ಮನಸ್ಸೇ ಸರಿಯಿಲ್ಲವೆಂದು ಗೊಣಗುವುದನ್ನು ಬಿಟ್ಟುಬಿಡಿ.. ಈ ಕ್ಷಣದಿಂದಲೇ ಕ್ರಿಯಾಶೀಲರಾಗಿ!
ಅಯ್ಯೋ ಅದ್ಯಾಕೋ ನನ್ನ ಮನಸ್ಸೇ ಸರಿಯಿಲ್ಲ ಎನ್ನುವವರನ್ನು ನೋಡುತ್ತಲೇ ಇರುತ್ತೇವೆ. ಇಷ್ಟಕ್ಕೂ ಮನಸ್ಸೇ ಸರಿ ಎಲ್ಲ ಎಂಬ ಭಾವ ಏನಾದರೂ ಮೂಡಿತೆಂದರೆ ಅದು ನಮ್ಮ ಕ್ರಿಯಾಶೀಲತೆಯನ್ನೇ ಕೊಂದು ಹಾಕಿ ಬಿಡುತ್ತದೆ. ಏನೇ ಆಗಲಿ ನಮ್ಮೊಳಗಿನ ಕ್ರಿಯಾಶೀಲತೆ ಸಾಯದಂತೆ ಕಾಪಾಡಿಕೊಂಡರೆ ನಾವು ಖುಷಿ, ಖುಷಿಯಾಗಿ ಇರಲು ಸಾಧ್ಯವಾಗುತ್ತದೆ. ಇಲ್ಲದೆ ಹೋದರೆ ನಾವು ನಾವಾಗಿ ಉಳಿಯದೆ ಹಾಳಾಗಿ ಹೋಗಿ ಬಿಡುತ್ತೇವೆ.
ಇಷ್ಟಕ್ಕೂ ಕ್ರಿಯಾಶೀಲತೆ ಎನ್ನುವುದು ಕೊಂಡು ತರುವ ವಸ್ತುವಲ್ಲ. ಅದಕ್ಕಿಂತ ಹೆಚ್ಚಾಗಿ ಅದನ್ನು ಗುಳಿಗೆಯಂತೆ ನುಂಗಲು ಸಾಧ್ಯವಾಗುವುದಿಲ್ಲ. ಬದಲಿಗೆ ಕ್ರಿಯಾಶೀಲತೆ ನಮ್ಮೊಳಗೆ ಹುಟ್ಟಬೇಕು. ಅದು ಹುಟ್ಟಬೇಕಾದರೆ ಮನಸ್ಸು ಪ್ರಾಂಜಲವಾಗಿರಬೇಕು. ಒಂದು ವೇಳೆ ಕಲ್ಮಶದಿಂದ ಕೂಡಿದ್ದರೆ ಅದರಿಂದ ನಾವ್ಯಾರೂ ನೆಮ್ಮದಿಯಾಗಿ ಕಾಲ ಕಳೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಾವು ಖುಷಿಯಾಗಿ, ಕ್ರಿಯಾಶೀಲವಾಗಿ ಕೆಲಸಗಳನ್ನು ಮಾಡಿಕೊಂಡು ಹೋಗಬೇಕಾದರೆ ಮನಸ್ಸನ್ನು ಆರೋಗ್ಯಕವಾಗಿಟ್ಟುಕೊಳ್ಳಬೇಕಾಗುತ್ತದೆ.

ನಿಜ ಹೇಳಬೇಕೆಂದರೆ ನಮ್ಮ ಎಲ್ಲ್ಲ ಚಟುವಟಿಕೆಗಳಿಗೂ ಮನಸ್ಸೇ ಕಾರಣವಾಗಿದ್ದು, ಅದು ಆರೋಗ್ಯವಾಗಿಲ್ಲವಾದರೆ ಒಬ್ಬ ಮನುಷ್ಯ ನೆಮ್ಮದಿಯಾಗಿ ಬದುಕು ನಡೆಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಮ್ಮ ಶರೀರವನ್ನು ನಿಯಂತ್ರಿಸುವ ಶಕ್ತಿ ಮನಸ್ಸಿಗಿದೆ. ಅದು ಯಾವ ಮಾರ್ಗದಲ್ಲಿ ನಡೆಯುವಂತೆ ನಿರ್ದೇಶಿಸುತ್ತದೆಯೋ ಅದೇ ರೀತಿ ಶರೀರ ಕೇಳುತ್ತದೆ. ಹೀಗಾಗಿ ಸನ್ಮಾರ್ಗ ಮತ್ತು ದುರ್ಮಾರ್ಗ ಎರಡರಲ್ಲಿಯೂ ಇದು ನಡೆಸಿ ಬಿಡುತ್ತದೆ.
