ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಜ್ಜಿ ಮಾತಲ್ಲಿ ನಮ್ಮ ಗಾದೆಗಳ ಕಡು ಸತ್ಯದ ಅರಿವು!

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

ನಮ್ಮ ಹಿರಿಯರು ಅದರಲ್ಲೂ ಪ್ರಮುಖವಾಗಿ ಹಳ್ಳಿ ಕಡೆಯ ಸಂಭಾಷಣೆಯಲ್ಲಿ ಗಾದೆ ಮಾತುಗಳು ಹೆಚ್ಚಾಗಿ ಚಾಲ್ತಿಯಲ್ಲಿವೆ. ವಾಟ್ಸಾಪ್ ನಲ್ಲಿ ಬಂದ ಯುವಕ ಮತ್ತು ಅಜ್ಜಿಯ ನಡುವಿನ ಮಾತುಕತೆ ಹೀಗಿದೆ:
--

ಏನಜ್ಜೀ, ಚೆನ್ನಾಗಿದೀರಾ?
ಏನೋ ಹೀಗಿದ್ದೀನಿ ನೋಡಪ್ಪಾ.. ಊರು ಹೋಗು ಅನ್ನುತ್ತೆ, ಕಾಡು ಬಾ ಅನ್ನುತ್ತೆ
ಯಾಕಜ್ಜೀ ಹಾಗಂತೀರಾ?
ಮತ್ತಿನ್ನೇನಪ್ಪಾ? ನನ್ನಂಥೋರು ಇನ್ನೆಷ್ಟು ಕಾಲ ಬದುಕಿರಬೇಕು? ಊರಿಗೆ ಆಳಲ್ಲ, ಸ್ಮಶಾನಕ್ಕೆ ಹೆಣ ಅಲ್ಲ.
ಬಿಡ್ತು ಅನ್ನಿ ಅಜ್ಜಿ, ನಿಮ್ಮಂಥೋರು ಇರಬೇಕು ಮನೇಲಿ. ಚಿಕ್ಕೋರು ತಪ್ಪು ಮಾಡದ ಹಾಗೆ ನೋಡ್ಕೊಳ್ಳಕ್ಕೆ, ತಿದ್ದಿ ಬುದ್ಧಿ ಹೇಳೋಕೆ.
ಅದೇನೋ ನಿಜಾನಪ್ಪ - ಮನೆಗೊಂದು ಮುದಿ ಮೊರಡು, ಒಲೆಗೊಂದು ಕೊದೆ ಕೊರಡು ಅಂತಾರಲ್ಲ. ಆದರೂ ಈಗಿನವು ನನ್ನ ಮಾತೆಲ್ಲಿ ಕೇಳ್ತಾವೆ? ಏತಿ ಅಂದ್ರೆ ಪ್ರೇತಿ ಅಂತಾವೆ.
ಅಂದ ಹಾಗೆ.... ಎಲ್ಲಿ ನಿಮ್ಮ ಮೊಮ್ಮಕ್ಳು? ಕಾಣ್ತಾ ಇಲ್ಲ.

