ಈ ಗಿಡಗಳು ಮನೆಯಲ್ಲಿದ್ದರೆ ಹೆಚ್ಚುವುದು ಅದೃಷ್ಟ: ಹರಿದು ಬರುವುದು ಧನ ಸಂಪತ್ತು, ನೆಲೆಸುವುದು ಸುಖ, ಶಾಂತಿ
ಸಸ್ಯಗಳು ಕೇವಲ ಅಲಂಕಾರಕ್ಕಾಗಿ ಮಾತ್ರ ಇರುವುದಲ್ಲ. ಮನೆಯ ಮುಂದೆಯೋ ಬಾಲ್ಕನಿಯಲ್ಲಿಯೋ ಪುಟ್ಟದೊಂದು ಗಾರ್ಡನ್ ಇದ್ದರೆ ಮನಸ್ಸಿಗೆ ಮುದ ನೀಡುತ್ತದೆ. ಇನ್ನು ಕೆಲವು ಸಸ್ಯಗಳು ಮನೆಯ ಮುಂದೆ ಅಥವಾ ಮನೆಯ ಒಳಗೆ ಇದ್ದರೆ ಮನೆಯೊಳಗೆ ಸಕಾರಾತ್ಮಕತೆಯನ್ನು ಹರಡುತ್ತದೆ. ಈ ಪೈಕಿ ಅನೇಕ ಸಸ್ಯಗಳು ಅದೃಷ್ಟ, ಸಮೃದ್ಧಿಯನ್ನು ತರುವುದರ ಜೊತೆಗೆ ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿಯೂ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎನ್ನಲಾಗಿದೆ. ಮನೆಯ ಕೋಣೆಯ ಮೂಲೆಯಲ್ಲಿ ಮತ್ತು ಮನೆಯ ಪ್ರವೇಶದ್ವಾರದದಲ್ಲಿ ಈ ಹಸಿರು ಗಿಡಗಳನ್ನು ನೆಡುವುದು ಅದೃಷ್ಟವನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ. ಸಾಮಾನ್ಯವಾಗಿ ಸ್ನೇಕ್ ಪ್ಲಾಂಟ್, ಪೀಸ್ ಲಿಲ್ಲಿ, ತುಳಸಿ, ಮನಿ ಪ್ಲಾಂಟ್ ಮತ್ತು ಲುಕ್ಕಿ ಬ್ಯಾಂಬೂವನ್ನು ಅದೃಷ್ಟ ತರುವ ಸಸ್ಯಗಳು ಎಂದು ಹೇಳಲಾಗುತ್ತದೆ. ಆದರೆ ಇವಷ್ಟೇ ಅಲ್ಲ, ಇವುಗಳಿಗೆ ಹೊರತಾಗಿಯೂ ಇನ್ನೂ ಅನೇಕ ಸಸ್ಯಗಳಿವೆ. ಈ ಸಸ್ಯಗಳನ್ನು ಮನೆಯಲ್ಲಿ ಇರಿಸಿದರೆ ಧನ ಸಂಪತ್ತು ಹೆಚ್ಚುವುದು, ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಯಾಗುವುದು, ಮನೆ ಮಂದಿ ಉನ್ನತ ಸ್ಥಾನ ಅಲಂಕರಿಸುವರು ಎಂದು ಹೇಳಲಾಗುತ್ತದೆ.
ಜೇಡ್ ಗಿಡ: ವಾಸ್ತು ಮತ್ತು ಫೆಂಗ್ ಶೂಯಿ ಸಂಪ್ರದಾಯ ಎರಡರಲ್ಲಿಯೂ ಈ ಸಸ್ಯಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಇದು ಬಹಳ ಪುಟ್ಟ ಗಿಡ. ಹಾಗಾಗಿ ಇದರ ನಿರ್ವಹಣೆ ಕೂಡಾ ಕಷ್ಟವೇನಿಲ್ಲ. ಈ ಸಸ್ಯ ಸಮೃದ್ಧಿ ಮತ್ತು ಸ್ಥಿರತೆಯೊಂದಿಗೆ ಸಂಬಂಧಪಟ್ಟದ್ದಾದರಿಂದ ಇದನ್ನು ಕಾಯಿನ್ ಟ್ರೀ ಎಂದು ಕೂಡಾ ಕರೆಯುತ್ತಾರೆ. ಇದನ್ನು ಸರಿಯಾದ ಸ್ಥಳದಲ್ಲಿ ಇರಿಸಿ ಎಚ್ಚರಿಕೆಯಿಂದ ನಿರ್ವಹಿಸಿದರೆ ಅದು ಸಂಪತ್ತಿನ ಶಕ್ತಿಯನ್ನು ಸಕ್ರಿಯಗೊಳಿಸುತ್ತವೆ ಎಂದು ಹೇಳಲಾಗುತ್ತದೆ. ನಂಬಿಕೆಗಳ ಪ್ರಕಾರ, ಜೇಡ್ ಸಸ್ಯ ಯಾವ ಮನೆಯಲ್ಲಿ ಚೆನ್ನಾಗಿ ಬೆಳೆದು ನಳನಳಿಸುವುದೋ ಆ ಮನೆಯಲ್ಲಿ ಸಮೃದ್ಧಿ ಕೂಡಾ ಅದೇ ರೀತಿಯಲ್ಲಿ ಇರುತ್ತದೆ ಎನ್ನಲಾಗಿದೆ.

