ತಿನ್ನೋದು ಕಡಿಮೆ ಮಾಡಿ ಇದನ್ನು ಕುಡಿಯೋದು ಜಾಸ್ತಿ ಮಾಡಿ.... ಯಾಕೆಂದರೆ
ಮನುಷ್ಯನಿಗೆ ಬದುಕಲು ಆಹಾರ ತುಂಬಾ ಮುಖ್ಯ. ಆದರೆ ಇತ್ತೀಚೆಗೆ ಆಹಾರ ಪದ್ಧತಿ ತುಂಬಾ ಬದಲಾಗಿ ಹೋಗಿದೆ. ಜಂಕ್ ಫುಡ್‌ಗಳನ್ನು ಜನ ಹೆಚ್ಚು ತಿನ್ನಲು ಇಷ್ಟಪಡುತ್ತಿದ್ದಾರೆ. ಆದರೆ ಬೇಸಿಗೆ ಕಾಲದಲ್ಲಿ ಇಂತಹ ಆಹಾರಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಇಂತಹ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಬೇಕು ಅನ್ನೋದಕ್ಕಿಂತ ಇದರ ಸೇವನೆ ಬಳಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಅನ್ನೋದನ್ನು ತಿಳಿದಿರುವುದು ಮುಖ್ಯ.
ಹೌದು.. ಬೇಸಿಗೆ ಬಿಸಿಲು ಮನಷ್ಯನನ್ನ ಹಿಂಡಿ ಹಿಪ್ಪೆಯಾಗಿಸುತ್ತಿದೆ. ಎಷ್ಟೇ ಜಾಗರೂಕರಾಗಿದ್ದರೂ ಹೊರ ಬಿಸಿಲಿಗೆ ಮೈ ಒಡ್ಡಿಕೊಳ್ಳುವುದು ಕಷ್ಟವಾಗುತ್ತಿದೆ. ಹೀಗಿರುವಾಗ ಯಾವುದೇ ಗಟ್ಟಿಯಾದ ಅಥವಾ ಸಾಕಷ್ಟು ಮಸಾಲೆಯುಕ್ತ ಆಹಾರದ ಸೇವನೆ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರಬಹುದು. ಇಂತಹ ಆಹಾರ ಸುಲಭವಾಗಿ ಜೀರ್ಣವಾಗುವುದಿಲ್ಲ. ಜೊತೆಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ.

ಸಾಮಾನ್ಯವಾಗಿ ನಮ್ಮಲ್ಲಿ ಜಂಕ್ ಫುಡ್ ಪ್ರಿಯರು ಸಾಕಷ್ಟಿದ್ದಾರೆ. ಒಂದು ದಿನ ಈ ಆಹಾರ ಸೇವಿಸದೇ ಇದ್ದಲ್ಲಿ ಕೆಲವರಿಗೆ ನಿದ್ದೆ ಕೂಡ ಬರುವುದಿಲ್ಲ. ಇದನ್ನು ಬಿಟ್ಟು ಇರದೇ ಇರುವಂತವರಿಗೆ ನಾವು ಕೆಲ ಟಿಪ್ಸ್‌ಗಳನ್ನು ಹೇಳುತ್ತೇವೆ ಅದನ್ನು ಪಾಲಿಸಿದರೆ ನಿಮ್ಮ ಆರೋಗ್ಯವನ್ನು ನೀವು ಕಾಪಾಡಿಕೊಳ್ಳಬಹುದು.
*ನೀರಿನ ಮಹತ್ವ
ಭೂಮಿಯ ಮೇಲೆ ಇರುವ ಪ್ರತಿಯೊಂದು ಜೀವಿಗೂ ನೀರು ಅತ್ಯಾವಶ್ಯಕ. ಹೀಗಾಗಿನೇ ಭೂಮಿಯ ಮೇಲೆ ನೀರು ಹೆಚ್ಚಾಗಿದೆ. ಭೂಮಿ ಮೇಲಿನ ನೀರಿನ ತೂಕ ಭೂಮಿಗಿಂತಲೂ 10 ಪಟ್ಟು ಹೆಚ್ಚು ಎಂದು ಪುರಾಣಗಳು ಹೇಳುತ್ತವೆ. ನೀರು ಸೃಷ್ಟಿಯ ಮೂಲವಾಗಿದ್ದು ಅದು ನಮ್ಮ ಸಂಪತ್ತಾಗಿದೆ. ಇದು ಇಲ್ಲದೆ ಸೃಷ್ಟಿಯಲ್ಲಿ ಏನೂ ಇರುವುದಿಲ್ಲ.

