ಯಾವ್ದಾದ್ರೂ ಡ್ರೆಸ್ ಹಾಕ್ಕೊಂಬಾ ನನಗೇನು!
ಹಳ್ಳಿ ಮೇಷ್ಟ್ರು ಹಡಪದ್ ಹಾಜರಿ ತೆಗೆದುಕೊಳ್ಳುತ್ತಿರುತ್ತಾರೆ. ಮೂಗಿನ ತುದಿಗೆ ಇಳಿಸಿಕೊಂಡಿದ್ದ ಕನ್ನಡಕದ ಮೇಲಿನಿಂದ ಒಬ್ಬೊಬ್ಬರನ್ನೇ ಹೆಸರು ಹಿಡಿದು ಕರೆದು ಹಾಜರಿ ಬುಕ್ಕಿನಲ್ಲಿ ಟಿಕ್ ಮಾಡುತ್ತಿರುತ್ತಾರೆ. ಆಡ್ ಗರ್ಲ್ ಔಟ್ ಆಗಿ ಕಮಲ ಕಡೆ ಬೆಂಚಿನಲ್ಲಿ ಕುಳಿತಿರುತ್ತಾಳೆ. ಎದ್ದು ನಿಲ್ಲುವಂತೆ ಬೆರಳಿನಿಂದ ಸೂಚಿಸುತ್ತಾರೆ.
"ಏನೇ ಕಮಲ, ಯಾಕಿವತ್ತು ಡ್ರೆಸ್ ಹಾಕಿಕೊಂಡು ಬಂದಿಲ್ಲ? ಏನು ಹುಟ್ಟುಹಬ್ಬಾನಾ?" ಎಂದು ಬಿರುಗಣ್ಣು ಬಿಟ್ಟು ಕನ್ನಡಕವನ್ನು ಕಣ್ಣಿಗೇರಿಸಿ ಕೇಳಿದರು.
ಅವರು ಕೇಳಿದ ಪ್ರಶ್ನೆಗೆ ಕಮಲ ಮಾತ್ರವಲ್ಲ ಒಂಬತ್ತನೇ ತರಗತಿಯ ಎಲ್ಲ ವಿದ್ಯಾರ್ಥಿಗಳು ಕಕ್ಕಾಬಿಕ್ಕಿಯಾಗಿದ್ದರು. ಒಂದಿಬ್ಬರಿಗೆ ನಗು ಉಕ್ಕಿ ಬಂದರೂ, ಹೂಸನ್ನು ಗಟ್ಟಿಯಾಗಿ ತಡೆಹಿಡಿದುಕೊಂಡ ಹಾಗೆ ನಗುವನ್ನೂ ಬಾಯಿಗೆ ಕೈಯಿಟ್ಟುಕೊಂಡು ತಡೆಹಿಡಿದಿದ್ದರು.
ನಂತರ ಸಾವರಿಸಿಕೊಂಡ ಕಮಲ, "ಯಾಕ್ಸಾ ನಾನೇನು ಬೆತ್ತಲಾಗಿ ಕಾಣ್ತಿದ್ದೀನಾ?" ಎಂದು ದಿಟ್ಟವಾಗಿ ಕೇಳಿದರು. ಈಗ ಕಕ್ಕಾಬಿಕ್ಕಿಯಾಗುವ ಸರದಿ ಮೇಷ್ಟ್ರದಾಗಿತ್ತು.
ಅವರೂ ಸಾವರಿಸಿಕೊಂಡು, "ಮಮಮ.... ಬಬಬ.... ನಾನು ಕೇಳಿದ್ದು ಯುನಿಫಾರ್ಮ್ ಯಾಕೆ ಹಾಕಿಕೊಂಡು ಬಂದಿಲ್ಲಾ ಅಂತ. ಹೋಗಿ ಎಲ್ಲಾದ್ರೂ ಪ್ರಿನ್ಸಿಪಾಲಿಗೆ ಹೇಳೀಯಾ ಮತ್ತೆ! ಯಾವ್ದಾದ್ರೂ ಡ್ರೆಸ್ ಹಾಕ್ಕೊಂಬಾ ನನಗೇನು!"
***
ಮೇಷ್ಟ್ರು ಮಂಕಣ್ಣನವರು ತಾವು ಪಾಠ ಮಾಡುತ್ತಿದ್ದ ಮೂರನೇ ತರಗತಿ ಮಕ್ಕಳಿಗೆ ನೀರಿನ ಬಗ್ಗೆ ಎರಡು ವಾಕ್ಯಗಳಲ್ಲಿ ಬರೆಯಲು ಹೇಳಿದರು. ಮಕ್ಕಳು ತಮ್ಮ ಭಾಷೆಯಲ್ಲಿ ಏನೆಲ್ಲಾ ಬರೆದಿದ್ದರು. ಊಟ ಆದ ಮೇಲೆ ನೀರು ಕುಡಿತೀವಿ. ನೀರನ್ನು ಅಡುಗೆ ಮಾಡಲು ಬಳಸುತ್ತಾರೆ. ನೀರನ್ನು ಕಾರು ತೊಳೆಯಲು ಬಳಸುತ್ತಾರೆ. ನೀರು ಕುಡಿದರೆ ಬಾಯಾರಿಕೆ ಆಗಲ್ಲ... ಇತ್ಯಾದಿ ಇತ್ಯಾದಿ.
ಆದರೆ, ತುಂಟ ತುಷಾರ್ ಬರೆದ ಸಾಲುಗಳು ಹೀಗಿದ್ದವು. "ನೀರು ಸ್ವಚ್ಛವಾಗಿರುತ್ತದೆ, ತೊಳೆದುಕೊಂಡಾಗ ಹೊಲಸಾಗುತ್ತದೆ!"












Click it and Unblock the Notifications