• search
  • Live TV
keyboard_backspace

ಕೇರಳದಲ್ಲಿ ನೋರೋವೈರಸ್: ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಹೈಅಲರ್ಟ್!

Google Oneindia Kannada News

ಬೆಂಗಳೂರು, ನವೆಂಬರ್ 25: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಜನರು ನರಳಿರುವುದು ಹಾಗೂ ನರಳುತ್ತಿರುವುದು ಇಂದಿಗೂ ಕಡಿಮೆಯಾಗಿಲ್ಲ. ಇದರ ಮಧ್ಯೆ ಕರ್ನಾಟಕದ ಗಡಿ ರಾಜ್ಯ ಕೇರಳದಲ್ಲಿ ನೋರೋವೈರಸ್ ಎಂಬ ಹೊಸ ರೋಗ ಕಾಣಿಸಿಕೊಂಡಿದೆ.

ಕೇರಳದ ವಯನಾಡು ಜಿಲ್ಲೆಯಲ್ಲಿ 13 ಮಂದಿಗೆ ನೋರೋವೈರಸ್ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆ ಕರ್ನಾಟಕದ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಕೊರೊನಾ 3ನೇ ಅಲೆ ಸರ್ವೇ: ಇನ್ನೆರಡು ತಿಂಗಳು ಮದುವೆ ಸೀಸನ್, ಎಚ್ಚರಕೊರೊನಾ 3ನೇ ಅಲೆ ಸರ್ವೇ: ಇನ್ನೆರಡು ತಿಂಗಳು ಮದುವೆ ಸೀಸನ್, ಎಚ್ಚರ

ಕಲುಷಿತ ಆಹಾರ, ಕಲುಷಿತ ನೀರಿನಿಂದ ಈ ನೋರೋವೈರಸ್ ಹರಡುವ ಅಪಾಯ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ವಾಂತಿ, ಬೇಧಿ(ಅತಿಸಾರ), ವಾಕರಿಕೆ ಮತ್ತು ಹೊಟ್ಟೆನೋವು, ಈ ಸೋಂಕಿನ ಪ್ರಮುಖ ಲಕ್ಷಣಗಳಾಗಿವೆ. ಇದರ ಜೊತೆಗೆ ತಲೆನೋವು, ಮೈ-ಕೈ ನೋವು ಹಾಗೂ ಜ್ವರ ಕಾಣಿಸಿಕೊಳ್ಳುವುದು ಸಾಧಾರಣ ಲಕ್ಷಣಗಳು ಎಂದು ವೈದ್ಯರು ಹೇಳುತ್ತಾರೆ. ನೋರೋವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಗಡಿ ಜಿಲ್ಲೆಗಳಲ್ಲಿ ಯಾವ ರೀತಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಆದೇಶದ ತಿರುಳನ್ನು ಇಲ್ಲಿ ತಿಳಿಯೋಣ.


ಕೇರಳ ರಾಜ್ಯದ ಗಡಿ ಜಿಲ್ಲೆಗಳು ಅನುಸರಿಸಬೇಕಾದ ಕ್ರಮಗಳು:

* ನೋರೋವೈರಸ್ ಕಾಯಿಲೆಯು ಕಾಲರಾದಂತೆ ತೀವ್ರ ಅತಿಸಾರ ಹಾಗೂ ತೀವ್ರ ನಿರ್ಜಲೀಕರಣವಾಗಿರುತ್ತದೆ. ತಕ್ಷಣ ಆಸ್ಪತ್ರೆಗೆ ದಾಖಲಾಗುವುದು ಅಥವಾ ಅತಿಸಾರ ಬೇಧಿಗೆ ನೀಡುವ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು, ಇಲ್ಲದಿದ್ದರೆ ಸಾವಿನ ಅಪಾಯವೂ ಇರುತ್ತದೆ.

* ಈ ವೈರಸ್ ಚಿಕಿತ್ಸೆಯು ನಿರ್ದಿಷ್ಟವಾಗಿ ಇರುವುದಿಲ್ಲ. ರೋಗದ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ.

* ಜಿಲ್ಲೆಗೆ ಒಬ್ಬ "ಫಿಷಿಸಿಯನ್" ರನ್ನು ನೋಡೆಲ್ ಅಧಿಕಾರಿಯನ್ನಾಗಿ ನೇಮಿಸಿ ಸೂಕ್ತ ನಿರ್ವಹಣೆ ಮಾಡಲು ತಿಳಿಸುವುದು ಅಲ್ಲದೇ ಸದರಿಯವರ ಹೆಸರು ಮತ್ತು ದೂರವಾಣಿ ಸಂಖ್ಯೆಗಳನ್ನು ನಿರ್ದೇಶಕರ ಗಮನಕ್ಕೆ ತರುವುದು.

* ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಈ ಸೋಂಕಿನ ನಿರ್ವಹಣೆಗೆ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ. ದೈನಂದಿನ ಮಾಹಿತಿಯನ್ನು ಸಹ ನಿರ್ದೇಶಕರು ಸಾಂಕ್ರಾಮಿಕ ರೋಗಗಳ ವಿಭಾಗಕ್ಕೆ ಸಲ್ಲಿಸಬೇಕು.

