ಕಣ್ವ ವಂಚನೆ ಪ್ರಕರಣ: ಸಾವಿರಾರು ಸಂತ್ರಸ್ತರು ಸಿಐಡಿ ಮುಂದೆ ಪರೇಡ್!
ಬೆಂಗಳೂರು, ಡಿಸೆಂಬರ್ 19: ಕಣ್ವ ಸಮೂಹ ಸಂಸ್ಥೆಗಳಿಂದ ವಂಚನೆಗೆ ಒಳಗಾದ ಸಂತ್ರಸ್ತರು ಸಿಐಡಿ ಕಚೇರಿ ಮುಂದೆ ಇಂದು ಪೆರೇಡ್ ನಡೆಸಿದರು. ಮೋಸಕ್ಕೆ ಒಳಗಾದವರು ದಾಖಲೆಗಳನ್ನು ಹಿಡಿದು ಸಿಐಡಿ ಕದ ತಟ್ಟಲು ಶುರುಮಾಡಿದ್ದಾರೆ. ನಾನಾ ಆಯಾಮದಲ್ಲಿ ಪ್ರಕರಣದ ತನಿಖೆ ಚುರುಕುಗೊಂಡಿದೆ.
ಕಣ್ವ ಸಮೂಹ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ಮೋಸ ಹೋದವರ ವಿವರಗಳನ್ನು ಸಿಐಡಿ ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಇತ್ತೀಚೆಗೆ ಮಾಧ್ಯಮ ಹೇಳಿಕ ಬಿಡುಗಡೆ ಮಾಡಿದ್ದ ಸಿಐಡಿ ಪೊಲೀಸರು ಕಣ್ವ ಸಂಸ್ಥೆಗಳಿಂದ ಮೋಸ ಹೋಗಿರುವರು ಸಿಐಡಿ ಪೊಲೀಸರನ್ನು ಸಂಪರ್ಕಿಸಲು ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಕಳೆದ ಮೂರು ದಿನದಿಂದ ನೂರಾರು ಜನ ಸಿಐಡಿಗೆ ದೂರು ಸಲ್ಲಿಸುತ್ತಿದ್ದಾರೆ. ಸುಮಾರು ಐದು ನೂರಕ್ಕೂ ಹೆಚ್ಚು ಸಂತ್ರಸ್ತರು ಹಣ ಕಳೆದುಕೊಂಡ ದಾಖಲೆಗಳನ್ನು ತನಿಖಾಧಿಕಾರಿಗಳಿಗೆ ನೀಡಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇಂದೂ ಸಹ ಸಂತಸ್ತರು ಸಿಐಡಿ ಪೊಲೀಸರಿಗೆ ದೂರ ಸಲ್ಲಿಸುತ್ತಿರುವ ದೃಶ್ಯ ಕಚೇರಿಯಲ್ಲಿ ಕಂಡುಬಂತು.

ಮಾಹಿತಿ ಸಂಗ್ರಹ:
ಕಣ್ವ ಫಾಷನ್ಸ್, ಕಣ್ವ ರಿಯಲ್ ಎಸ್ಟೇಟ್, ಫ್ರಾಂಚೆಸಿ ಮಾಲೀಕತ್ವ ಹೀಗೆ ನಾನಾ ರೂಪದಲ್ಲಿ ಜನರಿಗೆ ಮೋಸ ಮಾಡಿರುವುದು ಜನರ ದೂರುಗಳಿಂದ ಬಯಲಾಗಿದೆ. ಡಿವೈಏಸ್ಪಿ ಮಹಮದ್ ರಫಿ ನೇತೃತ್ವದಲ್ಲಿ ಸಿಐಡಿ ಅಧಿಕಾರಿಗಳ ತಂಡ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಈ ಅಕ್ರಮದಲ್ಲಿ ಮತ್ತಷ್ಟು ಮಂದಿ ಶಾಮೀಲಾಗಿರುವುದು ಬೆಳಕಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಂದಿ ಬಂಧನಕ್ಕೆ, ವಿಚಾರಣೆಗೆ ಒಳಗಾಗುವ ಸಾಧ್ಯತೆಗಳಿವೆ..

ಕೋಟಿ ಕೋಟಿ ಜಪ್ತಿ:
ಕಣ್ವ ಸಂಸ್ಥೆಯ ನಂಜುಂಡಯ್ಯ ಅವರ ವಿರುದ್ಧ ಕಬ್ಬನ್ ಪಾರ್ಕ್ ಠಾಣೆ ಸೇರಿದಂತೆ ವಿವಿಧ ಠಾಣೆಗಳಲ್ಲಿ ದೂರುಗಳು ದಾಖಲಾಗಿದ್ದವು. ಪ್ರಕರಣ ಹಣಕಾಸು ಅಕ್ರಮದ ಗಣಲಕ್ಷಣಗಳಿದ್ದು, ಗಂಭೀರ ಸ್ವರೂಪದ್ದಾಗಿತ್ತು. ಇದರಿಂದಾಗಿ ತನಿಖೆ ಸಿಐಡಿಗೆ ವಹಿಸಲಾಗಿತ್ತು. ಪ್ರಕರಣ ತನಿಖೆ ಕೈಗೆತ್ತಿಕೊಂಡ ಸಿಐಡಿ ಪೊಲೀಸರು, ತುಮಕೂರು, ನೆಲಮಂಗಲ, ತಿಪಟೂರು ಮತ್ತಿತರ ಕಡೆ ನಂಜುಂಡಯ್ಯ ಖರೀದಿಸಿದ್ದ ಆಸ್ತಿಗಳನ್ನು ಜಪ್ತಿ ಮಾಡಿದ್ದಾರೆ. ಒಟ್ಟಾರೆ 426 ಕೋಟಿ ರೂಪಾಯಿ ಆಸ್ತಿಯನ್ನು ಸಿಐಡಿ ಪೊಲೀಸರು ಪತ್ತೆ ಹೆಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೂ ಮೊದಲು ನಂಜುಂಡಯ್ಯ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿ, ಬೇನಾಮಿ ವಹಿವಾಟಿನ ಅಕ್ರಮ ಬಯಲಿಗೆ ಎಳೆದಿದ್ದರು. ಸುಮಾರು 225 ಕೋಟಿ ರೂಪಾಯಿ ಆಸ್ತಿಯನ್ನು ಜಪ್ತಿ ಮಾಡಿದ್ದರು. ಈವರೆಗೆ ಒಟ್ಟಾರೆ 426 ಕೋಟಿ ಮೌಲ್ಯದ ಸ್ಥಿರ ಮತ್ತು ಚರಾಸ್ತಿ ವಶಪಡಿಸಿಕೊಳ್ಳಲಾಗಿದೆ.

