Ellu Mithai Recipe: ಮಕ್ಕಳು ಇಷ್ಟಪಟ್ಟು ತಿನ್ನುವ ಸಖತ್ ಟೇಸ್ಟಿ ಎಳ್ಳು ಮಿಠಾಯಿ...
ಇವತ್ತು ಸಂಕ್ರಾಂತಿ ಹಬ್ಬ. ಮನೆಯಲ್ಲಿ ಎಲ್ಲಾ ಮಹಿಳೆಯರು ಹಬ್ಬ ಆಚರಣೆ ಮಾಡೋದ್ರಲ್ಲಿ ಫುಲ್ ಬ್ಯೂಸಿ. ಬೆಳಿಗ್ಗೆಯಿಂದ ಸಿಹಿ ಪೊಂಗಲ್, ಖಾರದ ಪೊಂಗಲ್, ಎಳ್ಳು ಉಂಡೆ, ಹೋಳಿಗೆ, ಎಳ್ಳು ಬೆಲ್ಲ ಸಿದ್ಧಪಡಿಸಿ ಪೂಜೆಗೆ ಇಟ್ಟು, ನೆರೆಹೊರೆಯವರಿಗೆ ಹಂಚಿ ಊಟ ಮಾಡಲು ಈಗ ಕುಳಿತಿರಬೇಕು ಅಲ್ವಾ? ಈ ನಡುವೆ ಮನೆಯಲ್ಲಿ ಮಕ್ಕಳು ತಮಗೆ ಬೇರೆ ತಿಂಡಿ ಬೇಕು ಅಂತಾ ಹಠ ಮಾಡ್ತಾಯಿದ್ದಾರಾ? ಹಾಗಾದ್ರೆ ಫಟಾ ಫಟ್ ಅಂತ ಎಳ್ಳು ಮಿಠಾಯಿ ಮಾಡಿ. ಮಕ್ಕಳು ಇಷ್ಟಪಟ್ಟು ತಿಂತಾರೆ ಸಖತ್ ಟೇಸ್ಟಿ ಕೂಡ ಇರುತ್ತೆ...
ಎಳ್ಳು ಉಂಡೆ, ಎಳ್ಳು ಹೋಳಿಗೆ ಮಾಡುವ ಪ್ರತೀ ಮಹಿಳೆಯರಿಗೆ ಎಳ್ಳು ಮಿಠಾಯಿ ತಯಾರಿಸುವುದು ಕಷ್ಟವೇನು ಅಲ್ಲ. ಇದನ್ನು ತಯಾರಿಸುವುದು ತುಂಬಾ ಸುಲಭ ಹಾಗೆನೇ ತಿನ್ನಲು ಕೂಡ ಸಖತ್ ಟೇಸ್ಟಿ ಇರುತ್ತದೆ. ಹಾಗಾದರೆ ತಡ ಮಾಡುವುದು ಬೇಡ ಎಳ್ಳು ಮಿಠಾಯಿ ತಯಾರಿಸುವುದು ಹೇಗೆ ಅನ್ನೋದನ್ನು ತಿಳಿಯೋಣ.

ಬೇಕಾಗುವ ಪದಾರ್ಥಗಳು:
* ಬಿಳಿ ಎಳ್ಳು ಒಂದು ಕಪ್
* ಬೆಲ್ಲ ಅರ್ಧ ಕಪ್
*ಎಣ್ಣೆ ಸ್ವಲ್ಪ
* ತುಪ್ಪ ಎರಡು ಟೇಬಲ್ ಸ್ಪೂನ್
* ಶೆಂಗಾ 6 ಟೇಬಲ್ ಸ್ಪೂನ್
ಎಳ್ಳು ಮಿಠಾಯಿ ತಯಾರಿಸುವ ವಿಧಾನ:
* ಒಂದು ಬಾಣಲೆಗೆ ಬೆಲ್ಲ ಹಾಕಿ ಒಂದು ಟೇಬಲ್ ಸ್ಪೂನ್ ನೀರು ಹಾಕಿ ಚೆನ್ನಾಗಿ ಕದಡಿ ಪಾಕ ಮಾಡಿಕೊಳ್ಳಿ. ಈ ಪಾಕ್ ನೀರಾಗಿರಬಾರದು ಜೊತೆಗೆ ತಳ ಹಿಡಿಯದಂತೆ ನೋಡಿಕೊಳ್ಳಿ. ಸಣ್ಣ ಉರಿಯಲ್ಲಿ ತಳ ಹಿಡಿಯದಂತೆ ಕದಡುತ್ತಿರಿ.
