ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕಾದರೆ ನಾವೇನು ಮಾಡಬೇಕು?

ನಾವೆಲ್ಲರೂ ಒಂದಲ್ಲ ಒಂದು ಕಾರಣಕ್ಕೆ ಆಗಾಗ್ಗೆ ನೆಮ್ಮದಿಯನ್ನು ಕಳೆದುಕೊಳ್ಳುತ್ತಲೇ ಇರುತ್ತೇವೆ. ಆದರೆ ಹೀಗೆ ಕಳೆದು ಕೊಳ್ಳುವ ನೆಮ್ಮದಿಯನ್ನು ಮರಳಿ ತಂದುಕೊಳ್ಳುವ ಜಾಣತನವನ್ನು ನಾವು ಬೆಳೆಸಿಕೊಳ್ಳಬೇಕು. ಇಲ್ಲದೆ ಹೋದರೆ ನಾವು ಸುಖವಾಗಿ ಬದುಕಲು ಸಾಧ್ಯವಾಗದೆ ಹೋಗಬಹುದು. ಮುಖ್ಯವಾಗಿ ನಾವು ಹೇಗೆ ಬದುಕುತ್ತಿದ್ದೇವೆ ಎನ್ನುವುದಕ್ಕಿಂತಲೂ ನೆಮ್ಮದಿಯಾಗಿ ಬದುಕುತ್ತಿದ್ದೇವೆಯಾ? ಎನ್ನುವುದೇ ಬಹುಮುಖ್ಯವಾಗಿದೆ. ನಮ್ಮ ನಿಮ್ಮ ನಡುವೆ ಎಲ್ಲವನ್ನು ಕೂಡಿ ಹಾಕಿಕೊಂಡು ಬದುಕುವ ಬಹುತೇಕರು ನೆಮ್ಮದಿಯನ್ನೇ ಕಳೆದುಕೊಂಡಿರುತ್ತಾರೆ.

ನಿಜ ಹೇಳಬೇಕೆಂದರೆ ಈ ನೆಲದಲ್ಲಿ ಬದುಕುವ ಪ್ರತಿಯೊಬ್ಬ ವ್ಯಕ್ತಿಯೂ ನೆಮ್ಮದಿಯ ಬದುಕಿಗಾಗಿ ಹಾತೊರೆಯುತ್ತಾನೆ. ಶ್ರೀಮಂತನಿರಲಿ, ಬಡವನಿರಲಿ ಎಲ್ಲೋ ಒಂದು ಸಂದರ್ಭದಲ್ಲಿ ಆತ ನೆಮ್ಮದಿಯನ್ನು ಕಳೆದುಕೊಳ್ಳುತ್ತಾನೆ. ನೆಮ್ಮದಿಗಾಗಿ ಹಲವು ಮಾರ್ಗಗಳನ್ನು ಅರಸುತ್ತಾನೆ. ಹಾಗಾದರೆ ನೆಮ್ಮದಿ ಎಂದರೇನು? ಅದನ್ನು ಪಡೆಯುವ ಮಾರ್ಗವಾದರೂ ಯಾವುದು? ಎಂಬಂತಹ ಪ್ರಶ್ನೆಗಳು ನಮ್ಮನ್ನು ಕಾಡುವುದು ಸಹಜ. ಆದರೆ ನೆಮ್ಮದಿ ಎಂಬುದು ಕೊಂಡುಕೊಳ್ಳುವ ವಸ್ತುವಲ್ಲ. ಅದನ್ನು ನಾವೇ ನಮ್ಮೊಳಗೆ ಕೊಂಡುಕೊಳ್ಳಬೇಕಷ್ಟೆ.