ಸ್ವಾಮಿ ವಿವೇಕಾನಂದರು ಹೇಳಿದ್ದೇನು?
ಒಬ್ಬ ವ್ಯಕ್ತಿ ದುಷ್ಟನಾಗಿ ಗುರುತಿಸಿಕೊಳ್ಳುತ್ತಿದ್ದರೆ ಅದಕ್ಕೆ ಅವನ ಮನಸ್ಸೇ ಕಾರಣವಾಗಿರುತ್ತದೆ ಎಂಬುವುದರಲ್ಲಿ ಎಳ್ಳಷ್ಟೂ ತಪ್ಪಿಲ್ಲ. ಕೆಲವೊಮ್ಮೆ ನಮ್ಮ ಶರೀರವನ್ನು ಆಕ್ರಮಿಸುವ ದುಷ್ಟ ಆಲೋಚನೆಗಳು ಮನಸ್ಸಿನ ಮೇಲೆ ಪ್ರಭಾವ ಬೀರಿ ದುಷ್ಟ ಕಾರ್ಯಗಳನ್ನು ಶರೀರದ ಮೂಲಕ ಮೂಡಿಸಿ ಬಿಡುತ್ತದೆ. ಒಂದು ಕ್ಷಣದ ಹಿಡಿತ ಕಳೆದುಕೊಂಡು ಮನಸ್ಸು ಮೂಡಿಸುವ ಕಾರ್ಯವಿದೆಯಲ್ಲ ಅದು ನಮ್ಮನ್ನು ಇರುವಷ್ಟು ದಿನವೂ ಕಾಡುತ್ತದೆ. ಈ ಮನಸ್ಸನ್ನು ಕೆಟ್ಟದರಿಂದ ಒಳ್ಳೆಯದರತ್ತ ಎಳೆದುಕೊಳ್ಳುವ ಪ್ರಯತ್ನ ಮಾಡುತ್ತಿರಬೇಕು ಆಗ ನಾವು ಮಾನಸಿಕ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ.

ಸ್ವಾಮಿ ವಿವೇಕಾನಂದರು ಮನಃಶಾಸ್ತ್ರವನ್ನು ಕುರಿತು ವ್ಯಾಖ್ಯಾನಿಸಿರುವ ಸಂಗತಿಗಳನ್ನೇ ತೆಗೆದುಕೊಂಡದ್ದೇ ಆದರೆ ಮನಸ್ಸು ಎನ್ನುವುದು ಈ ಸ್ಥೂಲ ಶರೀರದ ಒಳಗೆ ಇರುವ ಒಂದು ಸೂಕ್ಷ್ಮವಾದ ಅಂಗ. ಶರೀರವೆನ್ನುವುದು ಅದರ ಹೊರಗಿನ ಹೊದಿಕೆ ಅಥವಾ ಕವಚ ಮಾತ್ರ. ಮನಸ್ಸೆಂಬುವುದು ಶರೀರದ ಸೂಕ್ಷ್ಮತರ ಭಾಗವಾಗಿರುವುದರಿಂದ ಈ ದೇಹ ಮತ್ತು ಮನಸ್ಸುಗಳೆರಡೂ ಒಂದು ಮತ್ತೊಂದರ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಕೆಲವೊಮ್ಮೆ ಶಾರೀರಿಕ ಅಸ್ವಾಸ್ಥ್ಯ ಮನಸ್ಸಿನ ಮೇಲೆ, ಮಾನಸಿಕ ಅಸ್ವಾಸ್ಥ್ಯ ಅಥವಾ ಉದ್ವೇಗ ಶರೀರದ ಮೇಲೆ ಪರಿಣಾಮವನ್ನುಂಟು ಮಾಡುವ ಪ್ರಸಂಗಗಳು ನಡೆಯುತ್ತವೆ.
