ಇತಿಮಿತಿಯಲ್ಲಿ ಒಂದೊಳ್ಳೆಯ ಬದುಕು ಕಟ್ಟಿಕೊಳ್ಳುವುದು ಹೇಗೆ?
ಎಲ್ಲರೂ ತನ್ನದೇ ಆದ ಸುಂದರ ಬದುಕನ್ನು ಬಯಸುತ್ತಾ ಐಷಾರಾಮಿ ಜೀವನದ ಬಗ್ಗೆಯೇ ನಿರೀಕ್ಷೆ ಮಾಡುತ್ತಾರೆ. ಅದರಂತೆ ಒಂದೊಳ್ಳೆಯ ಮನೆ ಓಡಾಡಲು ಕಾರು ಹೀಗೆ ಐಷಾರಾಮಿ ಬದುಕನ್ನು ಬಯಸುತ್ತಾರೆ. ಇವತ್ತಿನ ಆಧುನಿಕ ಬದುಕಿನಲ್ಲಿ ಐಷಾರಾಮಿಯಾಗಿದ್ದರೆ ಮಾತ್ರ ಸಮಾಜದಲ್ಲಿ ಗೌರವ ಎನ್ನುವ ಮನೋಭಾವಕ್ಕೆ ನಾವೆಲ್ಲರೂ ಜೋತು ಬಿದ್ದಿರುವುದರಿಂದ ಇದ್ಯಾವುದೂ ಇಲ್ಲದೆ ಹೋದರೆ ಬದುಕೇ ಗೌಣ ಎಂಬ ತೀರ್ಮಾನಕ್ಕೆ ಬಂದು ಬಿಟ್ಟಿದ್ದೇವೆ.
ಇದನ್ನೆಲ್ಲಾ ಪಡೆದೇ ತೀರಬೇಕೆಂಬ ಹಠಕ್ಕೆ ಬಿದ್ದು ಸಮಾಜದಲ್ಲಿ ಅಂತಸ್ತನ್ನು ಉಳಿಸಿಕೊಳ್ಳುವ ಸಲುವಾಗಿ ನಮ್ಮ ಸಾಮರ್ಥ್ಯಕ್ಕೆ ನಿಲುಕದ್ದನೆಲ್ಲ ಕೈವಶ ಮಾಡಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡುತ್ತಾ ನೆಮ್ಮದಿಯಿಲ್ಲದ ಬದುಕನ್ನು ಕಳೆಯುತ್ತಿದ್ದೇವೆ. ನಾವು ಮಾಡುತ್ತಿರುವ ಸಂಪಾದನೆಯಲ್ಲಿ ದಿನಕಳೆಯುವುದೇ ಕಷ್ಟವಾಗಿರುವಾಗ ಮೋಜು ಮಸ್ತಿಗೆ ಮುಂದಾದರೆ ಏನಾಗಬಹುದು?

ಕಷ್ಟ ಪಟ್ಟು ದುಡಿದ ಹಣವನ್ನು ದ್ವಿಗುಣಗೊಳಿಸುವ ಸಲುವಾಗಿ ಸುಲಭ ಮಾರ್ಗದಲ್ಲಿ ಮತ್ತಷ್ಟು ಸಂಪಾದಿಸುವ ಭ್ರಮೆಯಲ್ಲಿ ಜೂಜುಗೆ ಕಟ್ಟಿ ಬರಿ ಕೈಯ್ಯಲ್ಲಿ ಹಿಂತಿರುಗುವವರು ಎಷ್ಟೊಂದು ಜನರಿಲ್ಲ. ಮಾಡಿದ ಸಂಪಾದನೆಯನ್ನು ಹೆಂಡಕ್ಕೆ ಹಾಕಿ ಹೆಂಡತಿ ಮಕ್ಕಳನ್ನು ಉಪವಾಸ ಬೀಳಿಸುವವರೂ ಇದ್ದಾರೆ.
ಇತಿಮಿತಿಯಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕು
ನಾವೆಲ್ಲರೂ ಹಣ ಮತ್ತು ಅದರಿಂದ ಪಡೆಯಬಹುದಾದ ಐಷಾರಾಮಿ ಜೀವನದ ಬಗ್ಗೆ ಚಿಂತಿಸುತ್ತೇವೆಯೇ ಹೊರತು ನಮ್ಮ ಇತಿಮಿತಿಯಲ್ಲಿ ಒಂದೊಳ್ಳೆ ಬದುಕನ್ನು ಕಟ್ಟಿಕೊಳ್ಳಲು ಮುಂದಾಗುವುದೇ ಇಲ್ಲ. ಹೀಗಾಗಿಯೇ ನಾವು ಅನಗತ್ಯ ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿರುತ್ತೇವೆ. ನೆಮ್ಮದಿ ಕಳೆದುಕೊಂಡು ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತೇವೆ. ಸದಾ ಭಯ ಆತಂಕದಲ್ಲೇ ದಿನ ಕಳೆಯುತ್ತೇವೆ.
ನಮಗೆ ನಮ್ಮ ಮುಂದೆ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವವರು ಕಾಣುತ್ತಾರೆ. ಅವರ ಏಳಿಗೆ ನಮ್ಮ ಮನಸ್ಸನ್ನು ಕೆಡಿಸುತ್ತದೆ. ಅವನು ಚೆನ್ನಾಗಿರಲಿ ಹಾಗೆಂಬ ಉದಾರ ಭಾವ ನಮ್ಮಲ್ಲಿ ಇಲ್ಲದಿರುವುದರಿಂದಾಗಿ ಆತನ ಏಳಿಗೆ ನಮಗೆ ಸಹಿಸದಾಗುತ್ತದೆ. ನಾವು ನಮ್ಮ ಬಗ್ಗೆ ಚಿಂತಿಸದೆ ಆತನ ಬಗ್ಗೆ ತಲೆ ಕೆಡಿಸಿಕೊಳ್ಳುತ್ತೇವೆ. ನಮ್ಮ ಕಣ್ಣ ಮುಂದೆಯೇ ಆತ ಏಳಿಗೆಯಾಗಿ ಬಿಟ್ಟನಲ್ಲ ಎಂಬ ಚಿಂತೆ ನಮ್ಮನ್ನು ಮಾನಸಿಕವಾಗಿ ಕುಗ್ಗಿಸುತ್ತದೆ.
ಬೇರೆಯವರ ಪ್ರೋತ್ಸಾಹಿಸುವುದನ್ನು ಕಲಿಯಬೇಕು
ಮತ್ತೊಬ್ಬರ ಏಳಿಗೆಯನ್ನು ಕಂಡು ಖುಷಿಪಡುವ ಮತ್ತು ಪ್ರೋತ್ಸಾಹಿಸುವ ಉದಾರ ಭಾವ ನಮ್ಮಲ್ಲಿ ಬೆಳೆಸಿಕೊಳ್ಳದೆ ಹೋದರೆ ಖಂಡಿತಾ ಉದ್ದಾರವಾಗಲು ಸಾಧ್ಯವಿಲ್ಲ. ಇನ್ನೊಬ್ಬರ ಯಶಸ್ಸು, ಅಭಿವೃದ್ಧಿಯನ್ನು ದೂರದಿಂದ ನೋಡಿ ಸಂತೋಷ ಪಡುವ ಹತ್ತಿರವಿದ್ದಾಗ ಬೆನ್ನುತಟ್ಟಿ ಇನ್ನಷ್ಟು ಅವರನ್ನು ಹುರಿದುಂಬಿಸುವ ಪ್ರವೃತ್ತಿಯನ್ನು ನಾವು ಬೆಳೆಯಿಸಿಕೊಳ್ಳದೆ ಹೋದರೆ ಖಂಡಿತಾ ನಾವು ಒಳ್ಳೆಯ ಮನುಷ್ಯರಾಗಿ ಬದುಕಲು ಸಾಧ್ಯವಿಲ್ಲ. ಅಷ್ಟೇ ಅಲ್ಲ ಮಾನಸಿಕವಾಗಿ ಆರೋಗ್ಯವಂತ ಬದುಕು ಕಟ್ಟಿಕೊಳ್ಳಲಾಗುವುದಿಲ್ಲ.
