Ram Halwa Recipe: ರಾಮಲಲ್ಲಾನಿಗೆ 7000 ಕೆಜಿ ಹಲ್ವಾ ಸಿದ್ಧತೆ: ನಿಮಗಿದು ಸವಿಯುವ ಆಸೆಯೇ? ಮನೆಯಲ್ಲೇ ಮಾಡಿ ರೆಸಿಪಿ ಇಲ್ಲಿದೆ...
ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯು ಜನವರಿ 22ರಂದು ರಾಮಮಂದಿರದ ಭವ್ಯ ಉದ್ಘಾಟನೆಯೊಂದಿಗೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಮಹಾಮಸ್ತಕಾಭಿಷೇಕದ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು ಇಡೀ ಅಯೋಧ್ಯೆವನ್ನೇ ಮಧುವಣಗಿತ್ತಿಯಂತೆ ಸಿಂಗಾರಗೊಳಿಸಲಾಗಿದೆ.
ಈ ಸಮಾರಂಭದಲ್ಲಿ ರಾಜಕಾರಣಿಗಳು, ಬಾಲಿವುಡ್ ಸೆಲೆಬ್ರಿಟಿಗಳು, ಕೈಗಾರಿಕೋದ್ಯಮಿಗಳು ಮತ್ತು ಕ್ರಿಕೆಟಿಗರು ಸೇರಿದಂತೆ ಉನ್ನತ ಮಟ್ಟದ ಗಣ್ಯರು ಭಾಗವಹಿಸಲಿದ್ದಾರೆ. ಈ ದಿನ 1.5 ಲಕ್ಷ ಭಕ್ತರಿಗೆ ರಾಮ್ ಹಲ್ವಾದ ರೂಪದಲ್ಲಿ ಪ್ರಸಾದ ನೀಡಲಾಗುತ್ತಿದ್ದು, ಬಾಣಸಿಗ ವಿಶು ಮನೋಹರ್ ಅವರಿಗೆ ಈ ಹಲ್ವಾ ತಯಾರಿಸುವ ಜವಾಬ್ದಾರಿ ವಹಿಸಲಾಗಿದೆ.

ಬಾಣಸಿಗ ವಿಷ್ಣು ಮನೋಹರ್ ಯಾರು?
ಬಾಣಸಿಗ ವಿಷ್ಣು ಮನೋಹರ್ ನಾಗ್ಪುರದ ದಾಖಲೆ ಹೊಂದಿರುವ ಪಾಕಶಾಸ್ತ್ರ ತಜ್ಞ. ಇವರು ಅನೇಕ ಅಡುಗೆ ಪ್ರದರ್ಶನಗಳು ಮತ್ತು ನವೀನ ಭಕ್ಷ್ಯಗಳಿಗಾಗಿ ಪ್ರಸಿದ್ಧರಾಗಿದ್ದಾರೆ. ಈ ಬಾಣಸಿಗ 12 ವಿಶ್ವ ದಾಖಲೆಗಳನ್ನು ಹೊಂದಿರುವವರು. ಇತ್ತೀಚಿನದು ಅವರು ಕೇವಲ 285 ನಿಮಿಷಗಳಲ್ಲಿ 75 ವಿವಿಧ ಅಕ್ಕಿಯಿಂದ 75 ಭಕ್ಷ್ಯಗಳನ್ನು ಬೇಯಿಸುವ ಅದ್ಭುತ ಸಾಧನೆಯಾಗಿದೆ. ಈಗ ಅವರು ರಾಮಲಲ್ಲಾಗೆ ಪ್ರಸಾದವನ್ನು ಮಾಡಲು ಸಿದ್ಧರಾಗಿದ್ದಾರೆ.