ಶರೀರ ಕ್ರಿಯಾಶೀಲತೆ ಕಳೆದುಕೊಳ್ಳದಿರಲಿ
ಯಾವಾಗ ಮನಸ್ಸು ಕ್ಷೋಭೆಗೆ ಒಳಗಾಗುತ್ತದೆಯೋ ಆಗ ಶರೀರ ಕ್ರಿಯಾಶೀಲತೆ ಕಳೆದುಕೊಳ್ಳುತ್ತದೆ. ಕ್ರಿಯಾಶೀಲತೆ ಕಳೆದು ಹೋದರೆ ಯಾವ ವಿಚಾರದಲ್ಲಿಯೂ ಆಸಕ್ತಿ ಇರುವುದಿಲ್ಲ. ಆಗ ನಾವು ನಮಗೆ ಗೊತ್ತಿಲ್ಲದಂತೆ ಸಬೂಬು ಹೇಳಲು ಆರಂಭಿಸುತ್ತೇವೆ. ಅಯೋ ಮನಸ್ಸು ಸರಿಯಿಲ್ಲ ಅಂಥ ಅನ್ಯ ಮನಸ್ಕರಾಗಿ ಬಿಡುತ್ತೇವೆ. ಇದು ನಮ್ಮ ದೈನಂದಿನ ಚಟುವಟಿಕೆ ಮೇಲೆ ಪರಿಣಾಮ ಬೀರಿ ಬಿಡುತ್ತದೆ. ಇಷ್ಟಕ್ಕೂ ಮನಸ್ಸು ನಮಗೆ ಕಾಣದಿದ್ದರೂ ಅದರ ಹಿಂದೆ ಹಿಂದೆ ಆತ್ಮವಿದೆ. ಅದೇ ಮನುಷ್ಯನ ನಿಜವಾದ ಅಸ್ತಿತ್ವ, ಶರೀರ ಮತ್ತು ಮನಸ್ಸು ಅದರ ಮೂಲ ದ್ರವ್ಯಗಳಾಗಿವೆ ಎನ್ನುತ್ತಾರೆ ಸ್ವಾಮಿ ವಿವೇಕಾನಂದರು.
ಅಷ್ಟೇ ಅಲ್ಲದೆ ಆತ್ಮವೆಂಬುವುದು ಶುದ್ಧವಾದ ಒಂದು ಚೈತನ್ಯ. ಮನಸ್ಸು ಎಂಬುವುದು ಆತ್ಮ ಅಲ್ಲ. ಅದು ಆತ್ಮದಿಂದ ಬೇರೆಯೇ ಆದದ್ದು. ಮನಸ್ಸು ಎಂಬುವುದು ಆತ್ಮದ ಒಂದು ಉಪಕರಣದಂತಿದ್ದು, ಅದರ ಮೂಲಕ ಆತ್ಮವು ಬಹಿರಂಗ ಜಗತ್ತನ್ನು ಗ್ರಹಿಸುತ್ತದೆ. ತಮಸ್ಸು ಮತ್ತು ಚಂಚಲತೆಗಳು ಮನಸ್ಸಿನ ಸಾಮಾನ್ಯ ಸ್ಥಿತಿಯಾಗಿದೆ. ತಮಸ್ಸು ಸ್ಥಿತಿಯಲ್ಲಿ ಮನುಷ್ಯನು ಜಡನೂ ನಿಸ್ತೇಜನೂ ಆಗುತ್ತಾನೆ. ಚಾಂಚಲ್ಯದ ಸಮಯಗಳಲ್ಲಿ ಆತ ಹೋಯ್ದಾಡುವ ಸ್ವಭಾವದವನಾಗುತ್ತಾನೆ ಎಂಬುದನ್ನು ವಿವರಿಸುತ್ತಾರೆ.
