Mirchi Halwa Recipe: ಮಿರ್ಚಿ ಹಲ್ವಾ ಮಾಡುವ ವಿಧಾನ: ಖಾರ ಇರಲ್ಲ ಸಿಹಿಯಾಗಿರುತ್ತೆ.....
ಮಿರ್ಚಿ ಹಲ್ವಾ... ಏನಿದು ಮೆಣಸಿನಕಾಯಿಯಿಂದ ಹಲ್ವಾನಾ ಅಂತ ಶಾಕ್ ಆದ್ರಾ? ನೀವು ಶಾಕ್ ಆಗಿರೋದ್ರಲ್ಲಿ ಅನುಮಾನವೇ ಇಲ್ಲ ಬಿಡಿ. ಯಾಕೆಂದರೆ ಈ ಹಿಂದೆ ಈ ಹಲ್ವಾವನ್ನು ನೀವು ಕೇಳಿರುವುದಿಲ್ಲ. ತಿಂದೂ ಕೂಡ ಇರುವುದಿಲ್ಲ. ಈ ಮೆಣಸಿನಕಾಯಿ ಹಲ್ವಾ ಇತ್ತೀಚೆಗೆ ಕಂಡು ಹಿಡಿಯಲಾಗಿದ್ದು, ರುಚಿಯನ್ನು ತಳ್ಳಿ ಹಾಕುವಂತಿಲ್ಲ.
ಆದರೆ ಮೆಣಸಿನಕಾಯಿ ಖಾರ ಇರುತ್ತೆ. ಹಲ್ವಾ ಸಿಹಿಯಾಗಿರುತ್ತೆ. ಮೆಣಸಿನಕಾಯಿಯಿಂದ ಹಲ್ವಾ ಮಾಡಿದರೆ ಖಾರ ಆಗುತ್ತೆ ಅಂತ ನಿಮಗೆ ಅನುಮಾನ ಬಂದಿರಬೇಕು ಅಲ್ವಾ? ಈ ಅನುಮಾನ ಕೂಡ ಮೆಣಸಿನಕಾಯಿ ಹಲ್ವಾ ಮಾಡುವ ವಿಧಾನದಿಂದ ದೂರವಾಗುತ್ತದೆ. ಮನೆಯಲ್ಲೇ ಸಿಗುವ ಪದಾರ್ಥಗಳಿಂದ ತುಂಬಾ ಸುಲಭವಾಗಿ ಮೆಣಸಿನಕಾಯಿ ಹಲ್ವಾ ತಯಾರಿಸಬಹುದು.

ಹಾಗಾದರೆ ತಡ ಮಾಡುವುದು ಬೇಡ ಮೆಣಸಿನಕಾಯಿ ಹಲ್ವಾ ಮಾಡುವುದು ಹೇಗೆ ಎಂದು ತಿಳಿಯೋಣ. ನೀವು ಕೂಡ ಮನೆಯಲ್ಲಿ ಒಮ್ಮೆ ಇದನ್ನು ಟ್ರೈ ಮಾಡಿ. ನಿಮ್ಮ ಅನುಭವವನ್ನು ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.
ಮಿರ್ಚಿ ಹಲ್ವಾ ಮಾಡಲು ಬೇಕಾಗುವ ಪದಾರ್ಥಗಳು:
*ಮೆಣಸಿನಕಾಯಿ 20
* ಸಕ್ಕರೆ ಕಾಲು ಕೆಜಿ
* ಸಿಹಿ ಕಲ್ಲು ಸಕ್ಕರೆ ಒಂದು ಇಂಚು
* ಮಿಲ್ಕ್ ಪೌಡರ್ 4 tbls
* ತುಪ್ಪ 5 tbls
* ಕೋವಾ ಒಂದು ಕಪ್
* ಪಿಸ್ತಾ 6-7
*ಬಾದಾಮಿ 6-7

ಮಿರ್ಚಿ ಹಲ್ವಾ ತಯಾರಿಸುವ ವಿಧಾನ:
* ಮೊದಲಿಗೆ ಒಂದು ಬಾಣಲೆ ಒಲೆಯ ಮೇಲೆ ಇಟ್ಟು ಅದಕ್ಕೆ ಒಂದು ಕಪ್ ನೀರು ಹಾಕಿ ಕಲ್ಲು ಸಕ್ಕರೆ ಹಾಕಿ ನೀರು ಕುದಿಯುವಾಗ ಮೆಣಸಿನಕಾಯಿಯನ್ನು ನೀರಿನಲ್ಲಿ ಹಾಕಿ.
* ನಂತರ ಮೆಣಸಿನಕಾಯಿ ಚೆನ್ನಾಗಿ ನೀರಿನಲ್ಲಿ ಕುದಿಯಲು ಬಿಡಿ. ಮೆಣಸಿನಕಾಯಿ ಬಣ್ಣ ಹಳದಿಯಾಗುವವರೆಗೆ ಬಿಟ್ಟು ನಂತರ ಅದನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಪೇಸ್ಟ್ ಮಾಡಿ.
* ನಂತರ ಒಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ತುಪ್ಪ ಹಾಕಿ, ಬಿಸಿಯಾದ ಬಳಿಕ ಮೆಣಸಿನಕಾಯಿ ಪೇಸ್ಟ್ ಹಾಕಿ ಚೆನ್ನಾಗಿ ಹುರಿದುಕೊಳ್ಳಿ.
* ತುಪ್ಪ ಮೇಲೆ ತೇಲುವವರೆಗೆ ಚೆನ್ನಾಗಿ ಮೆಣಸಿನಕಾಯಿ ಪೇಸ್ಟ್ ಅನ್ನು ಬಾಡಿಸಿ. ನಂತರ ಕೋವಾ ಹಾಕಿ ಚೆನ್ನಾಗಿ ಕಲಸಿ.
* ಬಳಿಕ ಇದಕ್ಕೆ ಸಕ್ಕರೆ ಹಾಕಿಕೊಳ್ಳಿ. ಸಕ್ಕರೆ ಕರಗಿ ಹೊಂದಿಕೊಳ್ಳುವವರೆಗೂ ಕೈ ಆಡಿಸುತ್ತಲೇ ಇರಿ. ನಂತರ ಇದಕ್ಕೆ ಮಿಲ್ಕ್ ಪೌಡರ್ ಹಾಕಿ ಚೆನ್ನಾಗಿ ಗಟ್ಟಿಯಾಗುವವರೆಗೂ ಕಲಸಿ.
* ಇದು ಗಟ್ಟಿಯಾದ ಬಳಿಕ ಗ್ಯಾಸ್ ಆಫ್ ಮಾಡಿ ಒಂದು ಬಟ್ಟಲಲ್ಲಿ ಇದನ್ನು ತೆಗೆದು ಇದರ ಮೇಲೆ ಪಿಸ್ತಾ ಬಾದಾಮಿ ತುಂಡುಗಳನ್ನು ಹಾಕಿದರೆ ಮಿರ್ಚಿ ಹಲ್ವಾ ಸವಿಯಲು ಸಿದ್ಧ.












Click it and Unblock the Notifications