ಸರಿಯಾದ ದಿಕ್ಕು: ಇದು ಜೇಡ್ ಗಿಡವನ್ನು ಆಗ್ನೇಯ ದಿಕ್ಕಿನಲ್ಲಿ ಇಡಬಹುದು.ಆಗ್ನೇಯ ಮೂಲೆಗೆ ಶುಕ್ರ ಗ್ರಹ ಅಧಿಪತಿ. ಇಲ್ಲಿ ಈ ಗಿಡವನ್ನು ಇಟ್ಟರೆ ಆರ್ಥಿಕ ಸಮೃದ್ಧಿ ಮತ್ತು ವ್ಯಾಪಾರದಲ್ಲಿ ಯಶಸ್ಸು ಸಿಗುತ್ತದೆ. ಪೂರ್ವ ದಿಕ್ಕಿನಲ್ಲಿ ಈ ಗಿಡ ಇಡುವುದರಿಂದ ಮನೆಯ ಸದಸ್ಯರ ಆರೋಗ್ಯ ಉತ್ತಮವಾಗಿರುತ್ತದೆ, ಆಯುಷ್ಯ ಹೆಚ್ಚುತ್ತದೆ. ಅದೇ ಕುಬೇರನ ಸ್ಥಾನವಾದ ಉತ್ತರ ದಿಕ್ಕಿನಲದಲಿ ಇಡುವುದರಿಂದ ಹೊಸ ಉದ್ಯೋಗಾವಕಾಶಗಳು ಮತ್ತು ವೃತ್ತಿಜೀವನದಲ್ಲಿ ಯಶಸ್ಸು ಸಿಗುತ್ತದೆ.
ಫಿಲೋಡೆಂಡ್ರಾನ್: ಈ ಮೃದುವಾದ, ಹೃದಯ ಆಕಾರದ ಎಲೆಯನ್ನು ಹೊಂದಿರುವ ಗಿಡ. ಈ ಗಿಡ ಪ್ರೀತಿ, ಸಾಮರಸ್ಯ ಮತ್ತು ಭಾವನಾತ್ಮಕ ವಿಷಯಗಳಿಗೆ ಸಂಬಂಧಿಸಿದ್ದಾಗಿದೆ. ಫೆಂಗ್ ಶೂಯಿ ಪದ್ಧತಿಗಳಲ್ಲಿ, ಸಮತೋಲಿತ ಸಂಬಂಧಗಳು ಮತ್ತು ಪಾಲುದಾರಿಕೆ ಶಕ್ತಿಯ ಸಂಕೇತವಾಗಿ ಎರಡು ಸಸ್ಯಗಳನ್ನು ಒಟ್ಟಿಗೆ ಇಡಲು ಶಿಫಾರಸು ಮಾಡಲಾಗುತ್ತದೆ. ಈ ಸಸ್ಯವನ್ನು ಸ್ಥಿರ ಬೆಳವಣಿಗೆ ಮತ್ತು ಭಾವನಾತ್ಮಕ ಸಮತೋಲನದ ಸಂಕೇತವಾಗಿಯೂ ನೋಡಲಾಗುತ್ತದೆ. ಇದರ ಹಚ್ಚ ಹಸಿರಿನ ಎಲೆಗಳು ಕಠಿಣ ಶಕ್ತಿಯನ್ನು ಮೃದುಗೊಳಿಸುತ್ತದೆ ಎನ್ನುವುದು ನಂಬಿಕೆ. ಇದನ್ನು ಮನೆಯ ಒಳಗೆ ಇರಿಸಲಾಗುತ್ತದೆ. ಈ ಗಿಡ ಇದ್ದ ಮನೆಯಲ್ಲಿ ಸದಾ ಶಾಂತಿ, ನೆಮ್ಮದಿ ನೆಲೆಸಿರುತ್ತದೆ.