ಮನಸ್ಸನ್ನು ಏಕಾಗ್ರತೆಗೊಳಿಸಬೇಕು
ನಾವು ಕ್ರಿಯಾಶೀಲರಾಗಬೇಕಾದರೆ ಮನಸ್ಸನ್ನು ಏಕಾಗ್ರತೆಗೊಳಿಸುವ ಜಾಣ್ಮೆ ನಮ್ಮಲ್ಲಿ ಇರಬೇಕು. ಆದರೆ ಬಹಳಷ್ಟು ಮಂದಿ ಏಕಾಗ್ರತೆಗೊಳಿಸುವಲ್ಲಿ ಸೋಲುತ್ತಾರೆ. ಮನಸ್ಸಿನ ಹತೋಟಿ ಅಷ್ಟೊಂದು ಸುಲಭವಲ್ಲ. ಹಾಗೆಂದು ಕಷ್ಟವೂ ಅಲ್ಲ. ಯಾವ ಮನುಷ್ಯ ಮನಸ್ಸನ್ನು ಏಕಾಗ್ರತೆಗೆ ತರುತ್ತಾನೆಯೋ ಅವನು ತಮ್ಮ ಏಕಾಗ್ರ ಮನಸ್ಸಿನೊಂದಿಗೆ ಯಾವ ಕ್ಷೇತ್ರದ ವ್ಯವಹಾರಕ್ಕೆ ಇಳಿದರೂ ಅಲ್ಲಿ ಯಶಸ್ಸು ಪಡೆಯುತ್ತಾನೆ. ಏಕೆಂದರೆ ಅವನಲ್ಲಿ ಕ್ರಿಯಾಶೀಲತೆ ಜಾಗೃತವಾಗಿರುತ್ತದೆ.
ಇದು ಸಾಧ್ಯವಾಗಬೇಕಾದರೆ ಸ್ವಾಮಿ ವಿವೇಕಾನಂದರು ಹೇಳಿದಂತೆ ಮಾಡಬೇಕಾಗುತ್ತದೆ. ಎಲ್ಲೆಲ್ಲೋ ಅಂಡಲೆಯುವ ಮನಸ್ಸನ್ನು ಹಿಡಿದು ಎಳೆದು ತಂದು ಒಂದು ವಿಚಾರದ ಗೂಟಕ್ಕೆ ಮೊದಲು ಕಟ್ಟಿ ಹಾಕಬೇಕು. ಈ ಕೆಲಸವನ್ನು ಮತ್ತೆ, ಮತ್ತೆ ಮಾಡಬೇಕು. ನಮ್ಮ ಸಂಕಲ್ಪ ಶಕ್ತಿಯಿಂದ ಮನಸ್ಸನ್ನು ದೃಢವಾಗಿ ನಿಲ್ಲಿಸಿ ಭಗವಂತನ ಮಹಿಮೆಗಳನ್ನು ಕುರಿತು ಧ್ಯಾನಿಸಬೇಕು. ಒಮ್ಮೆ ಮನಸ್ಸನ್ನು ಗೆದ್ದು ಬಿಟ್ಟರೆ ಅದು ನಾವು ಹೇಳಿದಂತೆ ಕೇಳುತ್ತದೆ. ಆಗ ಉದಾಸೀನತೆ ಬಳಿಗೆ ಸುಳಿಯುವುದಿಲ್ಲ. ಜತೆಗೆ ಮನಸ್ಸನ್ನು ಆರೋಗ್ಯವಾಗಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.
ಎಲ್ಲವೂ ನಮ್ಮ ಕೈನಲ್ಲಿಯೇ ಇದೆ
ಮನಸ್ಸು ಆರೋಗ್ಯವಾಗಿದ್ದರೆ ದೈಹಿಕವಾಗಿ ಆರೋಗ್ಯವಾಗಿದ್ದಂತೆ. ಮಾನಸಿಕ ಆರೋಗ್ಯ ದೇಹ ಚಟುವಟಿಕೆಯಿಂದ ಕೂಡಿರಲು ಸಹಕಾರಿಯಾಗಿದೆ. ನಿಜ ಹೇಳಬೇಕೆಂದರೆ ದೇಹದ ಚಟುವಟಿಕೆಯೇ ಕ್ರಿಯಾಶೀಲತೆ. ಹೀಗಾಗಿ ಕ್ರಿಯಾಶೀಲರಾಗಿದ್ದರೆ ನಾವು ಖುಷಿಯಿಂದ ಇರಲು, ಆಸಕ್ತಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಮನಸ್ಸನ್ನು ಕೆಡಿಸಿಕೊಂಡು ಒದ್ದಾಡುವ ಬದಲು ಮನಸ್ಸನ್ನು ಲವಲವಿಕೆ ಇರುವಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ. ಎಲ್ಲವೂ ನಮ್ಮ ಕೈನಲ್ಲಿಯೇ ಇದೆ ಎಂಬುದನ್ನು ಮರೆಯಬಾರದಷ್ಟೆ.











Click it and Unblock the Notifications