* ಒಂದು ಪಾತ್ರೆ ಒಲೆಯನ್ನು ಮೇಲಿಟ್ಟು ಬಿಳಿ ಎಳ್ಳನ್ನು ಕೆಂಪಾಗುವವರೆಗೆ ಹುರಿದುಕೊಳ್ಳಿ. ಇದನ್ನು ಪಕ್ಕಕ್ಕೆ ತೆಗೆದಿಟ್ಟು ತಣ್ಣಗಾಗಲು ಬಿಡಿ
* ಶೆಂಗಾ ಕೂಡ ಹುರಿದುಕೊಳ್ಳಿ. ನಂತರ ಇದನ್ನು ತಣ್ಣಗಾಗಲು ಬಿಡಿ
* ಒಂದು ಮಿಕ್ಸಿ ಜಾರ್‌ನಲ್ಲಿ ಶೆಂಗಾವನ್ನು ಸಣ್ಣಕೆ ರುಬ್ಬಿಕೊಳ್ಳಿ. ಒಂದು ಪಾತ್ರೆಗೆ ಹಾಕಿ.
* ಪಾಕ ಸಿದ್ಧವಾದ ಬಳಿಕ ರುಬ್ಬಿದ ಶೆಂಗಾ ಪುಡಿಯನ್ನು ಹಾಕಿ ಚಿನ್ನಾಗಿ ಕಲಸಿ, ಇದಕ್ಕೆ ಸ್ವಲ್ಪ ತುಪ್ಪ ಹಾಕಿ.
* ನಂತರ ಎಳ್ಳನ್ನು ಸ್ವಲ್ಪ ಸ್ವಲ್ಪ ಹಾಕಿ ಹೆಚ್ಚಾಗದಂತೆ ನೋಡಿಕೊಂಡು ಚೆನ್ನಾಗಿ ಕಲಸಿ
* ಈ ಮಿಶ್ರಣವನ್ನು ಒಂದು ಪಾತ್ರೆಗೆ ಎಣ್ಣೆ ಹಚ್ಚಿ, ಆ ಪಾತ್ರೆಗೆ ಹಾಕಿ ಬಿಸಿಯಿರುವಾಗಲೆ ಕೈಗೆ ಎಣ್ಣೆ ಹಚ್ಚಿಕೊಂಡು ಚೆನ್ನಾಗಿ ಹಿಗ್ಗಿಸಲು ಪ್ರಯತ್ನಿಸಿ.
* ಹೀಗೆ ಹಿಗ್ಗಿಸಿ ಮಿಶ್ರಣ ಮಾಡುವುದರಿಂದ ಮಿಠಾಯಿಯ ಬಣ್ಣ ಬದಲಾಗುತ್ತದೆ. ಜೊತೆಗೆ ಇದರ ರುಚಿ ಕೂಡ ಹೆಚ್ಚಾಗುತ್ತದೆ
* ಬಳಿಕ ಇದನ್ನು ನೀವು ಪೆನ್ಸಿಲ್ ಅಥವಾ ಮುಟ್ಟೆ ಅಥವಾ ಗುಂಡಾಕಾರದಲ್ಲಿ ಮಾಡಿಕೊಳ್ಳಬಹುದು. ತ್ರಿಕೋನ ಆಕಾರದಲ್ಲೂ ಕಟ್ ಮಾಡಬಹುದು. (ಆಟಿಕೆ ಆಕಾರದಲ್ಲೂ ಮಾಡಿಕೊಳ್ಳಬಹುದು)
* ಹೀಗೆ ಮಾಡಿದರೆ ಮಕ್ಕಳಿಗೆ ಇಷ್ಟವಾಗುವ ರುಚಿ ರುಚಿಯಾದ ಎಳ್ಳು ಮಿಠಾಯಿ ರೆಡಿ.












Click it and Unblock the Notifications