Chapati: ಮೃದುವಾದ ಹೂವಿನಂತಹ ಚಪಾತಿ ತಯಾರಿಸುವುದು ಹೇಗೆ..? ಈ ಟಿಪ್ಸ್ ಮಿಸ್ ಮಾಡಬೇಡಿ
ಚಪಾತಿ ಬಹುತೇಕರ ಫೇವರೇಟ್ ಆಹಾರ. ಬೆಳಗ್ಗೆ ತಿಂಡಿ, ರಾತ್ರಿ ಊಟಕ್ಕೆ ಚಪಾತಿಯನ್ನು ತಪ್ಪದೇ ತಿನ್ನುವವರು ಸಹ ಇದ್ದಾರೆ. ಡಯೆಟ್ ಮಾಡುವವರಿಗೆ ಇದೊಂದು ಉತ್ತಮ ಆಯ್ಕೆ. ತಯಾರಿಸಲು ಸುಲಭ, ತಿನ್ನಲು ರುಚಿ ಹೀಗಾಗಿ ಎಲ್ಲರ ಮನೆಯ ವಾರದ ತಿಂಡಿಗಳ ಪಟ್ಟಿಯಲ್ಲಿ ಚಪಾತಿ ಕನಿಷ್ಟ ಎರಡು ಬಾರಿಯಾದರೂ ರಿಪೀಟ್ ಆಗಿರುತ್ತದೆ. ಇನ್ನು ಕೆಲವರಿಗೆ ಪ್ರತಿದಿನ ರಾತ್ರಿ ಊಟಕ್ಕೆ ಚಪಾತಿ ಕಡ್ಡಾಯ.
ತೂಕ ಇಳಿಸಲು ಬಯಸುವ ಜನರು ಚಪಾತಿ ಸೇವನೆಗೆ ಮೊದಲ ಆದ್ಯತೆ ನೀಡುತ್ತಾರೆ. ಚಪಾತಿ ಆರೋಗ್ಯಕ್ಕೂ ಕೂಡ ಒಳ್ಳೆಯದು. ಸಾಮಾನ್ಯವಾಗಿ ಗೋಧಿಯಿಂದ ಈ ಖಾದ್ಯ ತಯಾರಿಸುವುದರಿಂದ ಚಪಾತಿಯಲ್ಲಿ ಮೆಗ್ನೀಸಿಯಮ್, ಫಾಸ್ಫರಸ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಜೀವಸತ್ವಗಳು ಮತ್ತು ಖನಿಜಾಂಶಗಳು ಹೇರಳವಾಗಿರುತ್ತದೆ. ಚಪಾತಿ ತಿನ್ನುವುದರಿಂದ ರಕ್ತದ ಹಿಮೋಗ್ಲೋಬಿನ್ ಮಟ್ಟ ಹೆಚ್ಚುತ್ತದೆ. ದೇಹದಲ್ಲಿ ಕಬ್ಬಿಣಾಂಶ ಹೆಚ್ಚುತ್ತದೆ.

ನೀವು ಪ್ರತಿನಿತ್ಯ ತಿನ್ನುವ ಚಪಾತಿಯನ್ನು ಮೃದುವಾಗಿದ್ದರೆ ಎಷ್ಟು ಬೇಕಾದರೂ ತಿನ್ನಬಹುದು. ಮೃದು ಮೃದುವಾದ ಚಪಾತಿ ಆಗಬೇಕೆಂದರೆ ಹಿಟ್ಟನ್ನು ಮೃದುವಾಗಿ ಕಲಸಿಕೊಳ್ಳಬೇಕು. ಮೃದುವಾದ ಚಪಾತಿಗಾಗಿ ಹಿಟ್ಟನ್ನು ಹೇಗೆ ಕಲಿಸಿಕೊಳ್ಳಬೇಕು ಎನ್ನುವುದರ ಸರಳವಾದ ವಿಧಾನ ಇಲ್ಲಿದೆ. ಓದಿ.
ಬೇಕಾಗುವ ಸಾಮಾಗ್ರಿಗಳು
ಗೋಧಿ ಹಿಟ್ಟು-1 ಕಪ್
ನೀರು-1/2 ಕಪ್
ಅಡುಗೆ ಎಣ್ಣೆ-2 ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಮೃದುವಾದ ಚಪಾತಿ ಮಾಡುವ ವಿಧಾನ
ಮೊದಲು ತೆಗೆದುಕೊಂಡ ಗೋಧಿ ಹಿಟ್ಟನ್ನು ಸೋಸಿಕೊಳ್ಳಿ. ಅಗಲವಾದ ಪಾತ್ರೆಯಲ್ಲಿ ಗೋಧಿ ಹಿಟ್ಟು, ನೀರು, ಉಪ್ಪನ್ನು ಬೆರೆಸಿ ಚೆನ್ನಾಗಿ ಕಲಸಿಕೊಳ್ಳಿ. ಬಳಿಕ 2 ಚಮಚ ಅಡುಗೆ ಎಣ್ಣೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಬಳಿಕ ಹಿಟ್ಟನ್ನು ಚೆನ್ನಾಗಿ ಕಲಸಿಕೊಂಡು ವೃತ್ತಾಕಾರವಾಗಿ ಮಾಡಿಕೊಳ್ಳಿ. ಕೊನೆಯಲ್ಲಿ ಇನ್ನೂ ಒಂದು ಚಮಚ ಎಣ್ಣೆಯನ್ನು ಸೇರಿಸಿ, ಚೆನ್ನಾಗಿ ಕಲಿಸಿ. ಅದನ್ನು ಮುಚ್ಚಳ ಅಥವಾ ಒದ್ದೆಯಾದ ಬಟ್ಟೆಯಿಂದ ಮುಚ್ಚಿ ಹಿಟ್ಟನ್ನು 15 ನಿಮಿಷಗಳ ಕಾಲ ಇಡಿ.

15 ನಿಮಿಷಗಳ ನಂತರ ಹಿಟ್ಟನ್ನು ಒಂದು ನಿಂಬೆ ಹಣ್ಣಿನ ಗಾತ್ರದಲ್ಲಿ ಉಂಡೆ ಮಾಡಿಕೊಳ್ಳಿ. ಬಳಿಕ ಚಪಾತಿಯನ್ನು ಲಟ್ಟಿಸಿ, ಮಧ್ಯಮ ಬಿಸಿಯಲ್ಲಿ ಪ್ಯಾನ್ ಮೇಲೆ ಹಾಕಿ. ಎಣ್ಣೆ ಬೇಕಿದ್ದರೆ ಸ್ಪಲ್ಪ ಹಾಕಿಕೊಳ್ಳಬಹುದು. ಚಪಾತಿಯಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದಾಗ ಅದನ್ನು ತಿರುಗಿಸಿ ಮತ್ತು ಇನ್ನೊಂದು ಬದಿಯಲ್ಲಿ ಬೇಯಿಸಿ. ಹೀಗೆ ಮಾಡಿದರೆ ಮೃದುವಾದ, ರುಚಿಕರವಾದ ಚಪಾತಿ ಸವಿಯಲು ಸಿದ್ಧವಾಗುತ್ತದೆ.












Click it and Unblock the Notifications