Garlic Rice Recipe: ಚಿತ್ರನ್ನ ತಿಂದು ಬೇಜಾರಾಗಿದ್ರೆ ಬೆಳ್ಳುಳ್ಳಿ ರೈಸ್ ಮಾಡಿ....
ವಾರವಿಡೀ ವೆರಾಯಿಟಿ ಅಡುಗೆ ಮಾಡುವುದು ಒಂದು ಸವಾಲಿನ ಕೆಲಸ. ಮನೆಯ ಪ್ರತಿಯೊಬ್ಬ ಸದಸ್ಯರಿಗೂ ಇಷ್ಟವಾಗುವಂತೆ ರುಚಿಯಾಗಿ ಕಲರ್‌ಫುಲ್ ಆಗಿ ಅಡುಗೆ ಮಾಡಿ ಬಡಿಸುವುದು ಅಷ್ಟು ಸುಲಭವಲ್ಲ. ಹೀಗೆ ನಿತ್ಯ ಒಂದೊಂದು ಬಗೆಯ ಅಡುಗೆ ಏನ್ ಮಾಡೋದು ಅಂತ ಯೋಚನೆ ಬರದೇ ಇರಲು ನೀವು ನಿಮ್ಮ ತಲೆಗೆ ಸ್ವಲ್ಪ ಕೆಲಸ ಕೊಡಬೇಕು. ಅದೇನೆಂದರೆ ಮನೆಯಲ್ಲಿ ನಿತ್ಯ ಮಾಡುವ ಅಡುಗೆಯಲ್ಲೇ ವಿಭಿನ್ನ ರುಚಿ ಬರಿಸುವುದು ಹೇಗೆ ಅನ್ನೋದನ್ನ ತಿಳಿಯಬೇಕು.
ಹೌದು... ನಿತ್ಯ ಮಾಡುವ ಅಡುಗೆಯಲ್ಲಿ ಕೊಂಚ ವಿಭಿನ್ನ ರೀತಿಯಲ್ಲಿ ಅಡುಗೆ ಮಾಡುವುದು ಹೇಗೆ ಅನ್ನೋದನ್ನು ನಿಮಗೆ ತಿಳಿದರೆ ನಿಮ್ಮ ಶ್ರಮ ಕಡಿಮೆಯಾಗಿ ಮನೆಯ ಸದಸ್ಯರಿಗೆ ಬಗೆ ಬಗೆ ರುಚಿಯ ಅಡುಗೆ ಮಾಡಿ ಬಡಿಸಬಹುದು. ಹಾಗಾದರೆ ನಿತ್ಯ ನಾವು ತಯಾರಿಸುವ ಅಡುಗೆಯಲ್ಲೇ ಬಗೆ ಬಗೆಯ ಅಡುಗೆ ಮಾಡುವುದು ಹೇಗೆ ಅನ್ನೋದನ್ನು ತಿಳಿಯೋಣ.

ಸಾಮಾನ್ಯವಾಗಿ ನಾವು ಚಿತ್ರವನ್ನು ಮಾಡುತ್ತೇವೆ. ಇದನ್ನು ಬೆಳ್ಳುಳ್ಳಿ ಚಿತ್ರನ್ನ, ಕರಿಬೇವು ಚಿತ್ರನ್ನ ಹಾಗೂ ಮೆಂತೆ ಸೊಪ್ಪು ಚಿತ್ರನ್ನವಾಗಿ ತಯಾರು ಮಾಡಬಹುದು. ಇದನ್ನು ಮಾಡುವ ವಿಧಾನ ಕೂಡ ತುಂಬಾ ಸುಲಭವಾಗಿದೆ. ಹಾಗಾದರೆ ಇದನ್ನು ತಯಾರಿಸಲು ಬೇಕಾಗುವ ಪದಾರ್ಥಗಳ ಬಗ್ಗೆ ತಿಳಿಯೋಣ.
