Ragi vegetable dosa recipe: ಆರೋಗ್ಯಕರ ಮತ್ತು ರುಚಿಕರ ರಾಗಿ ತರಕಾರಿ ದೋಸೆ ಮಾಡುವುದು ಹೇಗೆ?
ಆರೋಗ್ಯಕರ ಧಾನ್ಯಗಳ ಸಾಲಿನಲ್ಲಿ ರಾಗಿಗೆ ಮೊದಲ ಪ್ರಾಮುಕ್ಯತೆಯಿದೆ. ರಾಗಿ ಮುದ್ದೆ, ರಾಗಿ ದೋಸೆ, ರಾಗಿ ಚಪಾತಿ, ರಾಗಿ ಉಪ್ಪಿಟ್ಟು, ರಾಗಿ ಹಾಲುಬಾಲಿ ಸೇರಿದಂತೆ ಹಲವು ರೀತಿಯಲ್ಲಿ ಅದನ್ನು ಬಳಸಲಾಗುತ್ತದೆ. ರಾಗಿ ಜೊತೆಗೆ ತರಕಾರಿ ಸೇರಿದರೆ ರುಚಿ ಮತ್ತು ಆರೋಗ್ಯದ ಪ್ರಯೋಜನಗಳು ಮತ್ತಷ್ಟು ಹೆಚ್ಚಲಿವೆ.
ಹೀಗಾಗಿಯೇ ಇಂದು ಸುಲಭವಾಗಿ ಆರೋಗ್ಯಕರ ರಾಗಿ ತರಕಾರಿ ದೋಸೆ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಿಕೊಡಲಿದ್ದೇವೆ. ರಾಗಿ ಹಿಟ್ಟು, ಗೋಧಿ ಹಿಟ್ಟು, ರವೆ, ತರಕಾರಿಗಳು, ಜೀರಿಗೆ ಮತ್ತು ಉಪ್ಪು ಸೇರಿಸಿ ಕೆಲವೇ ಪದಾರ್ಥಗಳನ್ನು ಬಳಸಿ ತಯಾರಿಸಲಾದ ರಾಗಿ ದೋಸೆ ಚಟ್ ಪಟ್ ಎಂದು ತಯಾರಾಗಲಿದೆ. ದೋಸೆಗೆ ಹಿಟ್ಟು ನೆನೆಸದೆ, ರುಬ್ಬದೆ ರಾಗಿ ದೋಸೆ ಆರಾಮಾವಾಗಿ ಮಾಡುವ ರೆಸಿಪಿಯಾಗಿದೆ.

ರಾಗಿ ತರಕಾರಿ ದೋಸೆ ಮಾಡಲು ಬೇಕಾಗುವ ಪದಾರ್ಥಗಳು
1. 1 ಕಪ್ ರಾಗಿ ಹಿಟ್ಟು
2. 2 ಟೀಸ್ಪೂನ್ ಗೋಧಿ ಹಿಟ್ಟು
3. 2 ಚಮಚ ರವೆ
4. ಚಿಕ್ಕ ಗಾತ್ರದ ಶುಂಠಿ
5. ಸ್ವಲ್ಪ ಕರಿಬೇವಿನ ಎಲೆಗಳು
6. 2 ಚಮಚ ಮೆಂತ್ಯೆ ಸೊಪ್ಪು
7. 2 ಚಮಚ ಕೊತ್ತಂಬರಿ ಸೊಪ್ಪು
8. 1 ಮಧ್ಯಮ ಗಾತ್ರದ ಈರುಳ್ಳಿ
9. 1/2 ಕ್ಯಾಪ್ಸಿಕಂ
10. 1/2 ಕ್ಯಾರೆಟ್
11. 1/2 ಟೀಸ್ಪೂನ್ ಜೀರಿಗೆ ಬೀಜಗಳು
12. ನಿಮ್ಮ ರುಚಿಗೆ ತಕ್ಕಂತೆ ಉಪ್ಪು

ರಾಗಿ ತರಕಾರಿ ದೋಸೆ ಮಾಡುವ ವಿಧಾನ
ರಾಗಿ ಹಿಟ್ಟು, ಗೋಧಿ ಹಿಟ್ಟು ಮತ್ತು ರವೆ ತೆಗೆದುಕೊಳ್ಳಿ. ಕತ್ತರಿಸಿದ ಶುಂಠಿ, ಕರಿಬೇವಿನ ಸೊಪ್ಪು, ಮೆಂತ್ಯೆ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. ನಿಮ್ಮ ಆಯ್ಕೆಯ ಯಾವುದೇ ಸೊಪ್ಪನ್ನು ನೀವು ಬಳಸಬಹುದು. ಈ ಮಿಶ್ರಣಕ್ಕೆ ಕತ್ತರಿಸಿದ ಈರುಳ್ಳಿ, ಕ್ಯಾಪ್ಸಿಕಂ ಮತ್ತು ತುರಿದ ಕ್ಯಾರೆಟ್ ಸೇರಿಸಿ. ಇಲ್ಲಿಯೂ ನಿಮ್ಮ ಆಯ್ಕೆಯ ಯಾವುದೇ ತರಕಾರಿಗಳನ್ನು ನೀವು ಸೇರಿಸಬಹುದು.
ಇದಕ್ಕೆ 2 ಕಪ್ ನೀರು ಸೇರಿಸಿ ಗಂಟಿಲ್ಲದಂತೆ ಮಿಶ್ರಣ ತಯಾರಿಸಿ. ಸ್ವಲ್ಪ ಜೀರಿಗೆ ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. ಪ್ಯಾನ್ ಅನ್ನು ಬಿಸಿ ಮಾಡಿ, ತೆಳುವಾದ ದೋಸೆಗಳನ್ನು ಮಾಡಲು ಹಿಟ್ಟನ್ನು ಸುರಿಯಿರಿ. ಮುಚ್ಚಳವನ್ನು ಮುಚ್ಚಿ ಮತ್ತು ಕೆಲವು ಸೆಕೆಂಡುಗಳ ಕಾಲ ಬೇಯಿಸಿ. ಬಳಿಕ ದೋಸೆ ಮೇಲೆ ತುಪ್ಪ ಅಥವಾ ಎಣ್ಣೆ ಸವರಿ. ಮಧ್ಯಮ ಉರಿಯಲ್ಲಿ ಸ್ವಲ್ಪ ಸಮಯ ಬೇಯಿಸಿದರೆ ಬಿಸಿ ಬಿಸಿ ರಾಗಿ ತರಕಾರಿ ದೋಸೆ ಸವಿಯಲು ಸಿದ್ಧ. ಇದನ್ನು ತೆಂಗಿನಕಾಯಿ ಚಟ್ನಿ ಅಥವಾ ಹಾಗೆಯೇ ತಿನ್ನಬಹುದು.












Click it and Unblock the Notifications