ದುಡ್ಡು ಡಬಲ್, ಬ್ಲೇಡ್ ಸ್ಕೀಮ್:
ಕಣ್ವ ಸಮೂಹ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದರೆ ಐದು ವರ್ಷದಲ್ಲಿ ದುಪ್ಪಟ್ಟು ಮಾಡುಕೊಡುವುದಾಗಿ ಜನರಿಗೆ ಅಮಿಷ ಒಡ್ಡಲಾಗಿತ್ತು. ಇದನ್ನು ನಂಬಿದ್ದ ನಿವೃತ್ತರು, ದುಡಿಮೆಯ ಹಣವನ್ನು ವೃದ್ಧಿಸಲು ಹೊರಟವರು ತಮ್ಮ ಭವಿಷ್ಯಕ್ಕೆಂದು ಬ್ಯಾಂಕಿನಲ್ಲಿ ಠೇವಣಿ ಇಟ್ಟುಕೊಂಡಿದ್ದ ಹಣವನ್ನು ನಂಜುಂಡಯ್ಯನ ಕಣ್ವ ಖಾತೆಗಳಿಗೆ ವರ್ಗಾವಣೆ ಮಾಡಿದ್ದರು. ಇದರಲ್ಲಿ ಹೆಚ್ಚಿನವರು ಬಡವರು, ವ್ಯಾಪಾರಿಗಳು ಹಾಗೂ ಇಳೀ ವಯಸ್ಸಿನಲ್ಲಿ ಇರುವವರು. ಸುಮಾರು 9 ಸಾವಿರಕ್ಕೂ ಹೆಚ್ಚು ಮಂದಿ ಹಣ ಹೂಡಿಕೆ ಮಾಡಿದ್ದರು. ಶೇರು ಖರೀದಿ, ಕಲ್ಯಾಣ ನಿಧಿ, ಕಣ್ವ ಫ್ಯಾಷನ್ಸ್ ಪ್ರಾಂಚೆಸ್ಸಿ, ಕಣ್ವ ರಿಯಲ್ ಎಸ್ಟೇಟ್ ಹೀಗೆ ನಾನಾ ಬ್ಲೇಡ್ ಸ್ಕೀಮ್ ರೂಪಿಸಿದ್ದ ನಂಜುಂಡಯ್ಯ ಹೂಡಿಕೆ ಮಾಡಿದವರನ್ನು ಪಾಲುದಾರರೆಂಬಂತೆ ಬಿಂಬಿಸಿದ್ದರು.

ಐದು ವರ್ಷಗಳು ಕಳೆಯುವ ಮುನ್ನ:
ಐದು ವರ್ಷಕ್ಕೆ ಹಣ ಡಬಲ್ ಆಗುವ ಕನಸು ಜನರಿಗಿತ್ತು. ಆದರೆ ಎರಡೂವರೆ ವರ್ಷ ಕಳೆಯುವ ಮುನ್ನವೇ ಕಣ್ವ ಸಂಸ್ಥೆಗಳ ವಂಚನೆ ಹೊರಬಿತ್ತು. ವರ್ಷಗಳು ಕಳೆದರೂ ಬಡ್ಡಿ ಕೂಡ ಹೂಡಿಕೆದಾರರಿಗೆ ಸಿಗಲಿಲ್ಲ. ಅಸಲು ಬರುವ ನಂಬಿಕೆ ಕಳೆದು ಹೋಯಿತು. ಈ ಹಿನ್ನೆಲೆಯಲ್ಲಿ ಹೂಡಿಕೆದಾರರು ಕಣ್ವ ಸಮೂಹ ಸಂಸ್ಥೆಗಳ ಎದುರು ಪ್ರತಿಭಟನೆ ಆರಂಭಿಸಿದ್ದರು. ಇದೇ ಸಮಯದಲ್ಲಿ ದೂರುಗಳು ದಾಖಲಾಗಿ, ಸಿಐಡಿಗೆ ಪ್ರಕರಣಗಳು ವರ್ಗಾವಣೆಗೊಂಡವು. ಪ್ರಕರಣದ ದಿನಕ್ಕೊಂದು ತಿರುವು ತೆಗೆದುಕೊಳ್ಳುತ್ತಿದ್ದು, ವಂಚನೆಗೆ ಒಳಗಾದವರೀಗ ಸಿಐಡಿ ಮುಂದೆ ಪರೇಡ್ ನಡೆಸುತ್ತಿದ್ದಾರೆ.












Click it and Unblock the Notifications