Proverbs Usage More In Regional Belt, Discussion Between Youth And Grand Mother

ಅವೇನು ಬೆಲ್ಲ ಜಜ್ಜಿದ ಕಲ್ಲೇ, ಒಂದೇ ಕಡೆ ಕೂತಿರಕ್ಕೆ? ಕಾಲಿಗೆ ಚಕ್ರ ಕಟ್ಕೊಂಡೋರಂಗೆ ಓಡಾಡ್ತಿರ್ತವೆ.
ಅದ್ಸರಿ, ಹೋದ್ವಾರ ನಾ ಬಂದಾಗ ನೀವಿರ್ಲಿಲ್ವಲ್ಲಾ... ಎಲ್ಲೋಗಿದ್ರಿ?
ಮಗ್ಳ ಮನೇಗೆ ಹೋಗಿದ್ನಪ್ಪಾ.... ಅವ್ಳಿಗೆ ಹುಶಾರಿರ್ಲಿಲ್ಲ.
ಮತ್ತೇ... ಆವತ್ತು ಮಗಳೇನೋ ಅಂದ್ಳೂಂತ ಇನ್ನಲ್ಲಿಗೆ ಕಾಲಿಡಲ್ಲ ಅಂದಿದ್ರಿ?
ಅಂದಿದ್ದೆ, ಆದರೂ ಮನಸ್ಸು ಕೇಳ್ಬೇಕಲ್ಲ? ಅಂಗಾಲಿಗೆ ಹೇಸಿಗೆ ಇಲ್ಲ, ಕರುಳಿಗೆ ನಾಚಿಕೆ ಇಲ್ಲ ನೋಡು..
ಅಜ್ಜೀ.. ಆ ರಾಮಣ್ಣನ ಮಗಳು ಕಾಲೇಜಲ್ಲಿ ಏನೋ ಗಲಾಟೆ ಮಾಡ್ಕೊಂಡ್ಳಂತೆ?
ಸುಮ್ನಿರಪ್ಪಾ.. ಮಾಡಿದೋರ ಪಾಪ ಆಡಿದೋರ ಬಾಯಲ್ಲೀಂತ; ನಮಗ್ಯಾಕೆ ಬಿಡು.
ರಾಮಣ್ಣ ಈಗ ಮಗಳನ್ನು ಕಾಲೇಜಿಗೂ ಕಳಿಸಲ್ವಂತೆ?
ಊರು ಸೂರೆ ಹೋದ ಮೇಲೆ ಕೋಟೆ ಬಾಗಿಲು ಹಾಕಿದರಂತೆ. ಅದಿರಲಿ, ನಿನ್ಮಗ ಏನ್ಮಾಡ್ತಿದ್ದಾನೆ?
ಅವ್ನಿಗೇನಜ್ಜೀ.. ಚೆನ್ನಾಗಿ ತಿಂದುಂಡು ಗೂಳಿ ತರ ಇದ್ದಾನೆ.
ಬಿಡ್ತು ಅನ್ನೋ... ಮಗ ಉಂಡರೆ ಕೇಡಲ್ಲ , ಮಳೆ ಬಂದರೆ ಕೇಡಲ್ಲ.
ಆದ್ರೆ ಅವನು ತಿನ್ನೋದರಲ್ಲಿ ಮಾತ್ರ ಮುಂದೆ, ಓದೋದರಲ್ಲಿ ಹಿಂದೆ. ಪ್ರಪಂಚ ಜ್ಞಾನ ಮಾತ್ರ ಚೆನ್ನಾಗಿದೆ.
ಸರಿ ಬಿಡು, ಓದು ಒಕ್ಕಾಲು, ಬುದ್ಧಿ ಮುಕ್ಕಾಲು ಅಂತ. ಹೇಗಾದರೂ ಬದುಕ್ಕೋತಾನೆ.
ನಿಮ್ಮ ತಮ್ಮನ ಮನೆಯವರು ಹೇಗಿದ್ದಾರಜ್ಜಿ ?
ಹೇಗಿರುತ್ತಾರೆ? ಎಲ್ಲಿದ್ದೀಯೋ ಬಸವಾ ಅಂದ್ರೆ ನೀನು ನಿಲ್ಸಿದಲ್ಲೇ ಅಂತ, ಆರಕ್ಕೇರ್ಲಿಲ್ಲ, ಮೂರಕ್ಕಿಳೀಲಿಲ್ಲ. ಸಂಸಾರ ನಡೀತಿದೆ.
ಸರಿ ಅಜ್ಜಿ, ಬರ್ತೀನಿ. ಬಹುಶಃ ಮುಂದಿನ ವಾರ ಬರಕ್ಕಾಗಲ್ಲ ಅನ್ಸತ್ತೆ.
ನಂಗೊತ್ತಿಲ್ವೇ ನಿನ್ನ? ಬಂದೇ ಬರ್ತೀಯ......... ಬಂದೆ ಗವಾಕ್ಷೀಲೀಂತ.

English summary
Proverbs Usage More In Regional Belt, Discussion Between Youth And Grand Mother. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X