ನಮ್ಮಲ್ಲಿ ಸದ್ಗುಣ ಬೆಳೆಯಬೇಕಾದರೆ ನಾವು ಎಂತಹ ಆಹಾರ ಸೇವಿಸಬೇಕು?
ನಾವು ಸೇವಿಸುವ ಆಹಾರವೂ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನಮಗೆಲ್ಲ ಗೊತ್ತಿರುವ ವಿಚಾರವೇ ಆದರೆ ಗುಣದ ಮೇಲೆಯೂ ಅದು ನಿರ್ಧರಿತವಾಗುತ್ತದೆ ಎಂದರೆ ಹೆಚ್ಚಿನವರು ನಂಬಲಾರರು ಆದರೆ ಇದನ್ನು ಆಧ್ಯಾತ್ಮಿಕ ಚಿಂತಕರು ಬಲವಾಗಿ ನಂಬುತ್ತಾರೆ. ಅಷ್ಟೇ ಅಲ್ಲದೆ ಅವರು ಅದಕ್ಕೆ ಹಲವು ರೀತಿಯ ವ್ಯಾಖ್ಯಾನಗಳನ್ನು ನೀಡುತ್ತಾರೆ. ಇವತ್ತಿನ ಸ್ಥಿತಿಯಲ್ಲಂತು ಆಹಾರಗಳೆಲ್ಲವೂ ಕಲಬೆರಕೆಗಳಾಗುತ್ತಿದ್ದು, ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಜತೆಗೆ ಅದು ಗುಣದ ಮೇಲೆಯೂ ಪರಿಣಾಮ ಬೀರಿ ಬಿಟ್ಟರೆ ಕಥೆ ಮುಗಿದಂತೆಯೇ.
ಇಷ್ಟಕ್ಕೂ ನಮ್ಮ ನಿಮ್ಮೆಲ್ಲರಲ್ಲಿರುವ ಒಂದು ಗುಣವು ಸತ್ವ, ರಜ, ತಮೋ ಎಂಬ ಗುಣಗಳಿಂದ ಆಗಿದೆ. ಈ ಮೂರು ಗುಣಗಳು ನಾವು ಸೇವಿಸುವ ಆಹಾರದಿಂದಲೇ ಆಗಿದೆ ಎಂದು ಹೇಳಲಾಗುತ್ತದೆ. ಹೀಗಾಗಿ ಯಾರು ಯಾವ ರೀತಿಯ ಆಹಾರ ಸೇವಿಸುತ್ತಾರೆಯೋ ಅದರ ಮೇಲೆ ಅವರ ಗುಣಗಳು ನಿರ್ಧರಿಸಲ್ಪಟ್ಟಿವೆ. ಇದನ್ನು ನಮ್ಮ ಅಧ್ಯಾತ್ಮಿಕ ಚಿಂತಕರು ವ್ಯಾಖ್ಯಾನಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಈ ಮೂರು ಗುಣಗಳು ಕೂಡ ಅವರವರು ಸೇವಿಸುವ ಆಹಾರಕ್ಕನುಗುಣವಾಗಿ ವೃದ್ಧಿಯಾಗುತ್ತಾ ಹೋಗುತ್ತವೆ.