* ಎಲ್ಲ ಕುಡಿಯುವ ನೀರಿನ ಮೂಲಗಳ ಮಾಹಿತಿಯನ್ನು ಕಲೆ ಹಾಕುವುದು ಹಾಗೂ ಎಲ್ಲಾ ಮೂಲಗಳಿಂದ ಮಾದರಿಯನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸುವುದು. ಕುಡಿಯಲು ಯೋಗ್ಯವಿಲ್ಲವೆಂದು ದೃಢಪಟ್ಟ ನೀರಿನ ಮೂಲಗಳನ್ನು ತಪ್ಪದೇ ತಕ್ಷಣ ಕ್ಲೋರಿನೇಷನ್ ಮಾಡಿಸುವುದು. ಕ್ಲೋರಿನೇಷನ್ ಮಾಡಿದ ನೀರಿನ ಮೂಲಗಳಲ್ಲಿ ನಿರೀಕ್ಷೆಯ ಮಟ್ಟದಲ್ಲಿ ( 0.2-0.5ಪಿಪಿಎಂ ) ಕ್ಲೋರಿನ್ ಅಂಶವಿರುವ ಬಗ್ಗೆ ಕ್ಲೋರೋಸ್ಕೋಪ್ ಬಳಸಿ ಪರೀಕ್ಷಿಸುವುದು.

* ಕುಡಿಯುವ ನೀರನ್ನು ಕಲುಷಿತಗೊಳಿಸುವ, ಕುಡಿಯುವ ನೀರಿನ ಪೂರೈಕೆಯಲ್ಲಿನ ದೋಷಗಳನ್ನು ಗುರುತಿಸಿ ಸಂಬಂಧಪಟ್ಟವರಿಗೆ (ಗ್ರಾಮ ಪಂಚಾಯಿತಿ/ಸ್ಥಳೀಯ ಸಂಸ್ಥೆ) ತಿಳಿಸಿ ತಕ್ಷಣ ದುರಸ್ಥಿಗೊಳಿಸಬೇಕು. ಕುಡಿಯುವ ನೀರಿನ ಪೈಪುಗಳು ಚರಂಡಿ ಮೂಲಕ ಹಾಯ್ದು ಹೋಗದಂತೆ ಕ್ರಮ ವಹಿಸಲು ಸಂಬಂಧಪಟ್ಟವರಿಗೆ ಗ್ರಾಮ ಪಂಚಾಯಿತಿ/ಸ್ಥಳೀಯ ಸಂಸ್ಥೆ ಅಧಿಕಾರಿಗಳಿಗೆ ತಿಳಿಸುವುದು.

* ವೈಯಕ್ತಿಕ ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ಹಾಗೂ ಆಹಾರದ ಸಂರಕ್ಷಣೆ, ಪರಿಸರ ನೈರ್ಮಲ್ಯದ ನಿರ್ವಹಣೆ ಬಗ್ಗೆ ತಿಳಿಸುವುದು. ರಸ್ತೆ/ಬೀದಿ ಬದಿಗಳಲ್ಲಿ ಮಾರುವ ಕತ್ತರಿಸಿದ ಹಣ್ಣು ಮತ್ತು ತೆರೆದಿಟ್ಟ ಆಹಾರ ಪದಾರ್ಥವನ್ನು ಸೇವಿಸಬಾರದು ಎಂದು ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ನೀಡಲು ಎಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸುವುದು.

* ಸೋಂಕಿತ ವ್ಯಕ್ತಿಗಳ ನೇರ ಸಂಪರ್ಕ ಮತ್ತು ಸೋಂಕಿತರು ಬಳಸಿದ ಯಾವುದೇ ವಸ್ತುಗಳನ್ನು ಸಂಸ್ಕರಿಸದೇ ಉಪಯೋಗಿಸದಂತೆ ತಿಳುವಳಿಕೆ ಮೂಡಿಸುವುದು.

* ಸಂಶಯಾಸ್ಪದ ಪ್ರದೇಶದ ಹೋಟೆಲ್ ಮತ್ತು ಕ್ಯಾಂಟೀನ್ ಗಳಲ್ಲಿ ಬಿಸಿ ನೀರು ಸರಬರಾಜು ಮಾಡುವಂತೆ ಹೋಟೆಲ್ ಮಾಲೀಕರಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡುವುದು

* ತೆರೆದ ಬಾವಿ ಮತ್ತು ಕೆರೆ ಕುಂಟಗಳಲ್ಲಿನ ನೀರನ್ನು ಗೃಹೋಪಯೋಗಿ ಕಾರ್ಯಗಳಿಗೆ ಉಪಯೋಗಿಸುವಾಗ ಕಡ್ಡಾಯವಾಗಿ ಕ್ಲೋರಿನೇಷನ್ ಮಾಡಿಯೇ ಉಪಯೋಗಿಸಲು ತಿಳುವಳಿಕೆ ನೀಡುವುದು

* ಜಿಲ್ಲೆಯಲ್ಲಿ ಸಂಶಯಾಸ್ಪದ ಪ್ರಕರಣಗಳು ಕಂಡು ಬಂದಲ್ಲಿ ಸಹ ನಿರ್ದೇಶಕರು ಸಾಂಕ್ರಾಮಿಕ ರೋಗಗಳ ವಿಭಾಗ ಅರೋಗ್ಯ ಇಲಾಖೆ ಗಮನಕ್ಕೆ ತರಬೇಕು

* ತೀವ್ರ ನಿಗಾ ಹಾಗೂ ಮುಂಜಾಗ್ರತಾ ಕ್ರಮಗಳ ಮೂಲಕ ನೋರೋ ವೈರಸ್ ರಾಜ್ಯದಲ್ಲಿ ಹರಡದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.

English summary
Health and Family Welfare Dept Karnataka Issued a high alert in kodagu and dakshina kannada districs After 13 peoples were detected with norovirus in Kerala’s Wayanad.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X