Navratri Special Dish: ಪನೀರ್ ಕುಂದನ್ ಕಲಿಯನ್ ಪಾಕ ವಿಧಾನ...
ಒಂಬತ್ತು ದಿನಗಳ ಹಬ್ಬ ನವರಾತ್ರಿ ಈಗಾಗಲೇ ಆರಂಭವಾಗಿದೆ. ಈ ಸಮಯದಲ್ಲಿ ನಿತ್ಯ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿ ಮನೆ ಮಂದಿಗೆಲ್ಲಾ ಬಡಿಸಲಾಗುತ್ತದೆ. ಇದು ಹಬ್ಬದ ಸಂತಸವನ್ನು ಹೆಚ್ಚಿಸುತ್ತದೆ. ಅಡುಗೆ ಮನೆ ಘಮ ಘಮಿಸುತ್ತಿದ್ದರೆ ಹಬ್ಬದ ಕಳೆ ಅಧಿಕವಾಗಿರುತ್ತದೆ. ಹೀಗಾಗಿ ಹಬ್ಬದ ಸಮಯದಲ್ಲಿ ಗೃಹಿಣಿಯರು ವಿಶೇಷ ಖಾದ್ಯಗಳನ್ನು ತಯಾರಿಸುವುದು ವಾಡಿಕೆ.
ದಸರಾ ಹಬ್ಬಕ್ಕೆ ತಯಾರಿಸುವ ಬಗೆ ಬಗೆಯ ಖಾದ್ಯಗಳಲ್ಲಿ ಪನೀರ್ ಕುಂದನ್ ಕಲಿಯನ್ ಕೂಡ ಒಂದು. ಇದನ್ನು ಹೆಚ್ಚಾಗಿ ಕೋಲ್ಕಾತ್ತಾ ಭಾಗದಲ್ಲಿ ತಯಾರಿಸಲಾಗುತ್ತದೆ. ಕರ್ನಾಟಕದಲ್ಲೂ ಈ ಖಾದ್ಯವನ್ನು ತಯಾರಿಸುವವರು ಇದ್ದಾರೆ. ಆದರೆ ಹೆಚ್ಚಿನ ಜನರಿಗೆ ಈ ಖಾದ್ಯದ ಪರಿಚಯವಿಲ್ಲ. ಹಾಗಾದರೆ ಪನೀರ್ ಕುಂದನ್ ಕಲಿಯನ್ ತಯಾರಿಸುವುದು ಹೇಗೆ? ಅನ್ನೋದನ್ನು ಈಗ ತಿಳಿಯೋಣ.

ನೀವು ಕೂಡ ಪನೀರ್ ಕುಂದನ್ ಕಲಿಯನ್ ಅನ್ನು ದಸರಾ ಹಬ್ಬಕ್ಕೆ ಟ್ರೈ ಮಾಡಿ. ನಿಮ್ಮ ಅನುಭವವನ್ನು ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ. ಹಾಗಾದರೆ ತಡ ಮಾಡುವುದು ಬೇಡ ಪನೀರ್ ಕುಂದನ್ ಕಲಿಯನ್ ತಯಾರಿಸುವ ವಿಧಾನವನ್ನು ಈಗ ತಿಳಿಯೋಣ.
ಪನೀರ್ ಕುಂದನ್ ಕಲಿಯನ್ ಪದಾರ್ಥಗಳು
ಪನೀರ್- 500 ಗ್ರಾಂ
ಕಾಶ್ಮೀರಿ ಕೆಂಪು ಮೆಣಸಿನಕಾಯಿ- 5 ಗ್ರಾಂ
ಕೊತ್ತಂಬರಿ ಬೀಜಗಳು- 5 ಗ್ರಾಂ
ಈರುಳ್ಳಿ- 200 ಗ್ರಾಂ
ಟೊಮೆಟೊ- 100 ಗ್ರಾಂ
ಹಸಿರು ಏಲಕ್ಕಿ- 5
ಲವಂಗ- 10
ಗರಂ ಮಸಾಲಾ ಪುಡಿ- 5 ಗ್ರಾಂ
ತುಪ್ಪ-40 ಗ್ರಾಂ
ಹಾಲಿನ ಕೆನೆ- 50 ಮಿಲಿ
ಮೊಸರು 100 ಗ್ರಾಂ
ಒಣಗಿದ ಗುಲಾಬಿ ದಳಗಳು 5 ಗ್ರಾಂ
ಕೊತ್ತಂಬರಿ ಸೊಪ್ಪನ್ನು ಅಲಂಕರಿಸಲು
ರುಚಿಗೆ ಉಪ್ಪು
ಅರಿಶಿನ ಸ್ವಲ್ಪ
ಮೆಣಸಿನ ಪುಡಿ ಸ್ವಲ್ಪ
ಎಣ್ಣೆ 10tbls

ಪನೀರ್ ಕುಂದನ್ ಕಲಿಯನ್ ಮಾಡುವುದು ಹೇಗೆ?
1. ಮೊದಲಿಗೆ ಪನೀರ್ ಅನ್ನು ತೆಳುವಾದ ಹೋಳುಗಳಾಗಿ ಕತ್ತರಿಸಿ. ಇವುಗಳನ್ನು ಅರಿಶಿನ ಮತ್ತು ಮೆಣಸಿನ ಪುಡಿಯೊಂದಿಗೆ ಮ್ಯಾರಿನೇಟ್ ಮಾಡಿ.
2. ಪ್ಯಾನ್ ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಬಿಸಿ ಆದ ಬಳಿಕ ಚಿಕ್ಕದಾಗಿ ಹೆಚ್ಚಿದ ಕಾಶ್ಮೀರಿ ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಬೀಜಗಳು, ಲವಂಗ ಮತ್ತು ಏಲಕ್ಕಿಗಳನ್ನು ಹಾಕಿ ಸ್ವಲ್ಪ ಬಣ್ಣ ಬದಲಾಗುವವರೆಗೆ ಹುರಿಯಿರಿ.
3. ಇದಕ್ಕೆ ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ ಹುರಿದುಕೊಳ್ಳಿ. ನಂತರ ಕತ್ತರಿಸಿದ ಟೊಮ್ಯಾಟೊ ಮತ್ತು ಒಣಗಿದ ಗುಲಾಬಿ ದಳಗಳನ್ನು ಸೇರಿಸಿ. ಈ ಮಿಶ್ರಣವನ್ನು ಕೆಲವು ನಿಮಿಷಗಳ ಕಾಲ ಕೈ ಆಡಿಸಿ ಹುರಿದುಕೊಳ್ಳಿ.
4. ಬಳಿಕ ಇದಕ್ಕೆ ಮೊಸರು ಮತ್ತು ಗರಂ ಮಸಾಲಾ ಸೇರಿಸಿ. ಮೊಸರು ಒಡೆಯದಂತೆ ಕಡಿಮೆ ಉರಿಯಲ್ಲಿ ನಿರಂತರವಾಗಿ ಕೈ ಆಡಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಬಳಿಕ ಹಾಲಿನ ಕೆನೆ ಸೇರಿಸಿ,
5. ಬಳಿಕ ಪನ್ನೀರ್ ತುಂಡುಗಳನ್ನು ಸೇರಿಸಿ. ಸ್ವಲ್ಪ ನೀರು ಹಾಕಿ 15-20 ನಿಮಿಷ ಕುದಿಯಲು ಬಿಡಿ.
6. ಇದಾದ ಬಳಿಕ ತುಪ್ಪ ಹಾಗೂ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಬಿಸಿ ಬಿಸಿ ಪನೀರ್ ಕುಂದನ್ ಕಲಿಯನ್ ಸವಿಯಲು ಸಿದ್ಧ.
ಇದು ಚಪಾತಿ, ರೋಟಿ, ಪೂರಿ ಜೊತೆ ಸವಿಯಲು ಅದ್ಬುತವಾಗಿರುತ್ತದೆ.












Click it and Unblock the Notifications