತನಾಡುತ್ತಿದ್ದಾನಲ್ಲ ಎಂದು ಆಶ್ಚರ್ಯವಾಗುತ್ತೆ. ಆದರೆ ಇದಕ್ಕೆ ಉತ್ತರಿಸಲು ನಮ್ಮ ಬಳಿ ಮಾತುಗಳೇ ಇರೋದಿಲ್ಲ,' ಎಂದು ಅವರು ಹೇಳಿದ್ದಾರೆ.
'ವೃದ್ಧಾಪ್ಯದ ವೇಳೆ ನೋವು ಕೇಳಲು ಯಾರಿಗೂ ಸಮಯ ಇರೋದಿಲ್ಲ'
ಬಹಳ ನೋವಿನಿಂದ ತಾಯಂದಿರ ಕಷ್ಟವನ್ನು ವಿವರಿಸಿದ ಸ್ಮೃತಿ, 'ಯಾವಾಗಲೂ ಜವಾಬ್ದಾರಿ ಪೂರೈಸುವ ತವಕದಲ್ಲಿರುವ ಹೆಂಗಸರಿಗೆ ಒಂದು ಹಂತದಲ್ಲಿ ಹೇಳಿಕೊಳ್ಳಲು ಏನೂ ಇರುವುದಿಲ್ಲ. ಅವರಿಗೆ 50 ರಿಂದ 55 ವರ್ಷ ವಯಸ್ಸಾದಾಗ ಅವರ ಮಕ್ಕಳು ತಮ್ಮದೇ ಆದ ಜೀವನವನ್ನು ನಡೆಸಲು ಹೊರಟುಹೋದಾಗ ಒಂದು ಸಮಯ ಬರುತ್ತದೆ. ಆಗ ನೀವು ಹಳೆಯ ದಿನಗಳನ್ನು ನೆನಪಿಸಿಕೊಳ್ಳಲು ಪ್ರಾರಂಭಿಸುತ್ತೀರಿ. ಕೀಲುಗಳು ನೋಯುತ್ತಿರುತ್ತದೆ. ಅದನ್ನು ಬೇರೆ ಯಾರಿಗೂ ವಿವರಿಸಲು ಸಾಧ್ಯವಾಗುವುದಿಲ್ಲ. ಮಕ್ಕಳಿಗೆ ಕಾಲ್ ಮಾಡಿದರೆ ಅವರು ಬ್ಯುಸಿ. ನಿಮಗೆ ಮರಳಿ ಕರೆ ಮಾಡಲು ಅವರ ಬಳಿ ಸಮಯ ಇಲ್ಲ. ಆ ಕ್ಷಣ ಬಹಳ ನೋವಿನದು. ನಾನು ಹುಟ್ಟಿಸಿದ ಮಗುವಿಗೆ ಇನ್ಮುಂದೆ ನನ್ನ ಅಗತ್ಯವಿಲ್ಲ ಅನಿಸುತ್ತದೆ. ಎಲ್ಲ ಖಾಲಿ ಎಂಬ ಭಾವನೆ. ಹೃದಯಕ್ಕೆ ದೊಡ್ಡ ಘಾಸಿಯಾದ ಹಾಗಾಗುತ್ತದೆ,' ಎನ್ನುತ್ತಾರೆ.
ಸ್ಮೃತಿ ಇರಾನಿ ಅವರು 2001ರಲ್ಲಿ ಪಾರ್ಸಿ ಉದ್ಯಮಿ ಝುಬಿನ್ ಇರಾನಿ ಅವರನ್ನು ವಿವಾಹವಾದರು. ಈ ದಂಪತಿಗೆ ಝೋಹರ್ ಎಂಬ ಮಗ ಮತ್ತು ಝೋಯಿಶ್ ಎಂಬ ಮಗಳು ಇದ್ದಾರೆ. ಝುಬಿನ್ ಅವರ ಮೊದಲ ಪತ್ನಿಯ ಮಗಳಾದ ಶನೆಲ್ ಇರಾನಿ ಅವರನ್ನೂ ಸ್ಮೃತಿ ನೋಡಿಕೊಳ್ಳುತ್ತಿದ್ದಾರೆ.
ಇದೇ ವಿಚಾರವನ್ನು ಹಿಂದೆ ಕೊಂಚ ವ್ಯಂಗ್ಯ ತಮಾಷೆ ಎಲ್ಲ ಸೇರಿಸಿ ಹಿರಿಯ ಉದ್ಯಮಿ ಇಂದ್ರಾ ನೂಯಿ ಅವರೂ ಹೇಳಿದ್ದರು. ಉದ್ಯೋಗಸ್ಥ ಮಹಿಳೆ ಸೋ ಕಾಲ್ಡ್ ಪರ್ಫೆಕ್ಟ್ ತಾಯಿಯಾಗುವುದು ಕಷ್ಟವಿದೆ. ಅವಳು ಬೆಳೆಯುವ ಮಗಳ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಲಿಕ್ಕೂ ತಡಬಡಾಯಿಸುತ್ತಾಳೆ. ಆಮೇಲೆ ಸಿಕ್ಕಾಪಟ್ಟೆ ಗಿಲ್ಟ್ ಅಂದರೆ ತಪ್ಪಿತಸ್ಥ ಭಾವ ಕಾಡುತ್ತದೆ. ಅದರಿಂದ ಹೊರಬರುವುದು ಕಷ್ಟ ಎನ್ನುತ್ತಾರೆ.


Click it and Unblock the Notifications