*ಬೇಸಿಗೆಯಲ್ಲಿ ನೀರು
ಬೇಸಿಗೆಯಲ್ಲಿ ಹೆಚ್ಚು ಬೆವರಿನಿಂದಾಗಿ ತಲೆ ಸುತ್ತುವುದು, ಆಯಾಸವಾಗುವುದು, ಆಸಕ್ತಿ ಕಳೆದುಕೊಳ್ಳುವುದು ಇಂತೆಲ್ಲಾ ಸಮಸ್ಯೆಗಳು ಹೆಚ್ಚಾಗುತ್ತವೆ. ಹೀಗಾಗಿ ನಿತ್ಯ ಮೂರರಿಂದ ನಾಲ್ಕು ಲೀಟರ್ ನೀರು ಸೇವಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ನಿರ್ಜಲೀಕರಣ ತಪ್ಪಿಸಲು ಹೆಚ್ಚು ನೀರು ಹಾಗೂ ಇತರ ದ್ರವಗಳ ಸೇವನೆ ರೂಢಿಸಿಕೊಳ್ಳುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
* ಯಾವಾಗ ನೀರು ಸೇವಿಸಬೇಕು?
ನೀರು ಸೇವನೆಗೆ ನಿರ್ದಿಷ್ಟ ಸಮಯವೇನು ಇಲ್ಲ. ಆದರೆ ಜಂಕ್ ಫುಡ್‌ಗಳ ಸೇವನೆಯ ವಿಷಯದಲ್ಲಿ ನೀರು ಕುಡಿಯುವ ಪದ್ಧತಿಯಲ್ಲಿ ಕೆಲ ನಿಯಮಗಳನ್ನು ನೀವು ಅನುಸರಿಸಲೇಬೇಕು. ಹೌದು... ಸಾಮಾನ್ಯವಾಗಿ ಸಾತ್ವಿಕ ಆಹಾರ ಸೇವನೆ ಮಾಡುವವರಿಗೇ ಹೆಚ್ಚು ನೀರು ಕುಡಿಯಲು ಸಲಹೆ ನೀಡಲಾಗುತ್ತದೆ. ಆದರೆ ಜಂಕ್ ಫುಡ್ ಸೇವನೆ ಮಾಡುವವರಿಗೆ ನೀರು ಸೇವನೆ ಪ್ರಮಾಣ ಹೆಚ್ಚಾಗಿದ್ದರೆ ತುಂಬಾ ಒಳ್ಳೆಯದು. ನೀರು ಸೇವನೆ ಕಷ್ಟವಾದರೆ ತಂಪು ಪಾನೀಯ, ಎಳನೀರು, ಜ್ಯೂಸ್, ಲಿಂಬೆ ರಸದಂತಹ ಇತರೆ ದ್ರವವನ್ನು ಆಗಾಗ ಸೇವಿಸುವುದನ್ನು ರೂಢಿಸಿಕೊಳ್ಳಬೇಕು. ನಿತ್ಯ ನೀಋಉ ಸೇವನೆಗೆ ಕಷ್ಟವಾದರೆ ಇತರ ದ್ರವ ಸೇವನೆಯನ್ನು ಹೆಚ್ಚಾಗಿ ರೂಢಿಸಿಕೊಳ್ಳಬೇಕು.