ಸರಿಯಾದ ದಿಕ್ಕು: ಫಿಲೋಡೆಂಡ್ರನ್ಗಳನ್ನು ಹೆಚ್ಚಾಗಿ ಮನೆ ಅಥವಾ ಕಚೇರಿಯ ಈಶಾನ್ಯ ದಿಕ್ಕಿನಲ್ಲಿ ಇರಿಸಲಾಗುತ್ತದೆ. ಫಿಲೋಡೆಂಡ್ರಾನ್ ಇಡುವುದರಿಂದ ಇದು ತಾಜಾ ಗಾಳಿಯನ್ನು ನೀಡುತ್ತದೆ. ಮನೆಯಲ್ಲಿ ಸಕಾರಾತ್ಮಕತೆ ಮತ್ತು ಉತ್ಸಾಹವನ್ನು ಹೆಚ್ಚಿಸುತ್ತದೆ. ಇದು ಸಮೃದ್ಧಿ ಮತ್ತು ಆರ್ಥಿಕ ಸ್ಥಿತಿಗೆ ಸಂಬಂಧಿಸಿದ್ದಾಗಿದೆ. ಕೆಲವರು ಇದನ್ನು ಪೂರ್ವ ಮೂಲೆಯಲ್ಲಿಯೂ ಇಡುತ್ತಾರೆ. ಈ ಮೂಲೆ ಕುಟುಂಬ ಸಾಮರಸ್ಯ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ್ದಾಗಿದೆ.
ಪೈಲಿಯಾ: ಇದನ್ನು 'ಚೈನೀಸ್ ಮನಿ ಪ್ಲಾಂಟ್', ಕಾಯಿನ್ ಪ್ಲಾಂಟ್ ಅಥವಾ ಯುಎಫ್ಒ ಪ್ಲಾಂಟ್ ಎಂದೂ ಕರೆಯುತ್ತಾರೆ. ಚೀನೀ ಮನಿ ಪ್ಲಾಂಟ್ ಎಂದು ವ್ಯಾಪಕವಾಗಿ ಕರೆಯಲ್ಪಡುವ ಪಿಲಿಯಾ, ಆಧುನಿಕ ಮನೆಗಳಲ್ಲಿ ಸಂಪತ್ತು ಮತ್ತು ಸಮೃದ್ಧಿಯ ಅತ್ಯಂತ ಜನಪ್ರಿಯ ಸಂಕೇತಗಳಲ್ಲಿ ಒಂದಾಗಿದೆ. ಇದರ ದುಂಡಗಿನ, ನಾಣ್ಯದಂತಹ ಎಲೆಗಳು ಆರ್ಥಿಕ ಬೆಳವಣಿಗೆ ಮತ್ತು ಅದೃಷ್ಟವನ್ನು ಪ್ರತಿನಿಧಿಸುತ್ತವೆ ಎಂದು ಹೇಳಲಾಗುತ್ತದೆ.
ಸರಿಯಾದ ದಿಕ್ಕು: ಫೆಂಗ್ ಶೂಯಿ ಮತ್ತು ವಾಸ್ತು ಸಂಪ್ರದಾಯಗಳಲ್ಲಿ, ಇದನ್ನು ಹೆಚ್ಚಾಗಿ ಸಮೃದ್ಧಿಯ ಶಕ್ತಿಯನ್ನು ಸಕ್ರಿಯಗೊಳಿಸಲು ಮನೆಯ ಆಗ್ನೇಯ ದಿಕ್ಕಿನಲ್ಲಿ ಇರಿಸಲಾಗುತ್ತದೆ. ಈ ದಿಕ್ಕಿನ ಅಧಿಪತಿ ಗಣೇಶ ಮತ್ತು ಶುಕ್ರ ಗ್ರಹ ಆಗಿರುವುದರಿಂದ, ಈ ಜಾಗದಲ್ಲಿ ಗಿಡ ಇಡುವುದರಿಂದ ಮನೆಯಲ್ಲಿ ಆರ್ಥಿಕ ಸ್ಥಿರತೆಯನ್ನು ತರುತ್ತದೆ ಮತ್ತು ಸಂಪತ್ತನ್ನು ವೃದ್ಧಿಸುತ್ತದೆ.