Life Tips What Should We Do To Build A Peaceful Life

ಜಗತ್ತಿನಲ್ಲಿ ನಾವು ಎಲ್ಲವನ್ನೂ, ಎಲ್ಲ ರೀತಿಯ ಐಭೋಗವನ್ನು ಹಣ ನೀಡಿ ತಂದು ಮನೆಯೊಳಗೆ ಕೂಡಿ ಹಾಕಿಕೊಳ್ಳಬಹುದು. ಆದರೆ ಎಲ್ಲವೂ ಇದ್ದು ನೆಮ್ಮದಿಯೇ ಇಲ್ಲದೆ ಹೋದರೆ ಬದುಕಲಾಗದು. ಹಣ ಸಂಪಾದನೆಯಿಂದ ಲೌಕಿಕ ಸುಖಗಳಿಂದ ನೆಮ್ಮದಿ ಪಡೆಯಬಹುದಾಗಿದ್ದರೆ ಜಗತ್ತು ಹೀಗಿರುತ್ತಿರಲಿಲ್ಲ. ಸುಖಾಪೇಕ್ಷೆಗಳನ್ನು ಬೆನ್ನು ಹತ್ತುವ ನಾವು ನಮಗರಿವಿಲ್ಲದಂತೆಯೇ ನೆಮ್ಮದಿಯನ್ನು ಕಳೆದುಕೊಳ್ಳುತ್ತಾ ಹೋಗುತ್ತೇವೆ. ಪ್ರತಿಯೊಂದನ್ನು ಪಡೆದಾಗಲೂ ನೆಮ್ಮದಿ ಪಡದೆ ಇನ್ನಷ್ಟು ಪಡೆಯುವ ತವಕದಲ್ಲಿ ಮೊದಲು ಪಡೆದ ಸುಖವನ್ನು ಅದರಿಂದ ದೊರೆತ ನೆಮ್ಮದಿಯನ್ನು ಅನುಭವಿಸದೆ ಮುನ್ನಡೆಯುತ್ತೇವೆ.

ಆಧ್ಯಾತ್ಮದಲ್ಲಿ ನೆಮ್ಮದಿಯ ಬಗ್ಗೆ ಹೇಳಿದ್ದೇನು?

ನಾವು ತುಳಿದ ಮಾರ್ಗ ಸುಗಮವಾಗಿದ್ದರೆ ತೊಂದರೆಯಿಲ್ಲ. ಆದರೆ ಕೆಲವೊಮ್ಮೆ ಅಡೆತಡೆಗಳು ಬಂದು ನಮ್ಮ ನೆಮ್ಮದಿಯನ್ನು ದೋಚುವುದರಿಂದ ಪರದಾಡಬೇಕಾದ ಪರಿಸ್ಥಿತಿಯೂ ಬಂದೊದಗುತ್ತದೆ. ನೈತಿಕತೆ ಮರೆತು ಬದುಕುವವರು, ಉದ್ದೇಶಪೂರ್ವಕವಾಗಿ ಇನ್ನೊಬ್ಬರಿಗೆ ಕೆಡುಕನ್ನು ಬಯಸುವಂತಹ ಮನೋಭಾವದವರು, ಮಾದಕ ಪಾನೀಯಗಳನ್ನು ಸೇವಿಸುವವರು, ಸಮತೋಲನೆಯಿಲ್ಲದೆ ಅಥವಾ ವ್ಯವಸ್ಥಿತವಾಗಿ ಬದುಕು ಕಟ್ಟಿಕೊಳ್ಳದವರು, ಸ್ವೇಚ್ಛೆಯಾಗಿ ಕುಡಿಯುವ, ತಿನ್ನುವ, ಮಾತನಾಡುವ ಹೆಚ್ಚು ಕಾಲ ಮಲಗುವ ಅಥವಾ ನಿದ್ರೆಯನ್ನೇ ಮಾಡದಿರುವವರು ನೆಮ್ಮದಿ ಬದುಕನ್ನು ಕಟ್ಟಿಕೊಳ್ಳುವಲ್ಲಿ ವಿಫಲರಾಗಿರುವ ವ್ಯಕ್ತಿಗಳು ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ ಎಂದು ಆಧ್ಯಾತ್ಮದಲ್ಲಿ ವಿವರಿಸಲಾಗಿದೆ.

