ಬೆಂಗಳೂರಲ್ಲಿ ಐಸಿಸ್ ಉಗ್ರರ ನಂಟು: ಟ್ರಸ್ಟ್‌ಗಳ ಮೂಲಕ ಉಗ್ರರಿಗೆ ಫಂಡಿಂಗ್, 8 ಕಡೆ ED ಮೆಗಾ ರೇಡ್
ಬೆಂಗಳೂರು: ನಿಷೇಧಿತ ಐಸಿಸ್ ಉಗ್ರ ಸಂಘಟನೆಗೆ ಯುವಕರನ್ನ ನೇಮಕಾತಿ ಮಾಡುವುದು ಮತ್ತು ಉಗ್ರ ಚಟುವಟಿಕೆಗಳಿಗೆ ಹಣಕಾಸು ನೆರವು ಒದಗಿಸಿದ ಅತಿದೊಡ್ಡ ಜಾಲವೊಂದರ ಮೇಲೆ ಜಾರಿ ನಿರ್ದೇಶನಾಲಯ ಮಂಗಳವಾರ ಬೆಂಗಳೂರಿನ 8 ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯಾಚರಣೆ ಕೈಗೊಂಡಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ ದಾಖಲಿಸಿದ್ದ ಎಫ್‌ಐಆರ್ ಹಾಗೂ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷಾರೋಪ ಪಟ್ಟಿಯನ್ನು ಆಧರಿಸಿ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಇ.ಡಿ. ಅಧಿಕಾರಿಗಳು ಈ ಪ್ರಕರಣದ ಹಣಕಾಸಿನ ಜಾಡು ಹಿಡಿದು ತನಿಖೆಯನ್ನ ಚುರುಕುಗೊಳಿಸಿದ್ದಾರೆ. ಪುಲಕೇಶಿನಗರ ಸೇರಿ 8 ಕಡೆ ಇ.ಡಿ.

ಅಧಿಕಾರಿಗಳ ಭರ್ಜರಿ ಶೋಧ
ರಾಜಧಾನಿ ಬೆಂಗಳೂರಿನ ಪುಲಕೇಶಿನಗರ, ಕಮ್ಮನಹಳ್ಳಿ, ಶಾಂತಿನಗರದ ಬರ್ಲಿ ಸ್ಟ್ರೀಟ್, ಗುರುಪ್ಪನಪಾಳ್ಯ, ಕೋರಮಂಗಲ ಮತ್ತು ಬೆನ್ಸನ್ ರಸ್ತೆ ಸೇರಿದಂತೆ ಪ್ರಮುಖ ಎಂಟು ಸ್ಥಳಗಳಲ್ಲಿ ಇ.ಡಿ. ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿ, ಡಿಜಿಟಲ್ ಸಾಕ್ಷ್ಯಗಳು ಮತ್ತು ದಾಖಲೆಗಳನ್ನ ಪರಿಶೀಲಿಸಿದ್ದಾರೆ. 'ಇಕ್ರಾ ವೆಲ್‌ಫೇರ್ ಟ್ರಸ್ಟ್' ಮತ್ತು 'ಗೈಡೆನ್ಸ್ ಫಾರ್ಮ್ಯಾನ್ಸ್ ಫಂಡ್' ಟ್ರಸ್ಟ್‌ಗಳು ಹಾಗೂ ಕೆಲವು ವೈಯಕ್ತಿಕ ಖಾತೆಗಳ ಮೂಲಕ ಭಾರೀ ಪ್ರಮಾಣದ ಹಣವನ್ನು ಅಕ್ರಮವಾಗಿ ಸಂಗ್ರಹಿಸಲಾಗಿದೆ. ಈ ಹಣವನ್ನು ಐಸಿಸ್ ಉಗ್ರ ಸಂಘಟನೆಗೆ ಮುಸ್ಲಿಂ ಯುವಕರನ್ನ ಸೆಳೆಯಲು ಹಾಗೂ ಅವರಿಗೆ ಸಿರಿಯಾಗೆ ಹೋಗಲು ಬೇಕಾದ ವೀಸಾ ಮತ್ತು ಪ್ರಯಾಣದ ಟಿಕೆಟ್ ಬುಕ್ ಮಾಡಲು ಬಳಸಲಾಗಿದೆ ಎಂಬ ಸ್ಫೋಟಕ ಮಾಹಿತಿ ಇ.ಡಿ. ತನಿಖೆಯಿಂದ ಬಹಿರಂಗವಾಗಿದೆ.