ಈ ಸಸ್ಯವನ್ನು ಸಾಮಾನ್ಯವಾಗಿ ಲಿವಿಂಗ್ ರೂಮ್, ಅಥವಾ ಕಚೇರಿ ಮೇಜುಗಳಲ್ಲಿ ಇರಿಸಲಾಗುತ್ತದೆ. ಈ ಸಸ್ಯ ಸುಲಭವಾಗಿ ಬೆಳೆಯುವುದರ ಜೊತೆಗೆ ಪಸರಿಸಿಕೊಳ್ಳುತ್ತದೆ. ಈ ಗಿಡದ ಬುಡದಲ್ಲಿ ಸಣ್ಣ ಸಣ್ಣ ಸಸ್ಯಗಳು ಬೆಳೆಯುತ್ತವೆ. ಅವುಗಳನ್ನು ಬೇರ್ಪಡಿಸಿ ಸುಲಭವಾಗಿ ಹೊಸ ಗಿಡಗಳನ್ನಾಗಿ ಮಾಡಬಹುದು.
ಆಕ್ಸಾಲಿಸ್: ಲಕ್ಕಿ ಶ್ಯಾಮ್ರಾಕ್, ಫಾಲ್ಸ್ ಶ್ಯಾಮ್ರಾಕ್, ಪರ್ಪಲ್ ಶ್ಯಾಮ್ರಾಕ್ ಮತ್ತು ಚಿಟ್ಟೆ ಗಿಡ ಎಂದೂ ಈ ಗಿಡವನ್ನು ಕರೆಯಲಾಗುತ್ತದೆ. ಆಕ್ಸಾಲಿಸ್, ಅದರ ಎಲೆಗಳಿಂದಾಗಿ ಅದೃಷ್ಟದೊಂದಿಗೆ ಸಂಬಂಧ ಹೊಂದಿದೆ. ಇವುಗಳ ಎಲೆಗಳು ಮೂರು ಅಥವಾ ನಾಲ್ಕು ದಳಗಳ ಚಿಟ್ಟೆಯ ಆಕಾರವನ್ನು ಹೋಲುತ್ತವೆ. ನಾಲ್ಕು ದಳಗಳ ಆಕ್ಸಾಲಿಸ್ ಅಪರೂಪವೇ ಸರಿ. ಆದರೂ ಇದು ಅಪಾರ ಅದೃಷ್ಟ, ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಈ ಎಲೆಗಳ ವಿಶಿಷ್ಟ ಲಕ್ಷಣವೆಂದರೆ ಅದರ ಎಲೆಗಳು ರಾತ್ರಿಯಲ್ಲಿ ಮಡಚಿಕೊಳ್ಳುತ್ತವೆ ಮತ್ತು ಹಗಲಿನಲ್ಲಿ ಮತ್ತೆ ತೆರೆದುಕೊಳ್ಳುತ್ತವೆ. ಇದನ್ನು ನಿರಂತರ ಸಕಾರಾತ್ಮಕ ಶಕ್ತಿಯ ಸಂಕೇತವೆಂದು ಬಣ್ಣಿಸಲಾಗುತ್ತದೆ.
ಸರಿಯಾದ ದಿಕ್ಕು: ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಈ ಘಿಡವನ್ನು ಇರಿಸಬೇಕು. ಇದು ಕುಬೇರ ಮತ್ತು ಜಲ ತತ್ವಕ್ಕೆ ಸಂಬಂಧಿಸಿದ್ದರಿಂದ, ಇಲ್ಲಿ ಆಕ್ಸಾಲಿಸ್ ಗಿಡವನ್ನು ಇಡುವುದರಿಂದ ಹಣದ ಹರಿವು ಹೆಚ್ಚುವುದರ ಜೊತೆಗೆ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಇನ್ನು ಪೂರ್ವ ದಿಕ್ಕಿನಲ್ಲಿ ಇಡುವುದರಿಂದ ಕುಟುಂಬದ ಸದಸ್ಯರ ನಡುವೆ ಉತ್ತಮ ಬಾಂಧವ್ಯ ವೃದ್ಧಿಯಾಗುತ್ತದೆ.
ಇದು ಪ್ರಕಾಶಮಾನವಾದ, ಬೆಳಕಿನಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಈ ಗಿಡಕ್ಕೆ ಪ್ರತಿ ಒಂದರಿಂದ ಎರಡು ವಾರಗಳಿಗೊಮ್ಮೆ ನೀರುಹಾಕಿದರೆ ಸಾಕಾಗುತ್ತದೆ. ಇದು ನೋಡುವುದಕ್ಕೂ ಆಕರ್ಷಕ ಆರೈಕೆಯೂ ಸುಲಭ.
