Thili Saaru Recipe: ಸವಿದರೆ ಮತ್ತೆ..ಮತ್ತೆ ಸವಿಯಬೇಕೆನಿಸುವ ತಿಳಿ ಸಾರು ಕ್ಷಣದಲ್ಲೇ ತಯಾರಿಸಿ
ದಕ್ಷಿಣ ಭಾರತ ಜನರ ಮೆಚ್ಚಿನ ಆಹಾರಗಳಲ್ಲಿ ರಸಂ ಕೂಡ ಒಂದು. ಅದರಲ್ಲೂ ತಿಳಿ ಸಾರು ಅಂದರೆ ಬೇಳೆ ರಸಂ ಹೆಸರು ಕೇಳಿದರೆ ಸಾಕು ಎಂತವರ ಬಾಯಲ್ಲಾದರೂ ನೀರು ಬರುತ್ತದೆ. ಬಿಸಿ ಬಿಸಿಯಾದ, ಹುಳಿ,ಖಾರ ಸೇರಿದ ರುಚಿಯಾದ ರಸಂ ಸವಿಯುತ್ತಿದ್ದರೆ ತಿಂದವರಿಗೆ ಆ ಕ್ಷಣವೇ ಸ್ವರ್ಗದ ಅನುಭವವಾಗುತ್ತದೆ.
ತಿಳಿ ಸಾರು ತಯಾರಿಸಲು ಸುಲಭ ಹಾಗೂ ಸವಿಯಲು ರುಚಿ. ಹೀಗಾಗಿ ಅನೇಕ ಮನೆಯ ಪ್ರತಿ ನಿತ್ಯದ ಅಡುಗೆಯಲ್ಲಿ ತಿಳಿ ಸಾರು ಖಾಯಂ ಪದಾರ್ಥ. ಆದರೆ ತಿಂದಷ್ಟೂ ತಿಳಿ ಸಾರು ಬೇಸರವೆನಿಸುವುದಿಲ್ಲ. ಒಮ್ಮೊಮ್ಮೆ ಬಿಸಿಯಲ್ಲಿ ಹೊಗೆಯಾಡುವಾಗಲೇ ತಿಳಿ ಸಾರನ್ನು ಲೋಟಕ್ಕಿಳಿಸಿ ಸವಿದರೆ ವಾವ್ ಎನಿಸುತ್ತದೆ. ಇಂತಹ ತಿಳಿ ಸಾರು ಅಥವಾ ಬೇಳೆ ರಸಂ ತಯಾರಿಸುವ ಸುಲಭ ವಿಧಾನ ಇಲ್ಲಿದೆ.

ತಿಳಿ ಸಾರು ತಯಾರಿಸಲು ಬೇಕಾಗುವ ಸಾಮಾಗ್ರಿಗಳು
ಬೇಳೆ-1/2 ಕಪ್
ಅರಿಶಿನ ಪುಡಿ-ದೊಡ್ಡ ಚಿಟಿಕೆ
ಹುಣಸೆಹಣ್ಣು-ನಿಮ್ಮ ರುಚಿಗೆ ತಕ್ಕಂತೆ
ಬೆಲ್ಲ-ನಿಮ್ಮ ರುಚಿಗೆ ತಕ್ಕಂತೆ
ಉಪ್ಪು- ರುಚಿಗೆ ತಕ್ಕಂತೆ'
ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು- ಒಂದು ಚಮಚ
ಕೆಲವು ಕರಿಬೇವಿನ ಎಲೆಗಳು
ಅಡುಗೆ ಎಣ್ಣೆ-1 ಚಮಚ
ನೀರು- 4-5 ಕಪ್
ತಿಳಿ ಸಾರು ಪುಡಿಗೆ ಬೇಕಾಗುವ ಸಾಮಾಗ್ರಿಗಳು
ಕೆಂಪು ಮೆಣಸಿನಕಾಯಿ-5-6
ಕೊತ್ತಂಬರಿ-2 ಚಮಚ
ಜೀರಿಗೆ-1/2 ಚಮಚ
ಸಾಸಿವೆ-1/4 ಚಮಚ
ಮೆಂತ್ಯ-10-12 ಬೀಜಗಳು
ಅಡುಗೆ ಎಣ್ಣೆ-1/2 ಚಮಚ

ತಿಳಿ ಸಾರು ಮಾಡುವ ವಿಧಾನ
ಮೊದಲು ಬೇಳೆಯನ್ನು ಚೆನ್ನಾಗಿ ತೊಳೆದು ಒಂದು ಕಪ್ ನೀರು, ಅರಿಶಿನ ಮತ್ತು ಕೆಲವು ಹನಿ ಎಣ್ಣೆಯನ್ನು ಸೇರಿಸಿ ಬೇಯಿಸಿಕೊಳ್ಳಿ. ಬಳಿಕ ಬೆಂದ ಬೇಳೆಯನ್ನು ಮ್ಯಾಶ್ ಮಾಡಿಕೊಂಡು ಮತ್ತೆ ನೀರು ಸೇರಿಸಿ ಕುದಿಸಿ. ಮತ್ತೊಂದು ಕಡೆಯಲ್ಲಿ ಪ್ಯಾನ್ ಅನ್ನು ಬಿಸಿ ಮಾಡಿ ಕೆಂಪು ಮೆಣಸಿನಕಾಯಿಗಳು, ಕೊತ್ತಂಬರಿ ಕಾಳುಗಳು, ಜೀರಿಗೆ, ಸಾಸಿವೆ, ಮೆಂತ್ಯ ಕಾಳುಗಳು ಮತ್ತು 1/2 ಟೀಸ್ಪೂನ್ ಎಣ್ಣೆಯನ್ನು ಸೇರಿಸಿ ಹುರಿದುಕೊಳ್ಳಿ. ತಣ್ಣಗಾಗುವವರೆಗೆ ಕಾದು ಈ ಮಿಶ್ರಣವನ್ನು ನುಣ್ಣಗೆ ಪುಡಿ ಮಾಡಿ.ಇತ್ತ ಬೇಳೆ ಮಿಶ್ರಣಕ್ಕೆ ಬೆಲ್ಲ, ಹುಣಸೆಹಣ್ಣು ಹಾಗೂ ಅಗತ್ಯವಿದ್ದರೆ ನೀರು ಸೇರಿಸಿ ಚೆನ್ನಾಗಿ ಕುದಿಸಿಕೊಳ್ಳಿ. ಬಳಿಕ ಸಿದ್ಧಪಡಿಸಿದ ಮಸಾಲೆ ಪುಡಿಯನ್ನು ಸೇರಿಸಿ ಕುದಿಸಿ ಒಗ್ಗರಣೆ ನೀಡಿದರೆ ರುಚಿರುಚಿಯಾದ ತಿಳಿಸಾರು ಸವಿಯಲು ಸಿದ್ಧ.












Click it and Unblock the Notifications