ಯುವಕರ ಬ್ರೈನ್ ವಾಷ್
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಈ ಹಿಂದೆ ಇರ್ಫಾನ್ ನಾಸೀರ್, ಮೊಹಮ್ಮದ್ ತೌಫೀಕ್, ಜುಹಾಬ್ ಹಮೀದ್ ಶಕೀಲ್ ಮುನ್ನಾ, ಅಹಮದ್ ಅಬ್ದುಲ್ ಖಾದರ್ ಹಾಗೂ ಮೊಹಮ್ಮದ್ ಅಬ್ದುಲ್ ಹಾದೀಕ್ ಎಂಬುವವರನ್ನು ಯುಎಪಿಎ ಕಾಯ್ದೆಯಡಿ ಬಂಧಿಸಿತ್ತು. ಮತ್ತೊಬ್ಬ ಆರೋಪಿ ಮೊಹಮ್ಮದ್ ಶಿಹಾಬ್ ತಲೆಮರೆಸಿಕೊಂಡಿದ್ದಾನೆ. ಈ ಆರೋಪಿಗಳು 'ಇಕ್ರಾ ಕ್ಯಾಂಪ್' ಎಂಬ ಹೆಸರಿನಲ್ಲಿ ಮುಸ್ಲಿಂ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಹಾಗೂ 'ಕುರಾನ್ ಸರ್ಕಲ್' ಎಂಬ ಸ್ಟಡಿ ಗ್ರೂಪ್ ಮಾಡಿಕೊಂಡು ಮುಗ್ಧ ಯುವಕರನ್ನ ಗುರುತಿಸುತ್ತಿದ್ದರು.
ನಂತರ ನಿದಾನಕ್ಕೆ ಯುವಕರ ಬ್ರೈನ್ ವಾಷ್ ಮಾಡುವ ಮೂಲಕ ಮೂಲಭೂತವಾದಿಗಳನ್ನಾಗಿ ಪರಿವರ್ತಿಸುತ್ತಿದ್ದರು. ಈ ಯುವಕರನ್ನು ಸಿರಿಯಾ ಸರ್ಕಾರದ ವಿರುದ್ಧ ಐಸಿಸ್ ಪರವಾಗಿ ಹೋರಾಡಲು ಟರ್ಕಿ ದೇಶದ ಮಾರ್ಗವಾಗಿ ಸಿರಿಯಾಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು. ಇದು ದೇಶದ ಭದ್ರತೆಗೆ ಭಾರಿ ಬೆದರಿಕೆ ಎಂದು ಎನ್‌ಐಎ ತಿಳಿಸಿತ್ತು.
ಡಾಕ್ಟರ್ ಬಂಧನದಿಂದ ಬಯಲಾದ ಉಗ್ರರ ಅಸಲಿ ಮುಖ
ಬೆಂಗಳೂರಿನಲ್ಲಿ ನಡೆಯುತ್ತಿದ್ದ ಈ ಐಸಿಸ್ ನೇಮಕಾತಿಯ ಅಸಲಿ ಬಣ್ಣ ಬಯಲಾಗಿದ್ದು 2020ರಲ್ಲಿ. ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ನೇತ್ರ ತಜ್ಞನಾಗಿದ್ದ ಅಬ್ದುಲ್ ರೆಹಮಾನ್ ಎಂಬಾತನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಸಿರಿಯಾದಲ್ಲಿದ್ದ ಐಸಿಸ್ ಉಗ್ರರ ಜೊತೆ ಸಂವಹನ ನಡೆಸಲು ಈ ವೈದ್ಯ ಪ್ರತ್ಯೇಕ ಆ್ಯಪ್ ಅಭಿವೃದ್ಧಿಪಡಿಸಿದ್ದ. ಆತನನ್ನ ವಿಚಾರಣೆ ಒಳಪಡಿಸಿದಾಗ, ಇರ್ಫಾನ್ ನಾಸೀರ್ ಸೇರಿದಂತೆ ಇತರ ಆರೋಪಿಗಳ ನಂಟು ಹಾಗೂ ನೇಮಕಾತಿಯ ಸ್ಕೆಚ್ ಬಯಲಾಗಿತ್ತು.
ಅಲ್ಲದೆ, ದೇಶಾದ್ಯಂತ ನಡೆದ ಸಿಎಎ/ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಈ ಗುಂಪು ಮುಸ್ಲಿಮೇತರರ ವಿರುದ್ಧ ಪ್ರಚೋದನೆ ನೀಡುವಂತಹ ಹಿಂಸಾತ್ಮಕ ಕೆಲಸಗಳನ್ನು ಮಾಡಿತ್ತು. ಎನ್‌ಕ್ರಿಪ್ಟೆಡ್ ಸಾಮಾಜಿಕ ಜಾಲತಾಣಗಳ ಮೂಲಕ ಯುವಕರಿಗೆ ಐಸಿಸ್ ಸಿದ್ಧಾಂತವನ್ನು ಬೋಧಿಸುತ್ತಿತ್ತು. ಇದೀಗ ವ್ಯಕ್ತಿಗಳಿಂದ, ಟ್ರಸ್ಟ್‌ಗಳಿಂದ ಹಾಗೂ ವೈಯಕ್ತಿಕ ಉಳಿತಾಯದಿಂದ ಸಂಗ್ರಹಿಸಲಾದ ಹಣವನ್ನ ಭಯೋತ್ಪಾದನಾ ಚಟುವಟಿಕೆಗಳಿಗೆ ಹೇಗೆ ಬಳಸಲಾಯಿತು ಎಂಬುದರ ಸಂಪೂರ್ಣ ಜಾಲವನ್ನ ಭೇದಿಸಲು ಇ.ಡಿ. ತನಿಖೆ ಮುಂದುವರಿಸಿದೆ


Click it and Unblock the Notifications
