ಹಣ್ಣುಗಳನ್ನು ನೀರಿನಲ್ಲಿ ತೊಳೆದರೆ ಸಾಕಾ? ತಜ್ಞರು ಹೇಳುವ ಸರಿಯಾದ ವಿಧಾನ ಇಲ್ಲಿದೆ
ಸ್ಟ್ರಾಬೆರಿ, ಬ್ಲೂಬೆರಿ, ರಾಸ್‌ಬೆರಿ, ಬ್ಲಾಕ್‌ಬೆರಿ, ಪೀಚ್ ಮತ್ತು ಪ್ಲಮ್‌ಗಳಂತಹ ಹಣ್ಣುಗಳು ಅತ್ಯಂತ ರುಚಿಕರ ಮತ್ತು ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿವೆ. ಆದರೆ ಕೃಷಿ ವೇಳೆ ಬಳಸುವ ಕೀಟನಾಶಕಗಳ ಹಾನಿಕಾರಕ ರಾಸಯನಿಕ ಅಂಶಗಳು ಹಣ್ಣಿನ ಮೇಲ್ಮೈಯಲ್ಲಿ ಉಳಿದಿರಬಹುದು. ಆದ್ದರಿಂದ ಈ ಹಣ್ಣುಗಳನ್ನು ತಿನ್ನುವ ಮೊದಲು ಸರಿಯಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯವಾಗಿದೆ.
ಹಣ್ಣುಗಳ ಮೇಲಿರುವ ಕೀಟನಾಶಕಗಳನ್ನು ತೆಗೆಯುವುದು ಹೇಗೆ?
ಹಣ್ಣುಗಳನ್ನು ತಿನ್ನುವ ಮುನ್ನ ಹೀಗೆ ತೊಳೆಯಿರಿ:
ತಾಜಾ ಹಣ್ಣುಗಳನ್ನು ತಿನ್ನುವ ಮುನ್ನ ಅವುಗಳನ್ನು ತಣ್ಣೀರಿನಲ್ಲಿ ಸ್ವಚ್ಛವಾಗಿ ತೊಳೆಯುವುದು ಬಹಳ ಮುಖ್ಯ. ವಿಶೇಷವಾಗಿ ಬೆರ್ರಿ ಹಣ್ಣುಗಳನ್ನು ತೊಳೆಯುವಾಗ ಅವುಗಳು ಜಜ್ಜದಂತೆ ಜಾಲರಿಯ ಪಾತ್ರೆಯಲ್ಲಿ ಹಾಕಿ ನಿಧಾನವಾಗಿ ನೀರು ಹಾಯಿಸಬೇಕು. ಅದೇ ರೀತಿ, ಪೀಚ್ ಮತ್ತು ಪ್ಲಮ್ ಹಣ್ಣುಗಳ ಮೇಲ್ಮೈಯಲ್ಲಿ ಧೂಳು ಹಾಗೂ ಕೀಟನಾಶಕಗಳ ಅಂಶ ಹೆಚ್ಚಿರುವುದರಿಂದ, ಅವುಗಳನ್ನು ಕೈಯಿಂದ ಚೆನ್ನಾಗಿ ಸವರಿ ತೊಳೆದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಹಣ್ಣುಗಳನ್ನು ತೊಳೆಯಲು ಬೇಕಿಂಗ್ ಸೋಡಾ ದ್ರಾವಣ ಬಳಸಿ:
ಒಂದು ದೊಡ್ಡ ಪಾತ್ರೆ ನೀರಿಗೆ ಒಂದು ಟೀ ಚಮಚ ಬೇಕಿಂಗ್ ಸೋಡಾ ಸೇರಿಸಿ ಚೆನ್ನಾಗಿ ಕಲಸಿ ದ್ರಾವಣವನ್ನು ಸಿದ್ಧಪಡಿಸಿಕೊಳ್ಳಿ. ಪೀಚ್ ಮತ್ತು ಪ್ಲಮ್ ಹಣ್ಣುಗಳನ್ನು ಈ ನೀರಿನಲ್ಲಿ 10 ರಿಂದ 15 ನಿಮಿಷಗಳವರೆಗೆ ನೆನೆಸಿಟ್ಟು ನಂತರ ತೊಳೆಯಬಹುದು. ಆದರೆ, ಸ್ಟ್ರಾಬೆರಿ ಹಾಗೂ ಬ್ಲೂಬೆರಿಯಂತಹ ಮೃದುವಾದ ಹಣ್ಣುಗಳನ್ನು ಹೆಚ್ಚು ಹೊತ್ತು ನೆನೆಸಬಾರದು; ಇವುಗಳನ್ನು ಕೇವಲ ಕೆಲವೇ ನಿಮಿಷಗಳ ಕಾಲ ಈ ದ್ರಾವಣದಲ್ಲಿ ಇಟ್ಟು, ತಕ್ಷಣವೇ ತಣ್ಣೀರಿನಲ್ಲಿ ಮತ್ತೊಮ್ಮೆ ತೊಳೆದು ಬಳಸಬೇಕು.