ನಾವೆಲ್ಲರೂ ಸದ್ಗುಣಗಳನ್ನು ಬಯಸುತ್ತೇವೆ. ಹೀಗಾಗಿ ಸದ್ಗುಣಗಳು ಬರಬೇಕಾದರೆ ಏನೇನು ಮಾಡಬೇಕು? ಯಾವ ಆಹಾರವನ್ನು ಸೇವಿಸಬೇಕು? ಇದಕ್ಕೆಲ್ಲ ಉತ್ತರಗಳನ್ನು ನಮ್ಮ ಆಧ್ಯಾತ್ಮಿಕ ಚಿಂತಕರು ಹೊರ ಹಾಕಿದ್ದಾರೆ. ಸತ್ವ, ರಜ ಮತ್ತು ತಮ ಈ ಮೂರು ಗುಣಗಳು ನಮ್ಮ ದೇಹ ಮಾತ್ರವಲ್ಲ ಮನಸ್ಸಿನ ಮೇಲೆ ಬೇರೆಯದ್ದೇ ಆದ ಪರಿಣಾಮಗಳನ್ನು ನೀಡುತ್ತದೆ. ಹೀಗಾಗಿ ಸದ್ಗುಣ ಬೆಳೆಯಬೇಕಾದರೆ ನಾವು ಸಾತ್ವಿಕ ಆಹಾರವನ್ನು ಸೇವಿಸುವುದು ಅಗತ್ಯವಾಗುತ್ತದೆ. ಸತ್ವ ಗುಣವು ನೀರಿನ ಹಾಗೆ ನಿರ್ಮಲವಾದದರಿಂದ ಅದನ್ನು ನಾವು ಸುಲಭವಾಗಿ ನಮ್ಮ ಅಂಕೆಯಲ್ಲಿಟ್ಟುಕೊಳ್ಳಲು ಸಾಧ್ಯವಿದೆ.
ಮನಸ್ಸಿನ ಮೇಲೆ ಪರಿಣಾಮ ಬೀರುವ ಆಹಾರ
ರಜೋ ಹಾಗೂ ತಮೋ ಗುಣಗಳನ್ನು ಹೊಂದಿರುವ ಆಹಾರ ಸೇವಿಸುವುದರಿಂದ ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲಾಗದೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹೀಗಾಗಿ ನಮ್ಮಲ್ಲಿರುವ ತಮೋ ಹಾಗೂ ರಜ ಗುಣವನ್ನು ತ್ಯಜಿಸಬೇಕಾದರೆ ಮೊದಲಿಗೆ ಸತ್ವ ಗುಣಗಳನ್ನು ಬೆಳೆಸುವ ವಿಧಾನ ಹಾಗೂ ನಡವಳಿಕೆಗಳನ್ನು ಬೆಳೆಯಿಸಿಕೊಳ್ಳಬೇಕು. ಅದು ಹೇಗೆಂದರೆ ನಾವು ಸದಾ ಸಾತ್ವಿಕ ವಸ್ತುಗಳ ಸಹವಾಸದಲ್ಲಿರಬೇಕು. ಆಗ ಆಧ್ಯಾತ್ಮಿಕತೆ ನಮ್ಮಲ್ಲಿ ಎಚ್ಚರಗೊಳ್ಳುತ್ತದೆ. ಇದರಿಂದ ಜ್ಞಾನೋದಯವಾಗುತ್ತದೆ. ಅಷ್ಟೇ ಅಲ್ಲ ಜ್ಞಾನದ ಮೂಲಕ ತನ್ನ ಸ್ವಂತ ಅಸ್ಥಿತ್ವದ ಅರಿವು ಮೂಡುತ್ತದೆ.
ಸತ್ವದ ರಕ್ಷಣೆಯಿಂದಾಗಿ ಮನುಷ್ಯ ಅಪಾಯದಿಂದ ಅಂದರೆ ಕ್ರೋಧ, ಮೋಹ ಇತ್ಯಾದಿ ತಮೋ ಗುಣ ಪ್ರಧಾನವಾದ ಕೇಡುಗಳಿಂದ ಪಾರಾಗುತ್ತಾನೆ. ತಮಸ್ಸು ಮತ್ತು ರಜಸ್ಸು ಗುಣಗಳುಳ್ಳ ಆಹಾರವನ್ನು ಆದಷ್ಟು ಮಟ್ಟಿಗೆ ತ್ಯಜಿಸುತ್ತಾ ಸತ್ವಗುಣ ವೃದ್ದಿ ಮಾಡುವಂತಹ ಆಹಾರವನ್ನು ಸೇವಿಸಬೇಕು. ರಸಯುಕ್ತ, ಸ್ನಿಗ್ದ, ಸ್ಥಿರವಾದ ಹಾಗೂ ಮನಸ್ಸಿಗೆ ಪ್ರಿಯವಾದ ಆಹಾರಗಳು ಸತ್ವಗುಣಗಳನ್ನು, ಅತ್ಯಂತ ಕಹಿ, ಹುಳಿ, ಉಪ್ಪು, ಉಷ್ಣ, ತೀಕ್ಷ್ಣವೂ, ಒಣಕಲು ಆಹಾರವು ರಜಗುಣವನ್ನು ಮತ್ತು ಆರಿದ, ರಸಹೀನ, ದುರ್ಗಂಧಮಯವೂ, ತಂಗಳು, ಕೊಳಕಾದ ಆಹಾರವು ತಮೋ ಗುಣವನ್ನುಂಟು ಮಾಡುತ್ತದೆ. ಅಷ್ಟೇ ಅಲ್ಲದೆ, ಈ ಮೂರು ಗುಣಗಳು ಕೂಡ ಮನಸ್ಸಿನ ಮೇಲೆ ಭಾರಿ ಪರಿಣಾಮವನ್ನುಂಟು ಮಾಡುತ್ತವೆ.