Life Tips What Should We Do To Build A Peaceful Life

ಇನ್ನು ತಮಗೆ ಸಂಬಂಧಿಸಿದಲ್ಲದ ನಿರರ್ಥಕವಾದ ವಿವಾದಗಳಲ್ಲಿ ತೊಡಗಿಸಿಕೊಳ್ಳುವ ಅಭ್ಯಾಸವುಳ್ಳವರು, ಇನ್ನೊಬ್ಬರ ಖಾಸಗಿ ವಿಚಾರಗಳಲ್ಲಿ ಸುಮ್ಮನೆ ತಲೆ ತೂರಿಸುವ ಅಥವಾ ಪರರ ದೋಷಗಳನ್ನು ಕೆದಕಿ ತೋರಿಸುವುದರಲ್ಲಿ ಅತ್ಯುತ್ಸಾಹ ತೋರುವ ವ್ಯಕ್ತಿಗಳು ಅಲ್ಲದೆ, ಅನಗತ್ಯವಾಗಿ ದೇಹದಂಡನೆ ಮಾಡಿಕೊಳ್ಳುವವರು ವ್ಯರ್ಥವಾದ ಉದ್ದೇಶಗಳಿಗಾಗಿ ತಮ್ಮ ಶಕ್ತಿಯನ್ನು ದುರ್ವ್ಯಯ ಮಾಡಿಕೊಳ್ಳುವವರು, ಅತಿ ಕಠಿಣವಾದ ಮೌನಾವೃತವನ್ನು ಬಲವಂತವಾಗಿ ಹೇರಿಕೊಳ್ಳುವವರು, ಸ್ವಪ್ರತಿಷ್ಠಾನಿರತರಾಗಿರುವವರು ಆಗಾಗ್ಗೆ ನೆಮ್ಮದಿಯನ್ನು ಕಳೆದುಕೊಂಡು ತೊಳಲಾಡುತ್ತಿರುತ್ತಾರೆ.

ದುರಾಸೆಯೂ ನೆಮ್ಮದಿಯನ್ನು ಕೊಲ್ಲಬಹುದು

ತಮ್ಮ ಇತಿಮಿತಿಯಲ್ಲಿ ಚಾಪೆಯಿದ್ದಷ್ಟೆ ಕಾಲು ಚಾಚು ಎಂಬ ಗಾದೆಯಂತೆ ನಡೆಯದೆ ದುರಾಸೆಯ ನಡೆನುಡಿಯವರಾಗಿದ್ದು, ಇನ್ನೊಬ್ಬರ ಅಭಿವೃದ್ಧಿಯನ್ನು ಅಥವಾ ನೇರ ನಡೆಯನ್ನು ಕಂಡು ಮನಸ್ಸಿನಲ್ಲಿಯೇ ಕೊರಗುತ್ತಾ ತಮ್ಮಲ್ಲಿರುವ ನೆಮ್ಮದಿಯನ್ನು ಹಾಳು ಮಾಡಿಕೊಂಡರೆ, ಇನ್ನು ಕೆಲವರು ಅಪರಾಧಿ ಭಾವದಿಂದ ಕೀಳರಿಮೆಯಿಂದ, ಅಹಂಕಾರದಿಂದ ಬೀಗುತ್ತಾ ನೆಮ್ಮದಿಗೆ ಸಂಚಕಾರ ತಂದುಕೊಳ್ಳುತ್ತಾರೆ. ಬಹಳಷ್ಟು ಮಂದಿ ಮತ್ತೊಬ್ಬರ ವಿಷಯಕ್ಕಾಗಿಯೇ ತಮ್ಮಲ್ಲಿರುವ ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ.

ನಾವು ಮಾಡಿದ ಅಪರಾಧಗಳಿಗೆ, ಪಾಪಕರ ಕಾರ್ಯಗಳನ್ನು ನೆನೆಯುತ್ತಾ ತಕ್ಷಣದ ನೆಮ್ಮದಿಯನ್ನು ಕೊಂದು ಕೊಳ್ಳುತ್ತಾರೆ. ಹೀಗಾಗಿ ಈ ಎಲ್ಲ ಗುಣಗಳನ್ನು ಹೊಂದಿದವರು ಒಂದೆಡೆ ಕುಳಿತು ಪ್ರಾಂಜಲ ಮನಸ್ಸಿನಿಂದ ತಾಳೆ ಹಾಕಿ ನೋಡಬೇಕು. ನೆಮ್ಮದಿಗೆ ಇವುಗಳಲ್ಲಿ ಯಾವುದಾದರೊಂದು ಭಂಗ ತಂದೇ ತಂದಿರುತ್ತದೆ. ನಮ್ಮಲ್ಲಿ ನೆಮ್ಮದಿ ನೆಲೆಸಬೇಕಾದರೆ ಮೊದಲಿಗೆ ಇದ್ದುದರಲ್ಲಿ ತೃಪ್ತಿ ಪಟ್ಟುಕೊಳ್ಳುವ ಮನೋಭಾವವನ್ನು ಹೊಂದಬೇಕು. ದುರಾಸೆಗಳನ್ನು ತ್ಯಜಿಸಿ ನಮ್ಮ ಮನಸ್ಸನ್ನು ಎಲ್ಲ ಬಗೆಯ ಪಾಪ ಪ್ರಜ್ಞೆಗಳಿಂದ ಮುಕ್ತಮಾಡಿಕೊಳ್ಳಬೇಕು.

ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುವುದನ್ನು ಕಲಿಯಿರಿ

ನಾವು ಮಾಡಿರಬಹುದಾದ ಪಾಪಗಳನ್ನು ದೇವರಲ್ಲಿ ನಿವೇದಿಸಿಕೊಂಡು ಮತ್ತೆ ಇಂತಹ ಅಪರಾಧಗಳನ್ನು ಎಸಗದಂತೆ ದೃಢತೆಯನ್ನು ದಯಪಾಲಿಸುವಂತೆ ಸದಾ ಬೇಡಿಕೊಳ್ಳಬೇಕು. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳುತ್ತಾನೆ 'ತನ್ನ ದೌರ್ಬಲ್ಯಗಳನ್ನು ಮೆಟ್ಟಿ ತನ್ನಿಂದ ತಾನೇ ಉದ್ಧಾರ ಮಾಡಿಕೊಳ್ಳಬೇಕು' ಎಂದು ನೆಮ್ಮದಿಯೂ ಅಷ್ಟೆ ನಮ್ಮಿಂದಲೇ ನಾವು ಕಂಡುಕೊಳ್ಳಬೇಕು. ಇಂದ್ರಿಯಗಳನ್ನು ನಿಯಂತ್ರಿಸುತ್ತಾ ದೇವರ ಪ್ರಾರ್ಥನೆ, ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ತಾಳ್ಮೆ ಬುದ್ದಿವಂತಿಕೆ, ಶ್ರಮ ಇವುಗಳೊಂದಿಗೆ ವಿಷಯಾಪೇಕ್ಷೆಯತ್ತ ಸೆಳೆಯುವ ಮನಸ್ಸಿಗೂ ಕಡಿವಾಣ ಹಾಕಬೇಕು.

ನೆಮ್ಮದಿ ನಮ್ಮೊಂದಿಗೆ ನಮ್ಮಲ್ಲಿಯೇ ಇದೆ ಎಂಬುದನ್ನು ಅರಿತು ನಾವು ಮುನ್ನಡೆಯಬೇಕಾಗುತ್ತದೆ. ಬಹಳಷ್ಟು ಸಂದರ್ಭಗಳಲ್ಲಿ ಪ್ರತಿಷ್ಠೆಗೋಸ್ಕರ ತಾನೇನು ಕಡಿಮೆಯಿಲ್ಲ ಎಂಬ ಭಾವದಿಂದ ಬದುಕಲು ಆರಂಭಿಸುತ್ತೇವೆ. ಅಷ್ಟೇ ಅಲ್ಲದೆ ನಾನೇನು ಕಡಿಮೆಯಿಲ್ಲ ಎಂಬ ಒಣ ಪ್ರತಿಷ್ಠೆಯೂ ನಮಗೆ ಗೊತ್ತಿಲ್ಲದಂತೆ ನಮ್ಮ ನೆಮ್ಮದಿಯನ್ನು ಕೊಲ್ಲಬಹುದು. ಬೇರೆಯವರು ಏನಂದುಕೊಳ್ಳುತ್ತಾರೋ ಎಂಬ ಭಾವನೆ ನಮ್ಮಲ್ಲಿ ಬೆಳೆಯದಂತೆ ನೋಡಿಕೊಂಡರೆ ಮತ್ತು ನಮಗೆ ಸರಿ ಎನಿಸಿದನ್ನಷ್ಟೇ ಮಾಡುತ್ತಾ ಹೋದರೆ ನೆಮ್ಮದಿಯ ಬದುಕು ಕಟ್ಟಿಕೊಳ್ಳುವುದು ಕಷ್ಟವೇನಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+