ವಿನೆಗರ್ ನೀರಿನಲ್ಲಿ ನೆನೆಸಿಡಿ
ಒಂದು ಭಾಗ ಬಿಳಿ ವಿನೆಗರ್‌ಗೆ ಮೂರು ಭಾಗ ನೀರು ಸೇರಿಸಿ ದ್ರಾವಣ ತಯಾರಿಸಿ. ಹಣ್ಣುಗಳನ್ನು ಕೆಲ ನಿಮಿಷಗಳ ಕಾಲ ಅದರಲ್ಲಿ ನೆನೆಸಿಡುವುದರಿಂದ ಮೇಲ್ಮೈಯಲ್ಲಿರುವ ಕೆಲವು ಸೂಕ್ಷ್ಮಾಣುಗಳು ಹಾಗೂ ಮಲಿನತೆಗಳನ್ನು ತೆಗೆಯಲು ಸಹಾಯವಾಗುತ್ತದೆ. ಬಳಿಕ ಶುದ್ಧ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು.
ಒಣಗಿಸಿ ಸಂಗ್ರಹಿಸಿ
ಹಣ್ಣುಗಳನ್ನು ತೊಳೆದ ನಂತರ ಸ್ವಚ್ಛವಾದ ಬಟ್ಟೆ ಅಥವಾ ಟಿಷ್ಯೂ ಬಳಸಿ ಒಣಗಿಸಬೇಕು. ಹೆಚ್ಚುವರಿ ತೇವಾಂಶ ಇದ್ದರೆ ಬೆರ್ರಿ ಹಣ್ಣುಗಳಲ್ಲಿ ಬೇಗನೆ ಹುಳು ಅಥವಾ ಫಂಗಸ್ ಬೆಳೆಯುವ ಸಾಧ್ಯತೆ ಇರುತ್ತದೆ.
ತಿನ್ನುವ ಮುನ್ನವೇ ತೊಳೆಯಿರಿ
ಮನೆಗೆ ತಂದ ತಕ್ಷಣ ಎಲ್ಲ ಹಣ್ಣುಗಳನ್ನು ತೊಳೆಯುವುದಕ್ಕಿಂತ, ತಿನ್ನುವ ಮೊದಲು ಮಾತ್ರ ತೊಳೆಯುವುದು ಉತ್ತಮ. ಮುಂಚಿತವಾಗಿ ತೊಳೆದರೆ ತೇವಾಂಶದಿಂದ ಹಣ್ಣುಗಳು ಬೇಗ ಹಾಳಾಗುವ ಸಾಧ್ಯತೆ ಇದೆ.
ಹಣ್ಣುಗಳ ಆರೋಗ್ಯ ಪ್ರಯೋಜನಗಳು
ಸ್ಟ್ರಾಬೆರಿ: ವಿಟಮಿನ್ ಸಿ ಸಮೃದ್ಧವಾಗಿದ್ದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.
ಬ್ಲೂಬೆರಿ: ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದ್ದು ಮೆದುಳಿನ ಆರೋಗ್ಯ ಹಾಗೂ ಕೋಶಗಳ ರಕ್ಷಣೆಗೆ ನೆರವಾಗುತ್ತದೆ.
ಬ್ಲಾಕ್‌ಬೆರಿ: ವಿಟಮಿನ್ ಸಿ ಮತ್ತು ಕೆ ಅಂಶಗಳನ್ನು ಹೊಂದಿದ್ದು ವಯೋಸಹಜ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯಕವಾಗಿದೆ.
ರಾಸ್‌ಬೆರಿ: ಹೆಚ್ಚಿನ ಫೈಬರ್ ಹೊಂದಿರುವುದರಿಂದ ಜೀರ್ಣಕ್ರಿಯೆ ಸುಧಾರಿಸಲು ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ನೆರವಾಗುತ್ತದೆ.
ಪೀಚ್: ಚರ್ಮದ ಆರೋಗ್ಯ, ರೋಗನಿರೋಧಕ ಶಕ್ತಿ ಮತ್ತು ದೇಹದ ಚಯಾಪಚಯ ಕ್ರಿಯೆ ಸುಧಾರಿಸಲು ಸಹಕಾರಿ.
ಪ್ಲಮ್: ಆಂಟಿಆಕ್ಸಿಡೆಂಟ್, ವಿಟಮಿನ್ ಹಾಗೂ ಖನಿಜಾಂಶಗಳಿಂದ ಸಮೃದ್ಧವಾಗಿದ್ದು ದೇಹದ ಒಟ್ಟಾರೆ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.
ತಜ್ಞರ ಪ್ರಕಾರ, ಹಣ್ಣುಗಳನ್ನು ಸರಿಯಾದ ವಿಧಾನದಲ್ಲಿ ತೊಳೆದು ಸೇವಿಸುವುದರಿಂದ ಕೀಟನಾಶಕಗಳ ಪರಿಣಾಮವನ್ನು ಕಡಿಮೆ ಮಾಡಬಹುದು ಹಾಗೂ ಅವುಗಳ ಪೌಷ್ಟಿಕ ಲಾಭಗಳನ್ನು ಸುರಕ್ಷಿತವಾಗಿ ಪಡೆಯಬಹುದು.














Click it and Unblock the Notifications