ಪ್ರಸಾದ ತಯಾರಿಸಲು ಬಳಸುವ ಕಡಾಯಿಯು 1400 ಕೆ.ಜಿ ತೂಗುತ್ತದೆ ಎಂದು ಅಂದಾಜಿಸಲಾಗಿದೆ. ಈ ಸಂದರ್ಭಕ್ಕಾಗಿ ನಾಗ್ಪುರದಿಂದ ಅಯೋಧ್ಯೆಗೆ ಅದನ್ನು ಕೊಂಡೊಯ್ಯಲಾಗಿದೆ. ಹಲ್ವಾ ತಯಾರಿಸಲು 900 ಕೆಜಿ ರವೆ, 1000 ಕೆಜಿ ಸಕ್ಕರೆ, 2500 ಲೀಟರ್ ಹಾಲು, 300 ಕೆಜಿ ಡ್ರೈ ಫ್ರೂಟ್ಸ್, 1000 ಕೆಜಿ ತುಪ್ಪ ಮತ್ತು 2500 ಲೀಟರ್ ನೀರು ಬೇಕಾಗುತ್ತದೆ.
ರಾಮ ಪ್ರಸಾದ ಮಾಡುವ ವಿಧಾನ
ರಾಮ್ ಹಲ್ವಾ ಸಾಂಪ್ರದಾಯಿಕ ಭಾರತೀಯ ಸಿಹಿತಿಂಡಿಯಾಗಿದೆ. ಈ ಸಿಹಿ ತಿಂಡಿ ಜನರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಮೂಂಗ್ ದಾಲ್ ಹಲ್ವಾ ಎಂದೂ ಕರೆಯಲ್ಪಡುವ ಈ ರುಚಿಕರವಾದ ಖಾದ್ಯವು ಹಳದಿ ಹೆಸರು ಬೇಳೆ, ತುಪ್ಪ ಮತ್ತು ಸಕ್ಕರೆಯಿಂದ ಮಾಡುವ ಸಿಹಿ ಭಕ್ಷ್ಯವಾಗಿದೆ. ಸದ್ಯ ಬಾಣಸಿಗ ವಿಷ್ಣು ಮನೋಹರ್ ಅವರು ತಯಾರಿಸುವ ರಾಮ ಹಲ್ವಾದ ರುಚಿಯನ್ನು ಸವಿಯಲು ಜನ ಕಾತುರರಾಗಿದ್ದಾರೆ.

ರಾಮ್ ಹಲ್ವಾವನ್ನು ಹೆಚ್ಚಾಗಿ ಹಬ್ಬಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ತಯಾರಿಸಲಾಗುತ್ತದೆ. ನೀವು ನಿಮ್ಮ ಮನೆಯಲ್ಲಿ ರಾಮ ಹಲ್ವಾವನ್ನು ತಯಾರಿಸಬಹುದು. ರಾಮಮಂದಿರದ ಪ್ರತಿಷ್ಠಾಪನೆಯ ದಿನವನ್ನು ನೀವು ಕೂಡ ನಿಮ್ಮ ಮನೆಯಲ್ಲಿ ರಾಮ ಹಲ್ವಾ ತಯಾರಿಸುವ ಮೂಲಕ ಸಂಭ್ರಮಿಸಬಹುದು. ಹಾಗಾದರೆ ಮನೆಯಲ್ಲಿ ರಾಮ ಹಲ್ವಾ ತಯಾರಿಸುವುದು ಹೇಗೆ? ಅನ್ನೋದನ್ನು ತಿಳಿಯೋಣ.
ರಾಮ ಹಲ್ವಾ ಮಾಡಲು ಬೇಕಾಗುವ ಸಾಮಾಗ್ರಿಗಳು:-
*1 ಕಪ್ ಹಳದಿ ಹೆಸರು ಬೇಳೆ
*1 ಕಪ್ ತುಪ್ಪ
*1 ಕಪ್ ಸಕ್ಕರೆ
*2 ಕಪ್ ನೀರು
*1/2 ಟೀಚಮಚ ಏಲಕ್ಕಿ ಪುಡಿ
*ಅಲಂಕಾರಕ್ಕಾಗಿ ಕತ್ತರಿಸಿದ ಬಾದಾಮಿ, ಗೋಡಂಬಿ ಮತ್ತು ಪಿಸ್ತಾ
ಹೇಗೆ ತಯಾರಿಸುವುದು?
