Pregnancy: ಗರ್ಭಿಣಿ ಮಹಿಳೆಯರು ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ..!
ಗರ್ಭಿಣಿ ಮಹಿಳೆಯರು ಆರೋಗ್ಯದ ಕುರಿತು ಎಷ್ಟು ಕಾಳಜಿ ವಹಿಸುತ್ತಾರೆಯೋ ಅಷ್ಟೇ ಒಳ್ಳೆಯದು. ಒಂದಷ್ಟು ಎಚ್ಚರಿಕೆಗಳನ್ನು ವಹಿಸಿದರೆ ಸುಖ ಪ್ರಸವಕ್ಕೂ ಅನುಕೂಲವಾಗುತ್ತದೆ. ಇದೆಲ್ಲದರ ನಡುವೆ ಗರ್ಭಿಣಿ ಮಹಿಳೆಯರು ಏನೆಲ್ಲ ಮಾಡಬಾರದು ಎಂಬುದರ ಬಗ್ಗೆ ವೈದ್ಯರು ದೊಡ್ಡದಾದ ಪಟ್ಟಿಯನ್ನೇ ನೀಡಿದ್ದಾರೆ.
ಗರ್ಭಿಣಿ ಮಹಿಳೆಯರು ಏನಾದರೂ ಎಡವಟ್ಟು ಮಾಡಿದರೆ ಅದರ ಪರಿಣಾಮಗಳು ಕೇವಲ ಅವರ ಆರೋಗ್ಯದ ಮೇಲೆ ಮಾತ್ರವಲ್ಲದೆ, ಮುಂದೆ ಹುಟ್ಟಲಿರುವ ಮಗುವಿನ ಮೇಲೆಯೂ ಬೀರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಗರ್ಭಿಣಿ ಮಹಿಳೆಯರು ಎಚ್ಚರಿಕೆ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕಾಗುತ್ತದೆ.

ಇತ್ತೀಚೆಗೆ ಪಾರ್ಟಿ ಹೆಸರಲ್ಲಿ ಧೂಮಪಾನ, ಮದ್ಯಪಾನ ಮಾಡುವ ಚಟಗಳು ಹೆಚ್ಚಾಗಿವೆ. ಸಿಗರೇಟ್, ಮದ್ಯ ಸೇವಿಸುವುದು ಸೇರಿದಂತೆ ಕೆಲವು ದುಶ್ಚಟಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಎಂಜಾಯ್ ಹೆಸರಲ್ಲಿ ಮಾಡುವ ಎಡವಟ್ಟುಗಳು ಭಾರೀ ಪರಿಣಾಮ ಬೀರುತ್ತಿವೆ.
ಒಂದು ವೇಳೆ ಗರ್ಭಿಣಿಯಾಗುವ ಮುನ್ನ ಇಂತಹ ದುಶ್ಚಟಗಳನ್ನು ಹೊಂದಿದ್ದರೆ, ಅವುಗಳನ್ನು ಬಿಡುವುದು ಒಳ್ಳೆಯದು. ಗರ್ಭಾವಸ್ಥೆಯಲ್ಲಿ ಇಂತಹದನೆಲ್ಲ ಬಿಟ್ಟು ಬಿಡಿ. ಏಕೆಂದರೆ ಇದು ಗರ್ಭದಲ್ಲಿರುವ ಮಗುವಿನ ಮೇಲೆ ದುಷ್ಪರಿಣಾಮ ಬೀರಲಿದ್ದು, ಮಗುವಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.
ಗರ್ಭಿಣಿ ಮಹಿಳೆಯರು ಇದನ್ನೆಲ್ಲ ತ್ಯಜಿಸಿ
ಇಷ್ಟೇ ಮಾತ್ರವಲ್ಲದೆ, ತಂಬಾಕು ಅಗೆಯುವುದು ಅಥವಾ ಬಾಯಲ್ಲಿಟ್ಟುಕೊಳ್ಳುವುದು, ನಶ್ಯೆ ಸೇವಿಸುವುದು ಸಾಮಾನ್ಯವಾಗಿ ಗ್ರಾಮೀಣ ಮಹಿಳೆಯರಲ್ಲಿ ಕಂಡು ಬರುತ್ತದೆ. ಇದು ಮಾರಕವಾಗಿದೆ. ಆದ್ದರಿಂದ ಗರ್ಭಿಣಿ ಮಹಿಳೆಯರು ಇದನ್ನೆಲ್ಲ ತ್ಯಜಿಸಲೇ ಬೇಕಾಗುತ್ತದೆ. ಏಕೆಂದರೆ ಇದರಿಂದ ಮಗುವಿಗೆ ಅಪಾಯವಾಗುವುದಲ್ಲದೆ, ಗರ್ಭಪಾತ, ಅವಧಿಗೆ ಮೊದಲೇ ಹೆರಿಗೆ, ಮಗುವಿನ ತೂಕ ಕಡಿಮೆಯಾಗುವುದು ಹೀಗೆ ಹಲವು ತೊಂದರೆ ಕಾಣಿಸಿಕೊಳ್ಳುತ್ತದೆ.
ನಿಜ ಹೇಳಬೇಕೆಂದರೆ ಆರೋಗ್ಯಕ್ಕೆ ಯಾವುದು ಮಾರಕವಾಗಿದೆಯೋ ಅದನ್ನೇ ನಾವು ಅಭ್ಯಾಸ ಮಾಡಿಕೊಂಡಿರುತ್ತೇವೆ. ಆದರೆ ಇದೆಲ್ಲವೂ ಆರೋಗ್ಯದ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಅದನ್ನು ತ್ಯಜಿಸುವುದೇ ಉತ್ತಮ. ಇದರಿಂದ ಅವರ ಆರೋಗ್ಯವಲ್ಲದೆ, ಮುಂದೆ ಹುಟ್ಟಲಿರುವ ಮಗು ಕೂಡ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ. ಮಹಿಳೆಯರು ತಾವು ಸೇವಿಸುವ ಆಹಾರದ ಬಗ್ಗೆಯೂ ಎಚ್ಚರವಹಿಸಬೇಕು. ಏಕೆಂದರೆ ಆಹಾರದಲ್ಲಿರುವ ಕೆಲವು ಸೂಕ್ಷಾಣು ಜೀವಿಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಈ ಸಂದರ್ಭದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವುದು ಅತ್ಯಗತ್ಯ.

ಆರೋಗ್ಯದ ಮೇಲೆ ದುಷ್ಪರಿಣಾಮ
ಅತಿಯಾಗಿ ಸಕ್ಕರೆ ಸೇವನೆ, ಆಗಾಗ್ಗೆ ಟೀ, ಕಾಫಿ ಸೇವಿಸುವುದು, ಚಾಕಲೆಟ್ ತಿನ್ನುವುದು ಒಳ್ಳೆಯದಲ್ಲ. ಇದರಲ್ಲಿರುವ ಕೆಫೀನ್ ಅಂಶ ಆಹಾರದಲ್ಲಿ ದೊರೆಯುವ ಕಬ್ಬಿಣದ ಅಂಶವನ್ನು ತಡೆಯುವ ಶಕ್ತಿ ಹೊಂದಿರುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.
ಇನ್ನು ಚಿಕ್ಕ ಪುಟ್ಟ (ಶೀತ, ತಲೆನೋವು ಹೀಗೆ) ತೊಂದರೆ ಕಾಣಿಸಿಕೊಂಡಾಗ ಮಾತ್ರೆ ಸೇವಿಸುವುದನ್ನು ನಿಲ್ಲಿಸಬೇಕು. ಯಾವುದೇ ಮಾತ್ರೆ ಸೇವಿಸುವ ಮೊದಲು ವೈದ್ಯರ ಸಲಹೆ ಅಗತ್ಯವಾಗಿ ಪಡೆಯಬೇಕು. ಇಲ್ಲದಿದ್ದರೆ ಸೇವಿಸುವ ತಾಯಿಗೂ ಹೊಟ್ಟೆಯಲ್ಲಿರುವ ಮಗುವಿಗೂ ಅಪಾಯ ತಂದೊಡ್ಡಬಹುದು.
ಮೂಢನಂಬಿಕೆಗೆ ಮಾರು ಹೋಗಬೇಡಿ
ಮೂಢನಂಬಿಕೆಗೆ ಮಾರು ಹೋಗದೆ, ಹೆಚ್ಚಿನ ಪಥ್ಯವೂ ಮಾಡದೆ ಉತ್ತಮ ಆರೋಗ್ಯಕರ ತರಕಾರಿ, ಮೊಟ್ಟೆ, ಹಾಲು ಮುಂತಾದ ಆಹಾರವನ್ನು ಸೇವಿಸುವುದು ಒಳ್ಳೆಯದು. ವ್ಯಾಯಾಮ, ವಾಯುವಿಹಾರ ಮುಂದುವರೆಸಿ ಆದರೆ ತೂಕ ಕಡಿಮೆ ಮಾಡುವ ಇನ್ನಿತರ ಚಟುವಟಿಕೆಯಿಂದ ದೂರವಿರಿ. ವೈದ್ಯರ ಸಲಹೆ ಪಡೆದು ಗರ್ಭ ಧರಿಸಿದ 14ರಿಂದ 16 ವಾರಗಳ ಬಳಿಕ ಆರೋಗ್ಯ ವೃದ್ಧಿಸುವ ಮಾತ್ರೆಗಳಾದ ಐರನ್, ಪೋಲೆಟ್(ವಿಟಮಿನ್ ಬಿ9) ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ಸೇವಿಸುವುದು ಒಳ್ಳೆಯದು.
ಗರ್ಭಿಣಿ ಮಹಿಳೆಯರು ಔಷಧಿ ಸೇವಿಸುವುದು ಇರಬಹುದು ಅಥವಾ ಇನ್ನಿತರ ಯಾವುದೇ ಚಟುವಟಿಕೆ ನಡೆಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ. ಗರ್ಭಾವಸ್ಥೆಯಲ್ಲಿ ಮಹಿಳೆಯರು ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೀರೋ ಅಷ್ಟೇ ಅನುಕೂಲವನ್ನು ಪಡೆಯಬಹುದು ಎಂಬುವುದನ್ನು ಮರೆಯಬಾರದು.












Click it and Unblock the Notifications