ಆಹಾರದ ಬಗ್ಗೆ ಉಪನಿಷತ್ತು ಹೇಳಿದ್ದೇನು?
ಉಪನಿಷತ್ತುಗಳಲ್ಲಿ ವಿವರಿಸಿರುವ ಪ್ರಕಾರ ನಾವು ತಿನ್ನುವ ಆಹಾರ ಅರ್ಥಾತ್ ಅನ್ನವು ಮೂರು ವಿಧವಾಗಿ ಪರಿವರ್ತಿತವಾಗುತ್ತದೆಯಂತೆ. ಅದು ಹೇಗೆಂದರೆ ಅನ್ನದಲ್ಲಿ ಯಾವುದು ಸ್ಥೂಲತಮವಾದದ್ದೋ ಅದು ಮಲವಾಗುತ್ತದೆ. ಯಾವುದು ಮಧ್ಯಮ ಧಾತುವೋ ಅದು ಮಾಂಸವಾಗುತ್ತದೆ. ಯಾವುದು ಸೂಕ್ಷ್ಮತಮ ಧಾತುವೋ ಅದು ಮನಸ್ಸಾಗುತ್ತದೆ. ಇದು ಹೇಗೆಂದರೆ ಮೊಸರನ್ನು ಕಡೆದಾಗ ಅದರ ಸೂಕ್ಷ್ಮವಾದ ಭಾಗವು ಮೇಲೆ ತೇಲಿ ಬಂದು ಬೆಣ್ಣೆಯಾಗುತ್ತದೆ.
ನಾವು ಅನ್ನವನ್ನು ತಿಂದಾಗ ಅದರ ಸೂಕ್ಷ್ಮತಮ ಧಾತುವು ಮೇಲೆದ್ದು ಮನಸ್ಸಾಗುತ್ತದೆಯಂತೆ ಹೀಗಾಗಿಯೇ ನಾವು ಸೇವಿಸುವ ಆಹಾರವು ಶುದ್ಧವಾಗಿರಬೇಕು, ಆಹಾರ ಶುದ್ಧವಾಗಿದ್ದರೆ ಮನಸ್ಸು ಶುದ್ಧವಾಗಿರುತ್ತದೆ. ಶುದ್ಧ ಮನಸ್ಸು ಜಿಗುಪ್ಸೆ, ಭಯ, ಭ್ರಮೆಯನ್ನು ದೂರ ಮಾಡುತ್ತದೆ. ಇದರಿಂದ ಮನಸ್ಸಿನ ಮಾಲಿನ್ಯಗಳು ದೂರವಾಗಿ ನಮ್ಮಲ್ಲಿ ಸದ್ಗುಣಗಳು ಬೆಳೆಯಲು ಸಹಕಾರಿಯಾಗುತ್ತವೆ. ಮಾಂಸ ಆಹಾರ ಸೇವಿಸಿದಾಗ ಹಾಗೂ ಮೊಸರನ್ನ ಸೇವಿಸಿದಾಗ ನಮ್ಮ ಮೇಲೆ ಬೀರುವ ಪ್ರತ್ಯೇಕ ಪರಿಣಾಮಗಳು ನಮ್ಮ ಅರಿವಿಗೆ ಬಂದಿರುತ್ತದೆ.
ಸದ್ಗುಣ ಬೆಳೆಯಲು ಸತ್ವ ಆಹಾರ ಸಹಕಾರಿ
ಒಂದು ಲೋಟ ಕಬ್ಬಿನ ಹಾಲು ಸೇವಿಸಿದ ವ್ಯಕ್ತಿಯ ವರ್ತನೆಗೂ, ಒಂದು ಲೋಟ ಮದ್ಯ ಸೇವಿಸಿದ ವ್ಯಕ್ತಿಯ ವರ್ತನೆಗೂ ಅಜಗಜಾಂತರ ವ್ಯತ್ಯಾಸವಿದೆ. ಕಬ್ಬಿನ ಹಾಲು ಸೇವಿಸಿದ ವ್ಯಕ್ತಿ ದೇಹದ ಜಡತ್ವ ಕಳೆದುಕೊಂಡು ಉಲ್ಲಾಸಿತನಾದರೆ, ಮದ್ಯ ಸೇವಿಸಿದ ವ್ಯಕ್ತಿ ದೇಹದ ಹಾಗೂ ಮಾನಸಿಕ ಸಮತೋಲನ ಕಳೆದುಕೊಳ್ಳುತ್ತಾನೆ. ಅಷ್ಟೇ ಅಲ್ಲ ಮನಸ್ಸು ಮಲೀನಗೊಂಡು ದುಷ್ಪ್ರವೃತ್ತಿಗಳು ಆವರಿಸಿಕೊಳ್ಳುತ್ತವೆ. ಈ ಸಂದರ್ಭ ಆ ವ್ಯಕ್ತಿ ಮನಸ್ಸಿನ ಹಿಡಿತ ಕಳೆದುಕೊಂಡು ತಾನೇನು ಮಾಡುತ್ತಿದ್ದೇನೆ ಎಂಬುವುದನ್ನೇ ಮರೆತು ಹಲವು ಆಚಾತುರ್ಯಗಳಿಗೂ ಕಾರಣನಾಗುತ್ತಾನೆ.
ಮನಸ್ಸಿನ ಮೇಲೆ ಪರಿಣಾಮ ಉಂಟು ಮಾಡುವ ರಜೋ ಹಾಗೂ ತಮೋ ಗುಣಗಳನ್ನು ಹೊಂದಿರುವ ಆಹಾರವನ್ನು ಆದಷ್ಟು ಮಟ್ಟಿಗೆ ಕಡಿಮೆ ಮಾಡಿ ಸತ್ವ ಗುಣಗಳುಳ್ಳ ಆಹಾರವನ್ನು ಸೇವಿಸಬೇಕು ಆಗ ನಮ್ಮಲ್ಲಿ ಸದ್ಗುಣ ಬೆಳೆಯಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ಮನಸ್ಸು ಪರಿಶುದ್ಧವಾಗುವುದರೊಂದಿಗೆ ಒಳಿತಿನ ಬಗ್ಗೆ ಆಲೋಚಿಸುವ ಗುಣಗಳು ಬೆಳೆಯುತ್ತವೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಸತ್ವ ಗುಣಗಳುಳ್ಳ ಆಹಾರಕ್ಕೆ ಪ್ರಾಧಾನ್ಯತೆ ನೀಡಬೇಕಾಗುತ್ತದೆ. ಆಗ ನಮ್ಮನ್ನು ಆವರಿಸುವ ರಜೋ ಮತ್ತು ತಮೋ ಗುಣಗಳಿಂದ ಮುಕ್ತರಾಗಲು ಸಾಧ್ಯವಾಗುತ್ತದೆ.












Click it and Unblock the Notifications