ಬೆಳ್ಳುಳ್ಳಿ ಚಿತ್ರನ್ನ ಮಾಡಲು ಬೇಕಾಗುವ ಪದಾರ್ಥಗಳು:-
*ಅನ್ನ ಒಂದು ಕಪ್
*ಬೆಳ್ಳುಳ್ಳಿ ಹತ್ತು ಎಸಳು (ಕರಿಬೇವು ಚಿತ್ರನ್ನ ಮಾಡುವಾಗ ಬೆಳ್ಳುಳ್ಳಿ ಬದಲು ಕರಿಬೇವು ಬಳಸಿ/ ಇದೇ ರೀತಿ ಮೆಂತೆ ಸೊಪ್ಪು ಬಳಸಿ ಮೆಂತೆ ಸೊಪ್ಪು ಚಿತ್ರನ್ನ ಮಾಡಬಹುದು. ಮಾಡುವ ವಿಧಾನ ಒಂದೇ ರೀಯಿಯಾಗಿರುತ್ತದೆ)
*ಹಸಿ ಮೆಣಸಿನಕಾಯಿ ನಾಲ್ಕು (ಸಣ್ಣಕೆ ಕಟ್ ಮಾಡಿದ)
*ಜೀರಿಗೆ-ಸಾಸಿವೆ ಸ್ವಲ್ಪ
*ಮೆಣಸುಕಾಳು ಮೂರು
*ಚೆಕ್ಕೆ ಸ್ವಲ್ಪ
*ಶೆಂಗಾ ಹತ್ತು ಕಾಳು
*ನಿಂಬೆ ಹಣ್ಣು ಒಂದು
*ಈರುಳ್ಳಿ ಒಂದು (ಸಣ್ಣಕೆ ಕಟ್ ಮಾಡಿದ)
*ಎಣ್ಣೆ ನಾಲ್ಕು ಟೀಸ್ಪೂನ್
*ಕೊಬ್ಬರಿ ಸೊಪ್ಪು ಸ್ವಲ್ಲ
* ಉಪ್ಪು (ರುಚಿಗೆ ತಕ್ಕಷ್ಟು)
* ಅರಿಶಿಣ ಚಿಟಿಕೆ
ತಯಾರಿಸುವ ವಿಧಾನ:-
* ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಬಿಸಿ ಆದ ಮೇಲೆ ಬೆಳ್ಳುಳ್ಳಿ ಹಾಕಿ ಕೆಂಪಗಾಗುವವರೆಗೂ ಹುರಿಯಿರಿ. ಬಳಿಕ ಅದನ್ನು ತೆಗೆದುಬಿಡಿ. (ನಿಮಗೆ ಬೇಕಾದಲ್ಲಿ ಹಾಗೇ ಬಿಡಬಹುದು)
* ಈ ಎಣ್ಣೆಗೆ ಜೀರಿಗೆ-ಸಾಸಿವೆ ಹಾಕಿ, ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ಫ್ರೈ ಮಾಡಿ.
* ಬಳಿಕ ಈರುಳ್ಳಿ ಹಾಕಿ ಫ್ರೈ ಮಾಡಿ. ಮಧ್ಯಮ ಉರಿಯಲ್ಲಿ ಈರುಳ್ಳಿ ಫ್ರೈ ಮಾಡಿ. ಬಳಿಕ ಇದಕ್ಕೆ ಕಾಳುಮೆಣಸು, ಚಕ್ಕೆ, ಹುರಿದ ಶೆಂಗಾ ಹಾಕಿ ಚೆನ್ನಾಗಿ ಕಲಸಿ.
* ಬಳಿಕ ಇದಕ್ಕೆ ಅರಿಶಿಣ, ಉಪ್ಪು ಹಾಕಿ ಕಲಸಿ ಅನ್ನವನ್ನು ಹಾಕಿ. ನಂತರ ನಿಂಬೆ ಹಣ್ಣಿನ ರಸವನ್ನು ಬೆರಸಿ ಕಲಸಿ.
* ನಂತರ ಸಣ್ಣ ಉರಿಯಲ್ಲಿ ಪಾತ್ರೆಯನ್ನು ಮುಚ್ಚಿ ಮೂರು ನಿಮಿಷ ಬಿಡಿ.
* ಬಳಿಕ ಕೊತ್ತೊಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿದರೆ ಬೆಳ್ಳುಳ್ಳಿ ರೈಸ್ ಸವಿಯಲು ಸಿದ್ದ.












Click it and Unblock the Notifications