* ತಂಪು ಪಾನೀಯ
ತಂಪು ಪಾನೀಯಗಳು ಬೇಸಿಗೆ ಕಾಲದಲ್ಲಿ ದೇಹವನ್ನು ತಂಪಾಗಿಡುತ್ತವ. ಅಂದರೆ ನಿಂಬೆ ರಸ, ಎಳನೀರು, ಮಜ್ಜಿಗೆಯಂತಹ ಪಾನೀಯಗಳು ಆರೋಗ್ಯ ಮಾತ್ರವಲ್ಲದೆ ದೇಹವನ್ನು ನಿರ್ಜಲೀಕರಣದಿಂದ ಕಾಪಾಡಲು ಸಹಾಯ ಮಾಡುತ್ತವೆ. ಹೀಗಾಗಿ ಜಂಕ್ ಫುಡ್ ಬಳಿಕ ಆಗಾಗಾ ಕೆಲ ಪಾನೀಯಗಳನ್ನು ಸೇವಿಸುವುದು ತುಂಬಾ ಮುಖ್ಯ.
* ಹಣ್ಣಿನ ಜ್ಯೂಸ್
ಬೇಸಿಗೆಗೆ ಹಣ್ಣಿನ ಜ್ಯೂಸ್ ಕುಡಿಯುವುದು ಜಂಕ್ ಫುಡ್ ಸೇವನೆ ಮಾಡುವವರಿಗೆ ತುಂಬಾ ಒಳ್ಳೆಯದು. ಇದು ದೇಹಕ್ಕೆ ಶಕ್ತಿ ನೀಡುವುದಲ್ಲದೇ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಬೇಸಿಗೆಗೆ ಹಣ್ಣುಗಳನ್ನು ತಿನ್ನಲು ಸಾಧ್ಯವಾಗದೇ ಇರುವವರು ಜ್ಯೂಸ್ ಕುಡಿಯುವುದು ಉತ್ತಮ ರೂಢಿಯಾಗಿದೆ.

* ಸಾತ್ವಿಕ ಆಹಾರ
ಬೇಸಿಗೆಯಲ್ಲಿ ಸಾತ್ವಿಕ ಆಹಾರ ಸೇವನೆ ರೂಢಿಸಿಕೊಳ್ಳುವುದು ತುಂಬಾ ಮುಖ್ಯ. ದಿನಕ್ಕೆ ಒಂದು ಬಾರಿ ಜಂಕ್ ಫುಡ್ ಸೇವಿಸಿದರೂ ಉಳಿದ ಸಮಯ ಜೀರ್ಣಕ್ರಿಯೆಗೆ ಕಠಿಣವಾಗುವ ಆಹಾರ ಸೇವನೆಯನ್ನು ತಪ್ಪಿಸುವುದು ಅತ್ಯಾವಶ್ಯಕ. ಇಲ್ಲವಾದಲ್ಲಿ ಹೊಟ್ಟೆ ಹಾಳಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹೀಗಾಗಿ ಒಂದು ಬಾರಿ ನೀವು ತೃಪ್ತಿಕರ ಆಹಾರ ಸೇವಿಸಿದರೆ ಮತ್ತೊಂದು ಬಾರಿ ಆಹಾರವನ್ನು ಲಘುವಾಗಿ ಸೇವಿಸಿ. ಇದರಿಂದ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.
* ನಿಂಬೆ ಪಾನೀಯ
ಬೇಸಿಗೆಗೆ ನಿಂಬೆ ಪಾನೀಯ ಹಾಗೂ ರಾಗಿ ಗಂಜಿ ಉತ್ತಮ ಆಯ್ಕೆಯಾಗಿದೆ. ಇದು ಕೂಡ ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲದೆ ಜಂಕ್ ಫುಡ್ ಸೇವಿಸುವವರಿಗೆ ತುಂಬಾ ಉತ್ತಮವಾಗಿದೆ. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಜೊತೆಗೆ ದೇಹಕ್ಕೆ ಶಕ್ತಿ ಕೂಡ ನೀಡುತ್ತದೆ.












Click it and Unblock the Notifications