ಮತ್ತೊಬ್ಬನ ಏಳಿಗೆಯನ್ನು ನೋಡಿ ಅವನಂತೆ ಬೆಳೆಯಬೇಕು. ಅವನು ಬದುಕಿನಲ್ಲಿ ಅಭಿವೃದ್ಧಿಯಾಗಬೇಕಾದರೆ ಎಷ್ಟೆಲ್ಲಾ ಶ್ರಮಪಟ್ಟಿದ್ದಾನೆ ಎಂಬುವುದನ್ನು ಅರಿತು ಅದರಂತೆ ಬದುಕಲು ಯತ್ನಿಸಬೇಕು. ಆದರೆ ನಾವು ಯಾವತ್ತೂ ಆ ರೀತಿ ಮಾಡುವುದಿಲ್ಲ. ಯಶಸ್ಸು ಕಂಡ ವ್ಯಕ್ತಿಯನ್ನು ತುಳಿದು ಮೇಲೆ ಬರಲು ಬೇಕಾದ ಕುತಂತ್ರಗಳನ್ನು ಮಾಡುತ್ತೇವೆ. ಇದು ನಮ್ಮಲ್ಲಿರುವ ಕೆಟ್ಟಗುಣ. ಇದನ್ನು ಮನಸ್ಸಿನಿಂದ ತೆಗೆದು ಹಾಕದೆ ಹೋದರೆ ಮುಂದೆ ಬದುಕಿನುದ್ದಕ್ಕೂ ನಮ್ಮ ಅಭಿವೃದ್ಧಿಗೆ ಮಾರಕವಾಗಿರುವುದರಲ್ಲಿ ಸಂಶಯವಿಲ್ಲ.

ಅತೃಪ್ತಿ ಕಾಡದಂತೆ ನೋಡಿಕೊಳ್ಳಬೇಕು
ಇಂತಹ ಮನಸ್ಥಿತಿ ಹೊಂದಿರುವ ವ್ಯಕ್ತಿಗಳು ಶ್ರಮಪಡಲು ತಯಾರಿರುವುದಿಲ್ಲ. ಆದರೆ ಯಶಸ್ಸನ್ನು ಬಯಸುತ್ತಾರೆ. ಶ್ರಮಪಡದ ಮೇಲೆ ಯಶಸ್ಸು ತಾನೆ ಸಿಕ್ಕಿಯಾತು? ಆದರೆ ಆ ಯಶಸ್ಸನ್ನು ಪಡೆಯಲು ಅವರು ಅನ್ಯ ಮಾರ್ಗ ಹಿಡಿಯುತ್ತಾರೆ. ಇಂತಹವರು ಮುಂದೊಂದು ದಿನ ಸಮಾಜಕ್ಕೆ ಮಾರಕ ವಾಗುವುದರಲ್ಲಿ ಸಂಶಯವಿಲ್ಲ. ಇತ್ತೀಚಿಗಿನ ದಿನಗಳಲ್ಲಿ ಇರುವುದರಲ್ಲೇ ತೃಪ್ತಿಪಡುವ ಬದುಕು ಯಾರಿಗೂ ಬೇಕಾಗಿಲ್ಲ. ಮತ್ತೊಬ್ಬರನ್ನು ಕಸಿದು ತಾವು ಬದುಕುವ ಮನೋಸ್ಥಿತಿಯಿಂದಾಗಿ ಮೋಸ, ವಂಚನೆಗಳು ಹೆಚ್ಚಾಗುತ್ತಿವೆ.
ಕೇವಲ ತಮ್ಮ ಖರ್ಚು ವೆಚ್ಚಕ್ಕೆ ಆದರೆ ಸಾಕೆಂಬ ಸಮಾಧಾನ ನಮ್ಮಲ್ಲಿಲ್ಲ. ಭವಿಷ್ಯದ ಬಗ್ಗೆಯೂ ಚಿಂತಿಸುವ ಮತ್ತು ಮುಂದಿನ ತಲೆ ಮಾರಿಗೆ ಕೂಡಿಡುವ ಆತುರ. ಇದರಿಂದಾಗಿ ನಾವು ದೇವರು ಎಷ್ಟು ಕೊಟ್ಟರೂ ಅದರಿಂದ ತೃಪ್ತರಾಗುತ್ತಿಲ್ಲ. ಅತೃಪ್ತಿ ನಮ್ಮನ್ನು ಕಾಡುತ್ತಲೇ ಇರುತ್ತದೆ.