ಪಿಯೋನಿ: ಪಿಯೋನಿ ಹೂವುಗಳು ನೋಡುವುದಕ್ಕೆ ಬಹುತೇಕ ಗುಲಾಭಿ ಇದ್ದಂತೆಯೇ ಕಾಣುತ್ತದೆ. ಇದು ಪ್ರಣಯ, ಸ್ನೇಹ, ಸಂಪತ್ತು ಮತ್ತು ಗೌರವವನ್ನು ಸಂಕೇತಿಸುವ ಸಸ್ಯಗಳಲ್ಲಿ ಒಂದಾಗಿದೆ. ಅವುಗಳ ಆಕರ್ಷಕ ಹೂವುಗಳನ್ನು ಮದುವೆಗಳು ಮತ್ತು ಆಚರಣೆಗಳಲ್ಲಿ ಬಳಸಲಾಗುತ್ತದೆ. ಪಿಯೋನಿ ಹೂವುಗಳ ವಿವಿಧ ಬಣ್ಣಗಳು ವಿಭಿನ್ನ ಅರ್ಥಗಳನ್ನು ಹೊಂದಿವೆ. ಗುಲಾಬಿ ಬಣ್ಣವು ಪ್ರೀತಿ ಮತ್ತು ಸ್ನೇಹದೊಂದಿಗೆ ಸಂಬಂಧಿಸಿದರೆ, ಹಳದಿ ಬಣ್ಣವು ಹೊಸ ಆರಂಭಗಳಿಗೆ ಸಂಬಂಧಿಸಿದ್ದಾಗಿದೆ. ಹವಳದ ಬಣ್ಣವು ಯಶಸ್ಸನ್ನು ಪ್ರತಿನಿಧಿಸುತ್ತದೆ ಮತ್ತು ನೇರಳೆ ಬಣ್ಣವು ಉದಾತ್ತತೆ ಮತ್ತು ಘನತೆಯೊಂದಿಗೆ ಸಂಬಂಧಿಸಿದೆ.
ಸರಿಯಾದ ದಿಕ್ಕು: ಮನೆಯ ನೈಋತ್ಯ ದಿಕ್ಕಿನಲ್ಲಿ ಪಿಯೋನಿ ಗಿಡ ಇಡುವುದರಿಂದ ದಾಂಪತ್ಯ ಜೀವನದಲ್ಲಿ ಸಾಮರಸ್ಯವನ್ನು ಬೆಳೆಯುತ್ತದೆ ಎನ್ನಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಯಾರಿಗಾದರೂ ಮದುವೆ ವಿಳಂಬವಾಗುತ್ತಿದ್ದರೆ ಅಥವಾ ವಿವಾಹಕ್ಕೆ ಅಡೆತಡೆಗಳು ಎದುರಾಗುತ್ತಿದ್ದರೆ ಮನೆಯಲ್ಲಿ ಪಿಯೋನಿ ಗಿಡವನ್ನು ನೆಡುವುದರಿಂದ ವಿವಾಹ ಯೋಗ ಬೇಗ ಕೂಡಿಬರುತ್ತದೆಯಂತೆ.
ಸಸ್ಯವು ನೇರ ಸೂರ್ಯನ ಬೆಳಕಿನಲ್ಲಿ ಬೆಳೆಯುತ್ತದೆ. ಇದಕ್ಕೆ ನಿಯಮಿತವಾಗಿ ನೀರುಹಾಕುತ್ತಿರಬೇಕು. ವಿಶೇಷವಾಗಿ ಅದರ ಆರಂಭಿಕ ಬೆಳವಣಿಗೆಯ ಹಂತಗಳಲ್ಲಿ ನೀರು ಬೇಕೇ ಬೇಕು. ಒಮ್ಮೆ ಈ ಗಿಡ ಗಟ್ಟಿಯಾದರೆ ನಂತರ, ವರ್ಷಗಳವರೆಗೆ ಸುಂದರ ಹೂವುಗಳು ಅರಳಿ ನಿಲ್ಲುವುದು. ಸುಂದರ ಮತ್ತು ಆಕರ್ಷಕ ಹೂವು ಬಿಡುವ ಈ ಸಸ್ಯ ಸಮೃದ್ಧಿಯ ಸಂಕೇತವಾಗಿದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications