ಮಳೆಗಾಲ ಸನ್ನಿಹಿತ: ಇಲ್ಲಿದೆ ಸ್ವಚ್ಛತೆಯ ಸಿಂಪಲ್ ಟಿಪ್ಸ್!
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಆಗುತ್ತಿದೆ. ಮಳೆಗಾಲಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನೀವು ನಿಮ್ಮ ಮನೆಯ ಒಳಗೆ ಹಾಗೂ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡರೆ ಮಳೆಗಾಲದಲ್ಲಿ ಹಾಗೂ ಮಳೆಗಾಲದ ಪ್ರಾರಂಭದಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದು. ಸಾಮಾನ್ಯವಾಗಿ ಮಳೆಗಾಲ ಪ್ರಾರಂಭ ಹಾಗೂ ಮಳೆಗಾಲದ ಸಮಯದಲ್ಲಿ ಮುಖ್ಯವಾಗಿ ಸೊಳ್ಳೆಗಳಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಅದನ್ನು ತಪ್ಪಿಸುವುದು ಹೇಗೆ ಎನ್ನುವ ಪ್ರಮುಖ ಟಿಪ್ಸ್ ಇಲ್ಲಿದೆ.
ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಗಾಲ ಪ್ರಾರಂಭಕ್ಕೂ ಮುಂಚೆ ಹಾಗೂ ಪ್ರಾರಂಭವಾದ ಮೇಲೆ ಸೊಳ್ಳೆಗಳಿಂದ ಆರೋಗ್ಯ ಸಮಸ್ಯೆ ಹೆಚ್ಚಾಗುವುದು ಇದೆ. ಡೆಂಗ್ಯೂ ಜ್ವರ ಸೇರಿದಂತೆ ಸೊಳ್ಳೆಗಳು ಕಚ್ಚುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಇದಕ್ಕೆ ಮುಖ್ಯ ಕಾರಣ ಮನೆಯ ಒಳಗೆ ಹಾಗೂ ಮನೆಯ ಹೊರ ಭಾಗದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದೆ ಇರುವುದು ಸಹ ಪ್ರಮುಖವಾಗಿದೆ.

ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಹಾಗೂ ಕೆಲವೊಂದು ಪ್ರಮುಖ ಟಿಪ್ಸ್‌ಗಳನ್ನು ಫಾಲೋ ಮಾಡುವುದರಿಂದ ಈ ಸಮಯದಲ್ಲಿ ನೀವು ಆರೋಗ್ಯ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ. ಇದೀಗ ಕರ್ನಾಟಕದಾದ್ಯಂತ ಹವಾಮಾನದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಮಳೆಯ ಜೊತೆ ಜೊತೆಗೆ ಬಿಸಿಲು ಸಹ ಇದೆ. ಈ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ, ಆಹಾರ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುವ ಕಡೆ ಗಮನಕೊಡಬೇಕು.
ಇನ್ನು ಡೆಂಗ್ಯೂ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಈ ಮುಂಜಾಗ್ರತಾ ಕ್ರಮ ಅನುಸರಿಸಿ.
* ಹೂವಿನ ಕುಂಡಗಳಲ್ಲಿ, ಟೈರ್‌ಗಳಲ್ಲಿ ಮತ್ತು ಖಾಲಿ ಪಾತ್ರೆಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ.
* ನೀರಿನ ಟ್ಯಾಂಕ್‌ಗಳ ಮುಚ್ಚಳವನ್ನು ಮುಚ್ಚಿ ಮತ್ತು ಅವುಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ.
* ಮನೆಯ ಸುತ್ತಮುತ್ತಲಿನ ಜಾಗದಲ್ಲಿ ನೀರು ನಿಂತಿದೆಯೇ ಎಂದು ವಾರಕ್ಕೊಮ್ಮೆಯಾದರೂ ನೋಡಿ, ಆ ಜಾಗಗಳನ್ನು ಸ್ವಚ್ಛವಾಗಿ ಇರಿಸಿಕೊಳ್ಳಿ.
* ಸೊಳ್ಳೆ ಪರದೆಗಳು ಮತ್ತು ನಿವಾರಕಗಳನ್ನು ಬಳಸಿ. ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡಿ.
* ಅಪಾರ್ಟ್‌ಮೆಂಟ್ / ಜನವಸತಿ ಪ್ರದೇಶಗಳಲ್ಲಿ ಫಾಗಿಂಗ್ ಮಾಡಿ ಮತ್ತು ಓವಿಟ್ರಾಪ್‌ಗಳನ್ನು ಬಳಸಿ.
ಸೊಳ್ಳೆಗಳು ಸೇರದಂತೆ ಎಚ್ಚರಿಕೆ ವಹಿಸಿ: ಮಳೆಗಾಲದಲ್ಲಿ ಸ್ವಚ್ಛ ನೀರಿನಲ್ಲಿ ಸೊಳ್ಳೆಗಳು ನಿಲ್ಲುತ್ತವೆ. ಈ ಸೊಳ್ಳೆಗಳಿಂದ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಬರುತ್ತವೆ. ಈ ರೀತಿಯ ಸಾಂಕ್ರಾಮಿಕ ರೋಗಗಳು ಬರದಂತೆ ಎಚ್ಚರಿಕೆ ವಹಿಸಿ. ಸೊಳ್ಳೆಗಳು ಮನೆಯ ಸುತ್ತಮುತ್ತ ಬಿಸಾಕಿರುವ ತೆಂಗಿನಕಾಯಿ ಚಿಪ್ಪು, ಟೈಯರ್‌ನಲ್ಲಿ ಇರುವ ನೀರಿನಿಂದಲೂ ಉತ್ಪತ್ತಿಯಾಗುವ ಸಾಧ್ಯತೆ ಇದೆ. ಹೀಗಾಗಿ, ಈಗಲಿಂದಲೇ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಅನಗತ್ಯ ವಸ್ತುಗಳು ಸೇರದೆ ಇರುವಂತೆ ನೋಡಿಕೊಳ್ಳಿ.
ಸೊಳ್ಳೆ ಪರದೆಗಳನ್ನು ಅಳವಡಿಸಿ: ಮನೆಯ ಕಿಟಕಿಗಳಿಗೆ ಹಾಗೂ ಬಾಗಿಲುಗಳಿಗೆ ಸೊಳ್ಳೆ ಪರದೆ ಅಥವಾ ಸೊಳ್ಳೆಗಳು ಮನೆಯ ಒಳಗೆ ಬರದಂತೆ ಪರದೆಗಳನ್ನು ಅಳವಡಿಸಿ. ರಾತ್ರಿ ವೇಳೆಗಿಂತ ಬೆಳಿಗ್ಗೆ ಸಮಯದಲ್ಲಿ ಕಚ್ಚುವ ಸೊಳ್ಳೆಗಳಿಂದ ಆರೋಗ್ಯ ಸಮಸ್ಯೆ ಎದುರಾಗುತ್ತವೆ. ಹೀಗಾಗಿ ಹೆಚ್ಚು ಎಚ್ಚರಿಕೆಯ ಕ್ರಮಗಳನ್ನು ಅನುಸರಿಸಿ.












Click it and Unblock the Notifications