1. ಮೊದಲನೆಯದಾಗಿ, ಹಳದಿ ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು ಕನಿಷ್ಠ 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
2. ನೆನೆಸಿದ ಬೇಳೆಯನ್ನು ಸ್ವಲ್ಪ ನೀರನ್ನು ಬಳಸಿ ಸ್ವಲ್ಪ ಮಾತ್ರ ರುಬ್ಬಿಕೊಳ್ಳಿ, ತುಂಬಾ ಪೇಸ್ಟ್ ಆಗುವುದು ಬೇಡ.
3. ಪ್ರತ್ಯೇಕ ಪ್ಯಾನ್‌ನಲ್ಲಿ ಸಕ್ಕರೆ ಮತ್ತು ನೀರನ್ನು ಬೆರೆಸಿ ಸಿರಪ್ ತಯಾರಿಸಿ. ಸಕ್ಕರೆ ಸಂಪೂರ್ಣವಾಗಿ ಕರಗುವ ತನಕ ಮಿಶ್ರಣವನ್ನು ಬಿಸಿ ಮಾಡಿ ಚೆನ್ನಾಗಿ ಕಲಸಿ
4. ಮತ್ತೊಂದು ಪ್ಯಾನ್‌ನಲ್ಲಿ ತುಪ್ಪವನ್ನು ಬಿಸಿ ಮಾಡಿ, ಮಧ್ಯಮ ಉರಿಯಲ್ಲಿ ರುಬ್ಬಿದ ಬೇಳೆ ಪೇಸ್ಟ್ ಅನ್ನು ಸೇರಿಸಿ ಮತ್ತು ಉಂಡೆಯಾಗದಂತೆ ನಿರಂತರವಾಗಿ ಕಲಸಿ. ಗೋಲ್ಡನ್ ಬ್ರೌನ್ ಬರುವವರೆಗೂ ತುಪ್ಪದಲ್ಲಿ ಬೇಯಿಸಿ.

5. ಬೇಯಿಸಿದ ಬೇಳೆಗೆ ಸಕ್ಕರೆ ಪಾಕವನ್ನು ನಿಧಾನವಾಗಿ ಸೇರಿಸಿ, ನಿರಂತರವಾಗಿ ಬೆರೆಸುತ್ತಾ ಕಲಸುತ್ತಿರಿ. ಮಿಶ್ರಣ ಮಾಡುವಾಗ ಪಾಕ ಒಂದೇ ಕಡೆ ಉಳಿಯದಂತೆ ನೋಡಿಕೊಳ್ಳಿ. ಕಡಿಮೆ ಉರಿಯಲ್ಲಿ ಇದನ್ನು ಕಲಸಿ
6. ಹಿತವಾದ ಪರಿಮಳ ಮತ್ತು ರುಚಿಗಾಗಿ ಮಿಶ್ರಣಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಿ. ಹಲ್ವಾ ಸಿದ್ಧವಾಗುತ್ತಿದ್ದಂತೆ ಪ್ಯಾನ್‌ನ ಬದಿಯಲ್ಲಿ ತುಪ್ಪ ಬಿಡಲು ಪ್ರಾರಂಭಿಸುತ್ತದೆ
7. ಹೀಗಾದ ಬಳಿಕ ಗ್ಯಾಸ್ ಆಫ್ ಮಾಡಿ, ಇದಕ್ಕೆ ಬಾದಾಮಿ, ಗೋಡಂಬಿ ಮತ್ತು ಪಿಸ್ತಾಗಳಂತಹ ಕತ್ತರಿಸಿದ ಡ್ರೈ ಫ್ರೂಟ್ಸ್ ಗಳನ್ನು ಹಾಕಿ ರಾಮ ಹಲ್ವಾವನ್ನು ಅಲಂಕರಿಸಿದರೆ ರಾಮ ಹಲ್ವಾ ರೆಡಿ
8. ರಾಮ ಹಲ್ವಾ ಬಿಸಿಯಾಗಿರುವಾಗಲೇ ತಿಂದರೆ ತುಂಬಾ ರುಚಿಯಾಗಿರುತ್ತದೆ.
ರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಈ ರಾಮ ಹಲ್ವಾವನ್ನು ನಿಮ್ಮ ಮನೆಯಲ್ಲಿ ಮಾಡಿ ನೀವು ಕೂಡ ಆನಂದಿಸಿ.












Click it and Unblock the Notifications