ಇಲ್ಲಿಯೇ ಎಲ್ಲವನ್ನು ಬಿಟ್ಟುಹೋಗಬೇಕು
ಬದುಕು ನಶ್ವರ ಇಲ್ಲಿ ಎಷ್ಟೇ ಸಂಪಾದನೆ ಮಾಡಿಟ್ಟರೂ ಒಂದಲ್ಲ ಒಂದು ದಿನ ಎಲ್ಲವನ್ನೂ ಬಿಟ್ಟು ಬರಿಕೈಯ್ಯಲ್ಲಿ ಹೋಗಲೇ ಬೇಕು. ಇದು ನಮ್ಮೆಲ್ಲರಿಗೆ ಗೊತ್ತಿರುವ ವಿಚಾರ. ಆದರೆ ನಾವ್ಯಾರು ಆ ಬಗ್ಗೆ ಆಲೋಚಿಸುವುದೇ ಇಲ್ಲ. ಇಲ್ಲಿಯೇ ಶಾಶ್ವತವಾಗಿರುತ್ತೇವೆ ಎಂಬ ನಂಬಿಕೆಯಲ್ಲೇ ಬದುಕುತ್ತಿದ್ದೇವೆ. ಬೇರೆಯವರ ವೈಭವದ ಬದುಕು ಆಕರ್ಷಿಸುವುದರಿಂದ ಧರ್ಮದ ದಾರಿಯಲ್ಲಿ ಸಾಗುವ ವ್ಯಕ್ತಿ ಕೂಡ ಅಯ್ಯೋ ಸತ್ಯ ಧರ್ಮಕ್ಕೆ ಸಿಕ್ಕಿದ್ದು ಇಷ್ಟೆನಾ? ನಾನೇಕೆ ಧರ್ಮದ ಹಾದಿಯಲ್ಲಿ ಸಾಗಬೇಕೆಂದು ಪ್ರಶ್ನಿಸಿಕೊಳ್ಳುತ್ತಾ ಅಧರ್ಮದ ಹಾದಿಯತ್ತ ಹೆಜ್ಜೆ ಹಾಕುತ್ತಾನೆ. ಆದರೆ ಇಲ್ಲಿವರೆಗೆ ನನ್ನಲ್ಲಿ ಸಂಪತ್ತಿಲ್ಲದಿದ್ದರೂ ಮಾನಸಿಕವಾಗಿ ನೆಮ್ಮದಿಯ ಬದುಕನ್ನು ಸಾಗಿಸುತ್ತಿದ್ದೇನೆ ಎಂಬ ಸತ್ಯವನ್ನು ಅರಿಯುವುದೇ ಇಲ್ಲ.
ಕರ್ಮಕ್ಕೆ ಕಂದಾಯ ಕಟ್ಟಲೇ ಬೇಕು
ಧರ್ಮದ ಹಾದಿಯಲ್ಲಿ ಕಲ್ಲು ಮುಳ್ಳುಗಳು ಸಹಜ ಅದರ ಮೇಲೆ ಸಾಗುವುದು ಕಷ್ಟವಾಗಬಹುದು. ಆದರೆ ಮುಂದೆ ಒಂದು ನೆಮ್ಮದಿಯ ಮತ್ತು ಸುಖದ ಹಾದಿ ಇದ್ದೇ ಇದೆ ಎಂಬ ಸತ್ಯವನ್ನು ಮರೆಯಬಾರದು. ಅಧರ್ಮದ ಹಾದಿ ಹಣ, ಸಂಪತ್ತು ಎಲ್ಲವನ್ನು ತಕ್ಷಣಕ್ಕೆ ತಂದುಕೊಡಬಹುದು. ಆದರೆ ಮಾಡಿದ ಕರ್ಮಕ್ಕೆ ಮುಂದೆ ಕಂದಾಯ ಕಟ್ಟಲೇ ಬೇಕು.
ನಮ್ಮ ಮುಂದೆ ಅಕ್ರಮವಾಗಿ ಸಂಪಾದನೆ ಮಾಡಿ ಸಂಪತ್ತನ್ನು ಕೂಡಿಟ್ಟುಕೊಂಡವರನ್ನು ನೋಡಿದರೆ ಅವರೆಲ್ಲ ಸುಖವಾಗಿ ಇದ್ದಾರಾ ಎಂಬುವುದು ಮನದಟ್ಟಾಗಿ ಬಿಡುತ್ತದೆ. ಆಮೇಲೆ ನಿಮ್ಮನ್ನೇ ನೀವು ಕೇಳಿಕೊಳ್ಳಿ ನೆಮ್ಮದಿಯಿಲ್ಲದ ಸಂಪತ್ತು ತುಂಬಿದ ವೈಭವದ ಬದುಕು ಬೇಕಾ?
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications